December 23, 2024

Newsnap Kannada

The World at your finger tips!

krs paksha

ಕೆಆರ್‌ಎಸ್ ಪಕ್ಷದಿಂದ ‘ಕರ್ನಾಟಕಕ್ಕಾಗಿ ನಾವು’ ಬೈಕ್ ಜಾಥಾ

Spread the love

ಮಂಡ್ಯ: ಸ್ವಚ್ಚ, ಪ್ರಾಮಾಣಿಕ, ಜನಪರ, ಪ್ರಾದೇಶಿಕ ರಾಜಕಾರಣದ ಕುರಿತು ಜನಜಾಗೃತಿ ಮೂಡಿಸಲು (ಫೆ.೧೯)ಸೋಮವಾರದಿಂದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ‘ಕರ್ನಾಟಕಕ್ಕಾಗಿ ನಾವು’ ಘೋಷಣೆಯೊಂದಿಗೆ ರಾಜ್ಯವ್ಯಾಪಿ ಬೈಕ್ ಜಾಥಾ ಹಮ್ಮಿಕೊಂಡಿದೆ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಅರುಣಕುಮಾರ ಹೆಚ್ ಮಲ್ಲೇಗೌಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಮ್ಮ ಭ್ರಷ್ಟಾಚಾರ, ಸ್ವಜನಪಕ್ಷಪಾತ, ದುರಾಡಳಿತದ ಮೂಲಕ ರಾಜ್ಯದ ಜನರಿಗೆ ನಿರಂತರವಾಗಿ ದ್ರೋಹ ಮಾಡುತ್ತಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳನ್ನು ತಿರಸ್ಕರಿಸಿ ಮತ್ತು ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ರಾಜ್ಯದ ಜನರನ್ನು ಕೋರಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಿಂದ ಆರಂಭವಾಗಲಿರುವ ಈ ಜಾಥಾದ ನೇತೃತ್ವವನ್ನು ಕೆಆರ್‌ಎಸ್ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ವಹಿಸಲಿದ್ದಾರೆ ಎಂದರು.

ಈ ಜಾಥಾವು ೨೯ ಜಿಲ್ಲಾ ಕೇಂದ್ರಗಳು ಮತ್ತು ೫೦ ಹೆಚ್ಚು ತಾಲ್ಲೂಕು ಕೇಂದ್ರಗಳು ಸೇರಿದಂತೆ ಸುಮಾರು ೮೨ ಪಟ್ಟಣ/ನಗರಗಳಲ್ಲಿ ಸಂಚರಿಸಿದ ನಂತರ ಮಾರ್ಚ್ ೦೨ ರ ಶನಿವಾರ ನೆಲಮಂಗಲದಲ್ಲಿ ಬೃಹತ್ ಸಮಾರೋಪ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

‘ಕರ್ನಾಟಕಕ್ಕಾಗಿ ನಾವು’ ಬೈಕ್ ಜಾಥಾವು ಮಂಡ್ಯ ಜಿಲ್ಲೆಗೆ ಫೆ.೨೦ ರ ಮಂಗಳವಾರ ಜಿಲ್ಲೆಯ ಮದ್ದೂರು, ಮಂಡ್ಯ ಪಟ್ಟಣಗಳ ಮೂಲಕ ಜಾಥಾ ಸಾಗಲಿದೆ. ಜಿಲ್ಲಾ ಕೇಂದ್ರವಾದ ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿಪಾರ್ಕ್ನಲ್ಲಿ ಅಪರಾಹ್ನ ೩ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ನಂತರ ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾವು ಸಾಗಿ, ಬನ್ನೂರು ರಸ್ತೆ, ಟಿ.ನರಸೀಪುರ ಮಾರ್ಗದ ಮೂಲಕ ಚಾಮರಾಜನಗರ ಜಿಲ್ಲೆ ತಲುಪಲಿದೆ ಎಂದು ವಿವರಿಸಿದರು.

ಈ ಜಾಥಾದ ಸಂದರ್ಭದಲ್ಲಿ ಭ್ರಷ್ಟರನ್ನು, ಅಪ್ರಾಮಾಣಿಕರನ್ನು ಸ್ವಜನಪಕ್ಷಪಾತಿಗಳನ್ನು ಅನೈತಿಕತೆ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆ.ಸಿ.ಬಿ. ಪಕ್ಷಗಳ ನಾಯಕರನ್ನು ತಿರಸ್ಕರಿಸಿ ಜನಪರ ಕಾಳಜಿಯ, ಸ್ವಚ್ಛ ಮತ್ತು ಪ್ರಾಮಾಣಿಕ ರಾಜಕೀಯ ವ್ಯವಸ್ಥೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬೆಂಬಲಿಸಿ ಎಂದು ಕೆಆರ್‌ಎಸ್ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿಯವರು ರಾಜ್ಯದ ಜನರಲ್ಲಿ ಮನವಿ ಮಾಡಲಿದ್ದಾರೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳಲ್ಲಿಯೂ ಪಕ್ಷವು ಸ್ಪರ್ಧಿಸಲಿದೆ. ಹಾಗೆಯೇ ಜುಲೈ-ಆಗಸ್ಟ್ ತಿಂಗಳಿನಲ್ಲಿ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ,ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಹ ಪಕ್ಷವು ಸ್ಪರ್ಧಿಸಲಿದೆ ಎಂದರು. ಕೇಂದ್ರ ಸರ್ಕಾರದಿಂದ ‘3 ಲಕ್ಷ ಸಾಲ’ ಲಭ್ಯ : ಅರ್ಧಕ್ಕಿಂತ ಹೆಚ್ಚು ‘ಬಡ್ಡಿ’ಯನ್ನ ಕೇಂದ್ರವೇ ಭರಿಸುತ್ತದೆ

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮೇಶ್‌ಗೌಡ ಜಿ.ಎಂ, ಉಪಾಧ್ಯಕ್ಷ ಮಲ್ಲೇಶ್ ಹೆಬ್ಬಕವಾಡಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಕೀಲಾರ, ಮಂಡ್ಯ ತಾಲ್ಲೂಕು ಅಧ್ಯಕ್ಷ ರವೀಂದ್ರ ಎಸ್ ಕೊತ್ತತ್ತಿ,ಉಪಾಧ್ಯಕ್ಷ ಜಗದೀಶ ಎಸ್,ಹರೀಶ್ ಹಾಜರಿದ್ದರು .

Copyright © All rights reserved Newsnap | Newsever by AF themes.
error: Content is protected !!