ಹೆಣ್ಣು ಕೆಲವೊಮ್ಮೆ ಮಾತನಾಡಿ ನಿಷ್ಠೂರವಾಗುತ್ತಾಳೆ. ಇನ್ನೊಮ್ಮೆ ಮೌನವಾಗಿದ್ದುಕೊಂಡು ಅಂತರ್ ಯುದ್ಧದಲ್ಲಿ ಸೋತು ಹೋಗುತ್ತಾಳೆ. ಹೆಣ್ಣು ಸ್ವಾತಂತ್ರ್ಯಹೀನಳಾದರೂ ಕಷ್ಟ . ಸ್ವೇಚ್ಛಾಚಾರಿಯಾದರೂ ಕಷ್ಟ. ಜಗತ್ತಿನ ಎಲ್ಲಾ ಹೆಣ್ಣುಗಳ ಸೃಷ್ಠಿ, ಸ್ವರೂಪ ಒಂದೇ ಆದರೂ ನಗರ, ಗ್ರಾಮೀಣ ಮಹಿಳೆಯರ ಬದುಕಿನ ಹೋರಾಟ, ದೃಷ್ಠಿಕೋನಗಳು ಮಾತ್ರ ತೀರಾ ವಿಭಿನ್ನವಾಗಿವೆ.
ಹೆಣ್ಣಿನ ಬದುಕು, ಹೋರಾಟ, ಜವಾಬ್ದಾರಿ, ಸ್ವಾವಲಂಬನೆ, ಮನಸ್ಸಿನ ಯುದ್ಧದ ತೊಳಲಾಟ ಇಂತಹ ಹಲವಾರು ಮುಖಗಳ ಪರಿಚಯ ಎಲ್ಲರಿಗೂ ಇರುತ್ತದೆ. ಆದರೆ ನೇರವಾಗಿ ಒಪ್ಪಿಕೊಳ್ಳಲು ತಯಾರಿಲ್ಲದ ಸಮಾಜದಲ್ಲಿ ನಾವು ಜೀವನ ಸವೆಸುತ್ತಿದ್ದೇವೆ. ನಾನು ಯಾರನ್ನೂ ದೂಷಣೆ ಮಾಡುವುದಿಲ್ಲ, ಅನಿವಾರ್ಯತೆ ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಹೆಣ್ಣು ಬಳಕೆಯ ವಸ್ತುವಾಗುತ್ತಾಳೆ ಎನ್ನುವುದು ವಿಷಾದ ಸಂಗತಿ.
ನಾವಿನ್ನೂ ಪುರುಷ ಪ್ರಧಾನ ಸಮಾಜದ ಬಿಗಿ ಮುಷ್ಠಿಯಲ್ಲಿ ಇದ್ದೇವೆ. ಸಮಾನತೆ ಇದೆ ಸಾರಿ ಹೇಳುವ ಮನಸ್ಸುಗಳು ಮಾತ್ರ ತೀರಾ ಕಡಮೆ. ಹೆಣ್ಣನ್ನು ಶೋಷಣೆಯ ಕೂಪಕ್ಕೆ ತಳ್ಳಿ ತಮಾಷೆ ನೋಡುವ ದೃಷ್ಠಿಕೋನ ಬದಲಾವಣೆ ಆಗುತ್ತದೆ ಎನ್ನುವ ಭರವಸೆಯಲ್ಲೇ ಬಹು ಮಹಿಳಾ ಸಮುದಾಯ ಜೀವನ ಸಾಗಿಸುತ್ತಿದೆ. ಸಾಕಷ್ಟು ಜನ ತನ್ನ ಮನಸ್ಥಿತಿ, ಇಷ್ಟ – ಕಷ್ಟಗಳಿಗೆ ಅನುಗುಣವಾಗಿ ಹೆಣ್ಣು ಜೀವನ ನಡೆಸಬೇಕು ಎಂದು ಬಯಸುತ್ತಾನೆ. ಬೇರೆಯವರ ನಿರ್ಧಾರ, ಅನಿಸಿಕೆ, ಆಸೆಗಳಿಗೆ ಬೆಲೆ ಕೊಟ್ಟು ಜೀವನ ನಡೆಸುವ ಹೊಣೆ ಹೆಣ್ಣಿನದ್ದಾಗಿದೆ.
ಸಮಾಜದ ಕಪಿಮುಷ್ಠಿಯಲ್ಲಿ ಹೆಣ್ಣು
ಹೆಣ್ಣಿಗೆ ಸಮಾನತೆಯ ಹಕ್ಕು ಕಲ್ಪಿಸಿದ್ದೇವೆ. ಹೊರಗೆ ಹೋಗಿ ದುಡಿಯುವ ಅವಕಾಶ ನೀಡಿದ್ದೇವೆ. ಅಭಿಪ್ರಾಯ ಹೇಳುವ ಸ್ವಾತಂತ್ರ್ಯ ನೀಡಿದ್ದೇವೆ ಎಂದು ಹೇಳುವ ಬಾಯಿ ಮಾತಿನ ಸಮಾತೆಯ ಸಂಕಲ್ಪ ಸಮಾಜದಲ್ಲಿ ಇಂದಿಗೂ ಚಾಲ್ತಿಯಲ್ಲಿದೆ. ಆದರೆ ಪ್ರತಿಯೊಬ್ಬ ಹೆಣ್ಣು ಕೂಡ ಪರೋಕ್ಷವಾಗಿ ಕಪಿಮುಷ್ಠಿಯಲ್ಲಿ ನಲುಗಿ ಹೋಗಿರುತ್ತಾಳೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆ ಉಂಟು.
ಒಬ್ಬ ಪುರುಷ ತಾನು ಡಾಕ್ಟರ್,ಎಂಜನಿಯರ್, ಅಧಿಕಾರಿ ಸೇರಿದಂತೆ ನಾನಾ ಹುದ್ದೆಗಳ ಅಲಂಕಾರಗಳನ್ನು ಹೇಳಿಕೊಳ್ಳುವ ಅವಕಾಶ ಮಾಡಿಕೊಳ್ಳುತ್ತಾನೆ. ಆದರೆ ನನ್ನ ತಾಯಿ, ಹೆಂಡತಿಗೆ ಮಾತ್ರ ಏನೂ ಕೆಲಸವಿಲ್ಲ. ಹೌಸ್ ವೈಫ್ ಎಂಬ ಪಟ್ಟಕ್ಕೆ ಸೀಮಿತಗೊಳಿಸುವುದು ಸಾಮಾನ್ಯ. ಗೃಹಿಣಿಯ ಪಟ್ಟ ಎಲ್ಲರಿಗೂ ಸಿಗುವುದಿಲ್ಲ. ಹೆಣ್ಣಿಗೆ ಮಾತ್ರ ದಕ್ಕುವಂತಹದ್ದು. ಅದು ಹಕ್ಕಿಗಿಂತ ಮಿಗಿಲಾಗಿ ಕರ್ತವ್ಯವೇ ಪ್ರಮುಖ ಪಾತ್ರ ವಹಿಸುತ್ತದೆ.
ಒಂದು ಹೆಣ್ಣು ಮನೆಯಲ್ಲಿ ಅಮ್ಮ, ಮಗಳು, ಸೊಸೆ, ದಾಸಿ, ಶಿಕ್ಷಕಿ , ವಾಚ್ ಉಮೆನ್, ಕುಕ್, ಆಗುತ್ತಾಳೆ. ಆದರೆ ಗಂಡನಿಗೆ ಭೋಜ್ಯೆಷು ಮಾತಾ, ಕಾರೇಷು ದಾಸಿ, ಕ್ಷಮಯಾ ಧರಿತ್ರಿ, ಶಯನೇಷು ವೇಶ್ಯೆ … ಹೀಗೆ ನಾನಾ ರೂಪದಲ್ಲಿ ಹೆಣ್ಣು ಗಂಡನೊಂದಿಗೆ ಪರಿಪೂರ್ಣತೆ ಸಾಧಿಸಿದರೂ ಇನ್ನೂ ಅಪೂರ್ಣಳಾಗಿಯೇ ಉಳಿದು ಬಿಡುತ್ತಾಳೆ.
ಸಂಬಳ ಮತ್ತು ರಜೆ ಇಲ್ಲ ಮನೆಗೆಲಸದ ಆಳಿನ ರೀತಿಯಲ್ಲಿ ಕೆಲಸ ಮಾಡಿದರೂ ಮಕ್ಕಳ ಪಾಲಿಗೆ ವಾತ್ಸಲ್ಯ ಪೂರ್ಣ ತಾಯಿಯಾಗಿ ನೋಡಿಕೊಳ್ಳುತ್ತಾಳೆ.ಮಗಳಾಗಿದ್ದಾಗ ತಂದೆ ಬಳಿ ಮಾತನಾಡುವ ಧೈರ್ಯ ಇರುವುದಿಲ್ಲ. ಮದುವೆಯಾದ ನಂತರ ಗಂಡ ನೀಡುವ ಸ್ವಾತಂತ್ರ್ಯದ ಮೇಲೆ ಬದುಕು ನಿರ್ಧಾರ ವಾಗುತ್ತದೆ. ಇನ್ನು ಮಕ್ಕಳಾದ ಮೇಲೆ ಜವಾಬ್ದಾರಿ, ಹೊಣೆಗಾರಿಕೆ ,ಪ್ರೀತಿ, ಮಮಕಾರ, ವಾತ್ಸಲ್ಯದ ನಡುವೆ ಆಕೆಯ ಭಾವನೆಗಳು, ಅಭಿಪ್ರಾಯಗಳು ಎಲ್ಲವೂ ಗೌಣವಾಗುತ್ತವೆ. ನನ್ನ ಮಕ್ಕಳು ನನ್ನ ಕುಡಿ ಎನ್ನುವ ಮಮಕಾರಕ್ಕೆ ಹೆಣ್ಣು ಶರಣಾಗಿರುತ್ತಾಳೆ.
ಹೆಣ್ಣು ಅಡುಗೆ ಮನೆಯಿಂದ ಅಂತರಿಕ್ಷದ ತನಕ ಹಾರಿದರೂ ಸಮಾನತೆಗೆ ಚೌಕಟ್ಟು ಹಾಕಲಾಗಿದೆ. ಹೆಣ್ಣಿಗೂ ಕೂಡ ಪ್ರತ್ಯೇಕ ಮನಸ್ಸಿದೆ, ಕನಸುಗಳಿವೆ. ಸಂತೋಷಗಳಿವೆ.ಅಭಿಪ್ರಾಯಗಳೂ ಇವೆ ಎನ್ನುವುದು ಅನೇಕರು ಮರೆತು ಹೋಗಿದ್ದಾರೆ. ಬೇರೆಯವರ ಸಂತೋಷಕ್ಕಾಗಿ ಬದುಕಿರುವ ಬಡ ಜೀವ ಎನ್ನುವ ನಿರ್ಧಾರ ಅನೇಕರದ್ದು. ಸತ್ತವರಿಗೆ ಹೆಗಲು ಕೊಡುವ ಸ್ವಾತಂತ್ರ್ಯವೂ ಇನ್ನೂ ಆಕೆಗೆ ದಕ್ಕಿಲ್ಲ. ಆದರೆ ಆಕೆಗೆ ಸತ್ತ ಕನಸುಗಳೊಂದಿಗೆ ಬದುಕು ಸಾಗಿಸುವ ನಿರ್ಬಂಧವನ್ನು ತೆಗೆದು ಹಾಕಿಲ್ಲ. ಸಹಚರನ ಮುಖ ಮತ್ತು ಮುಖವಾಡ ಅನೇಕ ಹೆಣ್ಣು ಮಕ್ಕಳಿಗೆ ಗೊತ್ತಿದ್ದರೂ,ಮತ್ತೊಬ್ಬರಿಗೆ ತೋರಿಸಿಕೊಳ್ಳುವ ಸಲುವಾಗಿಯಾದರೂ ಆತನನ್ನು ಅನುಸರಿಕೊಂಡೇ ಹೋಗಬೇಕು.ನೋವನ್ನೆಲ್ಲ ನುಂಗಿ, ಕಷ್ಟವನ್ನು ಅನುಭವಿಸಿ, ನಗುನಗುತ ಜೀವನ ಸಾಗಿಸುವ ಗ್ರಾಮೀಣ ಮಹಿಳೆಯ ಮೌನ ಮನಸ್ಸಿನ ಯುದ್ಧ ನಡುವೆ ಹೋರಾಟ ತೀರಾ ವಿಭಿನ್ನವಾಗಿದೆ. ಆದೇ
ರೀತಿಯಲ್ಲಿ ನಗರ ಪ್ರದೇಶ ಮಹಿಳೆಯರ ಬದುಕು ಮತ್ತೊಂದು ರೀತಿಯದ್ದು. ಹೊರೆಗೆ ಎತ್ತಾಗಿ ಸಮಾನವಾಗಿ ದುಡಿದುಕೊಂಡು ಬಂದು, ಮನೆಯಲ್ಲಿ ತಾಯಿ,ಹೆಂಡತಿ ಪಾತ್ರವನ್ನು ಅತ್ಯಂತ ಪ್ರಾಮಾಣಿಕವಾಗಿ ಮಾಡಬೇಕು. ಇದು ಇನ್ನೊಂದು ರೀತಿಯ ಜವಾಬ್ದಾರಿ.
ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ತನ್ನ ಆತ್ಮವಿಶ್ವಾಸವನ್ನು ವಿಸ್ತರಿಸಿ ಕೊಂಡು ಬದುಕುವ ಮಹಿಳೆ ಆತ್ಮಸ್ಥೈರ್ಯ, ತಾಳ್ಮೆ, ಆತ್ಮವಿಶ್ವಾಸದಿಂದ ಬದುಕುತ್ತಾಳೆ. ಹೀಗಾಗಿ ಹೆಣ್ಣು ಒಂದು ಶಕ್ತಿ, ಯುಕ್ತಿಯೂ ಹೌದು. ಹೆೆಣ್ಣು ಅಬಲೆ ಎನ್ನುವುದು ಸುಳ್ಳು. ತಾಳ್ಮೆಯೇ ಆಕೆಯ ಪ್ರಬಲ ಅಸ್ತ್ರ. ಆಕೆ ವಸ್ತು – ಯಂತ್ರ ಯಾವುದೂ ಅಲ್ಲ.ಹೆಣ್ಣಿಗೂ ಕೂಡ ಮನಸ್ಸಿದೆ. ಸ್ವೇಚ್ಛಾಚಾರ ಬೇಡ. ಸ್ವಾತಂತ್ರ್ಯ ಕೊಡಿ, ಬುದ್ಧಿ ಇದೆ. ಅಂದುಕೊಂಡಿದ್ದನ್ನು ಮಾಡಲು ಬಿಡಿ. ಅವಳ ಹೃದಯ ಘಾಸಿಗೊಳಿಸದೇ ಪ್ರೀತಿ,ಮಮತೆಯ ಸಫಲತೆಯನ್ನು ಸಾಕಾರ ಮಾಡಲು ಬಿಡಿ ಏಕೆಂದರೆ ಹೆಣ್ಣಿಗೂ ಜೀವ, ಜೀವನ ಇದೆ ಎನ್ನುವುದು ಸಮಾನತೆಯ ಭಾಷಣ ಮಾಡುವ ಜನಕ್ಕೆ ಅರ್ಥವಾದರೆ ಸಾರ್ಥಕ.
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ