ನಮ್ಮ ಸ್ವಾತಂತ್ರ್ಯ ಹೋರಾಟದ ಅತ್ಯಂತ ನತದೃಷ್ಟ ವ್ಯಕ್ತಿ ಸುಭಾಷ್ ಚಂದ್ರ ಬೋಸ್. ಗಾಂಧಿ ನಂತರದ ಮಹತ್ವದ ವ್ಯಕ್ತಿಯೂ ಸಹ.
ನೆಹರು ಮತ್ತು ಬೋಸರ ಆಯ್ಕೆಯಲ್ಲಿ ಗಾಂಧಿ ತಮ್ಮ ಅಜ್ಞಾಪಾಲಕರು – ಸೌಮ್ಯ ಸ್ವಭಾವದವರು – ಸೂಕ್ಷ್ಮ ಮತಿಗಳು ಆದ ನೆಹರು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.
ಒಂದಷ್ಟು ಆಕ್ರಮಣಕಾರಿಯೂ ದುಡುಕು ಸ್ವಭಾವದವರೂ ಆದ ಸುಭಾಷರು ಸಹಜವಾಗಿ ಗಾಂಧಿಯವರ ಅಸಹನೆ, ಅಸಮಾಧಾನ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ. ಅದು ಆ ಕ್ಷಣದ ಸರಿಯಾದ ಆಯ್ಕೆ ಇರಬಹುದು.
ಗಾಂಧಿಯವರ ಅಹಿಂಸೆಗೆ ವಿರುದ್ದವಾಗಿ
” ಸ್ವಾಭಿಮಾನದ ರಕ್ಷಣೆಗಾಗಿ, ಈ ನೆಲದ ಉಳಿವಿಗಾಗಿ ” ಆಕ್ರಮಣದ – ಕೆಚ್ಚೆದೆಯ ಸೈನಿಕ ಹೋರಾಟ ಮಾಡಿದವರು ನೇತಾಜಿ.
ಗಾಂಧಿಯಂತ ಅತ್ಯಂತ ಪ್ರಬಲ ಮತ್ತು ಆಗಿನ ಬಹುತೇಕ ಜನರ ಆರಾಧ್ಯದೈವ ವಾಗಿದ್ದ, ತಮ್ಮ ಚಿಂತನೆಗಳಿಂದ ಇಡೀ ದೇಶವನ್ನೇ ಆಕ್ರಮಿಸಿದ್ದ ವ್ಯಕ್ತಿಯ ಇಷ್ಟಕ್ಕೆ ವಿರುಧ್ಧವಾಗಿ ಎರಡು ಬಾರಿ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಅಧ್ಯಕ್ಷರಾದುದು ಬೋಸರ ಅಪಾರ ಸಂಘಟನಾ ಸಾಮರ್ಥ್ಯಕ್ಕೆ ಸಾಕ್ಷಿ.
ಗಾಂಧಿಯ ಅಹಿಂಸಾ ಹೋರಾಟವನ್ನು ಜನರೆಲ್ಲಾ ಒಪ್ಪಿದ್ದ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಸೈನ್ಯವನ್ನು ( INA) ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಡಿ ಆರಂಭದಲ್ಲಿ ಒಂದಷ್ಟು ಯಶಸ್ಸು ಗಳಿಸಿದ್ದು ಅಮೋಘ ಸಾಧನೆ.
ಇಲ್ಲಿ ಒಂದು ವಿಪರ್ಯಾಸವೆಂದರೆ, ಗಾಂಧಿ ತನ್ನ ನಂಬಿಕೆಗೆ ವಿರುದ್ಧವಾಗಿ ಎರಡನೇ ಮಹಾಯುದ್ಧದಲ್ಲಿ ಭಾರತೀಯ ಸೈನ್ಯವನ್ನು ಬ್ರಿಟೀಷರ ಪರವಾಗಿ ಹೋರಾಟಕ್ಕಿಳಿಸಿದ ಸಂದರ್ಭದಲ್ಲಿ, ನೇತಾಜಿಯವರು ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಮತ್ತು ಜಪಾನಿನ ಸಹಕಾರದೊಂದಿಗೆ ಅದೇ ಬ್ರಿಟೀಷರ ವಿರುದ್ಧ ಹೊಸ ಸೈನ್ಯ ಕಟ್ಟಿ ಹೋರಾಡುತ್ತಿದ್ದರು. ಬೋಸರ ಅತ್ಯಂತ ಉತ್ಸಾಹದ ಆದರೆ ಬಹುದೊಡ್ಡ ತಪ್ಪು ನಿರ್ಧಾರ ಇದಾಗಿತ್ತು.
ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ನಿಷ್ಕಲ್ಮಶ ಹೃದಯದ ನೇತಾಜಿಯವರ ಈ ನಿರ್ಧಾರ ಎಂದು ಸಮರ್ಥಿಸ ಬಹುದಾದರೂ, ಯಾವುದೇ ರೀತಿಯಾದರು ನಮಗೆ ಸ್ವಾತಂತ್ರ್ಯ ಲಭಿಸುವುದು ಮುಖ್ಯ ಎಂದು ಹೇಳಿಕೊಳ್ಳಬಹುದಾದರೂ, ವಿಶ್ವ ಕಂಡ ಅತ್ಯಂತ ಕ್ರೂರ ನರ ರಾಕ್ಷಸ ಹಿಟ್ಲರನ ಸಹಾಯ ಪಡೆಯಲು ಪ್ರಯತ್ನಿಸುವುದು ಅತ್ಯಂತ ಕೆಟ್ಟ ನಿರ್ಧಾರ,
ಅಲ್ಲದೆ ಅಂದಿನ ಮಹಾಯುದ್ಧದ ಪ್ರಬಲ ಮಿತ್ರರಾಷ್ಟ್ರಗಳ ವಿರುದ್ಧದ ದುರ್ಬಲ ಶತ್ರು ರಾಷ್ಟ್ರಗಳ ಸೋಲು ಖಚಿತ ಎಂಬುದನ್ನು ಅರ್ಥಮಾಡಿಕೊಳ್ಳಲು ಸುಭಾಷರು ವಿಫಲರಾಗುತ್ತಾರೆ.
ಮನುಷ್ಯ ಸಹಜ ಅಹಂನಿಂದಾಗಿ ಗಾಂಧೀಜಿಯವರಿಗೆ ನೇತಾಜಿಯವರ ಬಗ್ಗೆ ಇದಕ್ಕಾಗಿ ಇನ್ನೂ ಹೆಚ್ಚಿನ ಬೇಸರ ಕೋಪ ಉಂಟು ಮಾಡಿರಬಹುದು. ಅಲ್ಲದೆ ಇದೇ ಸಮಯದಲ್ಲಿ ಅಂಬೇಡ್ಕರ್ ಮತ್ತು ಜಿನ್ನಾ ಅವರು ತಮ್ಮ ಸಮುದಾಯಗಳ ತುಳಿತಕ್ಕೊಳಗಾದ ಜನರ ಪರವಾಗಿ ದೇಶದ ಸ್ವಾತಂತ್ರ್ಯಕ್ಕಿಂತ ಹೆಚ್ಚಾಗಿ ತೊಡಗಿಸಿಕೊಂಡಿದ್ದರಿಂದ ಈ ಬೃಹತ್ ಹೋರಾಟದ ಒತ್ತಡ ಗಾಂಧಿಯವರಲ್ಲಿ ಸುಭಾಷರ ನಡೆಗಳು ಮತ್ತಷ್ಟು ಅಸಮಾಧಾನ ಸೃಷ್ಟಿಸಿರುವ ಸಾಧ್ಯತೆ ಇದೆ.
ಈ ಅನಿಸಿಕೆ ಬಾಲಿಶ ಎನಿಸಿದರೂ…. ಸಾರ್ವಜನಿಕ ಜೀವನದ ಬೇರೆ ಬೇರೆ ಒತ್ತಡಗಳು ವ್ಯಕ್ತಿಯ ಗೊಂದಲದ ತೀರ್ಮಾನಗಳಿಗೆ ಮತ್ತು ಅಸಹಾಯಕರ ಕಡೆಗೆ ತಿರುಗುತ್ತದೆ ಎಂಬುದು ನನ್ನ ಗ್ರಹಿಕೆ. ಹಾಗೆಯೇ ಬೋಸರ ಜನಪ್ರಿಯತೆ ಗಾಂಧಿಯವರಲ್ಲಿ ಅಸೂಯೆ ಮೂಡಿಸಿರಲೂಬಹುದು.
ಗಾಂಧಿ ಮತ್ತು ಭೋಸರ ನಡುವಿನ ಬಹುದೊಡ್ಡ ವ್ಯತ್ಯಾಸ…..
ಗಾಂಧಿ ” ಗುರಿ ಮತ್ತು ಮಾರ್ಗ ಎರಡೂ ಮುಖ್ಯ. ಉತ್ತಮ ಗುರಿ ತಲುಪಲು ಉತ್ತಮ ಮಾರ್ಗವೂ ಮುಖ್ಯ “
ಭೋಸ್ ” ಉತ್ತಮ ಗುರಿಯ ಸಾಧನೆಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಯಾವುದೇ ಮಾರ್ಗವಾದರೂ ಸರಿ. ಗುರಿ ತಲುಪುವುದು ಮುಖ್ಯ. “
ಗಾಂಧಿಯ ಯಶಸ್ಸು ಭೋಸರ ವಿಫಲತೆ ಇಲ್ಲಿಯೇ ಅಡಗಿದೆ. ಮಾರ್ಗ ತಪ್ಪಾಗಿದ್ದರೆ ಗುರಿ ತಲುಪುವುದು ಕಷ್ಟ. ತಲುಪಿದರೂ ಅದು ತಾತ್ಕಾಲಿಕ ಮತ್ತು ದೀರ್ಘಕಾಲದಲ್ಲಿ ಅಪಾಯಕಾರಿ.
ಇತಿಹಾಸದ ಸತ್ಯಗಳು ಏನೇ ಇರಲಿ, ನೇತಾಜಿ ನೆಲದ – ಸ್ವಾಭಿಮಾನದ ರಕ್ಷಣೆಗಾಗಿ ಹೋರಾಡುವ ವಿಶ್ವದ ಎಲ್ಲ ಸಮುದಾಯಗಳ ಸ್ಪೂರ್ತಿಯ ಸಂಕೇತ.
ಆದರೆ ಬೋಸರ ದುರಾದೃಷ್ಟ ಕೇವಲ ಇಷ್ಟಕ್ಕೇ ನಿಲ್ಲುವುದಿಲ್ಲ.
ವಿಧಿಯೂ ಕೂಡ ಅವರ ವಿರುಧ್ಧವಾಗಿ ನಡೆದು ವಿಮಾನ ಅಪಫಾತದಲ್ಲಿ ಅಕಾಲಿಕವಾಗಿ ನಿಧನರಾಗುತ್ತಾರೆ. ನಂತರ ಅವರ ಮನಸ್ಥಿತಿಗೆ ಒಂದಷ್ಟು ಭಿನ್ನರಾಗಿದ್ದ ಜವಹರಲಾಲ್ ನೆಹರು ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಅವರೂ ನೇತಾಜಿಯವರನ್ನು ನಿರ್ಲಕ್ಷಿಸುತ್ತಾರೆ.
ಇತಿಹಾಸ ಈ ರೀತಿಯ ಅನೇಕ ಘಟನೆಗಳನ್ನು ತನ್ನ ಒಡಲಲ್ಲಿ ಅಡಗಿಸಿಕೊಂಡಿದೆ.
ನೇತಾಜಿಯವರ ಸಾವಿನ ಬಗ್ಗೆ ಅನೇಕ ಬಗೆಹರಿಯದ ಅನುಮಾನಗಳ ಹುತ್ತ ಕಟ್ಟಿಕೊಂಡಿದೆ. ಈಗಿನ ಸಂಕೀರ್ಣ ರಾಜಕೀಯ ಸಂದರ್ಭದಲ್ಲಿ ಅದಕ್ಕೆ ನಿಜವಾದ ಉತ್ತರ ಸಿಗುವುದಿಲ್ಲ. ಒಬ್ಬರಿಗೊಬ್ಬರ ಕೆಸರೆರಚಾಟದಲ್ಲಿ ಸತ್ಯ ಸಮಾಧಿಯಾಗಿದೆ. ಆದರೂ ಬದುಕಿನ ಅನುಭವದಿಂದ, ಮತ್ತು ಆಗಿನ ಇತಿಹಾಸದ ಪುಟಗಳನ್ನು ಅವಲೋಕಿಸಿದಾಗ ಸಿಗುವ ಉತ್ತರ,
ಸುಭಾಷರು ಗೃಹ ಬಂಧನದಿಂದ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿ ವಿಮಾನ ಅಪಘಾತದಲ್ಲಿ ಮೃತರಾದರು ಎಂಬುದು ಬಹುತೇಕ ಸತ್ಯ.
ಇದನ್ನು ಒಪ್ಪದವರ ಅತಿದೊಡ್ಡ ಅನುಮಾನ – ಊಹೆ ನೇತಾಜಿಯವರನ್ನು ಬ್ರಿಟೀಷರೆ ಮೋಸದಿಂದ ಕೊಲೆ ಮಾಡಿರಬಹುದು ಎಂದಾಗಬಹುದು. ಇದನ್ನು ಹೊರತುಪಡಿಸಿ ಬೋಸರು ಸ್ವಾತಂತ್ರ್ಯ ನಂತರವೂ ತಲೆ ಮರೆಸಿಕೊಂಡು ಬದುಕಿದ್ದರು, ನೆಹರು ಮತ್ತು ಬ್ರಿಟೀಷರ ಭಯದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ ಎಂಬುದು ಕಪೋಲಕಲ್ಪಿತ. ಈ ರೀತಿಯ ಅಭಿಪ್ರಾಯಗಳು ಧೀರೋದಾತ್ತ ಸಮರ ಸೇನಾನಿ ಸುಭಾಷ್ ಚಂದ್ರ ಬೋಸರಿಗೆ ನಾವು ಮಾಡುವ ಅವಮಾನವಾಗುತ್ತದೆ.
ಬ್ರಿಟಿಷರ ಆಡಳಿತಕ್ಕೆ ಹೆದರದ ನೇತಾಜಿ ನೆಹರು ಅವರಿಗೆ ಹೆದರುತ್ತಾರೆ ಎಂಬುದು ಹಾಸ್ಯಾಸ್ಪದ.
ಜನಪ್ರಿಯತೆಯನ್ನು ಪಕ್ಕಕ್ಕಿಟ್ಟು ವಾಸ್ತವವಾಗಿ ಯೋಚಿಸಿದರೆ ಮೃದು ಸ್ವಭಾವದವರಿಗೆ ಗಾಂಧಿಯ ಅಹಿಂಸೆ ಆದರ್ಶವಾದರೆ ,
ಆಕ್ರಮಣಕಾರಿ ಮನಸ್ಥಿತಿಯವರಿಗೆ ನೇತಾಜಿಯವರು ಕೆಚ್ಚದೆಯ ಹೋರಾಟ ಮಾರ್ಗದರ್ಶನವಾಗಿದೆ.ಮಾರ್ಗ ಭಿನ್ನವಾದರೂ ರಾಷ್ಟ್ರಪ್ರೇಮ ಮಾತ್ರ ಇಬ್ಬರಲ್ಲೂ ಅನುಕರಣೀಯ..
- ವಿವೇಕಾನಂದ. ಹೆಚ್.ಕೆ.
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
- ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ