December 27, 2024

Newsnap Kannada

The World at your finger tips!

yoganna

ಬಿಸಲೇರಿ ಜಯಣ್ಣ ದತ್ತಿ ಪ್ರಶಸ್ತಿ ಪುರಸ್ಕೃತ ಡಾ ಎಸ್. ಪಿ. ಯೋಗಣ್ಣನವರಿಗೆ ಅಭಿನಂದನೆ

Spread the love

ಕನ್ನಡ ಸಾಹಿತ್ಯ ಪರಿಷತ್ತು ಕೊಡುವ ೨೦೨೦ ನೇ ಸಾಲಿನ ಪ್ರತಿಷ್ಠಿತ ‘ಬಿಸಿಲೇರಿ ಜಯಣ್ಣ ದತ್ತಿ ಪ್ರಶಸ್ತಿ’ಯನ್ನು ‘ಆರೋಗ್ಯ ಎಂದರೇನು? ಎಂಬ ತಮ್ಮ ಕೃತಿಗೆ ಪಡೆದಿರುವ ಪ್ರಸಿದ್ಧ ವೈದ್ಯ ಸಾಹಿತಿ ಡಾ. ಎಸ್.ಪಿ. ಯೋಗಣ್ಣ ಅವರನ್ನು ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಕನ್ನಡ ಜನಶಕ್ತಿ ಕೇಂದ್ರದ ವತಿಯಿಂದ ನಗರದ ಅವರ ನಿವಾಸದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಈ ವೇಳೆ ಅಭಿನಂದನೆ ಸ್ವೀಕರಿಸಿ, ಮಾತನಾಡಿದ ಸಾಹಿತಿ ಡಾ. ಎಸ್.ಪಿ. ಯೋಗಣ್ಣ, “ಸಕಲ ವಿಚಾರಗಳನ್ನೂ ತನ್ನ ಒಡಲೊಳಗೆ ಜೀರ್ಣಿಸಿ ಕೊಳ್ಳುವ, ಹುದುಗಿಸಿಕೊಳ್ಳುವ ಅಗಾಧವಾದ ಶಕ್ತಿ ಕನ್ನಡ ಭಾಷೆಗೆ ಇದೆ. ಇಂತಹ ಭಾಷೆ ಬದುಕಿನ ಮತ್ತು ಅನ್ನದ ಭಾಷೆಯಾದಾಗ ಮಾತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯಬಲ್ಲದು. ಅದಕ್ಕಾಗಿ ಕನ್ನಡ ಭಾಷೆ ಶೈಕ್ಷಣಿಕವಾಗಿ ವೈದ್ಯಕೀಯ, ಇಂಜಿನಿಯರ್ ಕಾಲೇಜು ಮತ್ತು ವೃತ್ತಿ ಕ್ಷೇತ್ರದಲ್ಲಿ ಸಮೃದ್ಧವಾಗಿ ಬೆಳೆಯಬೇಕಿದೆ. ಈ ದಿಕ್ಕಿನಲ್ಲಿ ಕನ್ನಡ ಪಠ್ಯಗಳು ರೂಪುಗೊಳ್ಳಬೇಕಿದೆ. ಈ ಕುರಿತು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.

ಕನ್ನಡದಲ್ಲಿ ಭಾವನಾತ್ಮಕ ಸಾಹಿತ್ಯ ತುಂಬಾ ಹುಲುಸಾಗಿ ಸೃಷ್ಟಿಯಾಗಿದೆ. ವೈದ್ಯಕೀಯ ಮತ್ತು ತಾಂತ್ರಿಕ ಸಾಹಿತ್ಯದ ಕೊರತೆ ತುಂಬಾ ಇದೆ. ಇದಕ್ಕೆ ಕಾರಣ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಶಿಕ್ಷಣವನ್ನು ಆಂಗ್ಲಭಾಷೆಯಲ್ಲಿ ನೀಡುತ್ತಿರುವುದ್ದೇ ಆಗಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕ್ಷೇತ್ರದಲ್ಲಿ ಕನ್ನಡದಲ್ಲಿ ಪಠ್ಯ ರಚನೆಯಾಗಬೇಕು. ಜೊತೆಗೆ ಕನ್ನಡದಲ್ಲಿ ಸಹ ಬೋಧನೆ ನಡೆಯಬೇಕು. ಜಪಾನ್, ಜರ್ಮನ್, ಚೀನಾ, ರಷ್ಯಾದಲ್ಲಿ ಇಂಗ್ಲಿಷ್ ಬಳಕೆ ಇಲ್ಲ. ಅಲ್ಲಿ ಆಯಾಯ ದೇಶಿಯ ಭಾಷೆಯಲ್ಲಿಯೇ ಈ ಶಿಕ್ಷಣ ನೀಡಲಾಗುತ್ತಿದೆ. ನಮ್ಮಲ್ಲಿ ಮಾತ್ರ ಈ ವ್ಯವಸ್ಥೆ ಇಲ್ಲ ಎಂದು ವಿಷಾದಿಸಿದರು.

ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ಸರಳವಾಗಿ ರಚನೆಯಾಗಬೇಕು. ಇದು ಜನಸಾಮಾನ್ಯರಿಗೂ ಅರ್ಥವಾಗಬೇಕು. ವೈದ್ಯರು ಸಹ ತಮ್ಮ ತಪಾಸಣೆಯ ವರದಿಗಳನ್ನು, ಔಷಧಿ ಚೀಟಿಗಳನ್ನು ಕನ್ನಡದಲ್ಲಿ ಬರೆದುಕೊಡಬೇಕು ಎಂದ ಅವರು, ಇಂಗ್ಲೀಷಿನಲ್ಲಿರುವ ವೈದ್ಯಕೀಯ ಪರಿಭಾಷೆಗಳಿಗೆ ಕನ್ನಡದಲ್ಲಿ ಸಮಾನಾರ್ಥ ಕೊಡುವ ಬೃಹತ್ ಸಂಪುಟವಾದ ‘ವೈದ್ಯ ವಿಷಯ ವಿಜ್ಞಾನ ವಿಶ್ವಕೋಶ’ ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಪ್ರಕಟವಾಗುತ್ತಿದ್ದು ಅದಕ್ಕೆ ತಾವು ಸಾಕಷ್ಟು ಶ್ರಮಿಸುತ್ತಿರುವುದಾಗಿ ನುಡಿದರು.

ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಮಾತನಾಡಿ, ಇಪ್ಪತ್ತಕ್ಕೂ ಅಧಿಕ ವೈದ್ಯಕೀಯ ಕೃತಿಗಳನ್ನು ರಚಿಸುವ ಮೂಲಕ ಡಾ.ಎಸ್.ಪಿ. ಯೋಗಣ್ಣ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇದರಿಂದಾಗಿ ವಿಭಿನ್ನ ವೃತ್ತಿ ಕ್ಷೇತ್ರದ ಸಂವೇದನೆಗಳು ಕನ್ನಡ ಸಾಹಿತ್ಯದಲ್ಲಿ ಅರಳಲು ಸಾಧ್ಯವಾಯಿತು. ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹುದ್ದೆಗೆ ಆರಿಸಿ ಬಂದರೆ ವೈದ್ಯಕೀಯ ಸಾಹಿತ್ಯ ಸಮ್ಮೇಳನ ಹಾಗೂ ಕಮ್ಮಟಗಳನ್ನು ಆಯೋಜಿಸುವ ದಿಕ್ಕಿನಲ್ಲಿ, ವೈದ್ಯಕೀಯ ಪುಸ್ತಕಗಳನ್ನು ಪ್ರಕಟಿಸಲು ‌ಶ್ರಮಿಸುವುದಾಗಿ ತಿಳಿಸಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ, ಅಧ್ಯಾಪಕ ಹಾಗೂ ಲೇಖಕ ಶಿವಣ್ಣಮಂಗಲ, ಹಿರಿಯ ಕನ್ನಡ ಹೋರಾಟಗಾರರಾದ ನಂ. ವಿಜಯಕುಮಾರ್, ರಾಮಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!