November 21, 2024

Newsnap Kannada

The World at your finger tips!

arthavagadavanu 1

ಅರ್ಥವಾಗದವನು…

Spread the love
chandru
ಡಾ. ಜಿ.ಆರ್ ಚಂದ್ರಶೇಖರ್.

ರಣಬಿಸಿಲು ಚರ್ಮ ಸೀಳುವಷ್ಟು ತೀಕ್ಷ್ಣ. ಶತಮಾನಗಳಿಂದ ದಾಖಲಾಗದ ತಾಪಮಾನ ಇರುವುದಾಗಿ ನ್ಯೂಸ್ ಚಾನಲ್ ಬಿತ್ತರಿಸುವುದನ್ನು ನೋಡಿ ನೋಡಿ ಸಾಕೆನಿಸಿತು. ಗಡಿಯಾರ ನೋಡಿದಾಗ ಸಮಯ 12.30 ಆಗಿತ್ತು. ಸರಿ, ಈಗಾಗಲೇ ಸಮಯವಾಯಿತೆಂದು ಎದ್ದು ಹೊರಟೆ. ಹೊರಗೆ ಬಿಟ್ಟಿದ್ದ ನನ್ನ ಹವಾಯಿ ಚಪ್ಪಲಿಗಳು ಕಾದು ನಾಯಿಯ ನಾಲಗೆಯಂತೆ ತೆಳ್ಳಗಾಗಿದ್ದವು. ವಿಧಿಯಿಲ್ಲದೆ ಹಾಕಿ ಹೊರಟೆ. ನಾನು ಹೊರಡುವುದನ್ನೇ ಗಮನಿಸುತ್ತಾ ಕಣ್ಣಗೋಲಿಗಳನ್ನಾಡಿಸುತ್ತಾ ಇದ್ದ ಕೆಂಚ, ಬಚ್ಚಲ ಬಗ್ಗಡದಿಂದ ತೊಯ್ದುಹೋಗಿದ್ದ ಮೈಯನ್ನು ಪಟಪಟನೆ ಒದರಿ ಎದ್ದು ನಿಂತು ತಾನು ಬರುವುದಾಗಿ ಮುನ್ಸೂಚನೆ ಕೊಟ್ಟಿತ್ತು.ಅಷ್ಟೊತ್ತಿಗೆ ಹಿತ್ತಲ ಕಡೆಯಿಂದ ಅಮ್ಮನ ದನಿ ಕೇಳಿ ಬಂತು. `ಲೋ ಮಗ, ಬೇಗ ಹೋಗಪ್ಪ… ಅಣ್ಣತಮ್ಕೆ ಅಂದ ಮೇಲೆ ಬೇಗ ಹೋಗಿ ನಿಂತ್ಕಂಡು ನೋಡ್ ಬೇಕು ಕಣಪ್ಪಾ.. ಅದ್ ಬಿಟ್ಟು ಪರ ಊರಿನ್ ನೆಂಟನಂಗೆ ಒಪ್ಪ ಮಾಡೋ ಒತ್ಗೆ ವೋದಿಯೇನ್ಲಾ.. ಬೇಗ ಹೋಗಪ್ಪ..ನಾನ್ ನೀರೊಲೆಗೆ ಒಸಿ ಉರಿಯಾಕ್ಬುಟ್ಟು ಬತ್ತೀನಿ’.ಅದಕ್ಕೆ ನಾನು, `ಸರಿ ಇರವ್ವೋ ಅಲ್ಗೇ ಹೋಯ್ತಾ ಇವ್ನೀ ಕನಾ’ ಅಂದು ದಡ ಬಡ ಹೆಜ್ಜೆ ಹಾಕಿದೆ. ಬಿಸಿಲಿನ ಝಳಕ್ಕೆ ಮೊದಲೇ ಮೆತ್ತಗಾಗಿದ್ದ ಚಪ್ಪಲಿ, ರಸ್ತೆಗೆ ಯಾವಾಗಲೋ ಹಾಕಿದ್ದ ಚೂಪು ಜಲ್ಲಿ ಕಲ್ಲು ಚುಚ್ಚುತ್ತಿದ್ದವು. ನಮ್ಮೂರಿನ ಕಚ್ಚಾ ರಸ್ತೆಗೆ ಟಾರು ಹಾಕಲು ಪಂಚಾಯಿತಿಯಿಂದ ಗ್ರ್ಯಾಂಟು ಬಂದು ವರ್ಷ ಕಳೆದಿದ್ರು ಜಲ್ಲಿ ಹಾಕಿ ಇಷ್ಟು ದಿನ ಆದ್ರು.. ಅದಕ್ಕೇ ಟಾರಿನ ಭಾಗ್ಯ ಬಂದಿಲ್ಲ. ಊರಿನಲ್ಲಿ ವಿಚಾರವಂತ್ರು ಅನ್ನಿಸ್ಕೊಂಡು ಓಡಾಡಿಕೊಂಡಿದ್ದ ಕೆಲವರು ಈ ಬಗ್ಗೆ ಪಂಚಾಯಿತಿಯೋರ್ನ ಕೇಳುದ್ರೇ… ಅವ್ರು ಅದಕ್ಕೆ, `ಮೆಂಬರ್ನ ಕೇಳಿ’ ಅಂತ, ಮೆಂಬರ್ನ ಕೇಳುದ್ರೆ `ಸೆಕ್ರೆಟ್ರಿ ಕೇಳಿ’ ಅಂತಾ ಒಬ್ಬರಿಗೊಬ್ಬರು ಸಬೂಬು ಹೇಳುತ್ತಾ.. ಇವರು ಈ ಬಗ್ಗೆ ವಿಚಾರಿಸಲು ಪಂಚಾಯಿತಿ ಆಫೀಸಿಗೆ ಹೋದಾಗ, ಪಂಚಾಯಿತಿ ಅಧಿಕಾರಿಗಳು ಪಾಪಣ್ಣನ ಹೋಟ್ಲಿಂದ ನಾಲ್ಕು ಟೀ, ಬಜ್ಜಿ ಹೇಳಿದ ತಕ್ಷಣ, ಹೋಗಿದ್ದ ವಿಚಾರವಂತ್ರು `ನೀವು ತಾನೆ ಏನ್ ಮಾಡೋಕಾಗತ್ತೆ ಬುಡ್ರಣ್ಣ, ಒಟ್ನಲ್ಲಿ ಗೋರ್ಮೆಂಟೋರ್ಗೆ ಬುದ್ದಿ ಇಲ್ಲ.. ಅಲ್ಲಾ.. ನಮ್ಮೂರ್ಗೆ ಯಾಕಪ್ಪಾ ತಾರ್ ರೋಡು ಅಂತಿನೀ.. ಇಷ್ಟು ವರ್ಷ ನಾವೆಲ್ಲ ಅದೆಲ್ಲ ಇಲ್ದೆ ಇರಲಿಲ್ವೇ’ ಅಂತಾ!… ಎಂದು ಹೇಳಿ ತಾವು ಹೋಗಿದ್ದ ಉದ್ದೇಶಾನೆ ಮರೆತು ಬರುತ್ತಿದ್ದರು.

       ತಲುಪಬೇಕಿದ್ದ ಸ್ಥಳ ಸಮೀಪವಾಗುತ್ತಿದ್ದಂತೆ, ಅಲ್ಲಿದ್ದವರ ಮಾತುಗಳು ಕಿವಿಗೆ ತಾಕುತ್ತಿದ್ದವು. `ಅಲ್ಲಾ ಕಲಾ, ಇವ್ನಿಗೆ ಅಂತಾದ್ದು ಏನ್ಲಾ ಆಗಿತ್ತು.. ಅವನು ಅನ್ಕಂಡಂಗೇ ಆವೆಣ್ಣನ್ನೇ ಮದ್ವೇ ಆದ ವರ್ಷ ತುಂಬೋದ್ರಾಗೆ ಮಗಾನೂ ಆಗಿತ್ತು.. ಮತ್ಯಾಕೆ ಮೊಲ್ಲಾಗರ ಬಂದಂಗೇ ಹಿಂಗ್ ಮಾಡ್ಕಂಡ’ ಎಂದು ಬಯ್ದುಕೊಂಡು ಸೀನ ಒಣಗಿದ ಕೊಂಟನ್ನು ಅಲುಗಾಡದಂತೆ ಜೋಡಿಸುತ್ತಾ ಇದ್ದ. ಅದಕ್ಕೆ ಪ್ರತಿಯಾಗಿ ಮಹೇಶ, `ನಾನ್ ಹೇಳ್ದೇ ಕಲಾ ಆವತ್ತೇ, ದೊಡ್ಮನೆ ಹೆಣೈಕಳ ಸವಾಸ ಬೇಡ ಕಣ್ಲಾ ನಮ್ಮಂತೋರ್ಗೆ ಅಲ್ಲಾ ಅಂತ… ಗಿಣಿಗೆ ಹೇಳ್ದಂಗೆ ಹೇಳ್ದೆ ಬಡ್ಡೀಮಗಂಗೆ, ಕೇಳಬೇಕಲ್ಲ ನನ್ ಮಾತ.. ಆಗ ಸುಮಾನ ತೇಲಿಸ್ತಿತು, ಅದ್ಕೆ ನಾವು ಹೇಳುತಿದ್ದದ್ದು ಏನೂ ಕಿವಿಗೆ ಹೋಗ್ತಿರ್ನಿಲ್ಲ… ಈಗ ಏನ್ ಆಯ್ತು ನೋಡು…’ ಎನ್ನುತ್ತಾ, ಇದೇ ಗೆಳೆಯರ ಗುಂಪಿನ ಶಂಕ್ರನಿಗೆ, `ಲೋ, ಸಕ್ರೆನುವೇ ಡಾಲ್ಡನುವೇ ಮರ್ತು ಬಂದುಬಿಟ್ಟಾರು, ಒಸಿ ನೀನೆ ಹೋಗಿ ನೆಪ್ಪು ಮಾಡಿಕಂಡು ಹಿಡ್ಕಂಡು ಬಾ ಹೋಗ್ಲಾ..ಅಷ್ಟರಲ್ಲಿ ಉಳಿಕೆ ಸೌದೆನೆಲ್ಲಾ ಜೋಡಿಸಿರ್ತೀವಿ’ ಎಂದು ಹೇಳಿದ.ಸಾಮಾನ್ಯವಾಗಿ ಇಂತಹ ಕಾರ್ಯಗಳಲ್ಲಿ ಭಾಗವಹಿಸದಿದ್ದ ನನಗೆ ಏನು ಮಾಡಬೇಕೆಂದು ತೋಚದೆ, ಅಲ್ಲೇ ಇದ್ದ ಹುಣಸೇ ಮರದ ಬೊಡ್ಡೆಯ ಮೇಲೆ ಕುಳಿತು ಅವರ ನಡುವಿನ ಮಾತುಕತೆಗೆ ಕೇವಲ ಕಿವಿ ಮಾತ್ರ ತೆರೆದು ಕುಳಿತೆ. ಅಲ್ಲೇ ಅಡ್ಡಾಡುತ್ತಿದ್ದ ಕೆಂಚ ಉದುರಿ ಬಿದ್ದಿದ್ದ ಎಲೆಗಳನ್ನೆಲ್ಲಾ ಮೂಸಿ ಮೂಸಿ ನೋಡಿ ನೆಲವನ್ನು ಕಾಲಿನಿಂದ ಪರಪರ ಕೆರೆಯುತ್ತಿತ್ತು. ನಂತರ ಇವರು ಜೋಡಿಸುತ್ತಿದ್ದ ಸೌದೆಗಳ ಬಳಿ ಹೋಗಿ ಅದರ ಮೇಲೆ ಒಂದು ಕಾಲನ್ನೆತ್ತಿ ಮೂತ್ರ ಹೊಯ್ದು.. ನಾನು ಕುಳಿತಲ್ಲಿನಿಂದ ಮಾರು ದೂರದಲ್ಲಿ ಕಾಲನ್ನು ಅಂಗಾತ ಮಾಡಿ ಅದರಷ್ಟಕ್ಕೇ ಅದೇ ಆಡುತಿತ್ತು.

       ಅಷ್ಟೊತ್ತಿಗೆ ಊರೊಳಗಿನಿಂದ ಡಣಕ್ಕಣಕ್ಕ ಡಣಕ್ಕಣಕ್ಕ ಡಣಕ್ಕಣಕ್ಕ ಜಾಗಟೆ ಹಾಗೂ ತಮಟೆಯ ಸದ್ದು ಕೇಳತೊಡಗಿತ್ತು. ಅದನ್ನು ಕೇಳಿಸಿಕೊಂಡ ಸೀನ `ಲೋ ಮಯೇಸ, ಈ ಸಂಕ್ರ ಎಲ್ಲೋದುನ್ಲಾ..ಸಕ್ರೆ ತರಾಕೆ ಈ ಬಡ್ಡಿ ಹೈದ ಮಂಡ್ಯಾ ಸಕ್ರೆಪ್ಯಾಕ್ಟ್ರಿಗೆ ಹೋದ್ನಾ ಹೆಂಗೇ ಅಂತಾ.ಹೆಣ ಎತ್ತುದ್ರು ಅನ್ನಿಸ್ತದೇ ಆದ್ರೂ ಇನ್ನೂ ಬರ್ನಿಲ್ವಲ್ಲಾ ಇವ್ನು ಈಗ ಏನ್ಲಾ ಮಾಡಾದು?’ಎಂದು ಮಹೇಶನನ್ನು ಕೇಳಿದ. ಅದಕ್ಕೆ ಮಹೇಶ, `ಲೋ ಈ ಉರಿ ಬಿಸ್ಲುಗೇ ಬೆಂಕಿ ಹಚ್ಕದೇನೇ ಬೆಂದೋಯ್ತಾವಿ, ಇನ್ನ ಇಷ್ಟು ಒಣಗಿರೋ ಸೌದೆ ಬೆಂಕಿಸೋಕಿಸಿದ್ದ ಕೂಡ್ಲೇ ಅತ್ಕಂಡು ಉರಿದೇ ಇರ್ತದಾ.. ಏನಿಲ್ಲ ಕನಾ, ಸುಮ್ಕಿರು.. ಯಾವ ಡಾಲ್ಡನೂ ಬೇಡಾ ಸಕ್ರೆನೂ ಬೇಡಾ.. ತಿಥಿ ದಿನ ಅಸ್ಥಿ ಬಿಡಕೆ ಮೂಳೆನೂ ಸಿಗೋದಿಲ್ಲ ನೋಡು ಬೇಕಾದ್ರೆ, ಇಷ್ಟು ಉರಿಬಿಸ್ಲುಗೆ ಬೆಂಕಿ ಸೋಕುಸುದ್ರೆ ಸಾಕು… ಎಲ್ಲ ಬಸ್ಮಾ ಆಗೋಯ್ತುದೆ.ಆ ಕೊಂಟು ಕೊಡು ಇತ್ಲಾಗೆ’ ಎಂದು ಹೇಳಿ ಒಣಗಿದ ಕಟ್ಟಿಗೆಗಳನ್ನು ಜೋಡಿಸಲು ಮಗ್ನನಾಗಿದ್ದ.

       ನಾನು ರಾಜೇಶ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಕ್ಕೆ ಕಾರಣಗಳಾದರೂ ಏನಿರಬಹುದೆಂದು ಆಲೋಚಿಸತೊಡಗಿದ್ದೆ. ತೀರ ಬಡತನದಲ್ಲೂ ಒಳ್ಳೆಯ ಬದುಕನ್ನು ಕಟ್ಟಿಕೊಂಡಿದ್ದ. ಬಡತನದಲ್ಲೂ ಬಿ.ಎ ಮಾಡಿಕೊಂಡು, ಇದ್ದ ಒಂದು ಎಕರೆ ಜಮೀನಿನಲ್ಲಿ ಕಬ್ಬು ಬೆಳೆದು ತನ್ನ ಅಕ್ಕ ಪದ್ಮಳನ್ನು ಪಕ್ಕದೂರಿನ ರೈತನಿಗೆ ಮದುವೆ ಮಾಡಿಕೊಟ್ಟಿದ್ದ. ತಂದೆ ತಾಯಿಯನ್ನು ತುಂಬಾ ಗೌರವದಿಂದ ಕಾಣುತ್ತಿದ್ದ. ಇಂತಹ ರಾಜೇಶ ಊರಿನ ದೊಡ್ಡ ಗೌಡರ ಮೊಮ್ಮಗಳನ್ನು ಪ್ರೀತಿಸಿ, ಮದುವೆಯಾದ ಸುದ್ದಿ ಕೇಳಿ ನನಗೂ ಕೊಂಚ ದಿಗಿಲಾಗಿತ್ತು. ಏನೇ ಸಮಸ್ಯೆ ಬಂದರೂ ಹೆದರದೆ ಮುನ್ನುಗ್ಗುತ್ತಿದ್ದ ಅವನು ಊರಿನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ್ದ.ಇವನು ಪ್ರೀತಿಯ ಸುಳಿಗೆ ಸಿಲುಕಿದ್ದಾದರೂ ಹೇಗೆ? ಪ್ರೀತಿಯ ಸೆಳೆತಕ್ಕೆ ಸಿಕ್ಕವರಿಗೆ ಹಟ್ಟಿ- ಮಹಲುಗಳ ಅಂತರ ಕಾಣದು ನಿಜ. ಜಾತಿ ಮತ, ಅಂತಸ್ತುಗಳೆಂಬ ಗಡಿಗಳನ್ನು ಮೀರಿ ಗೆಳೆತನ ಮಾಡುವ , ಸಮಾಜ ಒಪ್ಪಿದರೆ ಒಪ್ಪಲಿ ಬಿಟ್ಟರೆ ಬಿಡಲಿ, ಒಲಿದ ಜೀವದ ಜೊತೆ ಬದುಕು ಕಟ್ಟಿಕೊಳ್ಳುವ ಛಲ ನಂಬಿಕೆ ಇರುತ್ತದೆ. ಆದರೆ, ಇವುಗಳನ್ನು ಮೆಟ್ಟಿ ನಿಂತು ಮದುವೆಯಾದವನಿಗೆ ಎಲ್ಲರೆದುರು ಸೈ ಎನಿಸಿಕೊಂಡು ಬದುಕಲು ಯಾಕೆ ಆಗಲಿಲ್ಲ? ಅವನ ಎಣಿಕೆ ತಪ್ಪಿದ್ದಾದರೂ ಎಲ್ಲಿ? ಪ್ರೀತಿಸಿ ಕೈ ಹಿಡಿದವಳು ಇವನ ಭಾವನೆಗಳನ್ನು ಅರ್ಥಮಾಡಿಕೊಂಡು, ಸುಖದಲ್ಲಿ ಹೇಗೋ ಕಷ್ಟದಲ್ಲೂ ಹಾಗೆಯೇ ನಿನ್ನೊಡನೆ ಯಾವಾಗಲೂ ಇರುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಲಿಲ್ಲವೇ? ಎಲ್ಲವನ್ನು ಯೋಚಿಸಿ ಯೋಚಿಸಿ ಮನಸ್ಸು ಕದಡಿದ ರಾಡಿಯಂತಾಯಿತು.

       ಅಷ್ಟರಲ್ಲಿ ತಮಟೆ ಶಬ್ದ ಸಮೀಪವಾಯಿತು. ಶಂಕ್ರ ಏದುಸಿರು ಬಿಡುತ್ತಾ  ಓಡೋಡಿ ಬಂದದ್ದನ್ನು ನೋಡಿದ ಸೀನ, `ಬಡ್ಡಿಹೈದ್ನೆ, ಕೊನೇಗೂ ಬಂದೇನ್ಲಾ… ಕೊಡು ಇಲ್ಲಿ ಬೇಗ’ ಎಂದವನೇ ಅವನು ಕೊಡುವುದಕ್ಕೂ ಮೊದಲೇ ಸಕ್ಕರೆ ಮತ್ತು ಡಾಲ್ಡಾವನ್ನು ಕಿತ್ತುಕೊಂಡು ಜೋಡಿಸಿದ್ದ ಸೌದೆಗಳ ಮೇಲೆ ಸುರಿಯಲು ತೊಡಗಿದ. ಹಾಗೇ ಸುರಿಯುತ್ತಾ ಸುರಿಯುತ್ತಾ ಇದ್ದವನು ಇದ್ದಕ್ಕಿದ್ದಂತೆ ದುಃಖ ಉಮ್ಮಳಿಸಿ ಬಂದು ಎದೆ ಬಡಿದುಕೊಂಡು ಅಳಲು ಶುರುಮಾಡಿದ. `ಲೋ ಬಡ್ಡಿ ಹೈದ್ನೆ, ಮನೇಲಿ ಹಿಟ್ಟಿಲ್ದೆ ಅಪ್ಪ ಅವ್ವ ಹಸಿದವ್ರೆ ಅನ್ನೋದನ್ನ ಹೇಳ್ತಿದ್ದೆ.. ಆ ಹೆಣೈದ್ಲು ನನ್ನ ನೋಡಿ ನಗಿಸ್ತಾಳೆ, ಅವ್ಳು ಹೂ ಕೊಟ್ಲು, ಅವಳ ಮನೆಲಿ ಗಂಡು ನೋಡ್ತಾವ್ರಂತೆ, ಹೆಂಗಾದ್ರು ಮಾಡಿ ಮದ್ವೆ ಆಗ್ಬೇಕು ಕನ್ರುಲಾ, ನೀವ್ ಸಹಾಯಮಾಡ್ತೀರಾ ಅಂತ ಕೇಳ್ತಿದ್ದೆ ಅಂತಾವ್ನು ಸಾಯೋ ಯೋಚ್ನೆ ಮಾಡ್ದೋನಿಗೆ ಹೇಳ್ಕೋ ಬೇಕು ಅಂತ ಯಾಕ್ಲಾ ಅನ್ನಿಸ್ಲಿಲ್ಲಾ…’ ಎಂದು ಜೋರಾಗಿ ಅಳುತ್ತಲೇ ಇದ್ದವನನ್ನು ಮಹೇಶ ಮತ್ತು ಶಂಕ್ರ ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದರು. ಅಲ್ಲಿಯವರೆಗೂ ಸತ್ತ ಸ್ನೇಹಿತನ ಬಗ್ಗೆ ನಿರ್ಭಾವುಕರಾಗಿದ್ದವರು ಏಕಾಏಕಿ ಭಾವೋದ್ವೇಗಕ್ಕೆ ಒಳಗಾಗಿದ್ದು ನೋಡಿ ನನ್ನ ಕಣ್ಣುಗಳೂ ಆಧ್ರ್ರವಾದವು. ಚಿಕ್ಕಂದಿನಿಂದಲೂ ಒಂದೇ ಓರಗೆಯವರಾಗಿದ್ದು ಆಟ ಪಾಠಗಳಲ್ಲಿ, ನೋವು ನಲಿವುಗಳಲ್ಲಿ ಜೊತೆಯಾಗಿದ್ದ ಒಂದು ಜೀವ ಇನ್ನಿಲ್ಲ ಎಂದಾಗ.. ಅಬ್ಬಾ! ಈ ಸಂಕಟ ಯಾವ ಶತ್ರುವಿಗೂ ಬೇಡ.

       ಡಣಕ್ಕಣಕ್ಕ ಡಣಕ್ಕಣಕ್ಕ ಡಣಕ್ಕಣಕ್ಕ ತಮಟೆಯ ಸದ್ದಿನೊಂದಿಗೆ ರಾಜೇಶನ ಶವವನ್ನು ಹೊತ್ತ ಚಟ್ಟದೊಂದಿಗೆ ಜನರು ಸಾಲುಗಟ್ಟಿ ಬರುತ್ತಿದ್ದರು. ಬಿದಿರಿನಿಂದ ಕಟ್ಟಿದ್ದ ಚಟ್ಟಕ್ಕೆ ಮಲ್ಲಿಗೆ, ಕಾಕಡ, ಕನಕಾಂಬರ ಹೂಗಳ ಮಾಲೆಯನ್ನು ಸುತ್ತಲೂ ಇಳಿಬಿಟ್ಟಿದ್ದರು. ನಾಲ್ಕು ಮೂಲೆಗಳಲ್ಲೂ ಚೆಂಡುಹೂವಿನ ದಪ್ಪ ದಪ್ಪ ಮಾಲೆಗಳು ಹಾಗೂ ನಡುವೆ ಅಲ್ಲಲ್ಲಿ ಸೇವಂತಿಗೆ ಹೂಗಳಿಂದ ಅಲಂಕರಿಸಿದ್ದರು. ಜೊತೆಗೆ ಹೊತ್ತಿದ್ದ ಚಟ್ಟದ ನಾಲ್ಕು ಮೂಲೆಯಲ್ಲೂ ಎರಡೆರಡು ದಪ್ಪ ಎಳನೀರನ್ನು ನೇತಾಕಿದ್ದರು. ಹೊರುತ್ತಿದ್ದವರು ಆ ಭಾರ ಸಹಿಸಲಾರದೆ ಆಗಾಗ್ಗೆ, ಮತ್ತೊಬ್ಬರ ಭುಜಕ್ಕೆ ವರ್ಗಾಯಿಸುತ್ತಾ ಸುಧಾರಿಸಿಕೊಳ್ಳುತ್ತಿದ್ದರು. ರಾಜೇಶನ ಶವವನ್ನು ಅಲುಗಾಡದಂತೆ ಬಿಳಿಯ ಬಟ್ಟೆಯಿಂದ ಬಿಗಿದು ಕಟ್ಟಿದ್ದು, ಹಣೆಗೆ ಹಚ್ಚಿದ್ದ ವಿಭೂತಿ, ಕುಂಕುಮ, ಬಾಯಿಗೆ ತುಂಬಿದ್ದ ಕುಟ್ಟಿ ಪುಡಿ ಮಾಡಿದ್ದ ಎಲೆಅಡಿಕೆ, ಹಣೆಗೆ ಅಂಟಿಸಿದ್ದ ರೂಪಾಯಿ ನಾಣ್ಯ… ಅರೆ ಬಿರಿದ ಕಣ್ಣುಗಳು.. ಒಂದು ವೇಳೆ ರಾಜೇಶನ ಆತ್ಮ ಏನಾದರೂ ನೋಡಿದರೆ, ಖಂಡಿತ ಅದು ತಾನೇ ಎಂದು ಗುರುತಿಸಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಬದಲಾಗಿತ್ತು ಅವನ ರೂಪ. ಸಾಲಂಕೃತ ಚಟ್ಟದ ಹಿಂದೆ, ಕಡುಗೆಂಪು ಬಣ್ಣದ ಹಸಿರು ಅಂಚಿನ ಸೀರೆ ಸುತ್ತಿ, ಹಣೆಯ ತುಂಬಾ ಕುಂಕುಮ ಅರಿಶಿನ ಅಕ್ಷತೆಗಳಿಂದ ತುಂಬಿಕೊಂಡು ಮುಡಿಯ ತುಂಬಾ ಮಲ್ಲಿಗೆ ಕನಕಾಂಬರ ಹೂರಾಶಿ, ಕೈ ತುಂಬಾ ಬಳೆಗಳನ್ನು ತೊಡಿಸಿದ್ದ ದೀಪ ತಟ್ಟೆಯೊಂದರಲ್ಲಿ ಕಲಶವೊಂದನ್ನು ಹಿಡಿದುಕೊಂಡು ಬರುತ್ತಿರುವುದು ಕಾಣಿಸಿತು. ನಾನು ದೀಪಾಳನ್ನು ಸೂಕ್ಷ್ಮವಾಗಿ ದಿಟ್ಟಿಸಿದೆ. ಯಾವುದೇ ಭಾವವಿಲ್ಲದ ಕೊರಡಿನಂತಿದ್ದ ಅವಳ ಮುಖದಲ್ಲಿ ಒಂದು ಹನಿಯೂ ನೀರಿರಲಿಲ್ಲ. ಸುತ್ತಲ ಪರಿಸರದಲ್ಲಿನ ಆಗು ಹೋಗುಗಳ ಅರಿವಿಲ್ಲದೆ ಶೂನ್ಯದತ್ತ ದಿಟ್ಟಿಸುತ್ತಿದ್ದ ಅವಳ ಕಣ್ಣುಗಳಲ್ಲಿ ದುಃಖ ಮಡುಗಟ್ಟಿತ್ತು.ಅವಳು ಎಲ್ಲರನ್ನು ಧಿಕ್ಕರಿಸಿ ಇವನನ್ನೇ ನಂಬಿ ಬಂದವಳು, ಈ ಘಟನೆಯ ಆಘಾತದಿಂದ ಹೊರಬರುವುದು ಕಷ್ಟ.ಮೂರ್ನಾಲ್ಕು ಮಂದಿ ಹೆಂಗಸರು ಅವಳ ಭುಜ ಹಿಡಿದು ಕರೆದುಕೊಂಡು ಬರುತ್ತಿದ್ದರು.ಬಹುಷಃ ಅವರು ದೀಪಾಳ ಸಮೀಪದ ನೆಂಟರು ಇರಬಹುದು. ಆಗಾಗ್ಗೆ ದೀಪಾಳ ಮುಖ ನೋಡುತ್ತಾ `ಅಯ್ಯೋ.. ಅಯ್ಯಯೋ.. ಉಷ್.. ಉಷ್.. ‘ಎಂದು ಉಸಿರು ಬಿಡುತ್ತಾ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತಾ, ಬಿಸಿಲಿನ ತೀಕ್ಷ್ಣತೆ ತಾಳಲಾರದೆ ಸೀರೆಯ ಸೆರಗನ್ನು ತಲೆ ತುಂಬಾ ಎಳೆದುಕೊಳ್ಳುತ್ತಾ ಬರುತ್ತಿದ್ದರು.ಹಿಂದೆ ಬರುತ್ತಿದ್ದ ಅವಳ ತಾಯಿ ಹಾಗೂ ಸಂಬಂಧಿಕರ ಮುಖದಲ್ಲಿ ರಾಜೇಶ ಸತ್ತ ದುಃಖಕ್ಕಿಂತ ಮಗಳಿಗೆ ಹೀಗೆ ಅನ್ಯಾಯ ಮಾಡಿ ಹೋದ ಪಾಪಿ ಎಂಬ ಆಕ್ರೋಶ ಕಾಣುತ್ತಿತ್ತು. ಅವಳ ತಾಯಿಯಂತೂ, `ನನ್ನ ಮಗಳ ಬಾಯಿಗೆ ಮಣ್ಣಾಕಿ ಹೋಗ್ಬಿಟ್ಟಲ್ಲೊ ಪಾಪಿ ನನ್ಮಗನೇ.. ಈ ಮುಂಡೇಗೆ ಹೇಳ್ದೆ, ಬೇಡ ಬೇಡ ಅವನ ಸಹವಾಸ ಅಂತ.. ಅವನು ಈಗ ಸರಿಯಾಗಿ ಮಾಡಿಬಿಟ್ಟು ಹೋದ.. ಸಾಯೋವಾಗ ಆ ಮಗೀನ ಮೊಕ ನೆನಪಾಗಲಿಲ್ಲವೇನೋ ಪಾಪಿ ಮುಂಡೇಮಗ್ನೇ ನಿನಗೇ…’ ಎಂದು ಗೋಳಾಡುತ್ತಿದ್ದರು.

       ರಾಜೇಶನ ಆರು ತಿಂಗಳ ಮಗುವನ್ನು ಸಂಬಂಧಿಕರೊಬ್ಬರು ಎತ್ತಿಕೊಂಡಿದ್ದರು.ಆ ಮಗು ಸುತ್ತಲ ಗದ್ದಲಕ್ಕೋ ತಾಯಿ ಬೆಳಗಿನಿಂದ ತನ್ನನ್ನು ಎತ್ತಿಕೊಂಡಿಲ್ಲ ಎಂಬುದಕ್ಕೋ, ಹಸಿವಿನಿಂದಲೋ ಕಿರುಚಿ ಅತ್ತೂ ಅತ್ತೂ ನಿತ್ರಾಣವಾಗಿತ್ತು.ದೀಪ ಸುತ್ತಲ ಆಗು ಹೋಗುಗಳ ಪರಿವೇ ಇಲ್ಲದಂತೆ, ಶೂನ್ಯದತ್ತ ದೃಷ್ಟಿ ಹರಿಸಿ ಕುಳಿತಿದ್ದಳು. ರಾಜೇಶನ ಶವವನ್ನು ಚಟ್ಟದಿಂದ ಇಳಿಸಿ, ಚಿತೆಯ ಮೇಲೆ ಮಲಗಿಸಲಾಯಿತು.ಆಗ ದೂರದಲ್ಲಿ ಸ್ವಲ್ಪ ಗಲಾಟೆ ಕೇಳಿಸಿತು. ಆ ಕಡೆ ನಡೆದೆ. ಹುಡುಗಿಯ ಸೋದರಮಾವ ಹೆಣಕ್ಕೆ ಯಾವುದೇ ಕಾರಣಕ್ಕೆ ಬೆಂಕಿ ಇಡಲು ಬಿಡುವುದಿಲ್ಲವೆಂದು ತಕರಾರು ಮಾಡುತ್ತಿದ್ದ. `ಹುಡುಗಿಯನ್ನು ಹೀಗೆ ನಂಬಿಸಿ ಕುತ್ತಿಗೆ ಕುಯ್ದು ಹೋಗವ್ನೆ ಅವಳ ಜೀವನಕ್ಕೆ ಆಧಾರ ಏನು? ಇದು ತೀರ್ಮಾನವಾಗದ ಹೊರತು ಚಿತೆಗೆ ಬೆಂಕಿ ಹಾಕಲು ಬಿಡೋಲ್ಲ’ ಎಂದು ಜೋರು ದನಿಯಲ್ಲಿ ಕೂಗಾಡುತ್ತಿದ್ದರು. ನನಗೆ ಇದು ತುಂಬಾ ರೇಜಿಗೆ ಎನಿಸಿತು. ಈ ಪರಿಸ್ಥಿತಿಯಲ್ಲಿ ನ್ಯಾಯ ಪಂಚಾಯತಿ ಮಾಡುವುದು ಸರಿಯೇ!…ಅಂತೂ ಹಿರಿಯರು ಅನ್ನಿಸಿಕೊಂಡವರ ಮಧ್ಯಸ್ಥಿಕೆಯಲ್ಲಿ, ರಾಜೇಶನ ಹೆಸರಿನಲ್ಲಿ ಇದ್ದ ಒಂದು ಎಕರೆ ಜಮೀನನ್ನು ಮಗುವಿನ ಹೆಸರಿಗೆ ಮಾಡಲು ತೀರ್ಮಾನವಾದ ಮೇಲಷ್ಟೇ ಚಿತೆಗೆ ಬೆಂಕಿ ಸೋಕಿಸಲು ಅನುಮತಿ ಸಿಕ್ಕಿದ್ದು. ರಾಜೇಶನ ತಾಯಿಯ ಗೋಳಂತೂ ಮುಗಿಲು ಮುಟ್ಟಿತ್ತು. ಪಾಪ ಆ ತಾಯಿ, ಬೆಳೆದ ಮಗನನ್ನು ಕಳೆದುಕೊಂಡು `ಹೇಗಪ್ಪಾ ಬದುಕಲೀ.. ರಾಜ, ನೀನು ಹಿಂಗೆ ಮಾಡಿಕೊಳ್ಳುವಾಗ ನನ್ನ ನೆಪ್ಪಾದರೂ ಬರಲಿಲ್ಲವೇನಪ್ಪಾ… ನನ್ ಮಗನಿಗೆ ಬೆಂಕಿ ಇಡಬೇಡ್ರಪ್ಪೋ’ ಎಂದು ಅಂಗಲಾಚುತಿದ್ದರು. ಅವರ ಕಾಲಿಗೆ ಮುಳ್ಳೊ ಕಲ್ಲೋ ತಗುಲಿ ಗೀರಿಕೊಂಡು ರಕ್ತ ಸುರಿಯುತ್ತಿತ್ತು. ಪಾಪ ಆ ತಾಯಿಗೆ ಅದರ ಪರಿವೇ ಇಲ್ಲದೆ ತನ್ನ ಮಗನನ್ನು ಆಗ ತಾನೇ ಹೆತ್ತ ಮಗುವನ್ನು ತಾಯಿಯೊಬ್ಬಳು ಮುತ್ತಿಟ್ಟು ಮುದ್ದಾಡುವಂತೆ ಮುದ್ದಿಸುತ್ತಿದ್ದರು. ಮಗನ ಮುಖವನ್ನು ಎರಡೂ ಕೈಗಳಿಂದ ನೀವಳಿಸಿ ದೃಷ್ಟಿ ನೆಟಿಕೆ ತೆಗೆಯುತ್ತಿದ್ದರು.ಇದನ್ನು ನೋಡಿ ರಾಜೇಶನ ಅಕ್ಕ ಜೋರುದನಿಯಲ್ಲಿ ಅಳುತ್ತಾ ತಮ್ಮ ಎರಡೂ ಕೈಗಳಿಂದ ತಲೆ ಚೆಚ್ಚಿಕೊಳ್ಳುತ್ತಾ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಳು.

       ಬಿಸಿಲಿನ ತೀಕ್ಷ್ಣತೆ ಜೊತೆಗೆ ಸೆಕೆಯೂ ಹೇಳತೀರದಂತಿತ್ತು. ಸಂಜೆ ವೇಳೆಗೆ ಚಿತೆಗೆ ಬೆಂಕಿ ಸೋಕಿಸಲಾಯಿತು. ಬಿಸಿಲಿನ ಝಳಕ್ಕೆ ಚಟಪಟ ಸದ್ದು ಮಾಡುತ್ತಾ ಒಮ್ಮೆಲೆ ಬೆಂಕಿ ಧಗಧಗಿಸಲು ಪ್ರಾರಂಭಿಸಿತು. ತಕ್ಷಣ ಒಂದು ಕೋಳಿ ಪಿಳ್ಳೆಯನ್ನು ಚಿತೆಯ ಒಂದು ಕಡೆ ನಿಂತು ಇನ್ನೊಂದು ಕಡೆಗೆ ಎಸೆದರು. ಹೀಗೆ ಕೋಳಿಪಿಳ್ಳೆಯನ್ನು ಎಸೆಯುವುದು ನಮ್ಮೂರಿನ ವಾಡಿಕೆ.ಚಿತೆಗೆ ಬೆಂಕಿ ಸೋಕಿಸಿದ ಕೂಡಲೇ ಒಮ್ಮೆಲೆ ಎಲ್ಲರ ಚೀತ್ಕಾರ.. ಅಳು.. ಮುಗಿಲು ಮುಟ್ಟಿತು. ಅಲ್ಲೇ ಒದ್ದೆ ನೆಲದಲ್ಲಿ ತಲೆಯಾನಿಸಿ ಮಲಗಿದ್ದ ಕೆಂಚ ಗಾಬರಿಯಿಂದ ಎದ್ದು ಜನರತ್ತ ತಿರುಗಿ ಬೌ ಬೌ ಬೊಗಳುತ್ತಾ ಓಡತೊಡಗಿತು.

       ಎಲ್ಲರೂ ಕಾಲುವೆಯ ಹಾದಿಯಲ್ಲಿ ನೀರಿಗೆ ಕೈ ತಾಕಿಸಿ, ತಲೆಗೆ ನೀರು ಚಿಮುಕಿಸಿಕೊಂಡು ವಾಪಸು ಇದೇ ಸುದ್ದಿಯನ್ನು ಅವರವರ ಭಾವಕ್ಕೆ ಬಣ್ಣ ಸೇರಿಸುತ್ತಾ ಗುಸುಗುಸು ಪಿಸುಪಿಸು ಮಾತನಾಡುತ್ತಾ ಹೊರಟರು. ನಾನು ತಲೆಗೆ ನೀರು ಚಿಮುಕಿಸಿಕೊಂಡು, ಮುಖ ಹಾಗೂ ಕೈಕಾಲಿಗೆ ನೀರುಹಾಕಿದೆ. ಒಮ್ಮೆಲೆ ಸೆಕೆ ಕಡಿಮೆಯಾಗಿ ಆರಾಮವೆನಿಸಿತು. ಕಾಲುವೆಯ ಮೆಟ್ಟಿಲನ್ನು ಹತ್ತುವಾಗ ಕಿತ್ತುಹೋದ ನನ್ನ ಚಪ್ಪಲಿಗೆ ಪಿನ್ನು ಹಾಕಿ ಸರಿಮಾಡಿಕೊಂಡು ಮನೆ ಹಾದಿ ಹಿಡಿದೆ.

       ಹಾಗೆ ನಡೆದು ಹೋಗುವಾಗ, ನೆನಪೊಂದು ಮರುಕಳಿಸಿತು. ಮೂರು ತಿಂಗಳ ಹಿಂದೆ ಮದುವೆಯೊಂದರಲ್ಲಿ ಸಿಕ್ಕಿದ್ದ ರಾಜೇಶ, ನನ್ನ ಜೊತೆ ಮಾತನಾಡಬೇಕು ಎಂದಿದ್ದ. ಅವನ ಮುಖದಲ್ಲಿ ಎಂದಿನ ಹುರುಪು, ಉತ್ಸಾಹ ಇರಲಿಲ್ಲ. ಊಟವಾದ ಮೇಲೆ ಸಿಕ್ಕುವುದಾಗಿ ಹೇಳಿದ್ದೆ.ಆದರೆ ಅವನಿಗೆ ಸಿಗಲಾಗದೆ ಮರೆತು ಊರಿಗೆ ಬಂದಿದ್ದೆ. ಈಗ ಅದೇ ನೆನಪು ತುಂಬ ಬಾಧಿಸತೊಡಗಿತು. ತನಗಾಗುತ್ತಿರುವ ಸಂಕಟವನ್ನು ಯಾರಿಗಾದರೂ ಹೇಳಿಕೊಳ್ಳಬೇಕಿನಿಸಿತ್ತೇನೋ.. ಅಂತ ಯಾವ ನೋವು ಅವನನ್ನು ಕಾಡುತ್ತಿತ್ತೋ.. ಆ ದಿನ ನಾನು ಅವನಿಗೆ ಸಿಗಬೇಕಿತ್ತು.. ಏನಾದರೂ ಸುಳಿವು ಸಿಗುತ್ತಿತ್ತೇನೋ.. ಕನಿಷ್ಠ ನನ್ನ ಭೇಟಿ ಅವನ ಸಾಯುವ ನಿರ್ಧಾರದಿಂದ ಹೊರಬರಲು ಒಂದು ಅವಕಾಶವಾಗಿತ್ತೇ? ಛೇ, ಅವನಿಗೆ ಹೇಳಿಕೊಳ್ಳುವ ಅವಕಾಶ ಕೊಡಬೇಕಿತ್ತು. ನನಗಂತೂ ತುಂಬಾ ಕಸಿವಿಸಿಯಾಗತೊಡಗಿತು. ರಾಜೇಶ ಏಕೆ ಸತ್ತ? ಎಂಬುದು ಇನ್ನಷ್ಟು ನಿಗೂಢವೆನಿಸಿತು. ಹಿಂದೆ ಮುಂದೆ ತಿರುಗಿನೋಡಿದೆ. ಯಾರೂ ಕಾಣಲಿಲ್ಲ. ಅಲ್ಲೊಂದು ಇಲ್ಲೊಂದು ಜೀರುಂಡೆ ಜಿಲ್ಲ್ ಜಿಲ್ಲ್ ಶಬ್ದ ಕೇಳುತಿತ್ತು. ಕಿತ್ತು ಹೋಗಿದ್ದ ಚಪ್ಪಲಿಯಿಂದಾಗಿ ಜೋರಾಗಿ ಹೆಜ್ಜೆಹಾಕಲೂ ಸಾಧ್ಯವಾಗುತ್ತಿಲ್ಲ. ನನ್ನ ಜೊತೆ ಯಾವಾಗಲೂ ಅಂಟಿಕೊಂಡಂತೇ ಇರುತ್ತಿದ್ದ ಕೆಂಚ ಕೂಡ ಕಾಣಲಿಲ್ಲ. ನೀರವ ಮೌನ.. ನನ್ನ ಹೃದಯದ ಬಡಿತ ನನಗೇ ಕೇಳಿಸುತ್ತಿದೆ. ಮೈ ಬೆವರಲು ತೊಡಗಿತ್ತು.`ನಿನ್ನ ಜೊತೆ ಮಾತಾಡ್ಬೇಕು ಚಂದ್ರ ಸಿಕ್ತೀಯಾ’ ರಾಜೇಶನ ದನಿ ಕೇಳಿದಂತಾಯಿತು. ನಡಿಗೆ ನನಗರಿವಿಲ್ಲದಂತೆ ಚುರುಕಾಗಿ ಸ್ವಲ್ಪ ದೂರದಲ್ಲಿ ಮನೆ ಕಂಡಕೂಡಲೇ ಭಯ ಮತ್ತು ಆತಂಕ ಕಡಿಮೆಯಾಯಿತು.

       ಮನೆಗೆ ಹೋಗಿ ಸ್ನಾನ ಮುಗಿಸಿದೆ. ರಾಜೇಶನ ಸಾವಿನ ವಿಚಾರದ ಕಾರಣವನ್ನು ತಿಳಿಯಲೇಬೇಕು ಅಂತ ಮನಸ್ಸು ಚಡಪಡಿಸುತ್ತಿತ್ತು. ಚಪ್ಪಲಿ ಮೆಟ್ಟಿಕೊಂಡು, `ಅವ್ವಾ ಮಾರಿಗುಡಿ ಹತ್ರ ಹೋಗಿ ಬರ್ತೀನಿ’ ಎಂದು ಕೂಗಿ ಹೇಳಿ ಹೊರಟೆ. ನಮ್ಮೂರಿನ ಮಾರಿಗುಡಿ ತುಂಡುಹೈಕ್ಳ ಅಡ್ಡ. ಹಬ್ಬ ಹರಿದಿನಗಳಲ್ಲಿ, ಈ ತರ ಸಾವಿನ ಸಂದರ್ಭಗಳಲ್ಲಿ ಮಾರಿಗುಡಿ ಪಡಸಾಲೆಯಲ್ಲಿ ಕುಳಿತುಕೊಂಡು ಮಾತನಾಡತೊಡಗಿದರೆ, ಮಾತು ಮುಗಿಯುವ ಮುನ್ಸೂಚನೆ ಕಾಣದೆ ಕೊನೆಗೆ ಸರಿರಾತ್ರಿ ಮನೆಗೆ ಸೇರುತ್ತಿದ್ವಿ. ಸೀನ ರಾಜೇಶನ ಆಪ್ತ ಚಡ್ಡಿದೋಸ್ತ. ಬಾಕಿ ಚಡ್ಡಿದೋಸ್ತ್ಗಳಿಗಿಂತ ಸ್ವಲ್ಪ ಹೆಚ್ಚೆನ್ನುವಷ್ಟು ಆತ್ಮೀಯತೆ. ಬಾಕಿ ಗೆಳೆಯರು ಅವರಿಬ್ಬರನ್ನು ಗಂಡಹೆಂಡತಿ ಅಂತಲೇ ರೇಗಿಸುತ್ತಿದ್ದರು. ಸೀನನಿಗೆ ನಿಜವಾಗಲೂ ಕಾರಣ ಗೊತ್ತಿರಬಹುದು, ಅವನೊಬ್ಬ ಮಾತ್ರ ನನ್ನ ಮನಸ್ಸಿನಲ್ಲಾಗುತ್ತಿರುವ ಗೊಂದಲಕ್ಕೆ ಪರಿಹಾರ ನೀಡಬಹುದು ಎಂದು ಯೋಚಿಸುತ್ತಾ ಮಾರಿಗುಡಿ ಸಮೀಪಿಸುತ್ತಿರುವಷ್ಟರಲ್ಲೇ ನಮ್ಮ ಓರಗೆಯ ತುಂಡುಹೈಕ್ಳ ಗುಂಪು ಆಗಲೇ ಜಮಾಯಿಸಿರುವುದು ಕಾಣಿಸಿತು.

       ನಾನು ಹೋಗಿ ಪಡಸಾಲೆಯ ಗೋಡೆಗೊರಗಿ ಕುಳಿತೆ. ರಾಜೇಶನ ಸಾವಿನ ಸರಿತಪ್ಪುಗಳ ಚರ್ಚೆ ನಡೀತ್ತಿತ್ತು. ಶಂಕ್ರ, `ನೀನ್ ಏನೇ ಹೇಳ್ಲ ಮಯೇಸ, ಆವೆಣ್ಣು ಇಂಗೇ ಮಾಡೋದಾಗಿದ್ರೆ, ಈ ಬಡ್ಡೀ ಹೈದನೇ ಬೇಕು ಅಂತ ಯಾಕ್ಲಾ ಹಟಾ ಮಾಡ್ಕಂಡು ಮದ್ವೇ ಆಯ್ತಿದ್ಲು, ಈ ನನ್ ಮಗನೇ ದುಡುಕ್ಬುಟ್ಟಾ ಅನ್ನಿಸ್ತುದೇ.. ಓಗ್ಲಿ ಆ ಮಗೀನ್ ಮಕಾನಾದ್ರೂ ನೋಡ್ಬುಟ್ಟು ಇರ್ಬೇಕಿತ್ತು ಕಲಾ ಅವ್ನು.ಇಂಗೇ ಮಾಡ್ಕೋಬಾರ್ದಿತ್ತು. ಅಲ್ವುಲಾ’ ಎಂದ. ಅದಕ್ಕೇ ಮಹೇಶ, `ಹೋದೋನ್ ಹೋದ ಬುಡ್ಲಾ.. ಮನೆಗೆ ಹೋಗೋರು ಬರೋರ ಮ್ಯಾಲೆಲ್ಲಾ ಅನುಮಾನ ಪಟ್ರೆ ಬದುಕು ಮಾಡಕಾಯ್ತದಾ.. ನಂಗೂ ಹೇಳ್ಕಂಡು ಅತ್ತಿದ್ದ, ನಾನೂ ಬುದ್ದಿ ಯೋಳಿ ಕಳ್ಸಿದ್ದೆ, ಬಡ್ಡಿ ಹೈದ್ನೆ ಮಾತಾಡೊದ್ನೆ ತಪ್ಪು ತಿಳ್ಕಂಡ್ರೇ ಹೆಂಗ್ಲಾ ಅಂತಾ. ಅವ್ನ ಆಯಸ್ಸು ಇದ್ದುದ್ದೇ ಅಷ್ಟೇ ಅನ್ನಿಸ್ತುದೇ ಕನಾ ಬುಡು, ಸಾಯುಕೆ ಒಂದ್ ನೆಪ ಕನಾ’ ಎಂದ.

       ಸೀನ ಮಾತ್ರ ಏನೂ ಮಾತಾಡ್ದೆ ಅಂಗಾತ ಮಲಗಿ ಅಳ್ತಾ ಇದ್ದ. ನಾನು `ಸೀನಾ, ಸಮಾಧಾನ ಮಾಡ್ಕೋ.. ಏನ್ ಮಾಡೊಕಾಯ್ತದೆ, ಸಾಯ್ತಾನೆ ಅಂತಾ ಮೊದ್ಲೇ ಗೊತ್ತಾಗಿದ್ರೆ ಏನಾದ್ರು ಮಾಡಬೋದಿತ್ತು. ಏನಾಯ್ತು ಅಂತಾನಾದ್ರೂ ಹೇಳು’ ಎಂದೆ.ಅದಕ್ಕವನು ಕಣ್ಣೊರೆಸಿಕೊಳ್ಳುತ್ತಾ, `ಅವ್ನು ಸಾಯ್ತಾನೆ ಅಂತ ಗೊತ್ತಿಲ್ಲ ಕಣ್ಲಾ ಚಂದ್ರ, ಆ ದೀಪನ್ನ ನೆಂಟ್ರು ಹುಡ್ಗ ಅವರ ಮನೆಗೆ ಬಂದು ಹೋಗ್ತಿದ್ನಂತೆ. ಇವ್ನಿಗೆ ಅವನ ಕಂಡ್ರೇ ಅನುಮಾನ, ಅವ್ಳು ಇವ್ನನ್ನ ಮಡಿಕಂಡವ್ಳೇ ಅಂತಾ. ಇದೇ ವಿಷ್ಯಾನ ನಂ ಜೊತೇನೂ ಹೇಳ್ಕಂಡು ಅಳ್ತಿದ್ದಾ.. ನಾನು ತಪ್ಪು ಮಾಡಿಬಿಟ್ಟೆ, ಇವ್ಳುನ್ನ ನಂಬಿ ಮೋಸಹೋಗ್ಬಿಟ್ಟೆ ಅಂತಾ.. ನಾನೂ ಹೇಳ್ದೇ `ಲೋ ಆ ತರ ಇದ್ದಿದ್ರೆ ನಿನ್ನ ಯಾಕೆ ಮದ್ವೆ ಆಗೋಳು.. ಹೋಗೋರು ಬರೋರ ಮ್ಯಾಲೆಲ್ಲಾ ಅನುಮಾನ ಪಟ್ರೆ ಬದುಕು ಚೆನ್ನಾಗಿದ್ದಾತ ಅಂತ. `ಇಲ್ಲ, ಇವಳಿಗೆ ಸರಿಯಾಗಿ ಮಾಡ್ತೀನಿ ನೋಡ್ತಿರೂ’ ಅನ್ನೋನು, ದಿನಾ ಇದೇ ವಿಚಾರಕ್ಕೆ ಇಬ್ರೂ ಜಗಳ ಆಡೋರು. ಒಟ್ನಲ್ಲಿ ಅವ್ನು ನೆಮ್ದಿಯಾಗಿರನಿಲ್ಲ, ಆವೆಣ್ಣೂ ನೆಬ್ದಿಯಾಗಿರೋಕೆ ಬಿಡ್ಲಿಲ್ಲ’. ಎಂದು ಹೇಳಿ ಅಳೋಕೆ ಶುರು ಮಾಡಿದ.

       ಅನುಮಾನ ಎಂಬ ಹುಳು ತಲೆಹೊಕ್ಕರೆ ಯಾವ ಪ್ರೀತಿ, ತ್ಯಾಗ ಕೂಡ ಕಾಣಿಸಲ್ಲ. ಚೆನ್ನಾಗಿ ಬದುಕು ಮಾಡಬೇಕು ಎಂಬ ಕನಸನ್ನು ಹೊತ್ತುಕೊಂಡ ರಾಜೇಶನ ಕನಸು ಅನುಮಾನ ಎಂಬ ವಿಷದಿಂದ ಕಮರಿಹೋದ ಬಗ್ಗೆ ವ್ಯಥೆಯಾಯಿತು.ಆ ಹುಡುಗಿ ಇವನಿಗೆ ಮೋಸ ಮಾಡಲು ಹೇಗೆ ಸಾಧ್ಯ? ಪ್ರೀತಿಸುವಾಗ ಅವಳನ್ನು ಅರ್ಥಮಾಡಿಕೊಂಡಿದ್ದವನು ಈಗ ಅವಳನ್ನು ಅಪಾರ್ಥ ಮಾಡಿಕೊಂಡಿದ್ದೇಕೆ? ತನ್ನ ಎಳೇ ಮಗುವನ್ನ ಬಿಟ್ಟು ಸಾಯುವ ಗಟ್ಟಿ ನಿರ್ಧಾರ ಮಾಡಿದ ಅವನಿಗೇ ದೀಪಾ ನಿಜವಾಗಿಯೂ ಮೋಸ ಮಾಡಿದಳೇ? ಎಂಬುದನ್ನು ಯೋಚಿಸುತ್ತಾ ತಲೆ ಸಿಡಿಯುವಂತಾಯಿತು. ಸರಿತಪ್ಪುಗಳ ಚರ್ಚೆ ನಡೆದೇ ಇತ್ತು. ಬಹುಶಃ ಇದು ಇವತ್ತಿಗೆ ಮುಗಿಯುವಂತೆ ಇಲ್ಲ ಎನ್ನಿಸಿ ಅಲ್ಲಿದ್ದ ಎಲ್ಲರಿಗೂ ಹೇಳಿ ಅಲ್ಲಿಂದ ಹೊರಟೆ. ರಾಜೇಶನ ಸಾವಿನ ಬಗೆಗೆ ಗೆಳೆಯರ ವಿಶ್ಲೇಷಣೆ ಏನೇ ಇರಬಹುದು.. ಆದರೆ ಈ ನಿರ್ಧಾರದಿಂದ ದೀಪಾಳಿಗೆ ಅವನು ಅರ್ಥವಾಗದವನಾಗಿದ್ದ. ಒಂದು ವೇಳೆ ದೀಪಾ ತಪ್ಪು ಮಾಡಿದ್ದರೂ ಇದಕ್ಕೆ ಅವನ ಸಾವಿಗಿಂತ ಬೇರೆ ಪರಿಹಾರವಿರಲಿಲ್ಲವೇ? ಸಾವು ಒಂದೇ ಎಲ್ಲದಕ್ಕೂ ಉತ್ತರವಾದರೆ ಊರಿನಲ್ಲಿ ಜನ ಹೀಗೆ ಬದುಕು ಮಾಡಲಾಗುತ್ತಿತ್ತೇ.. ಯೋಚಿಸಿದಷ್ಟೂ ತಲೆ ಕಲಸಿ ರಾಡಿಯಂತಾಯಿತು. ಮನೆ ಹಾದಿ ಹಿಡಿದೆ.

       ಕಗ್ಗತ್ತಲೆ, ಎಲ್ಲೆಡೆ ನೀರವ ಮೌನ. ಈ ಬೀದಿದೀಪಗಳಿಗೆ ಯಾರೋ ಕಿಡಿಗೇಡಿ ಹುಡುಗರು ಕಲ್ಲು ಹೊಡೆದು, ಹಾಳು ಮಾಡಿರುವುದರಿಂದ ಈ ಕತ್ತಲಲ್ಲಿ ಅಂದಾಜಿನಲ್ಲಿ ಹೆಜ್ಜೆಹಾಕುವಂತಾಗಿದೆ.ಅಂಟಿಕೊಂಡಂತೇ ಇರುತ್ತಿದ್ದ ಕೆಂಚ ಬೇರೆ ಜೊತೆಯಲ್ಲಿ ಬಂದಿಲ್ಲ ಒಬ್ಬಂಟಿ ಎನ್ನಿಸಿ ಭಯವಾಯಿತು. ಬೀದಿ ದೀಪಗಳನ್ನು ಹಾಳು ಮಾಡಿದ್ದ ಹುಡುಗರನ್ನು ಮನಸ್ಸಿನಲ್ಲೇ ಶಪಿಸುತ್ತಾ ಹೋಗುತ್ತಿದ್ದಂತೆ, ರಸ್ತೆ ಬದಿಯ ಗಸಗಸೆ ಗಿಡದಿಂದ ಪಟಪಟನೆ ಹಾರಿದ ಸದ್ದು ಕೇಳಿ ಒಂದುಕ್ಷಣ ಬೆಚ್ಚಿದೆ.ಅಲ್ಲೆಲ್ಲೋ ದೂರದಲ್ಲಿ ನಾಯಿಗಳು ಊಳಿಡುವ ಸದ್ದು ಜೊತೆಗೆ ಸೇರಿ ಒಂದುಕ್ಷಣ ಮೈ ಕಂಪಿಸಿತು.ದಾಪುಗಾಲಿಡುತ್ತಾ ನಡಿಗೆ ಜೋರು ಮಾಡಿದೆ. ಇನ್ನು ಅರ್ಧ ಫರ್ಲಾಂಗು ಮನೆ ಸಿಕ್ಕೇ ಬಿಟ್ಟಿತು ಎನ್ನುವಾಗ, `ನಿನ್ನ ಜೊತೆ ಮಾತಾಡ್ಬೇಕು ಚಂದ್ರ ಸಿಕ್ತೀಯಾ’ ಸಂಜೆ ನನಗೆ ಕೇಳಿದ ರಾಜೇಶನ ಅದೇ ದನಿ.. ಕಣ್ಣು ಕತ್ತಲಿಟ್ಟಿತು.

Copyright © All rights reserved Newsnap | Newsever by AF themes.
error: Content is protected !!