December 23, 2024

Newsnap Kannada

The World at your finger tips!

living together with peace love

ಸೌಹಾರ್ದತೆಯನ್ನು ಉಳಿಸಿಕೊಳ್ಳುವಾ (ಬ್ಯಾಂಕರ್ಸ್ ಡೈರಿ)

Spread the love

ಮನುಷ್ಯ ಅಂದ ಮೇಲೆ ಅವನು ಏನೇ ಓದಿರಲಿ, ಯಾವ ಕೆಲಸದಲ್ಲೇ ಇರಲಿ ಅವನ ಭಾವನೆಗೆ, ಅವನ ಸಂಸ್ಕಾರಕ್ಕೆ, ಅವನ ಪರಿಸರಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾನೆ. ಹುಟ್ಟಿದಾಗ ಯಾರಿಗೂ ತಾನು ಯಾವ ಮತ, ಯಾವ ಜಾತಿ ಎಂಬುದು ಗೊತ್ತೇ ಇರುವುದಿಲ್ಲ. ಅವನ ಹಿರಿಯರು ಹೇಳಿದಾಗಲೇ ತಿಳಿಯುವುದು. ಆಗಿನಿಂದ ತಾನು ಈ ಜಾತಿ, ತಾನು ಈ ಮತ ಎಂದು ಅದಕ್ಕೇ ಅಂಟಿಕೊಂಡು ನಡೆದುಕೊಳ್ಳುವುದು. ಇದು ಒಂದು ಕಡೆ. ಮತ್ತೊಂದು ಕಡೆ ಸಮಾಜದಲ್ಲಿ ಎಲ್ಲರೊಂದಿಗೆ ಹೊಂದಿಕೊಂಡು ಬಾಳ್ವೆ ನಡೆಸುವುದು. ಸಹಬಾಳ್ವೆಯಲ್ಲಿ ವ್ಯಷ್ಟಿಗಿಂತ ಸಮಷ್ಟಿಯ ಹಿತವೇ ಮುಖ್ಯ.
ದಿನ ನಿತ್ಯವೂ ವಾರ್ತಾ ಪತ್ರಿಕೆಗಳಲ್ಲಿ ಅಲ್ಲಿ ಕೋಮು ಗಲಭೆ ಇಲ್ಲಿ ಮತ ಘರ್ಷಣೆ ಅಂತ ಓದುತ್ತಾ ಇರ್ತೀವಿ. ಅದಕ್ಕಿಂತ ಮುಖ್ಯವಾಗಿ ವಾರ್ತಾವಾಹಿನಿಗಳಲ್ಲಿ ಒಂದು ಸಣ್ಣ ಘಟನೆಯನ್ನೇ ಅಬ್ಬರದ ಧ್ವನಿಯಲಿ ಇಡೀ ದಿನ ಇಲಿಯನ್ನು ಹುಲಿಯಂತೆ ಬಿಂಬಿಸಿ ನಮ್ಮಲ್ಲಿ ಮತಸೌಹಾರ್ದತೆ ಎಂಬುದು ಇದೆಯೋ ಇಲ್ಲವೋ ಎಂಬ ಅನುಮಾನವನ್ನೂ, ಕ್ರಾಂತಿಯ ಕಿಡಿಯನ್ನೂ ಬಿತ್ತಿಬಿಡುತ್ತರೆ.

ಇಷ್ಟೆಲ್ಲ ಪೀಠಿಕೆಗೂ ಬ್ಯಾಂಕರ್ಸ್ ಡೈರಿಗೂ ಏನು ಸಂಬಂಧ ಎನ್ನುವಿರಾ? ಇದೆ.
ಈಚೆಗೊಂದು ತಿಂಗಳಿಂದ ಸ್ವಸಹಾಯ ಸಂಘಗಳ ಖಾತೆಗಳನ್ನು ತೆರೆಯುವ ಒಂದು ಪ್ರಾಜೆಕ್ಟ್ನಲ್ಲಿ ನಾವೊಂದು ಮುವ್ವತ್ತು ಜನ ಕೆಲಸ ಮಾಡುತ್ತಿದ್ದೇವೆ.
ಬಹುತೇಕ ಒಂದೋ ಹೆಣ್ಣುಮಕ್ಕಳ ಗುಂಪು ಅಥವಾ ಗಂಡು ಮಕ್ಕಳ ಗುಂಪು. ತೀರಾ ಅಪರೂಪಕ್ಕೆ ಮಿಕ್ಸ್ ಇರುತ್ತವೆ. ಆದರೆ ಇವುಗಳಲ್ಲಿ ಒಂದು ವೈಶಿಷ್ಟ್ಯವನ್ನು ಗಮನಿಸುತ್ತಿದ್ದೇನೆ. ‘ಪ್ರಧಾನಿ’ ಭದ್ರತೆಯಲ್ಲಿ ಮತ್ತೆ ಲೋಪ, ‘ಮೋದಿ’ ಬಳಿ ಓಡಿ ಬಂದ ಯುವಕ

ಉದಾಹರಣೆಗೆ:
ಆದಿಲಕ್ಷ್ಮಿ ಸ್ವಸಹಾಯ ಸಂಘ ಎಂಬ ಹೆಸರಿನ ಸಂಘದ ಅಧ್ಯಕ್ಷೆ ಶಬಾನಾ, ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ಉಸ್ಮಾನಾ ಎಂದಿರುತ್ತದೆ
ಹೆಚ್.ಕೆ.ಜಿ.ಎನ್ ಸ್ವಸಾಹಾಯ ಸಂಘ ಎಂಬ ಹೆಸರಿನ ಸಂಘದ ಅಧ್ಯಕ್ಷ ಶಬ್ಬೀರ್, ಕಾರ್ಯದರ್ಶಿ ಹನುಮಂತು, ಖಜಾಂಚಿ ರಾಜೇಶ್ ಎಂದಿರುತ್ತದೆ
ಚಾಮುಂಡೇಶ್ವರಿ ಸ್ವಸಹಾಯ ಸಂಘ ಎಂಬ ಹೆಸರಿನ ಸಂಘದ ಅಧ್ಯಕ್ಷೆ ಸಾವಿತ್ರಮ್ಮ, ಕಾರ್ಯದರ್ಶಿ ರುಮಾನಾ, ಖಜಾಂಚಿ ಮೇರಿ ಎಂದಿರುತ್ತದೆ.

ಇವುಗಳಲ್ಲಿ ಉತ್ಪ್ರೇಕ್ಷೆಯೇನೂ ಇಲ್ಲ. ನಾ ಕಂಡದ್ದನ್ನು ಕಂಡಂತೆಯೇ ಕಂಡರಿಸಿದ್ದೇನೆ. ಇವನ್ನು ನೋಡುವಾಗಲೆಲ್ಲ ನನಗೆ ಅಚ್ಚರಿಯೂ ಸಂತೋಷವೂ ಆಗುತ್ತದೆ. ಕೆಲವೊಮ್ಮೆ ನನ್ನ ಸಹೋದ್ಯೋಗಿಗಳೊಂದಿಗೆ ಇದರ ಬಗ್ಗೆ ಚರ್ಚೆ ಮಾಡಿದ್ದೂ ಇದೆ. ಆಗೆಲ್ಲ ನಮ್ಮಲ್ಲಿ ಒಂದು ಒಮ್ಮತದ ಮಾತು ಹೊರಬರುತ್ತದೆ. ಅದೆಂದರೆ ‘ಇವೆಲ್ಲ ನಮ್ಮ ಭ್ರಮೆ. ಅವರವರು ಚೆನ್ನಾಗೇ ಇರ್ತಾರೆ’ ಎಂದು. ನಾವುಗಳು ನೋಡಿದ ಹಾಗೆ ಹಳ್ಳಿಗಳಲ್ಲಿ ಬಹುತೇಕ ನೆರೆಹೊರೆಯ ಅನ್ಯಮತೀಯರು ಒಂದೇ ಕುಟುಂಬದ ಹಾಗೆ ಬಾಳು ನಡೆಸುತ್ತಾರೆ. ಅವರ ಕಷ್ಟಗಳಿಗೆ ಇವರು, ಇವರ ಕಷ್ಟಗಳಿಗೆ ಅವರು ಒದಗುತ್ತಾರೆ. ಆಹಾರ ಸಂಸ್ಕೃತಿ ಮತ್ತು ದೈವಶ್ರದ್ಧೆಗಳ ವಿಚಾರ ಬೇರೆ ಬೇರೆ ಇದ್ದರೂ ಅವಾವುವೂ ಕಷ್ಟ ಸುಖಗಳಲ್ಲಿ ಭಾಗಿಯಾಗುವುದಕ್ಕೆ ಅಡ್ಡಿಯಾಗುವುದಿಲ್ಲ. ಇಂದಿಗೂ ಅನೇಕ ಹಳ್ಳಿಗಳಲ್ಲಿ ಹಿಂದೂ ಹಬ್ಬದ ತೇರಿನಲ್ಲಿ ಅಲ್ಲಿನ ಮುಸಲ್ಮಾನರು ತೇರಿನ ಅನೇಕ ಜವಾಬ್ದಾರಿಗಳನ್ನು ಹೊರುತ್ತಾರೆ. ಮುಸಲ್ಮಾನ ಹಬ್ಬಗಳಲ್ಲಿ ಹಿಂದೂಗಳು ಸಹಾಯ ಮಾಡುತ್ತಾರೆ. ಆದರೆ ಮತರಾಜಕೀಯವೆಂಬುದಿದೆಯಲ್ಲಾ ಅದು ಹೃದಯಗಳಲ್ಲಿ ಕಿಡಿಯನ್ನು ತುಂಬಿ ಬೆಂಕಿ ಹರಡಲು ಗಾಳಿಯಂತೆ ಕೆಲಸ ಮಾಡುತ್ತದೆ.

ರಂಜಿತಾ ಚಿಕ್ಕ ಹುಡುಗಿ. ಬಹುಶಃ ಇಪ್ಪತ್ತನಾಲ್ಕು ಇದ್ದಿರಬಹುದು. ಆ ದಿನ ಆಕೆ ಅಕೌಂಟ್ ಓಪನ್ ಮಾಡೋಕೆ ನನ್ನ ಈ ಹಿಂದಿನ ಶಾಖೆಗೆ ಬಂದಳು. ಖಾತೆ ತೆರೆಯುವಾಗ ತಂದೆ, ತಾಯಿ, ಗಂಡನ ಹೆಸರು, ಎಲ್ಲವನ್ನೂ ಕೇಳುತ್ತೇವೆ. ತಂದೆ ತಾಯಿಯ ಹೆಸರು ಹಿಂದೂ ಇತ್ತು ಗಂಡನ ಹೆಸರು …..ಖಾನ್ ಅಂದಳು. ತುಸು ಅಚ್ಚರಿಯು ನನ್ನ ಮುಖದಲ್ಲಿ ಕಂಡಿತೇನೋ. ‘ನಮ್ದು ಲವ್ ಮ್ಯಾರೇಜ್ ಮೇಡಂ’ ಎಂದಳು. ಬಹುತೇಕ ಇಂತಹ ಮದುವೆಗಳಲ್ಲಿ ಹುಡುಗಿಯ ಹೆಸರನ್ನು ಬದಲಿಸಲಾಗುತ್ತದೆ. ಇನ್ನೂ ಹಾಗೇ ಇದೆಯಲ್ಲಾ ಎನ್ನುವ ಅಚ್ಚರಿಯೂ ಇರಬಹುದು. ಉಳಿದದ್ದನ್ನು ಕೇಳದೆಯೇ ಹೇಳಿದಳು “ಮೊಬೈಲ್ ನಲ್ಲಿ ಪರಿಚಯ ಲವ್. ಆದ್ರೆ ಗೊತ್ತಾ ಮೇಡಂ ನಮ್ಮಪ್ಪ ಅಮ್ಮನ ವಿರೋಧ ಇಲ್ಲ. ಮದುವೆ ಆದ ಮೇಲೆಯೇ ಅವರಿಗೆ ಹೇಳಿದ್ದು. ಆದ್ರೂ ಸುಮ್ನಿದಾರೆ. ಅವ್ರೇ ನನ್ ಬಾಣಂತನ ಮಾಡಿದ್ದು” ಎಂದಳು. ಆ ಕ್ಷಣಕ್ಕೆ ನನ್ನ ಸಹೋದ್ಯೋಗಿಯೊಬ್ಬರ ಮಗಳ ಮದುವೆಯ ಪ್ರಸಂಗವೂ ನೆನಪಿಗೆ ಬಂತು. ಬಹುಶಃ ಈ ಹಿಂದಿನ ಬ್ಯಾಂಕರ್ಸ್ ಡೈರಿಯಲ್ಲಿ ನಾನು ಅದನ್ನು ಉಲ್ಲೇಖಿಸಿದ್ದೆನೇನೋ ನೆನಪಾಗುತ್ತಿಲ್ಲ. ನನ್ನ ತೀರಾ ಹಿರಿಯ ಸಸ್ಯಾಹಾರಿ ಸಹೋದ್ಯೋಗಿಯ ಮಗಳು ವಿದೇಶದಲ್ಲಿ ಓದುವಾಗ ಮುಸಲ್ಮಾನ ಸಹಪಾಠಿಯನ್ನು ಇಷ್ಟ ಪಟ್ಟು ಅದನ್ನು ತನ್ನ ತಂದೆ ತಾಯಿಯರಿಗೆ ತಿಳಿಸಿದಳು ಕೂಡ. ಅವರೂ ಅಷ್ಟೇ ವಿಶಾಲ ಮನೋಭಾವದಿಂದ ಒಪ್ಪಿಗೆ ಕೊಟ್ಟು ಮದುವೆಗೆ ತಯಾರಿ ಮಾಡಿದರು. ಯಾವ ಮುಜುಗರವೂ ಇಲ್ಲದೆ ಸುಂದರ ಆಹ್ವಾನ ಪತ್ರಿಕೆಯಲ್ಲಿ ಹುಡುಗನ ತಂದೆ ತಾಯಿ ಹಾಗು ಅವರ ಕುಟುಂಬದವರ ಹೆಸರು, ಹುಡುಗಿಯ ತಂದೆ ತಾಯಿ ಹಾಗು ಕುಟುಂಬದವರ ಹೆಸರು ಹಾಕಿಸಿದ್ದರು. ಮದುವೆಯಲ್ಲಿ ಒಂದು ಭಾಗ ಹುಡುಗಿಯ ಮನೆಯವರು, ಮತ್ತೊಂದು ಭಾಗದಲ್ಲಿ ಹುಡುಗನ ಮನೆಯವರು ಸಂಭ್ರಮದಿಂದ ಓಡಾಡುತ್ತಿದ್ದರು. ಹುಡುಗ ಹಿಂದೂ ಸಂಪ್ರದಾಯದಂತೆಯೇ ಮದುವೆಯಾಗಬೇಕೆಂದು ವಿನಂತಿಸಿಕೊಂಡಿದ್ದನಂತೆ. ಹಾಗಾಗಿ ಹಿಂದೂ ಸಂಪ್ರದಾಯದಂತೆಯೇ ಮದುವೆ ನಡೆಯಿತು. ಎಲ್ಲರೂ ಸಂಭ್ರಮದಿಂದ ಓಡಾಡಿದರು. ಹೀಗೂ ಉಂಟೇ ಎಂದು ಅನೇಕರು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದರು. ಕನ್ನಡದಲ್ಲೇ ಮೆಡಿಕಲ್, ಇಂಜಿನಿಯರಿಂಗ್ ಶಿಕ್ಷಣ: ಪ್ರಧಾನಿ ಮೋದಿ
ಈಗ ರಂಜಿತಾನೂ “ನಮ್ಮ ಮನೆಯವರ ಒಪ್ಪಿಗೆ ಇದೆ ಯಾಕಂದ್ರೆ ನಾವು ಇರೋ ಮೂವರೂ ಹೆಣ್ಣುಮಕ್ಕಳೇ. ಮುಂದೆ ನಾವೇ ನೋಡ್ಕೋಬೇಕಲ್ವಾ? ನನ್ನ ಅಕ್ಕ ತಂಗೀರೂ ಯಾರೂ ಅಡ್ಡಿ ಮಾಡಿಲ್ಲ. ನಮ್ಮ ಸಂಸಾರ ಚೆನ್ನಾಗೇ ಇದೆ ಮೇಡಂ. ನಮ್ಮತ್ತೆ ಮಾವಾನೂ ಒಳ್ಳೆಯವರೇ. ಮಗಳ ಹಾಗೇ ನೋಡ್ಕೋತಾರೆ” ಎಂದಳು. ನಿಜಕ್ಕೂ ಸಂತೋಷವಾಯಿತು. ‘ಚೆನ್ನಾಗಿರಮ್ಮ’ ಎಂದು ಹಾರೈಸಿದೆ.
ಇಂಥ ಸಂದರ್ಭಗಳಲ್ಲೆಲ್ಲಾ ಸಹೃದಯಗಳನ್ನು ಒಡೆಯುವ ರಾಜಕೀಯ ಶಕ್ತಿಗಳ ಬಗೆಗೆ ಸಿಟ್ಟು ಬರುತ್ತದೆ. ಅವರ ಮೇಲೆ ಇವರನ್ನು, ಇವರ ಮೇಲೆ ಅವರನ್ನು ಎತ್ತಿಕಟ್ಟಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಅಂಥವರನ್ನು ದೂರ ಇಡುವ ಜಾಣತವನ್ನು ಜನಸಾಮಾನ್ಯರು ಬೆಳೆಸಿಕೊಳ್ಳಬೇಕಷ್ಟೇ. ಯಾವ ಜಾತಿ ಮತಧರ್ಮವನ್ನೂ ಅಂಟಿಸಿಕೊಳ್ಳದ ಪ್ರಾಣಿಪಕ್ಷಿಗಳು ಪ್ರೀತಿಯಿಂದ ಸಹಜೀವನ ಮಾಡುತ್ತವಲ್ಲವೇ? ಬುದ್ಧಿಯುಳ್ಳ ಮನುಷ್ಯನೇಕೆ ಹೀಗೆ ಎಂಬ ಪ್ರಶ್ನೆ ಸದಾ ಕಾಡುತ್ತದೆ.

ಕೊನೆಗೊಂದೇ ಮಾತು – ಏನಾದರು ಆಗು ನಿನ್ನೊಲವಿನಂತಾಗು ಏನಾದರು ಸರಿಯೇ ಮೊದಲು ಮಾನವನಾಗು….

IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ
9844498432
[email protected]
Copyright © All rights reserved Newsnap | Newsever by AF themes.
error: Content is protected !!