ಮಂಡ್ಯ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆಯಲಿರುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ.
ಒಂದೇ ಒಂದು ಸ್ಥಾನವನ್ನು ಗೆಲ್ಲದ ಬಿಜೆಪಿ ಕೇವಲ ನಾಮ ನಿರ್ದೇಶನದಿಂದಲೇ ಡಿಸಿಸಿ ಬ್ಯಾಂಕ್ ಅಧಿಕಾರ ಸೂತ್ರ ಹಿಡಿದರೆ ಅದೊಂದು ಇತಿಹಾಸ ರೂಪಿಸುವ ಸಾಧ್ಯತೆ ಇದೆ.
ಜಿಲ್ಲಾ ಮಂತ್ರಿ ನಾರಾಯಣಗೌಡ ಸೇರಿದಂತೆ ಜಿಲ್ಲೆ ಎಲ್ಲಾ ಬಿಜೆಪಿ ನಾಯಕರನ್ನು ಹೊರಗಿಟ್ಟು ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಅವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ರೂಪಿಸಿರುವ ರಣತಂತವನ್ನು ಕಾರ್ಯಗತಗೊಳಿಸಲು ಮುಂದಾಗಿದ್ದಾರೆ.
ಉಮೇಶ್ ಗೆ ಅಧ್ಯಕ್ಷ ಪಟ್ಟ?
ಹೆಚ್ಚು ನಿರ್ದೇಶಕರನ್ನು ಹೊಂದಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ನಿರಾಸೆಯಾಗಿದೆ. ಬಿಜೆಪಿ ನಾಮನಿರ್ದೇಶನ ಮಾಡಿರುವ ಸಿ.ಪಿ. ಉಮೇಶ್ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಪಕ್ಷದ ಆಶೋಕ್ ಗೆ ಉಪಾಧ್ಯಕ್ಷ ಸ್ಥಾನ ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದಾರೆ.
ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಸಿ. ಅಶ್ವಥ್ ಮನಸ್ತಾಪಗೊಂಡು ಜೆಡಿಎಸ್ ಪಕ್ಷದ ಮುಖಂಡರ ಸಖ್ಯಕ್ಕೆ ಬಂದಿದ್ದಾರೆ. ಜೆಡಿಎಸ್ ಮುಖಂಡರು ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ತಪ್ಪಿಸಿಲು ರಣತಂತ್ರವೊಂದನ್ನು ರೂಪಿಸಿದ್ದಾರೆ.
ಈ ತಂತ್ರವನ್ನು ಕಾರ್ಯಗತಗೊಳಿಸಲು ಸ್ವತಃ ಮಾಜಿ ಸಿಎಂ ಕುಮಾರಸ್ವಾಮಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮೈತ್ರಿಯ ಮಾತುಕತೆ ನಡೆಸಿದ್ದಾರೆ. ಒಂದೂ ನಿರ್ದೇಶಕ ಸ್ಥಾನ ಗೆಲ್ಲದ ಬಿಜೆಪಿ ಪಕ್ಷ ಕೇವಲ ಸಹಕಾರ ಮಾಡಿದ್ರೆ DCC ಬ್ಯಾಂಕ್ ನ ಅಧ್ಯಕ್ಷಸ್ಥಾನದ ಅಧಿಕಾರ ಕೊಡುವುದಾಗಿ ಜೆಡಿಎಸ್ ನಾಯಕರು ರಣತಂತ್ರ ಮುಂದಿಟ್ಟಿದ್ದಾರೆ. ಇದಕ್ಕೆ ಬಿಜೆಪಿ ಕೂಡ ಒಪ್ಪಿಕೊಂಡಿದೆ.
ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 15 ಮತಬಲವಿದೆ. ,ಕಾಂಗ್ರೆಸ್ 8 ಸ್ಥಾನ ಗೆದ್ದಿದೆ. ಅವರ ಪೈಕಿ ಓರ್ವ ಅತೃಪ್ತ ನಿರ್ದೇಶಕ ಸಿ. ಅಶ್ಚಥ್ ಅವರು ಜೆಡಿಎಸ್ಗೆ ಬಂದಿದ್ದಾರೆ. ಇದರಿಂದ ಕಾಂಗ್ರೆಸ್ ಸಂಖ್ಯೆ 7ಕ್ಕೆ ಕುಸಿಯುತ್ತದೆ. ಜೆಡಿಎಸ್ ಬಲ 5ಕ್ಕೆ ಏರುತ್ತದೆ. ಈ 5 ನಿರ್ದೇಶಕರೊಳಗೊಂಡಂತೆ ಸರ್ಕಾರದ ಒಬ್ಬ ನಾಮಿನಿ ಸದಸ್ಯ, ಒಬ್ಬ ಜಿಲ್ಲಾ ರಿಜಿಸ್ಟ್ರಾರ್ ಹಾಗೂ ಒಬ್ಬ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯ ಮತಗಳ ಮೂಲಕ 8 ಸ್ಥಾನಗಳೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ರಣತಂತ್ರ ಇದಾಗಿದೆ. ಅಶ್ವಥ್ ಅವರು ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖರ್ ಅವರ ಸಹೋದರರಾಗಿದ್ದಾರೆ.
ಸರ್ಕಾರದ ನಾಮಿನಿ ಮಾಡೋ ನಿರ್ದೇಶಕನಿಗೆ ಅಧ್ಯಕ್ಷ ಸ್ಥಾನ ನೀಡಿ ಜೆಡಿಎಸ್ಗೆ ಉಪಾಧ್ಯಕ್ಷ ಸ್ಥಾನದ ಜೊತೆಗೆ ಜೆಡಿಎಸ್ಗೆ ಬಂದಿರುವ ಸಿ. ಅಶ್ವಥ್ ಅವರಿಗೆ ಅಪೆಕ್ಸ್ ಬ್ಯಾಂಕ್ ನ್ಯಾಮಿನಿ ಮಾಡಿಸುವ ಫ್ಲ್ಯಾನ್ ರೂಪಿಸಿದೆ. ಇದೀಗ ಬಿಜೆಪಿಗೆ ಈ ಮೂಲಕ ಒಂದು ಸ್ಥಾನ ಗೆಲ್ಲದಿದ್ದರೂ ಕೇವಲ ಮೈತ್ರಿಗೆ ಮಂಡ್ಯ ಡಿಸಿಸಿ ಬ್ಯಾಂಕ್ ಅಧಿಕಾರ ಗದ್ದುಗೆ ಸಿಗುವುದು ನಿಶ್ಚಿತವಾಗಿದೆ ಎನ್ನಲಾಗಿದೆ.
ಬೆಳಗಾಗುವುದರೊಳಗೆ ನಾಮಿನಿ ಚೇಂಜ್ !
ಸರ್ಕಾರ ಈ ಮುಂಚೆ ಕೆಆರ್ ಪೇಟೆ ತಾಲೂಕಿನ ಸಾಸಲು ಗ್ರಾಮದ ನಾಗೇಶ್ ಅವರನ್ನ ನಾಮನಿರ್ದೇಶನ ಮಾಡಿತ್ತು. ಇದೀಗ ಅವರನ್ನು ಬದಲಿಸಿ ಸಿ.ಪಿ. ಉಮೇಶ್ ಅವರನ್ನು ನಾಮಿನಿ ಮಾಡಿದೆ. ಉಮೇಶ್ ಮಾಜಿ ಸಿಎಂ ಎಸ್.ಎಂ. ಕೃಷ್ಣ ಮತ್ತು ಡಿಸಿಎಂ ಅಶ್ವಥ್ ನಾರಾಯಣ ಅವರ ಆಪ್ತರಾಗಿದ್ದಾರೆ. ಇಂದಿನ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಕೂಡ ಉಮೇಶ್ ಅವರಿಗೆ ವರಿಷ್ಠರು ಸೂಚಿಸಿದ್ದಾರೆ.
ಈ ಮದ್ಯೆ ನಿನ್ನೆ ಸಂಸದೆ ಸುಮಲತಾ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿರೋದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಸಂಸದೆ ಈ ವಿಚಾರದಲ್ಲಿ ಮೈತ್ರಿ ಬೇಡವಂಬ ಸಲಹೆ ನೀಡಿದ್ದರೆಂದು ಹೇಳಲಾಗುತ್ತಿದೆ. ಇವತ್ತು ಬಿಜೆಪಿ-ಜೆಡಿಎಸ್ ಮೈತ್ರಿ ನಿಶ್ಚಿತವಾಗುವುದರ ಮೂಲಕ ಜೆಡಿಎಸ್ನ ಆತಂಕ ನಿವಾರಣೆ ಆಗಿದೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ