- ಹಿರಿಯ ವ್ಯಕ್ತಿಗಳ ಅಂತರರಾಷ್ಟ್ರೀಯ ದಿನ
ಪಾಲಕರು ಹಳ್ಳಿಯ ತಮ್ಮ ಹಳೆಯ ಮನೆಯಲ್ಲಿ ಮಕ್ಕಳ ಬರುವಿಕೆಗೆ, ಒ೦ದು ಫೋನ್ ಕರೆಗೆ, ಪತ್ರಕ್ಕೆ ಈಗಾಗಲೇ ವಯೋಸಹಜವಾಗಿ ಕುಗ್ಗಿರುವ ತಮ್ಮ ದೇಹವನ್ನು ಮತ್ತಷ್ಟು ಬಾಗಿಸಿ,ಕಣ್ಣುಗಳನ್ನು ಇನ್ನಷ್ಟು ಕಿರಿದಾಗಿಸಿ ದಾರಿ ಕಾಯುತ್ತಿದ್ದಾರೆ.
ವಯೋಸಹಜ ತೊಂದರೆಗಳಾದ ಬೆನ್ನುನೋವು, ಮೊಣಕಾಲು ನೋವು, ದೇಹದ ಭಾರ ,ರಕ್ತದೊತ್ತಡ, ಮಧುಮೇಹ ಖಾಯಿಲೆಗಳಿಗಿಂತ ಅವರನ್ನು ಕಾಡುತ್ತಿರುವುದು ಒಂಟಿತನದ ಬೇಗೆ ಮತ್ತು ಮಕ್ಕಳ ನಿಷ್ಕಾಳಜಿ. ಇದು ಕೇವಲ ಒಂದು ಮನೆಯ ಕತೆಯಲ್ಲ.. ಇದು ಮನೆಮನೆಗಳ ಕತೆ.ಪ್ರತಿ ಪುಟ್ಟ ಊರುಗಳ ಮಹಾನಗರಗಳ ಕಥೆ.
ಹಾಗಾದರೆ ಮಕ್ಕಳು ಕೆಟ್ಟವರೇ ಉಹೂ ..ಅರ್ಧ ಸತ್ಯವೇ !!
ಜಾಗತೀಕರಣದ ಇಂದಿನ ದಿನಮಾನದಲ್ಲಿ ಕೇವಲ 2ದಶಕಗಳಲ್ಲಿ ನಮ್ಮ ದೇಶದ ಚಿತ್ರಣ ಸಂಪೂರ್ಣ ಪಲ್ಲಟವಾಗಿದೆ .ತಂದೆ ತಾಯಿ ಮಕ್ಕಳು ಮೊಮ್ಮಕ್ಕಳು ಎಂದು ತುಂಬಿ ತುಳುಕುತ್ತಿದ್ದ ಅವಿಭಕ್ತ ಕುಟುಂಬಗಳು ವಿಘಟಿತಗೊಂಡು ಹೆಚ್ಚಿನ ಕಲಿಕೆಗಾಗಿ, ಆರ್ಥಿಕ ಭದ್ರತೆಗಾಗಿ ಉದ್ಯೋಗ ಅರಸುತ್ತಾ ದೊಡ್ಡ ದೊಡ್ಡ ಊರುಗಳಿಗೆ ವಲಸೆ ಹೋಗುತ್ತಿದ್ದಾರೆ. ಒಬ್ಬರೇ ತಂದೆ ತಾಯಿಗಳಿಗೆ ನಾಲ್ಕೆಂಟು ಮಕ್ಕಳು ಇದ್ದು ಆ ಎಲ್ಲ ಮಕ್ಕಳನ್ನು ಅವರು ಸಲಹುತ್ತಿದ್ದರು. ನಾಲ್ಕೆಂಟು ಮಕ್ಕಳು ಇದ್ದೂ ಕೂಡ ತಂದೆ ತಾಯಿಗಳು ಒಂಟಿತನದಲ್ಲಿ ವೃದ್ಧಾಶ್ರಮಗಳಲ್ಲಿ ಅಥವಾ ಮಕ್ಕಳ ಜತೆಗೆ ಪಾಲುಗಾರಿಕೆಯಲಿ ಬದುಕುವ ಪರಿಸ್ಥಿತಿ.
ಸರಕಾರಿ ನೌಕರಿಯಲ್ಲಿದ್ದು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು,ನಿವೃತ್ತಿ ವೇತನ ಪಡೆಯುತ್ತಿರುವ ಪಾಲಕರದ್ದು ಒಂದು ರೀತಿಯಲ್ಲಿ ಉತ್ತಮ ಜೀವನ ಎಂಬುದು ಮೇಲ್ನೋಟಕ್ಕೆ ಕಾಣುವುದು.ತಮ್ಮ ಜೀವಿತಾವಧಿಯ ಎಲ್ಲ ವರಮಾನವನ್ನು ಮಕ್ಕಳ ಬೆಳವಣಿಗೆಗೆ, ಶಿಕ್ಷಣಕ್ಕೆ ಉದ್ಯೋಗಕ್ಕೆ ಎಂದು ಖರ್ಚು ಮಾಡಿ ಈಗ ಕೈ ಖಾಲಿ ಮಾಡಿಕೊಂಡಿರುವ ತಂದೆ ತಾಯಂದಿರದು ಶೋಚನೀಯ ಸ್ಥಿತಿ. ವಯೋಸಹಜವಾಗಿ ಬರುವ ಆರೋಗ್ಯ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗಲು ಆಗದಂತಹ, ಮಕ್ಕಳ ಬಳಿ ಕೈಚಾಚಲು ಸ್ವಾಭಿಮಾನ ಅಡ್ಡ ಬರುವಂತಹ ತ್ರಿಶಂಕು ಸ್ಥಿತಿ ಯಾವ ತಂದೆ ತಾಯಿಗಳಿಗೂ ಬೇಡ ?
ಮಕ್ಕಳು ತಮ್ಮ ವೃತ್ತಿಜೀವನ, ಸಾಂಸಾರಿಕ ಜೀವನ ಮತ್ತು ತಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಭರದಲ್ಲಿ ತಮ್ಮ ತಂದೆ ತಾಯಿಯರನ್ನು ನೋಡಿಕೊಳ್ಳುವ ಕರ್ತವ್ಯದಿಂದ ವಿಮುಖರಾಗುತ್ತಿದ್ದಾರೆ.ಅವರವರ ಮಕ್ಕಳ ಜವಾಬ್ದಾರಿ,ಅವರ ಶಾಲಾ ಕಾಲೇಜುಗಳ ಶುಲ್ಕ ,ಏರುತ್ತಿರುವ ಜೀವನ ವೆಚ್ಚ , ಸೇವಾ ಭದ್ರತೆ ಇಲ್ಲದ ನೌಕರಿಗಳು ಮುಂದಿನ ಜೀವನ ಹೇಗೆ ಎಂಬ ಆತಂಕ ತಲ್ಲಣಗಳು ಮಕ್ಕಳನ್ನು ಕೂಡ ಹಣ್ಣು ಮಾಡಿವೆ.ತಮ್ಮದೇ ವೈಯಕ್ತಿಕ ಸಮಸ್ಯೆಗಳು ಹಾಸಿ ಹೊದ್ದುಕೊಳ್ಳುವಷ್ಟು ಇರುವಾಗ ತಂದೆತಾಯಿಗಳ ಕಡೆ ಯೋಚಿಸಲು ಸಮಯವೆಲ್ಲಿದೆ ಎಂಬ ಅವರ ಮಾತು ಕೂಡ ಅವರ ದೃಷ್ಟಿಕೋನದಲ್ಲಿ ಸರಿ.ಹಾಗಾದರೆ ತಪ್ಪಿರುವುದೆಲ್ಲಿ ??
ಸಮಸ್ಯೆಯನ್ನು ವೈಯುಕ್ತಿಕ ನೆಲೆಗಟ್ಟಿನಲ್ಲಿ ನೋಡಿದಾಗ ,ಪಾಲಕರು ಮತ್ತು ಮಕ್ಕಳು ಇಬ್ಬರೂ ತಮ್ಮ ತಮ್ಮ ದೃಷ್ಟಿಯಲ್ಲಿ ಆಯಾ ಸಮಯಗಳಲ್ಲಿ ತಾವು ಮಾಡಬೇಕಾದ ಕರ್ತವ್ಯಗಳನ್ನು ಪೂರೈಸಿರುತ್ತಾರೆ. ಮಕ್ಕಳಿಗೆ ತಂದೆ ತಾಯಿಗಳು ಸಾಕೆನಿಸಿರಬಹುದು. ಆದರೆ ತಂದೆ ತಾಯಿಗಳಿಗೆ ಸಾವು ಬಂದು ಕದ ತಟ್ಟುವವರೆಗೂ ಬದುಕುವುದು ಅನಿವಾರ್ಯವೇ ಸರಿ.
ಹುಟ್ಟಿದ್ದೇವೆ.. ಅದಕ್ಕಾಗಿ ಬದುಕುತ್ತಿದ್ದೇವೆ,ಮಕ್ಕಳಿಗಾಗಿ ಇಷ್ಟೆಲ್ಲಾ ಮಾಡಿದ್ದೇವೆ ಆದರೆ ಮಕ್ಕಳು ನಮ್ಮನ್ನು ನೋಡುತ್ತಿಲ್ಲ ಎಂಬ ನಿರಾಸೆಯ ಭಾವ ಪಾಲಕರನ್ನು ಕಾಡುವಷ್ಟು, ಅವರ ಕಾಯಿಲೆಗಳು ಅವರನ್ನು ನೋಯಿಸುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಂಗಾತಿಗಳಲ್ಲಿ ಯಾರಾದರೊಬ್ಬರು ಮರಣ ಹೊಂದಿದರೆ ಅದು ಇನ್ನೂ ಘನಘೋರ ಮಕ್ಕಳ ಜೊತೆ ಬಂದು ಅವರ ಬಳಿಯಲ್ಲಿ ಇರುವುದು ಸ್ವಾಭಿಮಾನಕ್ಕೆ ಧಕ್ಕೆ ತರುವ ವಿಷಯ ಎಂದಾದರೆ,ಒಂಟಿತನದ ಬೇಗೆಯಲ್ಲಿ ಬೇಯುವುದು ಇನ್ನೊಂದು ರೀತಿಯಲ್ಲಿ ಅವರನ್ನು ಹಣ್ಣು ಮಾಡುತ್ತದೆ.ಇಂತಹ ಪರಿಸ್ಥಿತಿಯಲ್ಲಿ ಪಾಲಕರು ಏನು ಮಾಡಬೇಕು ಮತ್ತು ಮಕ್ಕಳ ಕರ್ತವ್ಯಗಳೇನು,?
ಪಾಲಕರು …ಅಯ್ಯೋ ನಾವು ಇಷ್ಟೆಲ್ಲ ಮಾಡಿದೆವು ನಮ್ಮ ಮಕ್ಕಳು ನಮ್ಮನ್ನು ದೂರವಿಟ್ಟರು ಎಂದು ಹಲುಬುವುದನ್ನು ಬಿಟ್ಟುಬಿಡಬೇಕು .ತಮ್ಮ ತಂದೆ ತಾಯಿಯರು ತಮಗೆ ಮಾಡಿದ್ದನ್ನೇ ತಮ್ಮ ಮಕ್ಕಳಿಗೆ ತಾವು ಮಾಡಿದ್ದೇವೆ ಎಂದಾದಾಗ ಅದು ಕರ್ತವ್ಯ ಎನಿಸಿಕೊಳ್ಳುತ್ತದೆಯೇ ಹೊರತು,ಮಕ್ಕಳಿಗೆ ಅವರು ಹೊರಿಸುವ ಋಣಭಾರವಲ್ಲ.ಹೀಗೆ ಅಂದುಕೊಂಡಾಗ ಪಾಲಕರಿಗೆ ತಮ್ಮ ಬದುಕು ತಮ್ಮದೇ ಜವಾಬ್ದಾರಿ ಎಂಬ ಅರಿವು ಮೂಡುತ್ತದೆ. ವೃದ್ಧ್ಯಾಪದ ಅತ್ಯಂತ ಕ್ಲಿಷ್ಟಕರ ಗಳಿಗೆಗಳಲ್ಲಿ ವ್ಯಕ್ತಿಯೊಬ್ಬನಿಗೆ ಕೈಯಲ್ಲಿ ಹಣ ಇರಲೇಬೇಕು. ಹಿರಿಯರು ತಮ್ಮ ಕೈ ನಡೆಯುತ್ತಿರುವಾಗಲೇ ಸಾಕಷ್ಟು ಹಣವನ್ನು ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳಬೇಕು.ತಮ್ಮ ಸುಭದ್ರ ವೃದ್ಯಾಪ್ಯ ಜೀವನಕ್ಕಾಗಿ ಈ ಹಣದ ಅವಶ್ಯಕತೆ ಅವರಿಗೆ ಹರೆಯದಲ್ಲಿ ಕಾಣದಿದ್ದರೂ ಕೈಯಲ್ಲಿರುವ ಹಣ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೇವಲ ಹಣವನ್ನು ಖಾತೆಗಳಲ್ಲಿ ತೊಡಗಿಸುವುದಷ್ಟೇ ಅಲ್ಲ, ಮನುಷ್ಯ ತನ್ನ ಜೀವಿತದ ಕಾಲದಲ್ಲಿ ಹರೆಯದಲ್ಲಿ ತನ್ನ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು .ದೈಹಿಕವ್ಯಾಯಾಮಗಳು,ಯೋಗ, ಧ್ಯಾನಗಳು…ಪೂಜೆ ಪುನಸ್ಕಾರ ಜಪ-ತಪಗಳಷ್ಟೇ ಮುಖ್ಯವಾಗಿ ಅವರ ದೈನಂದಿನ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಬೇಕು.
‘”ಋಣಾನುಬಂಧ ರೂಪೇಣ ಪಶು ಪತ್ನಿ ಸುತಾಲಯ” ಎಂಬ ಸಂಸ್ಕೃತದ ಉಕ್ತಿಯಿದೆ. ಸಂಗಾತಿಯು ನಮ್ಮ ಜೀವನದ ಅವಿಭಾಜ್ಯ ಅಂಗ. ಏರು ಯೌವನದಲ್ಲಿ ಇರುವಾಗ ತಮ್ಮ ಜೊತೆಗೂಡಿ ನಮ್ಮ ನೋವು ನಲಿವುಗಳಲ್ಲಿ ಜೀವನದ ಪ್ರತಿಯೊಂದು ಏರಿಳಿತದಲ್ಲಿ ತಮ್ಮ ಜೊತೆಗಿರುವ, ಜೀವಿತದ ಕೊನೆಯ ಕ್ಷಣದವರೆಗೂ ತಮ್ಮನ್ನು ಅನುಸರಿಸುವ ಸಂಗಾತಿಯ ಜೊತೆಗೆ ಅತ್ಯಂತ ಆತ್ಮೀಯ ಸಂಬಂಧ ಇರಬೇಕು.ಒಬ್ಬ ಒಳ್ಳೆಯ ಸಂಗಾತಿ ಒಳ್ಳೆಯ ಸ್ನೇಹಿತನೂ ಆಗಿದ್ದರೆ ವೃದ್ಧಾಪ್ಯ ಅಷ್ಟೇನೂ ಕಠಿಣವಾಗುವುದಿಲ್ಲ.ವೃಥ ಅಹಂಭಾವದಿಂದ,ಪೊಳ್ಳು ಪ್ರತಿಷ್ಠೆಯಿಂದ ಸಂಗಾತಿಯನ್ನು ಆಳಲು ಹೋದರೆ ಮನಸ್ಸುಗಳು ಮುರಿದು ಹೋಗುತ್ತವೆ ಪರಿಣಾಮ ಏರು ಯವ್ವನದಲ್ಲಿ ಇರುವರೋ ಬಿಡುವರೋ ಗೊತ್ತಿಲ್ಲ ಆದರೆ ವೃದ್ಧಾಪ್ಯದಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ಇರುವುದು ಅತ್ಯಂತ ಅವಶ್ಯ ಮತ್ತು ಅನಿವಾರ್ಯ.
ಮಾನಸಿಕವಾಗಿ, ಆರ್ಥಿಕವಾಗಿ, ಭಾವನಾತ್ಮಕವಾಗಿ ಗಟ್ಟಿಯಾಗಿದ್ದರಷ್ಟೇ ಸಾಲದು ಮನುಷ್ಯ ಸಾಮಾಜಿಕವಾಗಿ ಮತ್ತು ಪಾರಮಾರ್ಥಿಕವಾಗಿ ಔನ್ನತ್ಯವನ್ನು ಸಾಧಿಸಬೇಕು. ತನಗೆ ಅವಶ್ಯಕವಾದುದನ್ನು ಇರಿಸಿಕೊಂಡು, ತನಗೆ ಅನವಶ್ಯಕವಾದ ಆದರೆ ಬೇರೆಯವರಿಗೆ ಉಪಯುಕ್ತವೆನಿಸಬಹುದಾದ ವಸ್ತುಗಳನ್ನು, ಬಟ್ಟೆಗಳನ್ನು ಬೇರೆಯವರಿಗೆ ಕೊಡಬೇಕು. ನಾನು ನನ್ನದು ಎಂಬ ಮೋಹವನ್ನು ತೊರೆಯಬೇಕು.ಎಲ್ಲರನ್ನೂ ಸಮಾನ ಸ್ಥಾಯಿಭಾವದಲ್ಲಿ ನೋಡಬೇಕು.ಎಲ್ಲವನ್ನೂ ಕಠಿಣವಾಗಿ ವಿಮರ್ಶಿಸುವ, ಪ್ರಶ್ನಿಸುವ, ಹೀಯಾಳಿಸುವ,ಮತ್ತು ಪರಾಮರ್ಶಿಸುವುದನ್ನು ನಿಲ್ಲಿಸಬೇಕು.ಎಲ್ಲರ ದೃಷ್ಟಿಕೋನವು ಅವರವರ ಅನುಕೂಲಕ್ಕೆ ತಕ್ಕಂತೆ ಇರುವುದು …ಹಾಗಿದ್ದಾಗ ಬೇರೊಬ್ಬರ ತಪ್ಪುಸರಿಗಳನ್ನು ಎಣಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಅರಿವನ್ನು ಹೊಂದಿದ್ದರೆ ಯಾರನ್ನೂ ತಪ್ಪು ತಿಳಿದುಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ದೈವಭಕ್ತಿಯೂ ಅಷ್ಟೆ ,”ನೀ ಕೊಟ್ಟರೆ ನಾ ಪೂಜಿಸುವೆ, ನೀ ಕೊಡದಿದ್ದರೆ ನಾ ಬಿಡೆ” ಎಂಬ ಭಾವ ಸಲ್ಲದು … ಭಗವಂತನೆಡೆ ಸಾತ್ವಿಕತೆ ಮತ್ತು ನಿಷ್ಕಾಮ ಭಕ್ತಿ ಇದ್ದರೆ ಸಾಕು. ಪ್ರಾರ್ಥನೆ ಧ್ಯಾನ ಭಜನೆ ಸತ್ಸಂಗಗಳು ಮನಸ್ಸನ್ನು ಪ್ರಫುಲ್ಲಗೊಳಿಸುವ ದಿವ್ಯಾನುಭೂತಿಯನ್ನು ಕೊಡುವ ಕ್ರಿಯೆಗಳು. ಇವು ಕೂಡ ದಿನಚರಿಯ ಭಾಗವಾಗಲಿ .
ನಾನು ಹಿರಿಯ, ನನ್ನದೇ ಮಾತು ನಡೆಯಬೇಕು, ನನ್ನ ನಿರ್ಣಯವೇ ಅಂತಿಮ ಎಂಬ ಪೊಳ್ಳು ಪ್ರತಿಷ್ಠೆ ಬೇಡ , ಹೊಸ ಚಿಗುರುಗಳ ಆಶೋತ್ತರಗಳಿಗೆ ಸ್ಪಂದಿಸಿದರೆ ಒಳಿತು .’ಹೊಸ ಚಿಗುರು ಹಳೆ ಬೇರು ಸೇರಿದರೆ ಮರ ಸೊಗಸು ‘ಎಂಬ ಹಾಡನ್ನು ಕೇಳಿಲ್ಲವೇ.ಇದನ್ನು ಓದಿ –14 ಮುಡಾ ನಿವೇಶನಗಳ ಕ್ರಯಪತ್ರ ವಾಪಸ್ : ಮುಡಾ ಆಯುಕ್ತರಿಗೆ ಸಿಎಂ ಪತ್ನಿ ಪಾರ್ವತಿ ಪತ್ರ – ಸ್ಪೋಟಕ ತಿರುವು
ಇನ್ನು ಮನೆಯ ಕಿರಿಯರು ತಮ್ಮ ಹಿರಿಯರೊ೦ದಿಗೆ ಗೌರವ, ಪ್ರೀತಿ, ವಿಶ್ವಾಸ,ನಂಬಿಕೆಯಿಂದ ನಡೆದುಕೊಳ್ಳಬೇಕು.ಒಂದೊಮ್ಮೆ ಅವರು ಸಿಟ್ಟಿನಿಂದ ನಡೆದುಕೊಂಡರೂ ನೀವು ತಾಳ್ಮೆ ವಹಿಸಬೇಕು.ಮಾತಿಗೆ ಮಾತು ಬೆಳೆಸಬಾರದು. ಹಿರಿಯರ ಅನುಭವಕ್ಕೆ ತಲೆಬಾಗಿ. ಅವರಿಗೆ ಕೊಂಚ ಕಾಳಜಿ, ಪ್ರೀತಿ, ಮೃದು ಸ್ಪರ್ಶ ಮತ್ತು ಜೊತೆಗಿರುವ ಭರವಸೆ ನೀಡಿ ..ಯಾವ ಔಷಧಿಗಳೂ ಮಾಡದ ಮ್ಯಾಜಿಕ್ ನಿಮ್ಮ ಮಾತುಗಳಲ್ಲಿ ಅವರಿಗೆ ತೋರುತ್ತದೆ.ಎಷ್ಟೇ ಔಷಧ, ಉಪಚಾರಗಳನ್ನು ಮಾಡಿದರೂ ಮನುಷ್ಯಜೀವ ಪ್ರೀತಿಯ ಮಾತಿಗೆ, ಕಾಳಜಿಗೆ ಹಾತೊರೆಯುತ್ತದೆ.ನಿಷ್ಕಳಂಕವಾದ, ನಿರ್ಮಲವಾದ ಪ್ರೀತಿ ವಯಸ್ಸಾದವರ ಹಕ್ಕು ಮತ್ತು ಅದನ್ನು ಅವರಿಗೆ ಸ್ವಾಭಾವಿಕವಾಗಿ ದೊರಕಿಸಿಕೊಡುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಆಗಾಗ ಅವರನ್ನು ಮಾತನಾಡಿಸಿ.ಕ್ಷೇತ್ರ ದರ್ಶನ ಮಾಡಿಸಿ.ಅವರ ದೈಹಿಕ ನೋವುಗಳನ್ನು ಮರೆಯುವಂತೆ ಅವರೊಂದಿಗೆ ಒಡನಾಡಿ. ನೀವು ಚಿಕ್ಕವರಿದ್ದಾಗ ನಿಮ್ಮ ಮಲ ಮೂತ್ರಗಳನ್ನು ಬಾಚಿ ನಿಮ್ಮನ್ನು ಸ್ನಾನ ಮಾಡಿಸಿ ಬೆಳೆಸಿದ ತಾಯ್ತಂದೆಯರ ಕುರಿತು ಕೃತಜ್ಞತೆಯಿರಲಿ. ಹಾಗೆಯೇ ಅವರ ಎಲ್ಲಾ ಮನೋದೈಹಿಕ ಅವಸ್ಥೆಗಳಿಗೆ, ವಿಕಲತೆಗಳಿಗೆ ನಿಮ್ಮ ಸಹಾನುಭೂತಿಯಿರಲಿ .ತಾವು ಹಿರಿಯರು ಹೊರೆಯಲ್ಲ ಎಂಬ ಭಾವ ಮೂಡಿಸಿ.
ಮಾನಸಿಕ ಸಂತುಷ್ಟಿ ಮನುಷ್ಯನ ದೈಹಿಕ ತೊಂದರೆಗಳನ್ನು ನೀಗಿಸಬಲ್ಲದು ಎಂಬ ಅರಿವನ್ನು ಹೊಂದಿ ಹಿರಿಕಿರಿಯರೊಳಗೊಂಡ ಸಂತೃಪ್ತ ಸಮಾಜದ ಬುನಾದಿಗೆ ಅಡಿಗಲ್ಲು ಹಾಕುವ ಆಶಯದೊಂದಿಗೆ.
-ಶ್ರೀಮತಿ ವೀಣಾ ಹೇಮಂತಗೌಡ ಪಾಟೀಲ ಮುಂಡರಗಿ ಗದಗ
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ಚುನಾವಣೆಗೂ ಮುನ್ನ ಕೇಜ್ರಿವಾಲ್ ಸಂಕಷ್ಟ – ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿಗೆ ರಾಜ್ಯಪಾಲರ ಅನುಮತಿ