ಬೆಂಗಳೂರು: ರಾಜ್ಯದ ಮಿನಿ ಸಮರವೆಂದೇ ಗುರುತಿಸಲ್ಪಟ್ಟ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನವಾಗಿದ್ದು, ಇಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸೇರಿದಂತೆ ಪ್ರಮುಖ ವ್ಯಕ್ತಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಂದ ಇಂದು ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಒಂದು ಕ್ಷೇತ್ರದಲ್ಲಿ ಬಿಜೆಪಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸುವ ಮುನ್ನ, ಅಭ್ಯರ್ಥಿಗಳು ರೋಡ್ ಶೋ ನಡೆಸಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದರು.
ಈ ಉಪಚುನಾವಣೆ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಪಾಲಿಗೆ ಅತ್ಯಂತ ಮಹತ್ವ ಪಡೆದಿದ್ದು, ಚುನಾವಣಾ ಕಣ ತೀವ್ರವಾಗಿ ಕಾವೇರತೊಡಗಿದೆ. ಇಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್‌ನಿಂದ ತಮ್ಮ ನಾಮಪತ್ರವನ್ನು ಸಲ್ಲಿಸಿದರು.
ಶಿಗ್ಗಾವಿ ಕ್ಷೇತ್ರದಲ್ಲಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅನ್ನಪೂರ್ಣ ಇ.ತುಕಾರಾಂ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ಮೂರೂ ಕ್ಷೇತ್ರಗಳಲ್ಲೂ ನಾಮಪತ್ರ ಸಲ್ಲಿಸುವ ಮುನ್ನ, ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ರೋಡ್ ಶೋ ನಡೆಸಿ ತಮ್ಮ ಪಕ್ಷದ ಪ್ರಮುಖ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚುನಾವಣಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು. ಕಾಂಗ್ರೆಸ್ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು, ಶಿಗ್ಗಾವಿ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಕಣಕ್ಕಿಳಿಯುತ್ತಿದ್ದಾರೆ.
ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧದ ಚರ್ಚೆಯನ್ನು ಎಚ್.ಡಿ.ಕುಮಾರಸ್ವಾಮಿಯವರ ಮುಂದಾಳತ್ವದಲ್ಲಿ ನಡೆಸಲಾಗಿತ್ತು. ಸಿ.ಪಿ.ಯೋಗೇಶ್ವರ್ ಅವರಿಗೆ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನ ವಿಫಲವಾಗಿದ್ದು, ಅವರು ಈಗ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.
ಚನ್ನಪಟ್ಟಣದಲ್ಲಿ ಯೋಗೇಶ್ವರ್ ನಾಮಪತ್ರ ಸಲ್ಲಿಸುವ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ಮುನ್ನ ರೋಡ್ ಶೋ ನಡೆಸಿದರು, ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಿದ್ದರು.
ಸಂಡೂರಿನಲ್ಲಿ ಅನ್ನಪೂರ್ಣ ನಾಮಪತ್ರ ಸಲ್ಲಿಸುವ ಮೊದಲು ಜಮೀರ್ ಅಹಮದ್ ಖಾನ್, ಬಿ.ನಾಗೇಂದ್ರ ಮತ್ತು ಸಂಸದ ತುಕಾರಾಂ ಸೇರಿದಂತೆ ಪ್ರಮುಖ ಕಾಂಗ್ರೆಸ್ ಮುಖಂಡರು ರೋಡ್ ಶೋ ನಡೆಸಿದರು.ಇದನ್ನು ಓದಿ –ಹನಿಟ್ರ್ಯಾಪ್ ಪ್ರಕರಣ: ವ್ಯಾಪಾರಿಯಿಂದ ಸುಲಿಗೆ ಮಾಡಿದ ₹3.95 ಲಕ್ಷ ಹಣ ಜಪ್ತಿ
ಅಕ್ಟೋಬರ್ 18 ರಿಂದ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ನಿನ್ನೆಯವರೆಗೆ ಒಟ್ಟು 31 ನಾಮಪತ್ರಗಳು ಸಲ್ಲಿಕೆಯಾಗಿವೆ, ಇದರಲ್ಲಿ ಬಹುತೇಕರು ಪಕ್ಷೇತರ ಅಭ್ಯರ್ಥಿಗಳಾಗಿದ್ದಾರೆ.
More Stories
ಮೈಸೂರಿನಲ್ಲಿ ಚಲಿಸುತ್ತಿದ್ದ KSRTC ಬಸ್ಗೆ ಬೆಂಕಿ: 50 ಕ್ಕೂ ಹೆಚ್ಚು ಪ್ರಯಾಣಿಕರು ರಕ್ಷಣೆ
ಪಿ.ವಿ ಸಿಂಧು ಡಿ.22 ರಂದು ಹಸೆಮಣೆ ಏರಲಿದ್ದಾರೆ
ವಿಧಾನ ಪರಿಷತ್ ಸಚಿವಾಲಯದಲ್ಲಿ ನೇಮಕಾತಿ: ಹುದ್ದೆಗಳ ವಿವರ, ವೇತನ ಮತ್ತು ಅರ್ಜಿ ದಿನಾಂಕ