November 24, 2024

Newsnap Kannada

The World at your finger tips!

vishweshwaraya

ಅಭಿವೃದ್ಧಿ ಹರಿಕಾರ ,’ಕರ್ಮಯೋಗಿ’ ಭಾರತ ರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯ

Spread the love

ನನ್ನ ತೊಂಬತ್ತನೆಯ ವಯಸ್ಸಿನಲ್ಲಿ ಹೆಜ್ಜೆ ಇಡುವಲ್ಲಿ ನಾನು ಇನ್ನೂ ತಕ್ಕಷ್ಟು ಆರೋಗ್ಯವಾಗಿದ್ದೇನೆ. ಮೈಕೈ ದೌರ್ಬಲ್ಯ ಬಹಳವೇನೂ ಬರಲಿಲ್ಲ. ಕನ್ನಡಕವಿಲ್ಲದೆ ಓದಬಲ್ಲೆ. ದಿನಾ ಕಷ್ಟವಿಲ್ಲದೆ ಎರಡು ಮೂರು ಮೈಲಿ ನಡೆಯಬಲ್ಲೆ. ಬುದ್ದಿ ಅರುಳು ಮರುಳಾಗಿಲ್ಲ. ಜೀವನ ಎನ್ನುವುದು ಒಂದು ಹೆಣಗಾಟ. ಆದರೆ ಅದರ ಎಡರುಗಳನ್ನು ದಾಟುವುದಕ್ಕೆ ಮನುಷ್ಯನಿಗೆ ಶಕ್ತಿ ಇದೆ. ನನ್ನ ಜನ್ಮದಿನ ಎನ್ನುವುದು ಮಹದ್ವಿಷಯವೇನಲ್ಲ; ಈ ವಿಷಯದಲ್ಲಿ ಸಂಭ್ರಮ ವಹಿಸಿರುವ ಬಗ್ಗೆ ನಾನು ತಮ್ಮನ್ನು ವಂದಿಸುತ್ತೇನೆ” ಎಂಬ ಮಾತುಗಳಲ್ಲಿ ಅತ್ಯದ್ಭುತ ಸಾಧಕನ ಅದೆಂತಹ ವಿನಯ ಸೌಜನ್ಯ!! ಈ ಮಾತುಗಳು ಬಂದದ್ದು 90 ವರ್ಷ ತುಂಬಿದ ಕರ್ಮಯೋಗಿ ವಿಶ್ವೇಶ್ವರಯ್ಯನವರ ಬಾಯಲ್ಲಿ. ನೂರಾ ಎರಡು ವರ್ಷಗಳ ತುಂಬು ಬದುಕನ್ನು ಕರ್ಮಯೋಗಿಯಂತೆ ಬಾಳಿದ ಸರ್ ಎಂ ವಿ ಅವರು ಬದುಕಿಡೀ ನಾಡಿಗೆ ದುಡಿದು, ಸೇವೆ ಸಲ್ಲಿಸಿದ ನಮ್ಮ ನೆಲದ ಹೆಮ್ಮೆಯ ಭಾರತೀಯ. ತಮ್ಮ ಜೀವಿತಕಾಲದಲ್ಲಿಯೇ ದಂತಕತೆಯಾಗಿ ಜಗತ್ಪ್ರಸಿದ್ಧರಾದರು. ಇಂದು ಈ ಮಹಾನ್ ಸ್ಫೂರ್ತಿ ಚಿಲುಮೆಯ ಜನ್ಮದಿನೋತ್ಸವ.

ಭಾರತವು ಪ್ರಗತಿಯ ಪಥದಲ್ಲಿ ಸಾಗುವುದಕ್ಕೆ ಅನೇಕ ಮಹಾನುಭಾವರುಗಳ ಸೇವೆ ಅಪ್ರತಿಮ. ಅಂತಹ ಮಹಾನುಭಾವರುಗಳಲ್ಲಿ ನಮ್ಮ ಕರ್ನಾಟಕದ ಹೆಮ್ಮೆಯ ಸುಪುತ್ರ ಭಾರತ ರತ್ನ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಅಗ್ರಗಣ್ಯರು.

ಕರ್ಮವೇ ತಪಸ್ಸು :

ಮಾನವಸೇವೆಯೇ, ದೈವಪೂಜೆ; ಇದು ಅವರ ನಂಬಿಕೆಯ ಸಾರಸರ್ವ. “ಕೆಲಸ ಮಾಡಿರಿ; ದುಡಿಯಿರಿ; ಚೆನ್ನಾಗಿ ದುಡಿಯಿರಿ, ದುಡಿತದಿಂದ ಯಾರೂ ಸಾಯುವುದಿಲ್ಲ. ಸಾಯುವುದು ಚಿಂತೆಯಿಂದ” ಮಾಡುವ ಕೆಲಸ ಯಾವುದಿದ್ದರೂ ಸರಿ ಅದನ್ನು ನಿಯತ್ತಿನಿಂದಲೇ ಮಾಡಬೇಕು. ಜಗತ್ತಿನ ಯಾವುದೇ ಕೆಲಸ ಕೀಳಲ್ಲ. ನಿನ್ನ ಕೆಲಸ ಈ ರಸ್ತೆಯ ಈ ಭಾಗವನ್ನು ಗುಡಿಸುವುದಾಗಿದ್ದರೆ, ಜಗತ್ತಿನ ಅತ್ಯಂತ ಸ್ವಚ್ಚ ರಸ್ತೆಯಾಗುವಂತೆ ಗುಡಿಸು ಎಂದು ಹೇಳುತ್ತಿದ್ದರು ಅದು ನಿಜವು ಹೌದು ನಾವು ಮಾಡುವ ಕೆಲಸ ಯಾವುದಿದ್ದರೂ ಸರಿ ಅದನ್ನು ನಿಯತ್ತಿನಿಂದಲೇ ಮಾಡಬೇಕು. ಶಿಕ್ಷಣ ಅಥವಾ ಉದ್ಯೋಗಕ್ಕೂ ಇದು ಅನ್ವಯ. ಅದನ್ನು ಪ್ರೀತಿಸಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವೆನ್ನುತ್ತಾ ತನ್ನ ಪರಿಶ್ರಮದಿಂದಲೇ ಕಲಿತು ಮೈಸೂರು ದಿವಾನರಾಗಿ “ಭಾರತ ರತ್ನ” ಪಡೆದ ಮೊದಲ ಕನ್ನಡಿಗರೆಂಬ ಕೀರ್ತಿಗಳಿಸಿದ ಇವರ ಸಾಧನೆ ಅಪಾರವಾದುದು ಹಾಗೂ ಪ್ರೇರಣಾದಾಯಕ.

ಸಾಮಾನ್ಯ ಸಾಂಪ್ರದಾಯಸ್ಥರ ಕುಟುಂಬದಲ್ಲಿ ಜನಿಸಿದ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಹುಟ್ಟಿದ್ದು 1860 ಸೆಪ್ಟೆಂಬರ್‌ 15. ಹಿರಿಯರು ಆಂಧ್ರಪ್ರದೇಶದ ಮೋಕ್ಷಗುಂಡಂನವರು. ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದು ಚಿಕ್ಕಬಳ್ಳಾಪುರ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ವಿದ್ಯಾಭ್ಯಾಸ ಪೂರ್ತಿಗೊಳಿಸಲು ಕಷ್ಟಪಡುತ್ತಿದ್ದರು, ಬಳಿಕ ಸೋದರ ಮಾವನ ಸಹಾಯದಿಂದ ಬೆಂಗಳೂರಿನಲ್ಲಿ ಮನೆ ಪಾಠ ಮಾಡುತ್ತಾ ಶಿಕ್ಷಣ ಮುಂದುವರಿಸಿದರು. ಮದ್ರಾಸು ವಿಶ್ವವಿದ್ಯಾನಿಲಯದಿಂದ ಬಿ.ಎ. ಪದವಿಯನ್ನು ಪಡೆದು, ತದನಂತರ ಪುಣೆಯ ವಿಜ್ಞಾನ ಕಾಲೇಜಿನಿಂದ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಸ್ವಸಾಮರ್ಥ್ಯದಿಂದ ಓದಿ, ಬೆಳೆದು ಭಾರತದ ಅತ್ಯಂತ ಸಮರ್ಥರಾದ ಸಿವಿಲ್ ಎಂಜಿನಿಯರ್, ಅಣೆಕಟ್ಟು ನಿರ್ಮಾಣಕಾರ, ಅರ್ಥಶಾಸ್ತ್ರಜ್ಞರು, ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಲ್ಲದೇ ಕಳೆದ ಶತಮಾನದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದರು.

image 5

ಅಂದು ಶರಾವತಿ ಮೈದುಂಬಿ ಉಕ್ಕಿ ಹರಿಯುತ್ತಿದ್ದಳು. ಜೋಗದ ಜಲಪಾತದಲ್ಲಿ ರಾಜಾ ರಾಣಿ, ರೋರರ್ ಮತ್ತು ರಾಕೆಟ್ ಕಾವಲುಗಳಾಗಿ ಧುಮ್ಮಿಕ್ಕೆ ಹರಿಯುತ್ತಿರುವ ರುದ್ರ ರಮಣೀಯ ದೃಶ್ಯವನ್ನು ನೋಡಲು ಮೈಸೂರು ಮಹಾರಾಜರ ದಿವಾನರಾಗಿದ್ದ ವಿಶ್ವೇಶ್ವರಯ್ಯನವರು ತಮ್ಮ ಮಂತ್ರಿಗಣದ ಪರಿವಾರ ಸಮೇತ ಜೋಗಕ್ಕೆ ಭೇಟಿ ನೀಡಿದ ಸಂದರ್ಭ. ಎಲ್ಲರೂ ಜೋಗದ ರುದ್ರರಮಣೀಯ ದೃಶ್ಯವನ್ನು ಸವಿಯುತ್ತಿದ್ದರೆ, ವಿಶ್ವೇಶ್ವರಯ್ಯನವರ ಬಾಯಿಯಿಂದ ಉದ್ಗಾರವಾದ ಮಾತು Oh! What a waste? ಎಲ್ಲರೂ ಪ್ರಕೃತಿಯ ಸೌಂದರ್ಯೋಪಾಸಕರಾಗಿದ್ದರೆ, ವಿಶ್ವೇಶ್ವರಯ್ಯನವರು ಜನಾನುರಾಗಿಯಾಗಿ, ಇಂತಹ ಜಲಸಂಪತ್ತನ್ನು ಉಪಯೋಗಿಸಿಕೊಳ್ಳದೆ ವೃಥಾ ವ್ಯರ್ಥಮಾಡುತ್ತಿದ್ದೇವೆ ಎಂದು ಯೋಚಿಸಿ ಅಲ್ಲಿಯೇ ಇದ್ದ ಮೈಸೂರು ಮಹಾರಾಜರಿಗೆ ವಿವರಿಸಿ ಲಿಂಗನ ಮಕ್ಕಿಯ ಬಳಿ ಭಾರತದ ಅತಿದೊಡ್ಡ ಜಲವಿದ್ಯುತ್ ಕೇಂದ್ರದ ಸ್ಥಾಪನೆಗೆ ಮುಂದಾದರು. ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಇಂದು 120 ಮೆಗಾವ್ಯಾಟ್ ಸಾಮರ್ಥ್ಯದ ಅತಿದೊಡ್ಡ ಜಲವಿದ್ಯುತ್ ಕೇಂದ್ರಗಳಲ್ಲಿ ಒಂದಾದ ವಿದ್ಯುತ್ ಶಕ್ತಿ ಕರ್ನಾಟಕದಲ್ಲಿದೆ.

ವಿಶ್ವೇಶ್ವರಯ್ಯನವರ ಸಮಯಪ್ರಜ್ಞೆಯ ಬಗ್ಗೆ ಮೇಲಿನಂತ ಅದೆಷ್ಟೋ ಕಥೆಗಳಿವೆ. ವಿದ್ಯುಚ್ಚಕ್ತಿಯಿಲ್ಲದೇ ರಾತ್ರಿ ಹೊತ್ತು ಮೋಂಬತ್ತಿಗಳನ್ನು ಬಳಸಲಾಗುತ್ತಿದ್ದ ಆ ಕಾಲದಲ್ಲಿ ಅವರ ಪ್ರಾಮಾಣಿಕತೆಯನ್ನು ಕುರಿತ ಮೋಂಬತ್ತಿಯ ಕತೆಯಂತೂ ಜನಜನಿತವಾಗಿತ್ತು. ವಿಶ್ವೇಶ್ವರಯ್ಯನವರು ಸರ್ಕಾರದ ಕೆಲಸ ಮಾಡುವ ತನಕ ಮಾತ್ರ ಸರಕಾರ ಕೊಟ್ಟ ಮೋಂಬತ್ತಿ ಬಳಸುತ್ತಿದ್ದರು. ಅದು ಮುಗಿದೊಡನೆ, ತಮ್ಮ ಸ್ವಂತ ಖರ್ಚಿನಲ್ಲಿ ಕೊಂಡ ಮೋಂಬತ್ತಿ ಹತ್ತಿಸುತ್ತಿದ್ದರು – ಈ ಕತೆಯನ್ನು ಅದೆಷ್ಟೋ ಜನರ ಬಾಯಲ್ಲಿ ಕೇಳುತ್ತಿದ್ದೆವು.

ಸರ್ ಎಂ. ವಿಶ್ವೇಶ್ವರಯ್ಯನವರು ತಮ್ಮ ಈ ಸುದೀರ್ಘ ಅವಧಿಯಲ್ಲಿ ಅನೇಕಾನೇಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ದಕ್ಷತೆಯನ್ನು ಪ್ರದರ್ಶಿಸಿದವರು. ಭಾರತದ ಆರ್ಥಿಕಾಭಿವೃದ್ಧಿಗೆ ಶ್ರಮಿಸಿದ ಭೀಷ್ಮ ಅವರು. ದೇಶೋನ್ನತಿಗೆ ಹಗಲಿರುಳೆನ್ನದೆ ದುಡಿದು, ಪ್ರತಿ ಕೆಲಸದಲ್ಲೂ ತೋರಿದ ಕಾರ್ಯತತ್ಪರತೆ, ಕರ್ತವ್ಯನಿಷ್ಠೆ ಅನುಕರಣೀಯ. ವಿಶ್ವೇಶ್ವರಯ್ಯನವರು ಮುಂಬಯಿ ಅಧಿಪತ್ಯದಲ್ಲಿ 25 ವರ್ಷ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು. ಅನೇಕ ನೀರಾವರಿ, ಒಳಚರಂಡಿ ಯೋಜನೆ ಪೂರ್ಣಗೊಳಿಸಿ ಜನಮನ್ನಣೆಗಳಿಸಿದರು. ಮುಂಬಯಿ ನಗರದಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಸೇವೆಯ ನಂತರ ಭಾರತೀಯ ನೀರಾವರಿ ಕಮಿಷನ್ ಗೆ ಸೇರಿ ದಖನ್ ಪ್ರಸ್ತಭೂಮಿಯಲ್ಲೇ ಉತ್ತಮವಾದ ನೀರಾವರಿ ವ್ಯವಸ್ಥೆಯನ್ನು ಪರಿಚಯಿಸಿದ ಕೀರ್ತಿ ಸರ್.ಎಂ.ವಿ. ಗೆ ಸಲ್ಲುತ್ತದೆ. ಅರ್ಥರ್ ಕಾಟನ್‌ರವರಿಂದ ಬಹಳಷ್ಟು ಪ್ರಭಾವಿತರಾಗಿದ್ದ ಸ‌ರ್.ಎಂ.ವಿಯವರು ಕಾವೇರಿ ನದಿಗೆ ಅಣೆಕಟ್ಟು ಕಟ್ಟುವಲ್ಲಿ ತಿರುಚನಾಪಳ್ಳಿಯಲ್ಲಿ ಚೋಳರಾಜರಿಂದ ನಿರ್ಮಿಸಲ್ಪಟ್ಟ ಹಾಗೂ 18ನೇ ಶತಮಾನದ ಅರ್ಧದಲ್ಲಿ ಅರ್ಥರ್ ಕಾಟನ್ ರವರಿಂದ ಸಂಪೂರ್ಣವಾಗಿ ನವೀಕರಿಸಲ್ಪಟ್ಟ ಬೃಹತ್ ಅಣೆಕಟ್ಟು( ಗ್ರಾಂಡ್ ಅಣೆಕಟ್ಟು) ನೋಡಿ ನಂತರ ಮಹಾರಾಜರಲ್ಲಿ ಇದನ್ನು ವರದಿ ಮಾಡಿದ್ದರು. ವಿಶೇಷವಾಗಿ ಅಣೆಕಟ್ಟುಗಳಲ್ಲಿ ಉಪಯೋಗಿಸಲಾಗುವ ಸ್ವಯಂಚಾಲಿತ ಫ್ಲಡ್ ಗೇಟ್ ವಿನ್ಯಾಸವೊಂದನ್ನು ಅನ್ವೇಷಿಸಿ ಪೇಟೆಂಟ್ ಪಡೆದಿದ್ದರು. ಅದನ್ನು ಮೊದಲ ಬಾರಿಗೆ ಪುಣೆಯ ಖಡಕ್ವಾಸ್ಲಾ ಅಣೆಕಟ್ಟು ಮತ್ತು ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟುಗಳಲ್ಲಿ ಸಹ ಉಪಯೋಗಿಸಲಾಗಿದೆ. ನಾನಾ ದೇಶಗಳಲ್ಲಿ ಆಗಾಗ ಪ್ರವಾಸ ಮಾಡಿ ಜ್ಞಾನಾರ್ಜನೆಗೆ ಅನುವು ಮಾಡಿಕೊಂಡರು. ವಿದೇಶದಿಂದ ಬಂದ ನಂತರ ಹೈದರಾಬಾದ್ ಯೋಜನೆ ಕೈಗೆತ್ತಿಕೊಂಡರು. ಮುಂದೆ ತಾಯ್ನಾಡಿನ ಆಹ್ವಾನವನ್ನು ಸ್ವೀಕರಿಸಿ ಎಲ್ಲರ ಪ್ರೀತಿ, ವಿಶ್ವಾಸ, ಮೆಚ್ಚುಗೆಗೆ ಪಾತ್ರರಾಗಿ ಚಿನ್ನದ ಸೊಬಗಿನ, ರನ್ನದ ಬೆಡಗಿನ ತಿಳಿಗನ್ನಡದ ನಾಡನ್ನು ಸುಂದರವಾಗಿಯೂ, ವಿಶ್ವಕ್ಕೇ ಮಾದರಿಯಾಗಿಯೂ ಮಾಡಿದ್ದು ಕಡಿಮೆ ಸಾಧನೆಯೇನಲ್ಲ.
ನಮ್ಮ ಚಿಕ್ಕಂದಿನಿಂದ ನಮ್ಮ ವಿಶ್ವೇಶ್ವರಯ್ಯನವರು ಕನ್ನಂಬಾಡಿ ಕಟ್ಟೆ ಕಟ್ಟಿದ್ದು ಎಂದು ಜನ ಆಪ್ತವಾಗಿ ಕತೆ ಹೇಳುತ್ತಿದ್ದುದನ್ನು ಕೇಳಿ ಬೆಳೆದವರು ನಾವು. ಆ ಕಾಲಕ್ಕಾಗಲೇ ವಿಶ್ವೇಶ್ವರಯ್ಯ ದಂತಕತೆಯಾಗಿದ್ದರು. ಕಟ್ಟೆಯ ಮೇಲಿಂದ ಕೆಳಗೆ ತೆರೆದ ಬಾಗಿಲುಗಳಿಂದ ಭೋರ್ಗರೆದು ಹರಿಯುವ ಕಾವೇರಿಯ ನೀರನ್ನು ನೋಡುವುದೇ ಒಂದು ಅದ್ಭುತ ಅನುಭವವಾಗಿತ್ತು. ಅವರು ನಿರ್ಮಿಸಿದ ಶ್ರೀಕೃಷ್ಣರಾಜ ಸಾಗರವು ಮೈಸೂರು, ಮಂಡ್ಯ ಜಿಲ್ಲೆಗಳನ್ನು ನಂದನವನವನ್ನಾಗಿ ಮಾಡಿ ವಿದ್ಯುಚ್ಛಕ್ತಿಯನ್ನು ದೇಶಾದ್ಯಂತಕ್ಕೂ ಹರಡಿತು. ಕೆಆರ್‌ಎಸ್ ಗಾತ್ರದಲ್ಲಿ ಪ್ರಪಂಚದಲ್ಲೇ ಎರಡನೆಯದು. ಈ ಯೋಜನೆಯ ಪ್ರತಿಫಲ ಇಂದು 1,20,000 ಎಕರೆಗಳಿಗೆ ನೀರು!! ಬರಡು ನಾಡಾಗಿದ್ದ ಮಂಡ್ಯ ಮತ್ತು ಮೈಸೂರು ಜಿಲ್ಲೆಗಳಿಗೆ ತಮ್ಮ ಸ್ವಂತ ನಗನಾಣ್ಯಗಳನ್ನು ಮಾರಿ ಕೃಷ್ಣರಾಜ ಸಾಗರವನ್ನು ಕಟ್ಟಿ ಲಕ್ಷಾಂತರ ಎಕರೆ ಭೂಮಿಗೆ ನೀರನ್ನುಣಿಸುವ ಮೂಲಕ ನೀರಾವರಿ ಕೃಷಿಗೆ ನಾಂದಿ ಹಾಡಿದ ನಾಲ್ಮಡಿ ಕೃಷ್ಣರಾಜ ಒಡೆಯರ್ ಮತ್ತು ವಿಶ್ವೇಶ್ವರಯ್ಯನವರ ಚಿತ್ರಗಳನ್ನು ಮೈಸೂರು ಭಾಗದ ಅನೇಕ ಗ್ರಾಮ ಗ್ರಾಮಗಳ ಪ್ರತೀ ಮನೆ ಮನೆಗಳಲ್ಲಿ ತಮ್ಮ ತಮ್ಮ ಕುಲದೇವತೆಗಳೊಂದಿಗೆ ಇಂದಿಗೂ ಪೂಜಿಸಲ್ಪಡುತ್ತದೆ.

image 6

ಇಂದು ನಮ್ಮ ಕನ್ನಡದ ನೆಲ, ವಿಜ್ಞಾನ, ತಂತ್ರಜ್ಞಾನಗಳ ತವರೂರಾಗಿದೆ. ಇದರ ಬುನಾದಿಯಲ್ಲಿ ವಿಶ್ವೇಶ್ವರಯ್ಯನವರ ಅಗಾಧ ಪರಿಶ್ರಮ ದೂರದೃಷ್ಟಿ, ಸಮಾಜಮುಖಿ ಯೋಜನೆಗಳಿವೆ. ಅವರ ಪ್ರತಿಭೆಯನ್ನು ಮನಗಂಡು ಅವರೊಡನೆ ಸಹಕರಿಸಿದ, ಅವರ ಯೋಜನೆಗಳನ್ನು ಬೆಂಬಲಿಸಿದ ಮೈಸೂರು ಮಹಾರಾಜರು, ದಿವಾನರುಗಳ ಸಹಯೋಗವೂ ಇದೆ. ನಿಜವಾದ ಅರ್ಥದಲ್ಲಿ ವಿಶ್ವೇಶ್ವರಯ್ಯನವರು ಆಧುನಿಕ ಮೈಸೂರಿನ ನಿರ್ಮಾಣದ ಭಾಗ್ಯವಿಧಾತ.

ಸರ್ ವಿಶ್ವೇಶ್ವರಯ್ಯನವರ ಕೊಡುಗೆಗಳು

  • ಕೃಷ್ಣರಾಜಸಾಗರದ ನಿರ್ಮಾಣ.
  • ಭದ್ರಾವತಿ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯ ಚೇರಮನ್ನರಾಗಿ ಅದರ ಅಭಿವೃದ್ಧಿಗೆ ಕೊಡುಗೆ.
  • ಮೈಸೂರು ಸಾಬೂನು ಕಾರ್ಖಾನೆಯ ಸ್ಥಾಪನೆ.
  • ಮೈಸೂರು ವಿಶ್ವವಿದ್ಯಾಲಯದ ಸ್ಥಾಪನೆ.
  • ಮೈಸೂರು ಬ್ಯಾಂಕ್ ಸ್ಥಾಪನೆ.
  • ಮೈಸೂರು ಮತ್ತು ಬೆಂಗಳೂರಿನಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸ್ಥಾಪನೆ.
  • ಮೈಸೂರು ಚೇಂಬರ್ ಆಫ್ ಕಾಮರ್ಸ್ ಸ್ಥಾಪನೆ.
  • ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ.

ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ ತರಬೇತಿ ಸಂಸ್ಥೆಯ ಸ್ಥಾಪನೆ.

ಕರ್ನಾಟಕದ ಹೊರತಾಗಿಯೂ ದೇಶ ವಿದೇಶಗಳಲ್ಲಿ ಅವರ ಸಾಮರ್ಥ್ಯದ ಪ್ರತೀಕವಾಗಿ ಚೀನ, ಜಪಾನ್, ಈಜಿಪ್ಟ್, ಕೆನಡಾ, ಅಮೆರಿಕಾ ಹಾಗು ರಷ್ಯಾ ದೇಶಗಳಿಗೆ ಭೇಟಿ ನೀಡಿದ್ದಲ್ಲದೇ ಅವರ ಎಷ್ಟೋ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿ ಭಾರತದ ಗೌರವವನ್ನು ವಿದೇಶಗಳಲ್ಲಿ ಎತ್ತಿಹಿಡಿದಿದ್ದಾರೆ.

ಭಾರತದ ಇತಿಹಾಸದಲ್ಲಿಯೇ ವಿಶ್ವೇಶ್ವರಯ್ಯನವರಿಗೆ ಹೋಲಿಸುವ ಮತ್ತೊಬ್ಬ ವ್ಯಕ್ತಿ ಸಿಗಲಾರರು. ಯಾವುದೇ ಪೂರ್ವಾಗ್ರಹ ಪೀಡಿತರಾಗದೇ, ಸ್ವಾರ್ಥವಿಲ್ಲದೇ, ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ನೀರಾವರಿಯಲ್ಲಿ ಇವರ ಅಪಾರ ಸೇವೆಯನ್ನು ಗುರುತಿಸಿ ಅನೇಕ ಬಿರುದು ಸನ್ಮಾನಗಳು ಹುಡುಕಿ ಬಂದವು. ಇವೆಲ್ಲವನ್ನೂ ಗುರುತಿಸಿದ ಅಂದಿನ ಭಾರತ ಸರ್ಕಾರವು 1955 ರಲ್ಲಿ ವಿಶ್ವೇಶ್ವರಯ್ಯನವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಪ್ರಧಾನ ಮಾಡಿ ಸನ್ಮಾನಿಸಿದೆ. ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಭಾರತದಾದ್ಯಂತದ ಇಂಜಿನಿಯರಿಂಗ್ ಸಮುದಾಯವು ಎಂಜಿನಿಯರ್‌ಗಳ ದಿನವನ್ನಾಗಿ ಆಚರಿಸುವ ಮುಖಾಂತರ ಭಾರತದ ಶ್ರೇಷ್ಠ ಎಂಜಿನಿಯರ್ ಆಗಿದ್ದ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರಿಗೆ ಗೌರವ ಸಲ್ಲಿಸುತ್ತಿದೆ.

ಅಭಿವೃದ್ಧಿಯ ಹರಿಕಾರ ಕರ್ಮಯೋಗಿ ಪ್ರಾಮಾಣಿಕತೆಯ ಸಾಹುಕಾರ ಅಗಾಧ ಬುದ್ಧಿ ಸಾಮರ್ಥ್ಯ ಹೊಂದಿದ್ದ ,ಅಪೂರ್ವ ವ್ಯಕ್ತಿತ್ವದ, ಹಾಗೂ ಭಾರತದ ಅನರ್ಘ್ಯ ರತ್ನ ವಿಶ್ವೇಶ್ವರಯ್ಯನವರಿಗೆ ನಮನ.

sowmya sanath

ಸೌಮ್ಯ ಸನತ್

Copyright © All rights reserved Newsnap | Newsever by AF themes.
error: Content is protected !!