March 10, 2025

Newsnap Kannada

The World at your finger tips!

saraswathi

ವರವ ಕೊಡೆ ಎನಗೆ ವಾಗ್ದೇವಿ

Spread the love

ಸಂವಹನ’ ಎಂಬುದು ಆಧುನಿಕ ಜಗತ್ತಿನ ಅತ್ಯಗತ್ಯ ಚಟುವಟಿಕೆಯಾಗಿದೆ. ಸಂವಹನ ಕ್ರಿಯೆಗೆ ಅತ್ಯಗತ್ಯವಾಗಿದ್ದ ಶಬ್ದಗಳೇ ಒಂದು ನಿಶ್ಚಿತ ಧ್ವನಿರೂಪವನ್ನು ತಳೆಯುವುದರೊಂದಿಗೆ ಭಾಷೆಯ ಉಗಮಕ್ಕೆ ನಾಂದಿಯಾಯಿತು.

ಮಾನವನ ಮೂಲಭೂತ ಅಗತ್ಯಗಳಲ್ಲಿ ಒಂದಾದ ಭಾಷೆಯ ಉಗಮಕ್ಕೆ ಕಾರಣೀಭೂತವಾದ ಹಾಗೂ ಸಂವಹನ ಕ್ರಿಯೆಗೆ ಅತ್ಯಗತ್ಯವಾದುದು ವಾಕ್ ಅಥವಾ ಮಾತು. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ವಾಕ್ ಅನ್ನುವುದು ದೈವತ್ವ ಸ್ಥಾನ ಪಡೆದಿದೆ. ಅಂತಹ ವಾಕ್ಕಿಗೇ ಅದಿದೇವತೆಯಾದವಳು ವಾಗ್ದೇವಿ.

ವಾಗ್ದೇವಿ ಸರಸ್ವತಿ ವಿದ್ಯಾದೇವತೆ ಸಾಹಿತ್ಯದೇವತೆ
ಜ್ಞಾನದೇವತೆ ಶುಕ್ಲವರ್ಣಿ ಚತುರ್ಭುಜೆ ಶುಕ್ಲಾಂಬರಧರಂ ಶ್ವೇತ ಪದ್ಮಾಸನೆ ಹಂಸ ಮಯೂರವಾಹನೆ ವೀಣಾ ಪುಸ್ತಕ ಕಮಂಡಲು ಜಪಮಾಲಾಧಾರಿಣಿ ಹೀಗೆ ಹಲವಾರು ಸ್ವರೂಪಗಳಲ್ಲಿ ಪರಿಚಿತಳಾಗಿ ಸಕಲ ಕಲಾದೇವತೆಯಾಗಿಯೂ ಆರಾಧಿಸಲ್ಪಡುವ ಶಾರಯು ಆವಿರ್ಭವಿಸಿದ್ದು ಮಾಘಮಾಸದ, ಶುಕ್ಲಪಕ್ಷದ ಪಂಚಮಿ ದಿನ ವಿದ್ಯೆಯ ಅಧಿದೇವತೆ ಸರಸ್ವತಿ ಆವಿರ್ಭವಿಸಿದ ಪರಮ ಪುಣ್ಯದಿನವನ್ನು “ಶ್ರೀಪಂಚಮಿ” “ಬಸಂತ ಪಂಚಮಿ”, “ಸರಸ್ವತಿ ಪಂಚಮಿ” “ಸಾರಸ್ವತ ಪಂಚಮಿ” ಅಥವಾ “ಲಲಿತಾ ಪಂಚಮಿ” ಎಂದು ಕರೆಯುತ್ತಾರೆ.

‘ಸರಸ್ವತಿ’ ಎಂದರೆ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ನಿಲ್ಲುವ ರೂಪವೆಂದರೆ ಚತುರ್ಭುಜಗಳು ಎರಡು ಕೈಗಳಲ್ಲಿ ವೀಣೆ ಇನ್ನೊಂದರಲ್ಲಿ ಅಕ್ಷರಮಾಲೆ ನಾಲ್ಕನೆಯದರಲ್ಲಿ ಪುಸ್ತಕವನ್ನು ಹಿಡಿದು ಅರಳಿದ ಬೆಳ್ದಾವರೆಯ ಮೇಲೆ ಆಸೀನಳಾಗಿ ವೀಣೆ ಪುಸ್ತಕ ಅಕ್ಷರ ಮಾಲೆಗಳನ್ನು ಹಿಡಿದ ಶುಭ್ರವರ್ಣದ ಪ್ರಸನ್ನವದನಳಾದ ಚತುರ್ಭುಜ ದೇವತೆಯ ಚಿತ್ರ. ಹತ್ತಿರದಲ್ಲಿ ಹಂಸ ಕೆಲವೊಮ್ಮೆ ನವಿಲು ಇರುತ್ತದೆ. ಆದರೆ ಇಂದು ನಾವು ಕಾಣುತ್ತಿರುವ ಈ ಚಿತ್ರ ರೂಪುಗೊಂಡಿದ್ದಕ್ಕೆ ಸುಮಾರು ನಾಲ್ಕು ಸಾವಿರ ವರ್ಷಗಳ ಇತಿಹಾಸವಿದೆ ಎಂದು ಅರಿತಾಗ ಆಶ್ಚರ್ಯ ಸಂತೋಷ ಹೆಮ್ಮೆ ಒಟ್ಟಿಗೇ ಉಂಟಾಗುತ್ತದೆ. ಸರಸ್ವತಿಯು ನಡೆದು ಬಂದ ನಾಲ್ಕುಸಾವಿರ ವರ್ಷಗಳ ಹಾದಿಯ ಅವಲೋಕನವೇ ಒಂದು ಚೇತೋಹಾರಿ ಅನುಭವ ನೀಡುತ್ತದೆ.

ಬ್ರಹ್ಮನ ಶಕ್ತಿ ಸ್ವರೂಪಿಣಿ ಬ್ರಹ್ಮಣಿ

“ಶ್ರೀಮದ್‌ಭಾಗವತದ ಪ್ರಕಾರ ಬ್ರಹ್ಮನು ವೇದಗಳನ್ನು ಹೇಳುವಾಗ ಸರಸ್ವತಿಯು ಬ್ರಹ್ಮನ ಬಾಯಿಯಿಂದ ಹುಟ್ಟಿದ ಕಾರಣಕ್ಕಾಗಿ ವಾಗ್ದೇವಿಯೆನಿಸಿದಳು. ವೇದಕ್ಕೆ ಅಧಿಪತಿಯಾದ ಬ್ರಹ್ಮನ ರಾಣಿ ವೇದಗಳ ಉಗಮದ ಸಮಯದಲ್ಲಿ ಜನಿಸಿದ್ದರಿಂದ ಇವಳನ್ನು ಎಲ್ಲ ದೇವತೆಗಳು ವಿದ್ಯಾದಿ ದೇವತೆಯನ್ನಾಗಿ ಮಾಡಿದರು. ಬ್ರಹ್ಮನು ಸನತ್ಕುಮಾರಾದಿಗಳನ್ನು ಕಾಮಕ್ರೋಧಾದಿಗಳನ್ನು ಸೃಷ್ಟಿಸಿದನಂತರ ಸೃಷ್ಟಿಸಲ್ಪ ಆಕೆಯಲ್ಲಿ ಬ್ರಹ್ಮನು ಕಾಮನ ಪ್ರಭಾವದಿಂದ ಮೋಹಗೊಂಡನು. ಹೀಗೆ ಕಳಂಕ ಹೊತ್ತ ದೇಹವನ್ನು ತ್ಯಜಿಸಿ ಬ್ರಹ್ಮನು ಮತ್ತೊಂದು ದೇಹವನ್ನು ಪಡೆದು ಸೃಷ್ಟಿ ಕಾರ್ಯ ಮುಂದುವರೆಸಿದನು. ಆದ್ದರಿಂದ ಬ್ರಹ್ಮನ ರಾಣಿ ಎನಿಸಿದರೂ ಸರಸ್ವತಿ ಕುಮಾರಿಕೆ. ಸೃಷ್ಟಿಕರ್ತನಾದ ಬ್ರಹ್ಮ ತನ್ನ ಕಾಯಕವನ್ನು ಆರಂಭಿಸಿದ್ದು ಈಕೆಯಿಂದಲೇ.

ಸರಸ್ವತೀ ತ್ವಯಂ ದೃಷ್ಟ್ಯಾ ವೀಣಾಪುಸ್ತಕಧಾರಿಣೀ

ಭಾರತೀಯ ಸಂಸ್ಕೃತಿಯಲ್ಲಿ ಸರಸ್ವತಿಯ ಪಾತ್ರ ಅತ್ಯಂತ ಮಹತ್ತರವಾದುದು. ಪ್ರಥಮಮ್ ಭಾರತಿ ನಾಮ್ ದ್ವಿತೀಯಂ ಚ ಸರಸ್ವತಿ ತ್ರಿತೀಯಂ ಶಾರದಾ ದೇವಿ ಚತುರ್ಥಮ್ ಹಂಸವಾಹಿನಿ ದೇವಿ ಸರಸ್ವತಿಯ ಕುರಿತಾಗಿರುವ ಮಂತ್ರ ಇದಾಗಿದ್ದು ಸರಸ್ವತಿಯ ವಿವಿಧ ಹೆಸರಿನ ವಿಶೇಷತೆಯನ್ನು ತಿಳಿಸುತ್ತದೆ. ಪ್ರಥಮ ಹೆಸರು ಭಾರತಿ ಎಂತಲೂ ಎರಡನೆಯ ಹೆಸರು ಸರಸ್ವತಿ ಮೂರನೆಯ ಹೆಸರು ಶಾರದಾ ನಾಲ್ಕನೆಯ ಹೆಸರು ಹಂಸವಾಹಿನಿಯಾಗಿಯೂ ಜಗತೀಖ್ಯಾತಾ ವಾಗೀಶ್ವರಿ ಬ್ರಹ್ಮಚಾರಿಣಿ ಕೌಮಾರಿ ಬುದ್ಧಿದಾತ್ರೀ ವರದಾಯಿನಿ ಕ್ಷುದ್ರಘಂಟಾ ಮತ್ತು ಭುವನೇಶ್ವರಿ ಎಂಬೆಲ್ಲ ನಾಮಗಳಿಂದ ಅರ್ಚಿಸಿ ಸ್ತುತಿಸುತ್ತಾರೆ.

ವೇದಗಳಲ್ಲಿ ಸರಸ್ವತಿ

ಸರಸ್ವತಿಯ ಮೂಲ ಸ್ವರೂಪವನ್ನು ಅರಿಯುವಲ್ಲಿ ಇರುವ ಅತ್ಯಂತ ಪ್ರಾಚೀನವಾದುದೂ, ಅಧಿಕೃತವೂ ಆದ ಆಕರವೆಂದರೆ ಋಗ್ವೇದ. ಇದರಲ್ಲಿ ಇಂದ್ರ, ಅಗ್ನಿ, ರುದ್ರ, ವಿಷ್ಣು ಮೊದಲಾದ ಪ್ರಧಾನ ದೇವತೆಗಳ ಜೊತೆಯಲ್ಲಿ ಸರಸ್ವತಿಯು ಪ್ರಧಾನ ದೇವತೆಯಾಗಿಯೂ ಸ್ತುತಿಗೊಂಡಿದ್ದಾಳೆ. ಸುಮಾರು ತೊಂಬತ್ತಕ್ಕೂ ಹೆಚ್ಚು ಋಕ್ಕುಗಳಲ್ಲಿ ಸರಸ್ವತಿಯು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಸ್ತುತಿಗೊಂಡಿದ್ದಾಳೆ. ವೇದಗಳಲ್ಲಿ ಸರಸ್ವತಿಯನ್ನು ನದೀದೇವತೆ, ದೇವತೆ ಅಥವಾ ಯಜ್ಞದೇವತೆ, ಇಳಾ, ಕಾಮಧೇನು, ವಾಗ್ದೇವತೆ, ಯುದ್ಧದೇವತೆ ಅಥವಾ ರಕ್ಷಣಾದೇವತೆ, ಶಾಂತಿದೇವತೆ, ಅಹಿಂಸಾದೇವತೆ, ಅನ್ನಪೂರ್ಣೆ, ಭಾಗ್ಯದೇವತೆ, ಆರೋಗ್ಯದೇವತೆಯಾಗಿ ಮಾತ್ರವಲ್ಲದೆ ತಾಯಿ, ಸಹೋದರಿ, ಮಗಳು, ಸ್ನೇಹಿತೆ, ಪತ್ನಿ, ಸ್ವರೂಪದಲ್ಲಿ ಸ್ತುತಿಸಲಾಗಿದೆ. ಸರಸ್ವತೀ ರಹಸ್ಯೋಪನಿಷತ್ ಎಂಬ ಉಪನಿಷತ್ತು ಕೂಡ ಉಪಲಭ್ಯವಿರುವುದು.

ಸರ್ವಭಾಷಾ ಸ್ವರೂಪಿಣಿ

ಅಕ್ಷರ, ಭಾಷೆ, ವಿದ್ಯೆ, ವಿಜ್ಞಾನ, ಕಲೆ, ಸಾಹಿತ್ಯ, ಸಂಗೀತ ಮೊದಲಾದವಕ್ಕೂ ಸರಸ್ವತೀ ಅಧಿದೇವತೆ. ಸಂಸ್ಕೃತ ಕವಿಗಳು ತಮ್ಮ ಕಾವ್ಯಗಳಲ್ಲಿ ಸರಸ್ವತಿಯನ್ನು ನದಿಯಾಗಿ ಸ್ತುತಿಸಿದ್ದರೂ ವಾಗ್ದೇವತೆಯಾಗಿ ಹೆಚ್ಚು ಪ್ರಚಲಿತದಲ್ಲಿದ್ದಾಳೆ. ಶಬ್ದ ಮತ್ತು ಅರ್ಥಗಳಿಗೆ ಅಧಿದೇವತೆ. ‘ಶಬ್ದಾರ್ಥೌಸಹಿತೌಕಾವ್ಯಂ’ ಎಂಬಂತೆ ಕಾವ್ಯದ ಅಧಿದೇವತೆಯೂ ಹೌದು. ಕನ್ನಡದಲ್ಲಿ ಜೈನ ವೈದಿಕ ವೀರಶೈವ ಪರಂಪರೆಯ ಕವಿಗಳು ತಮ್ಮ ತಮ್ಮ ದರ್ಶನಗಳಿಗನುಗುಣವಾಗಿ ಸರಸ್ವತಿಯನ್ನು ಸ್ತುತಿಸಿದ್ದಾರೆ. ಎಲ್ಲಾ ಧರ್ಮಗಳನ್ನು ಮೀರಿದ ಮಾನವಧರ್ಮವೊಂದಿದೆ. ಆ ಹಿನ್ನೆಲೆಯಲ್ಲೂ ಸರಸ್ವತಿಯನ್ನು ಪ್ರತಿಭಾವಂತರಾದ ಕವಿಗಳು ಕಂಡಿದ್ದಾರೆ. ಸರಸ್ವತಿಯು ವಾಗ್ದೇವತೆ, ಕಾವ್ಯದೇವತೆ, ಜ್ಞಾನದೇವತೆ ಎಂಬ ಪ್ರಾರಂಭದ ಸೀಮಿತ ಚೌಕಟ್ಟನ್ನು ಮೀರಿ, ಸಂಸಾರಸಂಭಾವಿತಾತ್ಮೆ, ಕಾಮಸಂಜನನಿ, ಪ್ರೇಮಭೈರವಿ, ಶೃಂಗಾರಮೂರ್ತಿ, ರಸರಾಣಿ, ರಸಸರಸ್ವತಿ, ಕಲಾಸುಂದರಿ, ವಾಕ್ಸುಂದರಿ, ನುಡಿರಾಣಿ, ವಿಜ್ಞಾನನೇತ್ರಿ, ಸರ್ವಪಾರದರ್ಶಿಕೆ ಎಂದು ಮೊದಲಾದ ವಿಶೇಷಣಗಳನ್ನು ಧರಿಸಿ ಸರಸ್ವತಿಯು ಬೆಳೆದಿದ್ದಾಳೆ. ಕಾವ್ಯವಾಸಿಯಾಗಿದ್ದ ಸರಸ್ವತಿಯು ವಿದ್ಯಾಲಯವಾಸಿಯೂ, ವಿದ್ಯಾಲಯೆಯೂ, ಕವಿದೇಹವಾಸಿಯೂ ಆಗಿದ್ದಾಳೆ. ಕಾವ್ಯರಂಗಸ್ಥಳದಲ್ಲಿ, ಕವಿಗಳ ನಾಲಗೆಯಲ್ಲಿ ಮಾತ್ರ ನಟಿಸುತ್ತಿದ್ದ ಸರಸ್ವತಿಯು ಕವಿಮನೋಮಂದಿರದಲ್ಲಿ, ಕವಿಯಾತ್ಮಜಿಹ್ವೆಯಲ್ಲಿ ನರ್ತಿಸಿದ್ದಾಳೆ. ಹಂಸವಾಹನೆ ಮಾತ್ರವಲ್ಲದೆ, ನವಿಲುವಾಹನೆಯಾಗಿಯೂ ದರ್ಶನವಿತ್ತಿದ್ದಾಳೆ. ಸರ್ವಭಾಷಾಮಯಿಯೂ, ವಿಶ್ವಮಾತೆಯೂ ಆಗಿ ಸರಸ್ವತಿಯ ದರ್ಶನ ಬೆಳೆದಿದೆ. ಬಹುಶಃ ಬೇರಾವ ಭಾಷೆಗಳಲ್ಲೂ ಸಿಗದಿದ್ದ ಅನಾದಿಕವಿಯ ಪಟ್ಟಗೌರವ ಕನ್ನಡ ಸಾಹಿತ್ಯದಲ್ಲಿ ಸರಸ್ವತಿಗೆ ಸಿಕ್ಕಿದೆ. ‘ಸರ್ವಭಾಷಾಸರಸ್ವತೀ’ ಎಂಬುದು ಮೀಮಾಂಸಕರ ಮತ್ತು ಕವಿಗಳ ಅಭಿಮತವಾಗಿದ್ದು ಅಭಿನವಬ್ರಹ್ಮರಾದ ಕವಿಗಳ ಮುಖದಲ್ಲಿ ಸದಾ ನೆಲೆಸಿರುತ್ತಾಳೆ.

ಸಕಲ ವಿದ್ಯಾ ಅಧ್ಯಾಪಿಕೆ

ಜನಪದ ಸಾಹಿತ್ಯದಲ್ಲಿ ಸರಸ್ವತಿ ಎಂಬುದಕ್ಕೆ ಸರಸೋತಿ, ಸರಸಾತಿ ಸರಸತಿ ಮೊದಲಾದ ಹೆಸರುಗಳಿಲ್ಲಿ ಹಾಡಿ ಹೊಗಳುತ್ತಾರೆ. ರಾಗಿಕಲ್ಲನ್ನೇ ಸರಸ್ವತಿಯೆಂದು ಪೂಜಿಸುವ ಪರಿಕಲ್ಪನೆ ಅದ್ಭುತವಾಗಿದೆ. ಅಲ್ಲದೆ ಬೀಸುವ ಕ್ರಿಯೆಯಲ್ಲಿ ಸರಸ್ವತಿಯು ಹಾಡಿನ ರೂಪದಲ್ಲಿ ಜತೆಯಾಗಿ ಬೀಸುವುದರಿಂದ ಆಗುವ ಆಯಾಸವನ್ನು ಸರಸ್ವತಿಯು ಕಳೆಯುತ್ತಾಳೆ ಎಂಬ ನಂಬಿಕೆಯಿದೆ. ಸರಸ್ವತಿಯು ಜನಪದರ ದೃಷ್ಟಿಯಲ್ಲಿ ಮಾತು ಅಕ್ಷರ ವಿದ್ಯೆ ಮತ್ತು ಹಾಡುಗಳನ್ನು ಕಲಿಸುವ ಅಧ್ಯಾಪಿಕೆ. ಮಾತು ವಿದ್ಯೆ ಹಾಡು ಇವಿಷ್ಟೇ ಅಲ್ಲದೆ ಒಟ್ಟಾರೆಯಾಗಿ ಕಲಿಯುವ ಇಡೀ ಕ್ರಿಯೆಯನ್ನೇ ಸರಸ್ವತಿ ಎಂದು ಪರಿಭಾವಿಸುತ್ತಾರೆ.

ಹಂಸವಾಹನಸಮಾಯುಕ್ತೆ

ಹಂಸವಾಹಿನಿ ಎಂದರೆ ಹಂಸವನ್ನು ತನ್ನ ವಾಹನವನ್ನಾಗಿ ಮಾಡಿಕೊಂಡವಳು ಹಂಸವನ್ನು ಬುದ್ಧಿವಂತ ಪಕ್ಷಿ ಎಂದು ಕರೆಯುತ್ತಾರೆ ಹರಳು ಮತ್ತು ಕಲ್ಲಿಗಿರುವ ವ್ಯತ್ಯಾಸವನ್ನು ಈ ಪಕ್ಷಿ ಶೋಧಿಸಿ ತಿಳಿಸುತ್ತದೆ. ತಪ್ಪು ಮತ್ತು ಸರಿಯ ನಡುವಿನ ವ್ಯತ್ಯಾಸವನ್ನು ಈ ಪಕ್ಷಿ ತಿಳಿಸುತ್ತದೆ. ಒಳ್ಳೆಯದು ಮತ್ತು ಕೆಟ್ಟದ್ದನ್ನು ನಮಗೆ ತಿಳಿಸುತ್ತದೆ. ಅಂತೆಯೇ ಹಾನಿಕಾರಕ ಮತ್ತು ಪ್ರಯೋಜನಕಾರಿ ಬಗ್ಗೆ ವಿವರವನ್ನು ನೀಡುತ್ತದೆ. .
ಬಿಳಿ ಬಣ್ಣದ ಹಂಸವು ಶಾಂತಿಯ ಸಂಕೇತವಾಗಿದೆ. ಅವಳು ಅಲಂಕರಿಸುವ ಬಿಳಿ ಸೀರೆಯು ಶುದ್ಧತೆಯನ್ನು ಸೂಚಿಸುತ್ತದೆ ಹಾಗೂ ಎಕಾಗ್ರತೆಯನ್ನು ಪಡೆದುಕೊಳ್ಳಲು ಈ ಬಣ್ಣ ನೆರವಾಗುತ್ತದೆ. ಆದರೆ ಅವಳ ನಾಲ್ಕು ತೋಳುಗಳು ಮಾನವ ಕಲಿಕೆಯ ನಾಲ್ಕು ಅಂಶಗಳನ್ನು ಪ್ರತಿನಿಧಿಸುತ್ತವೆ: ಮನಸ್ಸು, ಬುದ್ಧಿಶಕ್ತಿ, ಜಾಗರೂಕತೆ ಮತ್ತು ಅಹಂಕಾರ. ಅವಳು ನುಡಿಸುವ ವೀಣೆಯು ಸಂಗೀತದ ಮೂಲಕ ಸಾಮರಸ್ಯವನ್ನು ಸಂಕೇತಿಸುತ್ತದೆ, ಅವಳು ಹೊಂದಿರುವ ಪುಸ್ತಕವು ಜ್ಞಾನವನ್ನು ಪ್ರತಿನಿಧಿಸುತ್ತದೆ ಮತ್ತು ಜಪಮಾಲೆ ಧ್ಯಾನ ಮತ್ತು ಆಧ್ಯಾತ್ಮಿಕತೆಯನ್ನು ಸೂಚಿಸುತ್ತದೆ.

ವರವ ಕೊಡೆ ಎನಗೆ ವಾಗ್ದೇವಿ

ಒಮ್ಮೆ ಕುಂಭಕರ್ಣ ಬ್ರಹ್ಮನ ಕುರಿತು ಘೋರವಾದ ತಪಸ್ಸನ್ನು ಮಾಡುತ್ತಿದ್ದ ಅದನ್ನು ನೋಡಿದ ದೇವತೆಗಳು ಹೆದರಿ ಬ್ರಹ್ಮನ ಮೊರೆ ಹೋದರು ಅವನಿಗೆ ಯಾವುದೇ ವರವನ್ನು ಕೊಡಬಾರದು ಅಂತ ಕೂಡಲೇ ಬ್ರಹ್ಮನು ಸರಸ್ವತಿಯನ್ನು ಸ್ಮರಿಸಿದರು. ಮರುಕ್ಷಣದಲ್ಲಿಯೇ ಕೈಮುಗಿದು ಕೇಳಿದಳು ನನ್ನಿಂದ ಏನು ಸಹಾಯಬೇಕು ಅಂತ ಆಗ ಬ್ರಹ್ಮ ದೇವರು ವಾಣಿ ನಾನು ವರ ಕೊಡಲು ಬಂದಾಗ ಈ ರಾಕ್ಷಸನಾದ ಕುಂಭಕರ್ಣನ ನಾಲಿಗೆ ಮೇಲೆ ವಿರಾಜಮಾನಳಾಗಿದ್ದು ದೇವತೆಗಳಿಗೆ ಇಷ್ಟವಾದ ಮಾತನ್ನು ಆಡಿಸು ಎಂದು ಕೇಳಿಕೊಂಡರು. ಸರಸ್ವತಿಯು ಬ್ರಹ್ಮ ದೇವರ ಸಲಹೆಯಂತೆ ಸರಿಯಾದ ಸಮಯಕ್ಕೆ ಅವನ ನಾಲಿಗೆ ಮೇಲೆ ನಿಂತು ದೇವತೆಯ ಇಷ್ಟದಂತೆ ಹೇಳಿಸಿದಳು. ಅವನು ನಿರ್ದಯತ್ವವನ್ನು ವರ ಪಡೆಯಲು ಇಚ್ಛಿಸಿದ್ದ ಆದರೆ ಅವನು ವರ ಪಡೆಯುವಾಗ ಸರಸ್ವತಿ ನಿದ್ರೆಯತ್ವ ಬದಲಿಸಿದಳು . ಆದ್ದರಿಂದ ಕುಂಭಕರ್ಣನು ಅಖಂಡವಾದ ನಿದ್ರೆಯನ್ನು ಹೊಂದಿದನು. ಪ್ರತೀ ಮನುಷ್ಯನ ದೇಹದಲ್ಲಿ ಆತ್ಮದಲ್ಲಿ ಪರಮಾತ್ಮನಿದ್ದರೆ ನಾಲಿಗೆಯಲ್ಲಿ ವಾಗ್ದೇವಿ ನೆಲಸಿರುತ್ತಾಳೆ. ಅದಕ್ಕೆ ನಾವು ಲಘುನ್ಯಾಸ ಮಾಡುವಾಗ ವಕ್ತ್ರೇ ಸರಸ್ವತಿ ತಿಷ್ಠತ ಎಂದು ಹೇಳುತ್ತೇವೆ. ಸರಸ್ವತಿ ನಮ್ಮ ನಾಲಿಗೆ ಮೇಲೆ ‍ಸ್ಥಿರವಾಗಿ ನೆಲೆಸಬೇಕೆಂದರೆ ಕೆಟ್ಟ ಮಾತುಗಳನ್ನು ಆಡಬಾರದು.

ಜಗತ್ತನ್ನು ಸದಾ ಸಂಪೂರ್ಣವಾಗಿ ಆವರಿಸಿಕೊಂಡು ಎಲ್ಲರನ್ನೂ ಸಲಹುತ್ತಿರುವ ಸಾಮರ್ಥ್ಯದ ಮೂರ್ತ ಸ್ವರೂಪವೇ ದೇವಿಯೆಂದು ಹೇಳುತ್ತಾರೆ. ಅವಳು ವೇದಗಳಲ್ಲಿ ಸ್ತುತಿಸಲಾಗಿರುವ ಜಗನ್ಮಾತೆ. ಮಹಾಲಕ್ಷ್ಮಿ ಮಹಾಕಾಳಿ ಮಹಾಸರಸ್ವತಿ ಎಂಬ ಅವಳ ಮೂಲ ರೂಪಗಳು- ರಜಸ್ ತಮಸ್ ಹಾಗೂ ಸಾತ್ವಿಕ ಗುಣ ಪ್ರತೀಕವೆನ್ನುತ್ತಾರೆ. ಅವಳು ಯಾವ ರೂಪದಲ್ಲಿಯೇ ಪ್ರಕಟವಾಗಲಿ ಮೂಲ ಶಕ್ತಿ ಒಂದೇ ದೇವಿಯೇ ಪ್ರೇರಕ ಶಕ್ತಿ.
ದೇವಿಯನ್ನು ಆರಾಧಿಸುವ ಪ್ರೇರಣೆ ಅದಕ್ಕೆ ಬೇಕಾದ ಸದ್ಭುದ್ದಿ ಸಂಸ್ಕಾರ ಆಕೆಯ ಅನುಗ್ರಹದಿಂದಲೇ ದೊರಕುವಂಥದ್ದು. ಅರಿವಿನ ಮೂಲ ಕೇಂದ್ರ ವಿದ್ಯಾಧಿದೇವತೆಯಾದ ಮಹಾಸರಸ್ವತಿ. ಒಳಿತು ಕೆಡುಕುಗಳ ಮನುಷ್ಯನ ಧೀಶಕ್ತಿಯನ್ನು ಪ್ರಚೋದಿಸಿ ಮನುಷ್ಯತ್ವವನ್ನು ನೆಲೆಗೊಳಿಸುವ ಅವಳು ಮನುಷ್ಯನ ಭಾವ ಸಾಮ್ರಾಜ್ಯದ ಚಕ್ರೇಶ್ವರಿ. ಅವಳು ಬೆಳಕಿನ ಬೆಳಕು ತಿಳಿವಿನ ಹೊಳೆ. ಹಾಗಾಗಿಯೇ ವಿದ್ಯಾರಂಭಕ್ಕೆ ಮೊದಲು ಸರಸ್ವತಿಯ ಪೂಜೆ ಮಾಡುವುದು ರೂಢಿಯಲ್ಲಿದೆ.

sowmya sanath

ಸೌಮ್ಯಾ ಸನತ್ ✍️.

Copyright © All rights reserved Newsnap | Newsever by AF themes.
error: Content is protected !!