November 10, 2024

Newsnap Kannada

The World at your finger tips!

deepa1

ಬತ್ತಿ ಹೋದ ಜೀವ ಸೆಲೆ ಮತ್ತೆ ಚಿಮ್ಮುವ ನಿರೀಕ್ಷೆಯಲ್ಲಿ…

Spread the love

ಸಾಲು ಸಾಲು ಸೋಲುಗಳನ್ನು ಹೊದ್ದು ಮಲಗಿರುವಾಗ……..

ಕೆಟ್ಟ ಕೆಟ್ಟ ಕನಸುಗಳು ಕಾಡುತ್ತಿರುವಾಗ…..

ನೋವುಗಳೇ ಬೆಳಗಿನ ಕಿರಣಗಳಾಗಿ ತೂರಿ ಬರುತ್ತಿರುವಾಗ….. ‌.‌

ಮತ್ತೆ ನಿದ್ರೆಯವರೆಗಿನ 14 ಗಂಟೆಗಳನ್ನು ಏಕಾಂಗಿಯಾಗಿ ಕಳೆಯುತ್ತಿರುವಾಗ……

ಒಂದು ಕಷ್ಟವನ್ನು ಮತ್ತೊಂದು ಕಷ್ಟ ಮೆಟ್ಟಿ ಮುನ್ನಡೆಯುತ್ತಿರುವಾಗ…..

ದೂರವಾಣಿಯ ರಿಂಗ್ ಟೋನ್ ಗಳು ಕರ್ಕಶ ಧ್ವನಿಯಂತೆ ಕಿವಿಗೆ ಅಪ್ಪಳಿಸುತ್ತಿರುವಾಗ….

ಬೀಡಿ ಸಿಗರೇಟು ಎಣ್ಣೆಯ ಅಭ್ಯಾಸಗಳೂ ಇಲ್ಲದಿರುವಾಗ……..

ನಾಲ್ಕು ಗೋಡೆಯ ಮಧ್ಯೆ ನಿಂತು ಕಿಟಕಿ ಸರಳಿನಾಚೆ ದೃಷ್ಟಿ ಹಾಯಿಸಿದಾಗ ಅಪ್ಪ ನೆನಪಾಗುತ್ತಾರೆ……

‘ ಸುಳ್ಳನ್ನು ಎಂದೂ ಹೇಳಬೇಡ. ಅದು ಬೇರೆಯವರನ್ನು ವಂಚಿಸುವುದರ ಜೊತೆಗೆ ನಿನ್ನನ್ನೂ ವಂಚಿಸುತ್ತದೆ. ಮುಂದೆ ಅದೇ ಅಭ್ಯಾಸವಾಗಿ ಆತ್ಮವಂಚಕನಾಗುವೆ “

” ನಿನ್ನದಲ್ಲದ ಬೇರೆಯವರ ಆಸ್ತಿ ಹಣದ ಬಗ್ಗೆ ಮೋಹಿತನಾಗಬೇಡ. ಅದು ವಿಷದಂತೆ ಪಸರಿಸಿ ಮನಸ್ಸನ್ನು ಕೊಲ್ಲುತ್ತದೆ “

” ದ್ವೇಷ ಅಸೂಯೆಗಳು ನಮ್ಮ ಶತ್ರುವಿಗಿಂತ ನಮ್ಮನ್ನು ಹೆಚ್ಚು ‌ಘಾಸಿಗೊಳಿಸುತ್ತವೆ “

” ಪ್ರೀತಿ ಕರುಣೆ ಕ್ಷಮಾಗುಣ ಎಷ್ಟು ಸಾಧ್ಯವೋ ಅಷ್ಟನ್ನೂ ಅಳವಡಿಸಿಕೋ “

” ಒಳ್ಳೆಯ ಕೆಲಸಗಳನ್ನು, ಇತರರಿಗೆ ಸಹಾಯವನ್ನು ನಿರಂತರವಾಗಿ ದೀರ್ಘಕಾಲ ಯಾವುದೇ ಒತ್ತಡವಿಲ್ಲದೆ ಮಾಡಬಹುದು. ಆದರೆ ಇತರರಿಗೆ ತೊಂದರೆ ಕೊಡುವ ಅವರನ್ನು ಅವಮಾನಿಸುವ ಕೆಲಸ ಹೆಚ್ಚು ಕಾಲ ಮಾಡಲು‌ ಸಾಧ್ಯವಿಲ್ಲ “

” ನಿನ್ನ ಬಳಿ ಇರುವ ಹಣ ಆಸ್ತಿ ಅಧಿಕಾರ ಯಾವ ಕ್ಷಣದಲ್ಲಿ ಬೇಕಾದರೂ ಇಲ್ಲವಾಗಬಹುದು ಆದರೆ ನಿನ್ನೊಳಗಿನ ಜ್ಞಾನವನ್ನು ಯಾರೂ ಎಂದಿಗೂ ಕದಿಯಲು ಸಾಧ್ಯವಿಲ್ಲ “

” ವಿವೇಚನೆ ಇಲ್ಲದ ಉಡಾಫೆಯ ಲೋಕನಿಂದನೆಗೆ ಎಂದೂ ಮನ ನೋಯಿಸಿಕೊಳ್ಳಬೇಡ. ಆತ್ಮಸಾಕ್ಷಿಯ ಕರೆಗೆ ಓಗೊಟ್ಟು ನಿನ್ನ ಕರ್ತವ್ಯ ನಿರ್ವಹಿಸು “

” ಜ್ಞಾನವೇ ನಿನ್ನೊಳಗಿನ ಶಕ್ತಿ. ಅದು ನಿನ್ನ ನಡವಳಿಕೆಯಾಗಿ ಹರಿಯತೊಡಗಿದಾಗ ನಿನ್ನ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ “

” ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ “

ಹೀಗೆ ನಾನಾ ಸಂದರ್ಭದಲ್ಲಿ ನನ್ನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅಪ್ಪ ಹೇಳುತ್ತಲೇ ಇದ್ದರು.

ಈಗ ಬದುಕಿನ ಇಳಿ ಸಂಜೆಯ ಹೊತ್ತಿನಲ್ಲಿ…….

ಆ ಗುಣಗಳ ದೌರ್ಬಲ್ಯವೋ,
ಅದರ ಆಚರಣೆಯ ಕೊರತೆಯೋ,
ಅದನ್ನು ಗ್ರಹಿಸುವಲ್ಲಿನ‌ ವಿಫಲತೆಯೋ,
ಸಮಾಜದ ಬದಲಾವಣೆಗಳನ್ನು ಗಮನಿಸದ ಪೆದ್ದುತನವೋ,
ಸನ್ನಿವೇಶಕ್ಕೆ ತಕ್ಕಂತೆ ರೂಪಾಂತರ ಹೊಂದುವಲ್ಲಿ‌ ಎಡವಿರುವುದೋ,
ಅದನ್ನು ಉಪಯೋಗಿಸಿಕೊಳ್ಳುವ ಅಸಾಮರ್ಥ್ಯವೋ,
ಮಿತಿ ಮೀರಿದ ಮಿತಿ ಅರಿಯದ ಮೂರ್ಖತನವೋ…..

ಒಟ್ಟಿನಲ್ಲಿ,
ಆ ಅಂಶಗಳೇ ಸೋಲಾಗಿ,
ನೋವಾಗಿ, ಸಾವಿನ ಬಾಗಿಲಿನ ಮುಂದೆ ತಂದು ನಿಲ್ಲಿಸಿವೆ………

ಸಾಮಾಜಿಕ ಮೌಲ್ಯಗಳೆಂಬ ನೈತಿಕ ಪ್ರಜ್ಞೆ ಕುಸಿಯ ತೊಡಗಿರುವ ಸಂದರ್ಭದಲ್ಲಿ,
ಹಣವೇ ಬದುಕಿನ ಮೌಲ್ಯಗಳನ್ನು ನಿರ್ಧರಿಸುವ ಮಾನದಂಡವಾಗಿರುವಾಗ, ವೈಯಕ್ತಿಕ ನಂಬಿಕೆಯ ಮೌಲ್ಯಗಳು ಅದರೊಡನೆ ಸಂಘರ್ಷ ನಡೆಸುತ್ತಿರುವ ಸಮಯದಲ್ಲಿ ದಾರಿ ಕಾಣದೆ ಗೊಂದಲಗೊಂಡಿರುವುದು ನಿಜ…….

ಭ್ರಮಾಲೋಕದ ಭಾವನೆಗಳ ‌ಬಂಧಿಯಾಗಿರುವ ವೇಗದ ಸಮಾಜದಲ್ಲಿ ವಾಸ್ತವ ಅರಿಯುವ ತಾಳ್ಮೆಯ ಗುಣ ಮರೆಯಾಗಿರುವಾಗ ಮೂಕ ರೋಧನೆಯಿಂದ ನರಳುತ್ತಿದ್ದರೂ….

ಅಪ್ಪ ಹಚ್ಚಿದ ಜ್ಞಾನದ ಬೆಳಕು ಈಗಲೂ ಮುನ್ನಡೆಯುವ ದಾರಿ ತೋರಿಸುತ್ತಿರುವುದು,
ಸತ್ಯಕ್ಕೆ ಸಾವಿಲ್ಲ,
ಪ್ರೀತಿ ಮಾನವೀಯತೆ ತಾಳ್ಮೆಗಿಂತ ಪ್ರಬಲ ಅಸ್ತ್ರಗಳಿಲ್ಲ ಎಂಬುದನ್ನು ಮತ್ತೆ ಮತ್ತೆ ದೃಢಪಡಿಸುತ್ತಿದೆ……

ಬತ್ತಿ ಹೋದ ಜೀವ ಸೆಲೆ
ಮತ್ತೆ ಚಿಮ್ಮುವ ನಿರೀಕ್ಷೆಯಲ್ಲಿ…
.
ಉತ್ತರವಿಲ್ಲದ ಪ್ರಶ್ನೆಗಳು ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತಿದೆ……

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!