ಅರ್ನಬ್ ಗೋಸ್ವಾಮಿಗೆ 14 ದಿನಗಳ ನ್ಯಾಯಾಂಗ ಬಂಧನ

Team Newsnap
1 Min Read

ಇಂಟೀರಿಯರ್ ಡಿಸೈನರ್‌ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್‌ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್‌ ಗೋಸ್ವಾಮಿಗೆ ಎರಡು ವಾರಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

2018ರಲ್ಲಿ ಇಂಟೀರಿಯರ್ ಡಿಸೈನರ್‌ ಅನ್ವಯ್ ನಾಯಕ್ ಮತ್ತು ಕುಮುದ್‌ ನಾಯಕ್ ಆತ್ಮಹತ್ಯೆಯಲ್ಲಿ ಅರ್ನಬ್‌ ಗೋಸ್ವಾಮಿ ಪಾತ್ರವಿದೆ ಎಂದು ಮರಣಪತ್ರದಲ್ಲಿ ಉಲ್ಲೇಖವಾಗಿತ್ತು.

ಅದರಂತೆ ಬುಧವಾರ ಬೆಳಗ್ಗೆ ರಾಯ್‌ಗಡ ಪೊಲೀಸರು ಅರ್ನಬ್‌ ಗೋಸ್ವಾಮಿಯನ್ನು ಬಂಧಿಸಿದ್ದರು. ಬಂಧನ ನಂತರ ಆಲಿಬಾಗ್‌ಗೆ ಕರೆದೊಯ್ದ ಪೊಲೀಸರು ಸಂಜೆ ವೇಳೆ ಕೋರ್ಟ್‌ ಮುಂದೆ ಹಾಜರುಪಡಿಸಿದ್ದರು.

ಈ ವೇಳೆ ಕೋರ್ಟ್‌ ಮುಂದೆ ವಾದಿಸಿದ್ದ ಪೊಲೀಸರು, ಅರ್ನಬ್‌ ವಿರುದ್ಧ ದಾಖಲಾಗಿರೋ ಗಂಭೀರವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಸಾಕ್ಷ್ಯ ದೊರೆತಿದೆ. ಅರ್ನಬ್‌ ಗೋಸ್ವಾಮಿ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಸಾಕ್ಷ್ಯವನ್ನು ನಾಶಪಡಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಸಾಕ್ಷ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆರೋಪಿಯನ್ನು ಎರಡು ವಾರಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕು ಎಂದು ವಾದಿಸಿದ್ದರು. 

ವಿಚಾರಣೆ ನಡೆಸಿದ ಆಲಿಬಾಗ್‌ ನ್ಯಾಯಾಲಯ ಅರ್ನಬ್‌ ಗೋಸ್ವಾಮಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ. ಇನ್ನೊಂದೆಡೆ ಬಂಧನದ ವೇಳೆ ಪೊಲೀಸರು ತನಗೆ ಹಲ್ಲೆ ಮಾಡಿದ್ದಾರೆ ಎಂದು ಅರ್ನಬ್‌ ಗೋಸ್ವಾಮಿ ಆರೋಪ ಮಾಡಿದ್ದರಿಂದ ಕಸ್ಟಡಿಗೆ ಒಪ್ಪಿಸುವ ಮುನ್ನ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

ಅರ್ನಬ್‌ ಗೋಸ್ವಾಮಿ ಬಂಧನ ಬಿಜೆಪಿ ಮತ್ತು ಮಹರಾ‍ಷ್ಟ್ರ ಸರ್ಕಾರದ ವಿರುದ್ಧ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ನಾಯಕರು ಅರ್ನಬ್‌ ಬಂಧನವನ್ನು ಖಂಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಘಟನೆ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ ಎಂದು ಕಿಡಿಕಾರಿದ್ದರು. ಅನೇಕ ಬಿಜೆಪಿ ನಾಯಕರು ಇದು ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಬಿಜೆಪಿ ನಾಯಕರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ, ‘ತಮ್ಮ ಸಾಕು ಗಿಣಿ ಪಂಜರದಲ್ಲಿರುವುದರಿಂದ ಬಿಜೆಪಿ ಆತಂಕಕ್ಕೊಳಗಾಗಿದೆ. ಅರ್ನಬ್‌ ಬಂಧನ ಆತ್ಮಹತ್ಯೆ ಕೇಸ್‌ಗೆ ಸಂಬಂಧಿಸಿದ್ದಾಗಿದೆ. ಆತ್ಮಹತ್ಯೆ ಕೇಸ್‌ಗೂ ಪತ್ರಿಕಾ ಸ್ವಾತಂತ್ರ್ಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿರುಗೇಟು ನೀಡಿದೆ.

Share This Article
Leave a comment