(ಬ್ಯಾಂಕರ್ಸ್ ಡೈರಿ)
ಬ್ಯಾಂಕರ್ ಡೈರಿ ಬರೆಯಲು ಆರಂಭಿಸಿದ ಮೊದಲ ಸಂಚಿಕೆಯಲ್ಲಿ ಮಿಥುನ್ ಎನ್ನುವ ಹುಡುಗನ ಬಗ್ಗೆ ಬರೆದದ್ದು ನಿಮ್ಮಲ್ಲಿ ಅನೇಕರು ಓದಿಯೇ ಇದ್ದೀರಿ. ಬಹುತೇಕ ಪ್ರತಿನಿತ್ಯ ಮಧ್ಯಾಹ್ನ ಊಟದ ಹೊತ್ತಿನಲ್ಲಿ ಆಂಟಿ ನನಗೆ ಹಸಿವಾಗುತ್ತಿದೆ ಎನ್ನುತ್ತಿದ್ದ ಹುಡುಗ ಅಪಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ್ದು; ಹಲವು ವರ್ಷಗಳು ಊಟದ ಸಮಯದಲ್ಲಿ ಅವನ ಮಾತು ನನ್ನ ಕಿವಿಯಲ್ಲಿ ರಿಂಗಣಿಸುತ್ತಿದ್ದುದನ್ನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ.
ನನಗೆ ಮೂಢನಂಬಿಕೆಗಳು ತುಂಬಾ ಇವೆ ಅಂತ ಏನಲ್ಲ. ಆದರೆ ಕೆಲವು ನಮ್ಮ ಊಹಾತೀತ ಎಂಬುದಂತೂ ನಿಜ. ಅಂಥ ನಂಬುಗೆಗಳನ್ನು ಬಲಗೊಳಿಸುವ ಅನೇಕ ಪ್ರಸಂಗಗಳು ನಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ.
ಮಿಥುನ್ ಹೋಗಿ ಸುಮಾರು ಎಂಟು ವರ್ಷಗಳೇ ಕಳೆದಿರಬಹುದು. ಕಳೆದ ತಿಂಗಳು ಅದೇ ಮಿಥುನ್ ಮನೆಗೆ ಅವರ ತಾಯಿಯನ್ನು ಬ್ಯಾಂಕಿನ ಲಾಕರಿನ ಸಂಬಂಧ ದಾಖಲೆಗಳನ್ನು ಕೇಳಲು ಹೋಗಬೇಕಿತ್ತು. ಬ್ಯಾಂಕಿನಿಂದ ಕರೆ ಮಾಡಿದಾಗ ಅದು ಸಂಪರ್ಕಕ್ಕೆ ಸಿಗಲಿಲ್ಲವಾದ್ದರಿಂದ ಹೇಗೂ ನನಗೆ ಪರಿಚಯ ಎಂದು ನಾನು ಮತ್ತು ನಮ್ಮ ಸಹಾಯಕ ಸತೀಶ ಅವರ ಮನೆಗೆ ಹೋದೆವು. ಮಿಥುನ್ ಇದ್ದಾಗ ಹೋದದ್ದಷ್ಟೇ. ಅದಾದ ಮೇಲೆ ಒಮ್ಮೆಯೂ ಹೋಗಿರಲಿಲ್ಲ
ಅವರದ್ದು ಮೊದಲನೆಯ ಮಹಡಿ ಮನೆ. ಕೆಳಗಿನ ಮನೆಯನ್ನು ಬಾಡಿಗೆ ಕೊಟ್ಟಿದ್ದಾರೆ. ಈ ಎಂಟು ವರ್ಷಗಳಲ್ಲಿ ಮಧ್ಯೆ ಒಮ್ಮೆ ಮಿಥುನ್ ಅವರ ತಂದೆ ಹೋಗಿದ್ದು ಎಲ್ಲೋ ರಸ್ತೆಯಲ್ಲಿ ಫ್ಲೆಕ್ಸಿನಲ್ಲಿ ನೋಡಿ ತಿಳಿದಿತ್ತು.
ಗಂಡ ಮತ್ತು ಮಗನನ್ನು ಕಳೆದುಕೊಂಡ ಆ ಹೆಂಗಸಿನ ಮುಖಕ್ಕೆ ಮುಖ ಕೊಟ್ಟು ಹೇಗೆ ಮಾತನಾಡುವುದು ಎಂಬುದೇ ನನಗೆ ದೊಡ್ಡ ಪ್ರಶ್ನೆ, ನಿಧಾನಕ್ಕೆ ಮೆಟ್ಟಿಲೇರುತ್ತಾ ಹೋದೆ ಪ್ರತಿ ಮೆಟ್ಟಿಲಿನಲ್ಲೂ ಒಂದೊಂದು ನೆನಪಿತ್ತು.
ಮನೆಯ ಒಳಗೆ ಹೋದ ಕೂಡಲೇ ಯಾರೂ ಕಾಣಲಿಲ್ಲ. ಏನೆಂದು ಕೂಗುವುದು ತಿಳಿಯಲಿಲ್ಲ. ಹಾಲಿಗೆ ಕಾಲಿಡುತ್ತಿದ್ದಂತೆಯೇ ಎದುರಿಗೆ ಮಿಥುನ್ ಫೋಟೋ ಕಂಡಿತು. ಮನಸ್ಸಿಗೆ ಏನೋ ಕಸಿವಿಸಿ, ದುಃಖ, ಹೇಳಿಕೊಳ್ಳಲಾಗದ ಭಾವ.
ಆದರೆ ಪರಿಸ್ಥಿತಿಯನ್ನು ಅರಗಿಸಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಬಂದೇ ಬರುತ್ತದೆ.
ಒಂದು ನಿಮಿಷ ನಿಂತು ನಂತರ “ಮೇಡಂ ಮೇಡಂ” ಎಂದು ಕೂಗಿದೆ. ಕೆಲಸದಾಕೆ ಬಂದಳು ನಾವು ಬ್ಯಾಂಕಿನಿಂದ ಬಂದದ್ದು ಎಂದು ಹೇಳಿದ ಮೇಲೆ ಮಿಥುನ್ ತಾಯಿ ಬಂದರು.
ನಮ್ಮನ್ನು ನೋಡಿದ ಕೂಡಲೇ ಹಳೆಯ ಪರಿಚಯ ಹಿಡಿದು ತುಂಬಾ ಆತ್ಮೀಯತೆಯಿಂದ ಮಾತನಾಡಿದರು. ಬಂದ ಕೂಡಲೇ ಮಿಥುನ್ ಫೋಟೋ ನೋಡುವ ಹಾಗಾಯಿತು ಇಂದಿಗೂ ನಾನು “ಆಂಟಿ ಹಸಿವಾಗುತ್ತಿದೆ ಎನ್ನುತ್ತಿದ್ದುದನ್ನು ಮರೆಯಲಾರೆ” ಎಂದುಬಿಟ್ಟೆ ಬಾಯಿತಪ್ಪಿ. ಆಕೆ ಕಣ್ಣಲ್ಲಿ ನೀರು ತುಂಬಿಕೊಂಡರು. ಛೇ ನಾನು ಆ ಮಾತು ಹೇಳಬಾರದು ಎಂದು ಆಮೇಲೆ ಅನಿಸಿತು. ಕೆಲವು ಬಾರಿ ಸೂಕ್ಷ್ಮತೆಯನ್ನು ಮೆರೆಯಬೇಕು.
ಹತ್ತು ಕ್ಷಣಗಳ ನಂತರ ಆಕೆ ಸಾವರಿಸಿಕೊಂಡು ಮಿಥುನ್ ಮಿಥುನ್ ಎಂದು ಎರಡು ಬಾರಿ ಜೋರಾಗಿ ಕೂಗಿದರು. ನಾನೀಗ ನಿಜಕ್ಕೂ ಗಾಬರಿಯಾಗಿ ಬಿಟ್ಟೆ. ಫೋಟೋ ಇದೆ., ಹಾರ ಹಾಕಿದೆ, ಅವನು ಸತ್ತಿದ್ದು ನಮಗೆ ತಿಳಿದಿತ್ತು. ಈಗ ಮತ್ತೆ ಮಿಥುನ್ ಎಂದು ಕೂಗುತ್ತಿದ್ದಾರಲ್ಲ ಯಾವುದೋ ಸಿನಿಮಾ ನೋಡಿದ ಹಾಗೆ ಇದೆಯಲ್ಲಾ ಎನಿಸಿತು. ಸಿನಿಮಾಗಳಲ್ಲಿ ಹಾಗೆಯೇ ಅಲ್ಲವೇ? ಎಷ್ಟೋ ವರ್ಷಗಳ ಮೇಲೆ ಸತ್ತಿದ್ದಾರೆ ಎಂದುಕೊಂಡವರು ಮತ್ತೆ ಬರುತ್ತಾರಲ್ಲಾ ಹಾಗೆ.
ಅವರು ಎಷ್ಟು ಕೂಗಿದರೂ ಯಾರೂ ಬರದದ್ದನ್ನು ನೋಡಿ ಆಕೆಯೇ ರೂಮಿನೊಳಗೆ ಎದ್ದು ಹೋದರು. “ಬಾರೋ ಮಿಥುನ್ ಯಾರು ಬಂದಿದ್ದಾರೆ ನೋಡು” ಎಂದು ಎರಡು ಮೂರು ಬಾರಿ ಹೇಳಿದರು. ನಾನು ಕುತೂಹಲ ತಾಳಲಾರದೆ ರೂಮಿನ ಬಾಗಿಲಿಗೆ ಹೋದೆ. ಸುಮಾರು ಐದು ವರ್ಷದ ಒಂದು ಪುಟ್ಟ ಹುಡುಗ ಮತ್ತು ಅವನ ಜೊತೆಗೆ ಮತ್ತೊಂದು ಹುಡುಗ. ಇಬ್ಬರ ನಡುವೆ ಸರಿ ಸುಮಾರು ಆರು ವರ್ಷಗಳ ಅಂತರವಿದೆ ಎನಿಸಿತು. ಅಣ್ಣನ ಜೊತೆ ಆಟವಾಡುತ್ತಿದ್ದ ಮತ್ತು ಈಕೆ ಕೂಗುತ್ತಿದ್ದ ಮಿಥುನ್ ಎನ್ನುವ ಹುಡುಗ ತುಂಬಾ ಮುದ್ದಾಗಿದ್ದ. ನಾನೇ ಮಾತನಾಡಿಸಿದೆ. ಆಕೆ ಆಗ ಹೇಳಿದರು ಇವನು ನನ್ನ ಎರಡನೇ ಮೊಮ್ಮಗ ಎಂದು. ಮಿಥುನ್ ಅಕ್ಕನಿಗೆ ಒಂದು ಗಂಡು ಮಗು ಇದ್ದಿದ್ದು ನನಗೆ ಗೊತ್ತಿತ್ತು. ಮಿಥುನ್ ಅಮ್ಮ ಅದೆಷ್ಟು ಹೆಮ್ಮೆಯಿಂದ ಮತ್ತು ತೃಪ್ತ ಭಾವದಿಂದ “ನಮ್ಮ ಮಿಥುನ್ ಮತ್ತೆ ನನ್ನ ಮಗಳ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾನೆ ನೋಡಿ” ಎಂದರು
ನಾನಾಗಲೇ ಹೇಳಿದೆನಲ್ಲ ನಾನು ತುಂಬಾ ಮೂಢನಂಬಿಕೆ ಹೊಂದಿದವಳು ಅಂತ ಏನು ಇಲ್ಲ. ಹಾಗಂತ ತೀರಾ ನಾಸ್ತಿಕಳೂ ಅಲ್ಲ . ದೇವರು, ದಿಂಡರು, ಪುನರ್ಜನ್ಮ, ಭಕ್ತಿ, ನಂಬಿಕೆ ಎಲ್ಲವೂ ಇದ್ದೇ ಇದೆ
ಬೇಡ ಬೇಡ ಎಂದರೂ ಚಕ್ಕುಲಿ ಕೋಡುಬಳೆ ಹಣ್ಣು ಜ್ಯೂಸ್ ಎಲ್ಲವನ್ನು ತಂದಿಟ್ಟರು, ತಿನ್ನುವಂತೆ ಬಲವಂತ ಮಾಡಿದರು. ಮಾತು ಸುತ್ತಿ ಸುತ್ತಿ ಮಿಥುನ್ ಕಡೆಗೆ ಬರುತ್ತಿತ್ತು.
“ಮಿಥುನ್ ಒಂದು ಹುಡುಗಿಯನ್ನು ಇಷ್ಟಪಡುತ್ತಿದ್ದನಲ್ಲಾ ಆ ಹುಡುಗಿ ಏನು ಮಾಡುತ್ತಿದ್ದಾಳೆ” ಎಂದು ಕೇಳಿದೆ. “ನಿಮಗೆ ಅದು ಗೊತ್ತಾ?” ಎಂದರು. ನಾನು “ಹೌದು ಅವಳ ಫೋಟೋವನ್ನು ತೋರಿಸುತ್ತಿದ್ದ. ಇವತ್ತು ಇಲ್ಲಿ ಹೋಗಿದ್ದೆವು, ಕಳೆದ ತಿಂಗಳು ಅಲ್ಲಿ ಎಂದೆಲ್ಲಾ ಹೇಳುತ್ತಿದ್ದ. ಎಂಟು ವರ್ಷಗಳಿಂದ ನಾವು ಇಷ್ಟ ಪಟ್ಟಿದ್ದೇವೆ, ಮದುವೆಯಾಗುತ್ತೇವೆ ಮೇಡಂ ಎಂದು ಬಹಳ ಬಾರಿ ಹೇಳಿದ್ದ” ಎಂದೆ. ಅದಕ್ಕೆ ಆಕೆ “ನೋಡಿ ನಿಮಗೆಲ್ಲಲ್ಲಾ ಗೊತ್ತಿತ್ತು, ನಮಗೆ ಅವನು ಕೊನೆಯಲ್ಲಿ ಮಾತ್ರ ಹೇಳಿದ” ಎಂದರು.
“ಹುಡುಗಿ ತುಂಬಾ ಓದಿದವಳು. ಇವನು ಅಷ್ಟಕ್ಕಷ್ಟೇ. ಅವಳು ಒಳ್ಳೆಯ ಕೆಲಸದಲ್ಲೂ ಇದ್ದಳು. ಹೊಂದಿಕೆ ಆಗುತ್ತದೋ ಇಲ್ಲವೋ ಎಂಬ ಭಯ ನಮಗೆ. ಅದನ್ನು ಅವನ ಬಳಿ ಹೇಳಿಯೂ ಇದ್ದೆವು ಆದರೆ ಅವನು ನಮ್ಮನ್ನೆಲ್ಲ ಒಪ್ಪಿಸಿ ಅವರ ಮನೆಗೆ ಕಳುಹಿಸಿದ. ಮೊದಲಿಗೆ ನಾನು ಹೋಗಿರಲಿಲ್ಲ. ಅವನ ಅಕ್ಕ-ಭಾವ ನಮ್ಮ ಕಡೆಯ ಒಂದಿಬ್ಬರು ಹಿರಿಯರು ಅವರ ಮನೆಗೆ ಹೋಗಿದ್ದರು ಹುಡುಗಿ ಕೇಳಲು. ಆದರೆ ನಮ್ಮದು ಅವರದು ದೇವರು ಬೇರೆ. ಆ ದೇವರು ಮತ್ತು ನಮ್ಮ ದೇವರಿಗೆ ಆಗಿ ಬರುವುದಿಲ್ಲ ಹಾಗಾಗಿ ಈ ಮದುವೆ ಬೇಡ ಎಂದು ಹೇಳಿದೆವು” ಎಂದರು.
ಅಷ್ಟರಲ್ಲಿ ನಮ್ಮ ಸತೀಶ ಬಾಯಿ ಹಾಕಿದ “ಹೌದು ನಮ್ಮ ದೇವರು ಅವರ ದೇವರಿಗೂ ಆಗಿ ಬರುವುದಿಲ್ಲ. ಇಂಥ ಎಷ್ಟೋ ಮದುವೆಗಳನ್ನು ನಾನು ನೋಡಿದ್ದೇನೆ. ಮದುವೆಗೆ ಮೊದಲೇ ಕಿತ್ತು ಹೋಗುತ್ತದೆ ಇಲ್ಲ ಮದುವೆಯಾದರೂ ಹೊಸತರಲ್ಲೇ ಕಿತ್ತು ಹೋಗುತ್ತದೆ, ಇಲ್ಲವಾದರೆ ಹುಡುಗ ಅಥವಾ ಹುಡುಗಿ ಸತ್ತು ಹೋಗುತ್ತಾರೆ. ನಮಗೆ ಆಗಿ ಬರುವುದೇ ಇಲ್ಲ” ಎಂದು ಅವನೂ ದನಿಗೂಡಿಸಿದ. “ದೇವರು ದೇವರಿಗೆ ಆಗುವುದಿಲ್ಲ ಎಂದರೇನು? ಅವರೇನು ಮನುಷ್ಯರೇ? ದ್ವೇಷ ಸಾಧಿಸಲು?” ಎಂದೆ. ಮತ್ತೆ ನನಗೆ ಮಾತನಾಡಲು ಅವರಿಬ್ಬರೂ ಬಿಡಲೇ ಇಲ್ಲ. ನನ್ನ ತರ್ಕ ಅವರಿಗೆ ಇಷ್ಟವಾಗಲಿಲ್ಲ. ಒಗ್ಗದ ದೇವರ ಕುಲದವರು ಮದುವೆ ಆದರೆ ಏನೇನು ಆಗುತ್ತದೆ ಎಂದು ಅವರ ಅನುಭವದ ಪ್ರಸಂಗಗಳನ್ನು ಹೇಳುತ್ತಾ ಹೋದರು.
ಆಕೆ ಮಾತು ಮುಂದುವರಿಸಿದರು “ನಾವ್ ಎಷ್ಟು ಹೇಳಿದರೂ ಮಿಥುನ್ ಒಪ್ಪಲೇ ಇಲ್ಲ. ನಮಗೇನು ಅಷ್ಟು ಮನಸ್ಸಿರಲಿಲ್ಲ ಆದರೆ ಅವನ ಬಲವಂತಕ್ಕೆ ಹೋಗಿ ಮಾತುಕತೆ ಆಡಿ ಬಂದಿದ್ದೆವು. ಮಾತುಕತೆಯಾಗಿ 10 ದಿನಗಳಲ್ಲಿ ನಮ್ಮ ಮಗ ಹೋಗಿಬಿಟ್ಟ. ಯಾವ ತಾಯಿಗೂ ಇಂಥ ಕಷ್ಟ ಬೇಡ ಮೇಡಂ. ಆ ಹುಡುಗಿಯೂ ಒಂದೆರೆಡು ಬಾರಿ ಇಲ್ಲಿಗೆ ಬಂದು ಹೋಗಿದ್ದಳು. ಮತ್ತೆ ಮದುವೆ ಆಗುವುದಿಲ್ಲ ಎನ್ನುತ್ತಿದ್ದಳು. ಮತ್ಯಾರಿಂದಲೋ ತಿಳಿಯಿತು ಅವಳ ಮದುವೆ ಆಯಿತು ಎಂದು. ಎಷ್ಟು ದಿನ ಅಪ್ಪ ಅಮ್ಮನನ್ನು ಎದುರು ಹಾಕಿಕೊಳ್ಳೋಕೆ ಆಗುತ್ತೆ ಅವಳಿಗೂ” ಎಂದು ಮತ್ತೆ ಕಣ್ಣೀರಿಟ್ಟರು
ತುಸು ಸಮಯದ ನಂತರ ಕಣ್ಣೋರೆಸಿಕೊಂಡು “ಮಿಥುನ್ ನಮ್ಮ ಮನೆಯಲ್ಲಿ ಹುಟ್ಟಿ ಬಂದಿದ್ದಾನೆ. ನನಗೆ ತುಂಬಾ ನಂಬಿಕೆ ಇದೆ. ಅದಕ್ಕೆ ಇವನಿಗೆ ಮಿಥುನ್ ಎಂದು ಹೆಸರಿಟ್ಟಿದ್ದು. ನಾನು ಹೇಳಿದರೆ ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ. ನಾನು ದಿನವೂ ಅಷ್ಟೊಂದು ಅಳುತ್ತಿರುವಾಗ ಅವನು ಸತ್ತ ಎರಡನೇ ವರ್ಷದಲ್ಲಿ ಒಂದು ದಿನ ಕನಸಿನಲ್ಲಿ ಬಂದು ಮಮ್ಮಿ ಮತ್ತೆಂದೂ ಅಳಬೇಡ. ನಾನು ನಿಮ್ಮ ಮನೆಗೆ ಬರುತ್ತೇನೆ ಎಂದು ಹೇಳಿದ. ಯಾರಲ್ಲಾದರೂ ಇದನ್ನು ಹೇಳಿದರೆ ನಕ್ಕಾರು ಎಂದು ನಾನು ಯಾರಲ್ಲಿಯೂ ಹೇಳಿರಲಿಲ್ಲ. ಇದಾಗಿ ಒಂದು ತಿಂಗಳಾಗಿದ್ದಿರಬಹುದು. ಮಗಳು ಒಂದು ಬೆಳಿಗ್ಗೆಯೆ ನನಗೆ ಫೋನ್ ಮಾಡಿದಳು. ‘ಅಮ್ಮಾ ನನ್ನ ಕನಸಿನಲ್ಲಿ ಮಿಥುನ್ ಬಂದು ಅಕ್ಕಾ ಅಳಬೇಡ ನಿನ್ನ ಹೊಟ್ಟೆಯಲ್ಲಿ ನಾನು ಹುಟ್ಟಿ ಬರುತ್ತೇನೆ ಎಂದು ಹೇಳಿದ’ ಎಂದು ಹೇಳಿದಳು. ಇದಾಗಿ ಒಂದು ತಿಂಗಳಿಗೆ ಆಕೆ ಗರ್ಭವತಿಯಾದಳು. ನಮ್ಮಿಬ್ಬರಿಗೂ ಬಲವಾದ ನಂಬಿಕೆ ಬಂದಿತ್ತು ನಮ್ಮ ಮನೆಯಲ್ಲಿ ಹುಟ್ಟುತ್ತಿದ್ದಾನೆ ಎಂದು. ಸತ್ಯವೋ ಸುಳ್ಳೋ ಕಾಣೆ. ಕಲಿಗಾಲದಲ್ಲಿಯೂ ಇದೆಲ್ಲಾ ನಡೆದಿದೆ. ಈಗ ನೋಡಿ ನಮ್ಮ ಪುಟ್ಟ ಮಿಥುನ್ ನನ್ನ ಮಗ ಮಿಥುನ್ ಥರಾನೇ ಮಾತನಾಡುತ್ತಾನೆ ಅವನಂತೆಯೇ ನಡೆಯುತ್ತಾನೆ ಅವನು ಏನೇನೋ ಇಷ್ಟಪಡುತ್ತಿದ್ದನು ಇವನೂ ಅವನ್ನೇ ಇಷ್ಟಪಡುತ್ತಾನೆ. ನನಗೆ ಈಗ ನನ್ನ ಮಗ ಇಲ್ಲ ಎಂಬ ದುಃಖ ಅಷ್ಟೇನೂ ಇಲ್ಲ. ಅವನು ಮತ್ತೆ ನಮ್ಮ ಮನೆಗೆ ಬಂದಿದ್ದಾನೆ” ಇಷ್ಟು ಹೇಳಿ ಆಕೆ ಮೊಮ್ಮಗನನ್ನು ಬಳಿ ಆಡ ತೊಡಗಿದರು.
ನಾವು ಯಾವ ಕೆಲಸಕ್ಕೆ ಹೋಗಿದ್ದೆವೋ ಅದನ್ನು ಮುಗಿಸಿಕೊಂಡು ಆಶ್ಚರ್ಯದ ಮನದಲ್ಲಿ ಬ್ಯಾಂಕಿಗೆ ವಾಪಸಾದೆವು.
-ಡಾ.ಶುಭಶ್ರೀಪ್ರಸಾದ್, ಮಂಡ್ಯ.
More Stories
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು