November 15, 2024

Newsnap Kannada

The World at your finger tips!

mobile child

ಪೋಷಕತ್ವದಲ್ಲಿ ಎಡವುತ್ತಿದ್ದೇವೆಯೇ? (ಬ್ಯಾಂಕರ್ಸ್ ಡೈರಿ)

Spread the love
IMG 20180306 WA0008 1 edited
ಡಾ.ಶುಭಶ್ರೀಪ್ರಸಾದ್, ಮಂಡ್ಯ.

ಬ್ಯಾಂಕಿನವರು ರಜೆಯಲ್ಲೂ ಬ್ಯಾಂಕಿನ ಸುದ್ದಿಯನ್ನು ಮರೆಯುವಂತಿಲ್ಲ. ಗ್ರಾಹಕರೂ ಆಗಾಗ ಅನೇಕ ದಿಢೀರ್ ಅನುಮಾನಗಳಿಗೆ ಉತ್ತರ ಬಯಸಿ ಕರೆ ಮಾಡುತ್ತಾರೆ ಇಲ್ಲವೇ ಏನೋ ತೊಂದರೆಗೆ ಸಿಲುಕಿಕೊಂಡು ಪರಿಹಾರಕ್ಕಾಗಿ ಕರೆ ಮಾಡುತ್ತಾರೆ; ಇಲ್ಲವೇ ಅಕ್ಕ ಪಕ್ಕದವರೋ ಸ್ನೇಹಿತರೋ ನೆಂಟರಿಷ್ಟರೋ ಏನೋ ಒಂದು ವಿಚಾರಕ್ಕೆ ಬ್ಯಾಂಕಿನ ವಿಷಯವನ್ನು ಮಾತನಾಡುತ್ತಾರೆ. ಕಳೆದ ವಾರ ಆದದ್ದೂ ಹೀಗೆಯೇ. ನಾ ರಜೆಯಲ್ಲಿದ್ದೆ. ನನ್ನ ಕಸಿನ್ ಮನೆಯಲ್ಲಿದ್ದೆ. ಅವಳೂ ನಮ್ಮ ಬ್ಯಾಂಕಿನ ಗ್ರಾಹಕಳೇನೇ. ಹಾಗಾಗಿ ನಿಮ್ಮ ಬ್ಯಾಂಕಿನ ಈ ಆಪ್ ತೊಂದರೆ ಇದೆ, ಆ ಆಪ್ ತೊಂದರೆ ಇದೆ ಎಂದು ಸಣ್ಣ ದೂರಿನೊಂದಿಗೆ ಅದೂ ಇದೂ ಮಾತನಾಡುತ್ತಾ ಕಸ್ಟಮರ್ ಕೇರ್ ವಿಷಯದತ್ತ ಮಾತು ಹೊರಳಿತು. ಸಾಮಾನ್ಯ ಯಾವುದೇ ಸಂಸ್ಥೆಯ ಕಸ್ಟಮರ್ ಕೇರ್ ಆದರೂ ಅದು ಸಮಸ್ಯೆಗೆ ಬಹು ಹತ್ತಿರದ ಪರಿಹಾರವನ್ನು ನೀಡುತ್ತದೆ ಅಥವಾ ಸೂಚಿಸುತ್ತದೆ. ಹಾಗಾಗಿ ನಾನು ಅವಳಿಗೆ ‘ಆಪ್ ತೊಂದರೆ ಇದ್ದರೆ ಕಸ್ಟಮರ್ ಕೇರ್‍ಗೆ ಕರೆ ಮಾಡಬಹುದಿತ್ತಲ್ಲಾ’ ಎಂದೆ. ಹಾಗೂ ಹೀಗೂ ನಾನೂ ಅವಳೂ ಪ್ರಯತ್ನ ಪಟ್ಟು ತೊಂದರೆಗಳನ್ನೆಲ್ಲ ನಿವಾರಿಸಿದೆವು. ಆಕೆ ಶಿಕ್ಷಕಿ. ಕೇರ್ ಎನ್ನುವ ಶಬ್ದ ಪ್ರಯೋಗದಿಂದಾಗಿ ಮಾತು ಕಸ್ಟಮರ್ ಕೇರ್ ನಿಂದ ಪೇರೆಂಟಲ್ ಕೇರ್ ಕಡೆಗೆ ಹೊರಳಿತು. ಹಿಂದೆ ಆಕೆ ಪ್ರೌಢಶಾಲೆಯ ಶಿಕ್ಷಕಿಯಾಗಿದ್ದಳು. “ಬೆಳೆದ ಮಕ್ಕಳು ನಮ್ಮ ಮಾತು ಕೇಳುವುದಿಲ್ಲ. ಗಿಡವಿದ್ದಾಗ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸಲಾಗದು. ಪ್ರೌಢಶಾಲೆಯ ಮಕ್ಕಳು ಮರವಲ್ಲ. ಆದರೂ ಬಗ್ಗಿಸಲಾಗೋದಿಲ್ಲ ಎಂದು ನನಗೆ ತುಂಬ ವ್ಯಥೆಯಾಗುತ್ತಿತ್ತು. ಮಕ್ಕಳಿಗೆ ಸರಿಯಾದ ಸಂಸ್ಕಾರ ಕಲಿಸಿಕೊಡಲು ಆಗುತ್ತಿಲ್ಲವಲ್ಲಾ ಎಂದು ನೋವಾಗುತ್ತಿತ್ತು. ಜೊತೆಗೆ ನನಗೆ ಹೈಯರ್ ಪ್ರೈಮರಿ ಅಥವಾ ಮಾಧ್ಯಮಿಕ ಶಾಲೆಯ ಶಿಕ್ಷಕಿಯ ಕೆಲಸ ದೊರಕಿದ್ದರೆ ಚಿಕ್ಕಂದಿನಲ್ಲಿಯೇ ತಿದ್ದಬಹುದಿತ್ತು ಎನಿಸುತ್ತಿತ್ತು. ಅದ್ಯಾವ ದೇವರಿಗೆ ನನ್ನ ಮಾತು ಕೇಳಿಸಿತೋ ನನಗೆ ಈಗ ಹೈಯರ್ ಪ್ರೈಮರಿ ಮತ್ತು ಮಾಧ್ಯಮಿಕ ಶಾಲೆಯ ಶಿಕ್ಷಕಿಯ ಕೆಲಸವೇ ದೊರಕಿದೆ. ಗಿಡವಿದ್ದಾಗ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸಲಾಗದು ಎಂದಿದ್ದೆನಲ್ಲಾ ಗಿಡವನ್ನೂ ಬಗ್ಗಿಸಲಾಗುತ್ತಿಲ್ಲ ಎಂದು ಈಗ ಅರಿವಾಗುತ್ತಿದೆ. ಇದರಲ್ಲಿ ಮಕ್ಕಳ ತಪ್ಪೇನೂ ಇಲ್ಲ. ನನಗೆ ತಾಯ್ತಂದೆಯರ ತಪ್ಪೇ ಹೆಚ್ಚಾಗಿ ಕಾಣುತ್ತಿದೆ. ಮಕ್ಕಳು ಹೇಳಿದ್ದನ್ನು ಕೇಳಿ ಕಲಿಯುವುದಿಲ್ಲ; ಮಾಡಿದ್ದನ್ನು ನೋಡಿ ಕಲಿಯುತ್ತಾರೆ. ತಾಯಿ ತಂದೆಯರು ಮಕ್ಕಳ ಕೈಯ್ಯಲ್ಲಿ ಮೊಬೈಲು ಕೊಟ್ಟು ಮರೆತುಬಿಡುತ್ತಾರೆ. ಮಗು ಏನೆಲ್ಲಾ ನೋಡುತ್ತದೆ ಎಂಬುದರ ಬಗೆಗೆ ಗಮನವೇ ಇರುವುದಿಲ್ಲ. ಜೊತೆಗೆ ಇಡೀ ಕುಟುಂಬದವರು ಕುಳಿತು ನೋಡುವಂಥ ಸಿನಿಮಾಗಳಿಗೆ ಕರೆದುಕೊಂಡು ಹೋಗುವುದರ ಬದಲು ಅವರಿಗೆ ನೋಡಬೇಕೆನಿಸಿದ್ದಕ್ಕೆ ಮನೆಯಲ್ಲಿ ಮಗುವೊಂದನ್ನೇ ಬಿಡಲು ಸಾಧ್ಯವಾಗದೇ ಕರೆದುಕೊಂಡು ಹೋಗುತ್ತಾರೆ. ಮೂರು ಗಂಟೆಯ ಕತ್ತಲಲ್ಲಿ ಮಗು ಕಂಡದ್ದನ್ನೆಲ್ಲ ಕಣ್ಣಿನ ಮೂಲಕ ಮನಸ್ಸಿಗೆ ನೇರವಾಗಿ ತುಂಬಿಕೊಂಡುಬಿಡುತ್ತದೆ. ಜೊತೆಗೆ ಮನೆಯ ಟಿ.ವಿಯಲ್ಲಿಯೇ ಬೇಕೆನಿಸಿದ್ದೆಲ್ಲ ಕಾಣಸಿಗುತ್ತದೆ. ಅವರು ಮಕ್ಕಳ ಎದುರೇ ಅವುಗಳನ್ನೆಲ್ಲಾ ನೋಡುತ್ತಾರೆ. ಹಿಂದೆಲ್ಲ ಕೂಡು ಕುಟುಂಬವೆಂದೋ ಅಥವಾ ಮಕ್ಕಳು ನೋಡಿಬಿಡುತ್ತಾರೆಂದೋ ಎಲ್ಲರ ಎದುರಿನಲ್ಲಿ ಗಂಭೀರವಾಗಿ ಇರುತ್ತಿದ್ದರು. ಹಿಂದಿನಂತೆ ತಂದೆ ತಾಯಿಯರು ಒಂದು ಸಣ್ಣ ಅಂತರವನ್ನ್ನೂ ಉಳಿಸಿಕೊಂಡಿಲ್ಲ. ಮಕ್ಕಳು ಎದುರಿಗಿದ್ದರೂ ಎಗ್ಗಿಲ್ಲದೆ ಪಾರ್ಕು ಸುತ್ತುವ ಪ್ರೇಮಿಗಳಂತೆ ಮನೆಯಲ್ಲೂ ನಡೆದುಕೊಳ್ಳುತ್ತಾರೆ. ಮಕ್ಕಳು ಕೇಳಿದ್ದೆಲ್ಲವನ್ನೂ ಇಲ್ಲಾ ಎನ್ನದೆ ಕೊಡಿಸಿಬಿಡುತ್ತಾರೆ. ಮಕ್ಕಳು ತಾವು ಬಯಸಿದ್ದೆಲ್ಲವೂ ಬೇಕೇ ಬೇಕು ಎಂಬ ಹಠವನ್ನು ಕಲಿತುಬಿಡುತ್ತವೆ. ಬೇಕಾದ್ದು ಸಿಗದಿದ್ದರೆ ರೊಚ್ಚಿಗೇಳುವ ಹಂತಕ್ಕೆ/ ಆತ್ಮಹತ್ಯೆಯ ಹಂತಕ್ಕೆ ಬೆಳೆಯುತ್ತಿವೆ. ತಂದೆ ತಾಯಿಗಳು ಟೀಚರ್ ಗಳು ಎಂದರೆ ಲೆಕ್ಕಕ್ಕೇ ಇಲ್ಲ. ಮರು ಉತ್ತರವನ್ನು ಎಷ್ಟು ಜೋರಾಗಿ ಕೊಡ್ತಾವೆ ಗೊತ್ತಾ? ಮಕ್ಕಳೂ ಟಿ.ವಿ ಪ್ರಭಾವ ಮತ್ತು ಮೊಬೈಲ್ ಪ್ರಭಾವದಿಂದಾಗಿ ಪುಟ್ಟ ಪ್ರೇಮಿಗಳಾಗಿ ಪರಿವರ್ತನೆಯಾಗುತ್ತಿವೆ’ ಎಂದು ಅಲವತ್ತುಕೊಂಡಳು. ‘ಪುಟ್ಟ ಪ್ರೇಮಿಗಳಾಗಿ ಎಂದರೇನು’ ಎಂದು ಅರ್ಥವಾಗದವಳಂತೆ ಪ್ರಶ್ನಿಸಿದೆ. ‘ಹೇಳು ಹಿಂದೆಲ್ಲ ನಮಗೆ ಚಿತ್ರ ಬರೆಯಲು ಹೇಳಿದರೆ ಏನು ಬರೆಯುತ್ತಿದ್ದೆವು?’ ಎಂದು ನನಗೇ ಪ್ರಶ್ನೆ ಹಾಕಿದಳು. ನಾನು ‘ಬೆಟ್ಟ ಗುಡ್ಡ ಸೂರ್ಯೋದಯ, ನದಿ, ಬೋಟು, ಗಿಡ ಮರ, ಹಕ್ಕಿ, ಮೀನು, ಬಾತುಕೋಳಿ, ನವಿಲು. . . .’ ಎಂದು ನೆನಪಿಸಿಕೊಂಡು ಹೇಳಿದೆ. ‘ಅಲ್ವಾ. . ಕರೆಕ್ಟ್ ನಾವು ಏನು ನೋಡ್ತಾ ಇದ್ವೋ ಅದನ್ನೇ ಬರೀತಿದ್ವಿ. ಈಗಿನ ಮಕ್ಕಳೂ ಹಾಗೆಯೇ. ಬಹುತೇಕ ಹೈಯರ್ ಪ್ರೈಮರಿ ಮಕ್ಕಳು ಕೂಡ ಚಿತ್ರ ಬರೆಯಿರಿ ಎಂದರೆ ಮೊದಲು ಬರೆಯುವುದು ಲವ್ ಸಿಂಬಲ್ ಹಾರ್ಟ್ ಚಿತ್ರವನ್ನೇ. ಕೆದಕಿದರೆ ಮಕ್ಕಳು- ಅಪ್ಪ ಅಮ್ಮ ಟಿ.ವಿ.ಲಿ ಅದನ್ನೇ ನೋಡ್ತಾ ಇರ್ತಾರೆ- ಎಂದಿದ್ದೂ ಇದೆ’ ಎಂದಳು. ‘ಮಕ್ಕಳನ್ನು ನಾ ದೂರುವುದಿಲ್ಲ ತಂದೆ ತಾಯಿಯರು ಬದಲಾಗಬೇಕು. ತಮ್ಮ ಮಕ್ಕಳು ಹೇಗೆ ಬೆಳೆಯುತ್ತಿದ್ದಾರೆ, ಏನು ಕಲಿಯುತ್ತಿದ್ದಾರೆ, ಯಾವ ದಿಕ್ಕಿನಲ್ಲಿ ಯೋಚಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕು’ ಎಂದಳು. ನನಗೆ ಹೊಸಲೋಕ ತೆರೆದಂತಾಯಿತು. ಭವಿತವ್ಯ ಚಂದಗಾಣಬೇಕಾದರೆ ಪೇರೆಂಟಲ್ ಕೇರ್ ಮಗೆಗೆ ಹೊಸ ಪೆÇೀಷಕರಿಗೆ ಕೌನ್ಸಿಲಿಂಗ್ ಕೊಡಿಸಬೇಕು ಎನಿಸಿತು.

ಆ ಕ್ಷಣದಲ್ಲಿ ನನಗೆ ನಮ್ಮ ಬ್ಯಾಂಕಿನ ಗ್ರಾಹಕರೂ ನಿವೃತ್ತ ಪ್ರಾಧ್ಯಾಪಕರೊಬ್ಬರು ತಾಯಿಯ ಎಫ್.ಡಿ ರಿನ್ಯೂಯಲ್‍ಗೆ ಎಂದು ಬಂದಾಗ ಆಡಿದ ಮಾತು ಧುತ್ತೆಂದು ನೆನಪಿಗೆ ಬಂದಿತು ‘ಮೇಡಂ ಅಪ್ಪನಿಗೆ ತೊಂಬತ್ತೇಳಾಗಿ ಮೆತ್ತಗಾದರೂ ನಾವು ದನಿ ಎತ್ತರಿಸುತ್ತಿರಲಿಲ್ಲ. ಅಪ್ಪ ಈಚೆಗೆ ಸತ್ತಿದ್ದು. ನಾವು ಎಲ್ಲ ಮಕ್ಕಳೂ ತುಂಬ ಓದಿಕೊಂಡು ದೊಡ್ಡ ದೊಡ್ಡ ಹುದ್ದೆಯಲ್ಲಿಯೇ ಇದ್ದವರು. ಈಗ ಎಲ್ಲರೂ ನಿವೃತ್ತರೇ. ಕೊನೆಯ ತನಕವೂ ಅಪ್ಪನ ಮುಂದೆ ನಾವು ಯಾವ ಮಕ್ಕಳೂ ಕಾಲು ಮೇಲೆ ಮಾಡಿ ಕೂರುತ್ತಿರಲಿಲ್ಲ. ನಮಗೆ ಅಪ್ಪ ಅಮ್ಮ ಎಂದರೆ ಎಷ್ಟು ಪ್ರೀತಿ ಗೌರವ ಇದೆಯೋ ಅಷ್ಟೇ ಭಯವೂ ಇದೆ ಈಗಲೂ. ಅವರ ನಿರ್ಧಾರಕ್ಕೆ ಪ್ರತಿರೋಧ ವ್ಯಕ್ತಪಡಿಸಿಲ್ಲ. ಈಗಲೂ ಅಮ್ಮನ ನರ್ಸಿಂಗ್ ನಾನೇ ಮಾಡೋದು. ಅವರನ್ನು ನೋಡಿಕೊಳ್ಳೋದಂದ್ರೆ ನಮಗೆಲ್ಲಾ ಇಷ್ಟ. ಬೇಕಾದಷ್ಟು ಹಣವಿದೆ ನಮ್ಮಲ್ಲಿ. ಆದರೂ ಅಮ್ಮನನ್ನು ನೋಡಿಕೊಳ್ಳಲು ಯಾರನ್ನೋ ನೇಮಿಸಲು ಇಷ್ಟವಿಲ್ಲ. ನಮ್ಮನ್ನು ಚಿಕ್ಕ ವಯಸ್ಸಿನಲ್ಲಿ ಅವರೇ ನೋಡಿಕೊಂಡಿದ್ದರು – ಯಾರನ್ನೋ ನೇಮಿಸಿರಲಿಲ್ಲ’ ಎಂದರು.

ಬಾಂಧವ್ಯವೆಂದರೆ ಪ್ರೀತಿ ಗೌರವ ತಾನೇ ಅಲ್ಲವೇ…?

Copyright © All rights reserved Newsnap | Newsever by AF themes.
error: Content is protected !!