January 14, 2025

Newsnap Kannada

The World at your finger tips!

devegowda 1

ಉಪ ಚುನಾವಣೆ: ನಮ್ಮ ಹತ್ರ ಹಣ ಇಲ್ಲ – ಅಭ್ಯರ್ಥಿಗಳನ್ನು ಹಾಕಲ್ಲ ಹೆಚ್‍ಡಿಡಿ

Spread the love

ಉಪ ಚುನಾವಣೆಗಳನ್ನು ಎದುರಿಸಲು ಜೆಡಿಎಸ್ ಬಳಿ ಹಣ ಇಲ್ಲ. ಹೀಗಾಗಿ ಬೆಳಗಾವಿ ಲೋಕಸಭಾ, ಮಸ್ಕಿ, ಸಿಂದಗಿ ಹಾಗೂ ಬಸವ ಕಲ್ಯಾಣದಲ್ಲಿ ಅಭ್ಯರ್ಥಿಗಳನ್ನು ಹಾಕುವುದಿಲ್ಲ ಎಂದು ಜೆಡಿಎಸ್ ವರಿಷ್ಠ , ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರಾಯಚೂರಿನಲ್ಲಿ ಸ್ಪಷ್ಟವಾಗಿ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ದೇವೇಗೌಡರು ನಾಳೆ ಬೆಳಗ್ಗೆ ದೆಹಲಿಗೆ ಹೋಗಿ ಬಜೆಟ್ ಚರ್ಚೆಯಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲದೇ
ದೇವದುರ್ಗದ ಗಾಣಧಾಳ ಗ್ರಾಮದಲ್ಲಿ 2 ಗುಂಟೆ ಜಮೀನಿನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ರೈತನ ಮನೆಗೆ ಭೇಟಿ ನೀಡುತ್ತಿದ್ದೇನೆ. ಪಕ್ಷ ಸಂಘಟನೆಯ ಕೆಲಸಕ್ಕೆ ರಾಯಚೂರಿಗೆ ಬಂದಿದ್ದೇನೆ ಎಂದು ಹೇಳಿದರು.

2023ರಲ್ಲಿ ರಾಜ್ಯದಲ್ಲಿ ಚುನಾವಣೆ ಎದುರಾಗಲಿದೆ. ಕುಮಾರಸ್ವಾಮಿ ಸರ್ಕಾರ ಮುಗಿದ ಮೇಲೆ ನಾನ್ಯಾರಿಗೂ ನಿಂದನೆ ಮಾಡಿಲ್ಲ. ಪಕ್ಷ ಕಟ್ಟುವುದಕ್ಕಾಗಿ ನಾನು ಸಂಪೂರ್ಣ ಭಾಗಿಯಾಗುತ್ತೇನೆ. ಯಡಿಯೂರಪ್ಪ ಸರ್ಕಾರದ ಅಸ್ಥಿರತೆಗೆ ನಾನು ಮುಂದಾಗುವುದಿಲ್ಲ. ಜಾತ್ಯಾತೀತ ಜನತಾದಳದ ವರಿಷ್ಠನಾಗಿ ತೀರ್ಮಾನ ಮಾಡಿದ್ದೇನೆ .ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ ಎಂದರು.

ಕುಮಾರಸ್ವಾಮಿ ಸಿಎಂ ಆಗಬೇಕು ಅಂತ ನಾನು ಯಾರ ಮನೆಗೂ ಹೋಗಿಲ್ಲ. ಗುಲಾಂನಬಿ ಆಜಾದ್ ಹಾಗೂ ಕಾಂಗ್ರೆಸ್ ಮುಖಂಡರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗುಲಾಂನಬಿ ಆಜಾದ್ ಅವರೇ ಕುಮಾರಸ್ವಾಮಿ ಸಿಎಂ ಆಗಲು ಕಾರಣ. ಸೋನಿಯಾಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆದರು. ಸದ್ಯ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಯಾವುದೇ ಆರೋಪ ಮಾಡಲ್ಲ. ನನ್ನ ಶರೀರದಲ್ಲಿ ಶಕ್ತಿ ಇರೋವರೆಗೂ ನಾನು ಪಕ್ಷ ಕಟ್ಟುತ್ತೇನೆ ಎಂದರು.

ಇದೇ ವೇಳೆ ದೆಹಲಿಯಲ್ಲಿ ರೈತ ಹೋರಾಟದ ಟ್ರ್ಯಾಕ್ಟರ್ ಪರೇಡ್ ವಿಚಾರ ಬಗ್ಗೆ ಮಾತನಾಡಿದ ಮಾಜಿ ಪ್ರಧಾನಿ, ಕೇಂದ್ರ ಸರ್ಕಾರ ಅವಸರದಲ್ಲಿ ಬಿಲ್ ಪಾಸ್ ಮಾಡಬಾರದಿತ್ತು. ಕೃಷಿ ಮಸೂದೆಗೆ ಎರಡು – ಮೂರು ತಿಂಗಳ ಕಾಲಾವಕಾಶ ಬೇಕಾಗಿತ್ತು. ಗಲಭೆ ಮಾಡಿರುವ ಜನ ಯಾವ ಪಕ್ಷಕ್ಕೆ ಸೇರದವರೆವೆಂಬ ಗೊತ್ತಿಲ್ಲ.
ರೌಡಿ ಶಕ್ತಿ ಗಳು ಮಾಡಿದ್ದಾರೆ ಎಂಬ ಊಹಾಪೋಹ ಇವೆ. ಕಾಂಕ್ರಿಟ್ ಗೋಡೆ ಕಟ್ಟುವ ಅವಶ್ಯಕತೆಯೇ ಇರಲಿಲ್ಲ. ರೈತರ ಮೇಲೆ ಅಷ್ಟೊಂದು ಕಠಿಣ ಕ್ರಮ ಯಾಕೆ..? ರೈತರ ಹೋರಾಟ ಪ್ರತಿಷ್ಠೆಯಾಗಬಾರದು ಎಂದರು.

ರೈತರಿಗೆ ಅನಗತ್ಯ ಹಿಂಸೆ ಕೊಡಬಾರದು ಎಂದು ಸಂಸತ್ ನಲ್ಲಿ ಹೇಳಿದ್ದೇನೆ. ಖಲಿಸ್ತಾನ, ಉಗ್ರರು ಗಲಭೆ ಮಾಡಿದ್ದರ ಬಗ್ಗೆ ಇಲ್ಲಿ ನಾನು ಏನೂ ಹೇಳಲ್ಲ, ಗೃಹ ಸಚಿವರು ತನಿಖೆ ನಂತರ ಹೇಳಲಿ ಎಂದರು.

Copyright © All rights reserved Newsnap | Newsever by AF themes.
error: Content is protected !!