December 23, 2024

Newsnap Kannada

The World at your finger tips!

92a771c1 947e 408d ac9d c65c3ec73c5f

ಬಿಜೆಪಿ ಶಾಸಕ ಸಿದ್ದು ಸವದಿ ಆಧುನಿಕ‌ ದುಶ್ಯಾಸನ ?

Spread the love

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸಂಬಂಧ ತೇರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ದು ಸವದಿ ಹಾಗೂ ಅವರ ಬೆಂಬಲಿಗರು ಪುರಸಭೆ ಸದಸ್ಯೆಯನ್ನು ಕೈ ಹಿಡಿದು ಎಳೆದಾಡಿ, ಗೂಂಡಾ ಪ್ರವೃತ್ತಿ ಪ್ರದರ್ಶಿಸಿ, ಆಧುನಿಕ ದುಶ್ಯಾಸನನ ರೀತಿಯಲ್ಲಿ ವರ್ತಿಸಿದ್ದಾರೆಂದು ದೂರಿದ್ದಾರೆ.

ಮಹಾಲಿಂಗಪುರ ಪುರಸಭೆಯ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

ಚುನಾವಣೆಯಲ್ಲಿ ಮತ ಚಲಾಯಿಸಲು ಪುರಸಭೆ ಸದಸ್ಯೆ ಸವಿತಾ ಹುರಕಡ್ಲಿ ಮತ ಚಲಾವಣೆ ಮಾಡಲು ತೆರಳುತ್ತಿದ್ದರು. ಈ ವೇಳೆ ಸವಿತಾ ಅವರು ಕಾಂಗ್ರೆಸ್ ಪರ ಮತ ಚಲಾಯಿಸಲು ತೆರಳುತ್ತಿದ್ದಾರೆ ಎಂಬ ಮಾಹಿತಿ ಪಡೆದ ಶಾಸಕರು, ಸದಸ್ಯೆಯನ್ನು ಎಳೆದಾಡಿ ಗೂಂಡಾ ವರ್ತನೆ ತೋರಿದ್ದಾರೆ.

ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸವಿತಾ, ನಾನು ಈಗ ತಾನೇ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದು ಮನೆಗೆ ಬಂದಿದ್ದೇನೆ. ನಮ್ಮ ಮನೆಯ ಮಕ್ಕಳು ಭಯಗೊಂಡಿದ್ದಾರೆ. ಪಾಲಿಕೆ ಸದಸ್ಯೆಯಾದ ನನಗೆ ಮತ ಚಲಾವಣೆ ಮಾಡಲು ಅವಕಾಶವೇ ನೀಡಲಿಲ್ಲ. ಅಲ್ಲದೇ ನನ್ನನ್ನು ಹಿಡಿದು, ಸೀರೆ ಎಳೆದಾಡಿದರು. ನನಗೆ ಅನ್ಯಾಯವಾಗಿದೆ. ಶಾಸಕರು, ಬೆಂಬಲಿಗರು ನಮ್ಮ ಮೇಲೆ ದೌರ್ಜನ್ಯ ಮಾಡಿದ್ದಾರೆ.

ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ನನ್ನ ಪತಿ, ನಾನು ಕ್ಷೇತ್ರದ ಜನರಿಗಾಗಿ ಕೆಲಸ ಮಾಡುತ್ತಿದ್ದು, ಶಾಸಕರನ್ನೇ ನಾವು ತಂದೆಯಂತೆ ತಿಳಿದು ಕಾರ್ಯ ಮಾಡುತ್ತಿದ್ದೆವು. ಆದರೆ ಶಾಸಕರು ಯಾವುದೇ ರೀತಿಯ ಕೆಲಸವನ್ನು ಜನರಿಗೆ ಮಾಡಲಿಲ್ಲ. ನಮಗೂ ಅನ್ಯಾಯ ಮಾಡಿದ್ದಾರೆ. ಪಕ್ಷದಲ್ಲಿ ನಮಗೆ ಬೆಲೆಯೇ ಇಲ್ಲವಾಗಿತ್ತು ಎಂದು ಆರೋಪಿಸಿದ್ದಾರೆ.

ಪೊಲೀಸರ ಸಮ್ಮುಖದಲ್ಲಿಯೇ ಇಂತಹ ಅಮಾನವೀಯ ಘಟನೆ ನಡೆದಿದ್ದು, ಬಿಜೆಪಿ ಸದಸ್ಯರ ಸಂಖ್ಯಾಬಲ ಹೆಚ್ಚಿಸಲು ಮಹಿಳಾ ಪುರಸಭೆ ಸದಸ್ಯೆಯೊಂದಿಗೆ ಅಮಾನವೀಯತೆ ಮಾಡಲಾಗಿದೆ. ಶಾಸಕರ ಅಮಾನವೀಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಮಹಾಲಿಂಗಪುರ ಪುರಸಭೆಯಲ್ಲಿ ಬಿಜೆಪಿ 13 ಸದಸ್ಯರು, ಕಾಂಗ್ರೆಸ್ 10 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಚುನಾವಣೆಯ ಸಂದರ್ಭದಲ್ಲಿ ಮೂವರು ಬಿಜೆಪಿ ಸದಸ್ಯರು ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ ಎಂಬ ವಿಷಯ ತಿಳಿದು ಅಮಾನವೀಯ ವರ್ತಿಸಲಾಗಿದೆ. ಘಟನೆ ಕುರಿತಂತೆ ಇದುವರೆಗೂ ಪೊಲೀಸರು ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.

Copyright © All rights reserved Newsnap | Newsever by AF themes.
error: Content is protected !!