November 16, 2024

Newsnap Kannada

The World at your finger tips!

jaladare kalasa

ಜನತಾ ಜಲಧಾರೆ : ಬ್ರಹ್ಮ ಕಲಶ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಎಚ್‌.ಡಿ.ಕೆ

Spread the love

ದೇಶದ ಏಳು ಮಹಾನದಿಗಳ ಹೆಸರಿನಲ್ಲಿ ಇಡಲಾಗಿದ್ದ ಹದಿನೈದು ಕಲಶಗಳಿಗೆ ಎಚ್‌.ಡಿ. ಕುಮಾರಸ್ವಾಮಿ ಅವರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು. ರಾಜ್ಯದ ಉದ್ದಗಲದಿಂದ ಸಂಗ್ರಹಿಸಲಾಗಿದ್ದ ಜಲವನ್ನು ಕಲಶಗಳಿಗೆ ತುಂಬಿಸಲಾಯಿತು. ಜನತಾ ಜಲಧಾರೆ ಗಂಗಾ ರಥಯಾತ್ರೆಯ ಪ್ರಮುಖ ಘಟ್ಟವಾಗಿರುವ ಬ್ರಹ್ಮ ಕಲಶ ಪ್ರತಿಷ್ಠಾಪನೆಯು ಗುರುವಾರ ಶಾಸ್ತ್ರೋಕ್ತವಾಗಿ ನೆರವೇರಿತು.

ಜೆಡಿಎಸ್‌ ರಾಜ್ಯ ಕಚೇರಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜೀವನದಿ ಹಾಗೂ ಉಪನದಿಗಳಿಂದ ಸಂಗ್ರಹಿಸಿದ ಪವಿತ್ರ ಗಂಗಾ ಜಲದ ಕಲಶ ಪ್ರತಿಷ್ಠಾಪನೆಯ ಮಹಾಪೂಜೆ ಹಾಗೂ ಕಳಸ ಪ್ರತಿಷ್ಠಾಪನೆಯು ಪಂಡಿತ್‌ ಡಾ. ಭಾನುಪ್ರಕಾಶ್‌ ಶರ್ಮ ನೇತೃತ್ವದಲ್ಲಿ ನಡೆಯಿತು.

10 ಅಡಿ ಎತ್ತರದ 500 ಲೀಟರ್‌ ನೀರು ತುಂಬಲಿರುವ ಕಲಶವನ್ನು ಪ್ರತಿಷ್ಠಾಪನೆ ಮಾಡಲಾಯಿತು. ಕಲಶಕ್ಕೆ ಮುಂದಿನ ಒಂದು ವರ್ಷಗಳ ಕಾಲ ನಿತ್ಯ ಗಂಗಾಪೂಜೆ ನಡೆಯುತ್ತದೆ. ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ರಮೇಶ್‌ ಗೌಡ, ಟಿ.ಎ. ಶರವಣ ಸಹಿತ ಹಲವು ಮುಖಂಡರು ಉಪಸ್ಥಿತರಿದ್ದರು.

ವಿಶೇಷ ಮಂಟಪ ಹಾಗೂ ಬ್ರಹ್ಮ ಕಳಸ:

ಕಳಸ ಪ್ರತಿಷ್ಠಾಪನೆ ಮಾಡಿರುವ ಮಂಟಪವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಕರ್ನಾಟಕದ ಪರಂಪರೆಯನ್ನು ಬಿಂಬಿಸುವ ವಾಸ್ತುಶಿಲ್ಪವುಳ್ಳ ಮಂಟಪ ವಿಶೇಷ ಆಕರ್ಷಣೆಯಾಗಿದೆ. ಇಡೀ ಮಂಟಪದ ಆವರಣವನ್ನು ಕಲಾ ಆರ್ಟ್‌ನ ಕಲಾವಿದರು ಸಿದ್ಧಪಡಿಸಿದ್ದಾರೆ. ಈ ಮಂಟಪದಲ್ಲಿ ನಿರಂತರವಾಗಿ ಜಪ, ಮಂತ್ರ, ಮಂಗಳನಾದ ಮೊಳಗುತ್ತಿರುತ್ತದೆ.

ಪವಿತ್ರ ಗಂಗಾಜಲವು ಸುಮಾರು ಒಂದು ವರ್ಷ ಕಾಲ ಈ ಕಳಸದಲ್ಲಿ ಇರಲಿದೆ. ನೀರು ಕೆಡದಂತೆ ನೋಡಿಕೊಳ್ಳಲು ವಿಶೇಷ ಯುವಿ – ಓಜೋನೈಶನ್‌ ವ್ಯವಸ್ಥೆ ಮಾಡಲಾಗಿದೆ. ಇದು ಆಮ್ಲಜನಕಯುಕ್ತ ಆಗಿರುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ನೀರಾವರಿ ಯೋಜನೆ ಜಾರಿಗೆ ಸಂಕಲ್ಪ :

ಜನತಾ ಜಲಧಾರೆ ಹಾಗೂ ಬ್ರಹ್ಮ ಕಲಶ ಪ್ರತಿಷ್ಠಾಪನೆ ವೇಳೆ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಹಾಗೂ ಎಲ್ಲಾ ಜಿಲ್ಲೆಗಳಿಗೂ ಸಮಗ್ರ ನೀರಾವರಿ ಕಲಿಸುವ ಸಂಕಲ್ಪ ಮಾಡಲಾಯಿತು. ಅದಕ್ಕೆ ಶಕ್ತಿ ಕೊಡು ತಾಯಿ ಎಂದು ಗಂಗಾ ಮಾತೆಯನ್ನು ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.ಐದು ವರ್ಷಗಳ ಪೂರ್ಣ ಪ್ರಮಾಣದ ಸ್ವತಂತ್ರ ಸರಕಾರ ನೀಡಿದರೆ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

Copyright © All rights reserved Newsnap | Newsever by AF themes.
error: Content is protected !!