January 10, 2025

Newsnap Kannada

The World at your finger tips!

Malavika Krishna 1

ಎಸ್ ಎಂ ಕೃಷ್ಣ ಪುತ್ರಿ ಮಾಳವಿಕಾಗೆ ಬೇಲ್ – ಬಂಧನ ಭೀತಿಯಿಂದ ರಿಲೀಫ್

Spread the love

ಕಾಫಿ ಬೆಳೆಗಾರರಿಗೆ ನೀಡಿದ್ದ ಕೋಟ್ಯಾಂತರ ರು . ಚೆಕ್ ಬೌನ್ಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಫೆ ಕಾಫಿ ಡೇ ಸಂಸ್ಥಾಪಕ ದಿ. ಸಿದ್ಧಾರ್ಥ್​ ಹೆಗ್ಡೆ ಪತ್ನಿ. ಮಾಜಿ ಸಿ ಎಂ ಎಸ್ ಎಂ ಕೃಷ್ಣ ಪುತ್ರಿ ಮಾಳವಿಕಾಗೆ ಮೂಡಿಗೆರೆ ಜೆಎಂಎಫ್​ಸಿ ಕೋರ್ಟ್​ ಶನಿವಾರ ಜಾಮೀನು ನೀಡಿದೆ.

ಆ ಪ್ರಕರಣದಲ್ಲಿ ಮಾಳವಿಕಾ ಸಿದ್ದಾರ್ಥ್ ಹೆಗ್ಡೆಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಇಂದು ಮಾಳವಿಕಾ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

ಮಾಳವಿಕಾ ಸೇರಿದಂತೆ ಐವರಿಗೆ ಮೂಡಿಗೆರೆ ಜೆಎಂಎಫ್​ಸಿ ಕೋರ್ಟ್​ನಿಂದ ಜಾಮೀನು ಮಂಜೂರಾಗಿದೆ.

ಕಾಫಿ ಬೆಳೆಗಾರರ ಕೋಟ್ಯಾಂತರ ರೂಪಾಯಿ ಸಾಲ ಉಳಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಚೆಕ್ ಬೌನ್ಸ್ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಮಾಳವಿಕಾ ಸೇರಿದಂತೆ 8 ಮಂದಿಗೆ ನೋಟಿಸ್ ನೀಡಿದ್ದ ಕೋರ್ಟ್​ ವಿಚಾರಣೆಗೆ ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಬಂಧನದ ವಾರೆಂಟ್ ಹೊರಡಿಸಿತ್ತು.

ಕೆಫೆ ಕಾಫಿ ಡೇ ಸ್ಥಾಪಿಸಿ, ಚಿಕ್ಕಮಗಳೂರು, ಕೊಡಗು ಭಾಗದ ಸಾಕಷ್ಟು ಕಾಫಿ ಬೆಳೆಗಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆದಿದ್ದ ಸಿದ್ಧಾರ್ಥ್​ ಹೆಗ್ಡೆ 2019ರ ಜುಲೈ ತಿಂಗಳಲ್ಲಿ ಮಂಗಳೂರು ಬಳಿಯ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ​ ಅವರಿಗೆ ತನ್ನ ಸಾಮ್ರಾಜ್ಯ ಎಲ್ಲೋ ಲಯ ತಪ್ಪುತ್ತಿದೆ ಅನ್ನೋದು ಆಗಲೇ ಗೊತ್ತಾಗಿ ಹೋಗಿತ್ತು. ಸದ್ಯ ಕಾಫಿ ಡೇಯಲ್ಲಿ ನಡೀತಿರೋ ಬೆಳವಣಿಗೆಗಳು ಒಂದು ವರ್ಷದ ಹಿಂದೆ ಅವರು ತೆಗೆದುಕೊಂಡ ಆ ಕೆಟ್ಟ ನಿರ್ಧಾರದ ಸತ್ಯವನ್ನು ನೆನಪು ಮಾಡಿಸುತ್ತಿದೆ. ಹೌದು, ಈ ಬೃಹತ್ ಕಂಪನಿ ದಿವಾಳಿ ಆಗದಿದ್ದರೂ ನಷ್ಟದಲ್ಲಿದೆ ಅನ್ನೋದನ್ನು ಸಾರಿ ಸಾರಿ ಹೇಳುತ್ತಿದೆ.

ಕಳೆದ ಕೆಲ ತಿಂಗಳುಗಳ ಹಿಂದೆ ತೀವ್ರ ಆರ್ಥಿಕ ಸಂಕಷ್ಟದಿಂದ ಪೀಠೋಪಕರಣಗಳನ್ನು ಉತ್ಪಾದಿಸುವ ಡ್ಯಾಫ್ಕೋ ಘಟಕವನ್ನು ಮುಚ್ಚಲಾಯಿತು. ಕಾಫಿ ಬೀಜ ಕೊಟ್ಟ ಬೆಳೆಗಾರರಿಗೆ ಹಣ ನೀಡಲಾಗದೇ ಪರಿತಪಿಸುವ ಸ್ಥಿತಿ ಬಂದೊದಗಿತ್ತು. ಅಲ್ಲದೆ ಸಿದ್ದಾರ್ಥ್​ ಹೆಗ್ಡೆ ಅವರ ಪತ್ನಿ ಹಾಗೂ ಮಾಜಿ ಸಿಎಂ ಎಸ್​ಎಂ ಕೃಷ್ಣ ಅವರ ಮಗಳು ಮಾಳವಿಕಾಗೂ ಬಂಧನದ ಭೀತಿ ಎದುರಾಗಿತ್ತು.

ಕಾಫಿ ಡೇಗೆ ಕಾಫಿ ಮಾರಾಟ ಮಾಡಿದ ಬೆಳೆಗಾರರು ಹಣ ಸಿಗದೇ ಕಳೆದ ಒಂದು ವರ್ಷದಿಂದಲೂ ಓಡಾಟ ನಡೆಸುವಂತಾಗಿದೆ. ಕಾಫಿ ಬೆಳೆಗಾರರಿಗೆ ಕೊಟ್ಟ ಚೆಕ್ ಗಳೆಲ್ಲಾ ಬೌನ್ಸ್ ಆಗಿತ್ತು. 300ಕ್ಕೂ ಅಧಿಕ ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಹಣ ಕೊಡದೇ ಕಾಫಿ ಡೇ ಸತಾಯಿಸುತ್ತಲೇ ಬರುತ್ತಿದ್ದು, ಕಾದು ಕಾದು ರೋಸಿ ಹೋಗಿರೋ ಕಾಫಿ ಬೆಳೆಗಾರರು ಇದೀಗ ಕಾನೂನು ಹೋರಾಟ ಆರಂಭಿಸಿದ್ದರು.

ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಜೆಎಂಎಫ್​ಸಿ ಕೋರ್ಟ್ ಮಾಳವಿಕಾ ಸೇರಿದಂತೆ 8 ಮಂದಿಗೆ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಿತ್ತು.

Copyright © All rights reserved Newsnap | Newsever by AF themes.
error: Content is protected !!