December 23, 2024

Newsnap Kannada

The World at your finger tips!

ka sa pa

ಅಪ್ರಸ್ತುತವಾಗುತ್ತಿರುವ ಹಾದಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

Spread the love
Kodase pic for Blurb
ಲಕ್ಷ್ಮಣ್ ಕೊಡಸೆ.

1915ರಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭದಿಂದಲೂ ಆಸಕ್ತ ಹಿತಗಳ ಹಿಡಿತಕ್ಕೆ ಸಿಲುಕಿರುವುದು ಕಾಲಕಾಲಕ್ಕೆ ಬಯಲಿಗೆ ಬಂದಿದೆ. ಆರಂಭದ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವ ಹೊಣೆಗಾರಿಕೆ ಇತ್ತು. ಮೊದಲ ಐವತ್ತು ವರ್ಷಗಳ ಕಾಲ ಪರಿಷತ್ತಿನ ಚಟುವಟಿಕೆಗಳು ನಾಡಿನ ಸಾಂಸ್ಕೃತಿಕ ಅಸ್ಮಿತೆಯನ್ನು ಬಲಪಡಿಸುವುದರತ್ತ ಕೇಂದ್ರೀಕೃತವಾಗಿತ್ತು. ಆಧುನಿಕ ಕನ್ನಡ ಸಾಹಿತ್ಯವನ್ನು ತಮ್ಮ ಸೃಜನಶೀಲ ಪ್ರತಿಭೆ ಮತ್ತು ವಿದ್ವತ್ತಿನಿಂದ ಶ್ರೀಮಂತಗೊಳಿಸಿದ ಪ್ರಾತಃಸ್ಮರಣೀಯ ಸಾಹಿತಿಗಳು ಪರಿಷತ್ತನ್ನು ನಾಡಿನ ಸಾಂಸ್ಕೃತಿಕ ವೇದಿಕೆಯಾಗಿ ರೂಪಿಸಿದ್ದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪ್ರಶ್ನೆ ಬಂದಾಗ ಆಗಿದ್ದ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಆಯ್ಕೆಯಲ್ಲಿ ಏರುಪೇರಾಗಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ವಿವೇಕವನ್ನೂ ತೋರುತ್ತಿದ್ದರು. ಜಿ.ನಾರಾಯಣ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಬಂದ ನಂತರ ಪರಿಷತ್ತಿನ ಹಣಕಾಸು ವ್ಯವಸ್ಥೆ ದೃಢವಾಯಿತು. ಅವರು ಪರಿಷತ್ತನ್ನು ಜನಸಾಮಾನ್ಯರಿಗೆ ಪರಿಚಯಿಸಲು ಪ್ರಯತ್ನ ನಡೆಸಿದರು. ಪರಿಷತ್ತು ನಾಡಿನ ಜನರ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸುತ್ತಿರುವ ಸಾಂಸ್ಕೃತಿಕ ವೇದಿಕೆ ಎಂಬುದನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಿದ್ದರು. ಸರ್ಕಾರ ಪರಿಷತ್ತಿನ ಚಟುವಟಿಕೆಗಳಿಗೆ ಉದಾರವಾಗಿ ಅನುದಾನ ನೀಡುವಂತೆ ಮನವೊಲಿಸಿದ್ದರು.
ಜಿ.ನಾರಾಯಣ ಅವರು ಅಧ್ಯಕ್ಷರಾಗಿದ್ದ ಕಾಲದಲ್ಲಿ ಪರಿಷತ್ತಿನ ಸದಸ್ಯರ ಸಂಖ್ಯೆ ಸಾವಿರದಿಂದ ಎರಡು ಸಾವಿರದ ಒಳಗೆ ಇತ್ತು. ಸದಸ್ಯ ಬಲವನ್ನು ಹತ್ತಿಪ್ಪತ್ತು ಸಾವಿರಕ್ಕೆ ಹೆಚ್ಚಿಸುವ ಮೂಲಕವೇ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿ ಬಂದ ಹಂ.ಪ.ನಾಗರಾಜಯ್ಯ ಅವರು ಪರಿಷತ್ತು ಎಲ್ಲ ವರ್ಗದ ಸಾಂಸ್ಕೃತಿಕ ವ್ಯಕ್ತಿಗಳಿಗೂ ಸೇರಿದ್ದು ಎಂಬುದನ್ನು ಕಾರ್ಯಕ್ರಮಗಳ ಮೂಲಕ ಪರಿಚಯಿಸಿದರು. ಪ್ರಕಟಣೆಗಳನ್ನು ವ್ಯವಸ್ಥಿತ ರೂಪಕ್ಕೆ ತಂದರು. ನಾಡಿನಾದ್ಯಂತ ಪರಿಷತ್ತಿನ ಘಟಕಗಳನ್ನು ತೆರೆದು ಕನ್ನಡ ಸಾಹಿತ್ಯ ಪರಿಷತ್ತು ಜನತೆಯ ಪ್ರಾತಿನಿಧಿಕ ಸಂಸ್ಥೆ ಎಂಬುದನ್ನು ಶ್ರೀಸಾಮಾನ್ಯರಿಗೆ ಪರಿಚಯಿಸುವ ಕೆಲಸ ಮಾಡಿದರು. ಹಂಪನಾ ಅವರು ಕೈಗೊಂಡಿದ್ದ ಕೆಲಸಗಳು ಅದುವರೆಗೆ ಪರಿಷತ್ತನ್ನು ತಮ್ಮದೇ ಜಹಗೀರಿನಂತೆ ಪರಿಭಾವಿಸಿದ್ದ ವ್ಯಕ್ತಿಗಳಿಗೆ ಅಪಥ್ಯವಾಯಿತು. ಅದಕ್ಕೆ ಪೂರಕವಾಗಿ ಸದಸ್ಯತ್ವವನ್ನು ಹೆಚ್ಚಿಸಿಕೊಳ್ಳುವ ಭರಾಟೆಯಲ್ಲಿ ಎಡವಿದ ಕಾರಣ ಸರ್ಕಾರ ಮಧ್ಯಪ್ರವೇಶ ಮಾಡಬೇಕಾಯಿತು. ಅದೇ ಮೊದಲ ಸಲಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಿಸಿತು. ಹಂಪನಾ ಅವರ ಅವಧಿಯಲ್ಲಿ ನಡೆದ ವ್ಯವಹಾರಗಳ ತನಿಖೆಗೆ ನ್ಯಾಯಮೂರ್ತಿ ಪಿ.ಕೆ.ಶ್ಯಾಮಸುಂದರ್ ನೇತೃತ್ವದಲ್ಲಿ ಆಯೋಗವನ್ನು ನೇಮಿಸಿತು. ಅದರ ಪರಿಣಾಮವಾಗಿ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಕೆಲವು ಸುಧಾರಣೆಗಳು ಆದವು. ಸಿಬ್ಬಂದಿಯ ಕೆಲಸಗಳನ್ನು ನಿರ್ಧರಿಸಲಾಯಿತು. ಎಚ್.ಡಿ.ದೇವೇಗೌಡರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ (1996) ಪರಿಷತ್ತಿನ ಸಿಬ್ಬಂದಿಯ ವೇತನವನ್ನು ಅನುದಾನ ಸಂಹಿತೆಗೆ ಒಳಪಡಿಸಿದರು. ಅದರಿಂದ ಪರಿಷತ್ತಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಸೇವಾ ಭದ್ರತೆಯೊಂದಿಗೆ ನಿರಾಳವಾಗಿ ಕೆಲಸ ಮಾಡುವಂಥ ವ್ಯವಸ್ಥೆ ಜಾರಿಯಾಯಿತು.
ಈಚಿನ ದಶಕಗಳಲ್ಲಿ ಸಾಹಿತ್ಯ ಪರಿಷತ್ತಿನ ಆಡಳಿತ ಮತ್ತು ನಿರ್ವಹಣೆಯಲ್ಲಿ ಅದನ್ನು ಪ್ರಾರಂಭ ಮಾಡಿದಾಗ ಇದ್ದ ಯಾವ ಸಾಂಸ್ಕೃತಿಕ ಜವಾಬ್ದಾರಿಯೂ ಉಳಿದಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಪರಿಷತ್ತಿನ ಆಡಳಿತ ಮಂಡಲಿಯ ಆಯ್ಕೆ ಚುನಾವಣೆಯನ್ನು ಆಧರಿಸಿದ್ದರೂ ಅದು ಅಧ್ಯಕ್ಷರ ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಗೆ ಸೀಮಿತವಾಗಿದೆ. ಅಧ್ಯಕ್ಷನಾಗಿ ಆಯ್ಕೆಯಾಗಿ ಬಂದ ವ್ಯಕ್ತಿ ತನ್ನ ಮರ್ಜಿಗೆ ತಕ್ಕ ಕಾರ್ಯಕಾರಿ ಸಮಿತಿಯನ್ನು ನಾಮಕರಣ ಮಾಡಿಕೊಳ್ಳುತ್ತಾರೆ. ಸರ್ಕಾರ ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಉದಾರವಾಗಿ ಆರ್ಥಿಕ ನೆರವನ್ನು ನೀಡುತ್ತಿರುವುದರಿಂದ ಸಾಹಿತ್ಯಿಕ ಅಂಶಗಳಿಗಿಂತಲೂ ಹಣವನ್ನು ವಿನಿಯೋಗಿಸಿಕೊಳ್ಳುವ ಕ್ರಿಯಾಯೋಜನೆ ರೂಪಿಸಿಕೊಳ್ಳುವುದು ಆದ್ಯತೆ ಪಡೆಯುತ್ತದೆ. ಪರಿಷತ್ತಿನ ಅಧ್ಯಕ್ಷರಾಗಿ ಬಂದವರೆಲ್ಲರೂ ತಮ್ಮ ತಮ್ಮ ಕಾರ್ಯಸೂಚಿಯಂತೆ ಬೇಕಾದವರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ನೀಡುವುದಕ್ಕೆ ಮತ್ತು ವಿವಿಧ ದತ್ತಿಯ ಪುರಸ್ಕಾರ, ಪ್ರಶಸ್ತಿಗಳನ್ನು ತಮಗೆ ಬೇಕಾದವರಿಗೆ ನೀಡುವ ಸ್ವಂತ ಲಾಭದ ಕಡೆಯೇ ದೃಷ್ಟಿಯನ್ನು ಇರಿಸಿದ ಕಾರಣ ಪರಿಷತ್ತಿನ ಮೂಲ ಆಶಯ ನೇಪಥ್ಯಕ್ಕೆ ಸರಿದು ದಶಕಗಳೇ ಆಗಿವೆ.
ಪ್ರಾರಂಭದಲ್ಲಿ ಪರಿಷತ್ತು ನಡೆಸುತ್ತಿದ್ದ ಅನೇಕ ಕರ್ತವ್ಯಗಳನ್ನು ಈಗ ಸರ್ಕಾರವೇ ನಿರ್ವಹಿಸುತ್ತಿದೆ. ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಣೆಯ ಹೊಣೆಯನ್ನು ನೋಡಿಕೊಳ್ಳುತ್ತಿದೆ. ಸಾಹಿತ್ಯ ಕ್ಷೇತ್ರದ ಬೆಳವಣಿಗೆಗಳನ್ನು ಗುರುತಿಸಿ ಉತ್ತೇಜಿಸಲು ಸಾಹಿತ್ಯ ಅಕಾಡೆಮಿ ಅಸ್ತಿತ್ವಕ್ಕೆ ಬಂದಿದೆ. ಸಾಂಸ್ಕೃತಿಕ ಕ್ಷೇತ್ರದ ವ್ಯವಹಾರಗಳನ್ನು ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ಹತ್ತಾರು ಅಕಾಡೆಮಿಗಳು ಅಸ್ತಿತ್ವಕ್ಕೆ ಬಂದಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ನಾಡಿನ ಎಲ್ಲ ಭಾಗದ, ಎಲ್ಲ ವರ್ಗದ ಕವಿಗಳು, ಕಲಾವಿದರು ಮತ್ತು ಸಾಂಸ್ಕೃತಿಕ ಕ್ಷೇತ್ರದ ತಜ್ಞರನ್ನು ತಲುಪುತ್ತಿದೆ. ಅದಕ್ಕಾಗಿ ವರ್ಷಕ್ಕೆ ಸುಮಾರು ಐದು ನೂರು ಕೋಟಿ ರೂಪಾಯಿ ಹಣವನ್ನು ನೀಡುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕವೇ ಸರ್ಕಾರದ ಅನುದಾನ ಪಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೂಲ ಆಶಯದ ಹೊಣೆಗಾರಿಕೆಯನ್ನು ಬದಲಾದ ಸಂದರ್ಭಕ್ಕೆ ಅನುಗುಣವಾಗಿ ಬದಲಾಯಿಸಿಕೊಂಡಿಲ್ಲ. ಕನ್ನಡ ಭಾಷೆಗೆ, ಕನ್ನಡದ ಕಲಿಕೆಗೆ, ಕನ್ನಡದ ಉಳಿವಿಗೆ ಕುತ್ತು ಬರುತ್ತಿರುವ ಇಂದಿನ ಸಂಕಷ್ಟದ ಸಮಯದಲ್ಲಿಯೂ ತಾನು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲಾಗದ ಬೌದ್ಧಿಕ ದಿವಾಳಿತನಕ್ಕೆ ಬಂದಿದೆ.
ಈಚಿನ ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಕೆಲಸಗಳೆಂದರೆ ವರ್ಷಕ್ಕೆ ಒಮ್ಮೆ ಅಖಿಲ ಭಾರತ ವ್ಯಾಪ್ತಿಯ ಹೆಸರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವುದು, ಜಿಲ್ಲಾ ಘಟಕಗಳು ಮತ್ತು ತಾಲ್ಲೂಕು ಘಟಕಗಳು ತಮ್ಮ ವ್ಯಾಪ್ತಿಯಲ್ಲಿ ವರ್ಷಕ್ಕೆ ಒಮ್ಮೆ ಸ್ಥಳೀಯ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಕ್ಕೆ ಸರ್ಕಾರದಿಂದ ಬರುವ ಅನುದಾನವನ್ನು ವಿತರಿಸುವುದು, ಹಿಂದಿನ ಗಣ್ಯರು ಕನ್ನಡ ಭಾಷೆ, ಸಾಹಿತ್ಯದ ಮೇಲಿನ ಪ್ರೀತಿಗೆ ಸ್ಥಾಪಿಸಿದ ನೂರಾರು ದತ್ತಿ ಪ್ರಶಸ್ತಿಗಳನ್ನು ವಿತರಿಸುವುದು. ಸಾಹಿತ್ಯ ಸಮ್ಮೇಳನ ನಡೆಸುವುದಕ್ಕೆ ಸರ್ಕಾರ ಹತ್ತು ಕೋಟಿಯಷ್ಟು ಹಣವನ್ನು ನೀಡುತ್ತದೆ. ಮುಖ್ಯಮಂತ್ರಿಯೇ ಸಮ್ಮೇಳನವನ್ನು ಉದ್ಘಾಟಿಸುವ ಪರಂಪರೆಯನ್ನು ಪರಿಷತ್ತು ಒಪ್ಪಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಿಕೊಂಡು ಯಾವ ಜಿಲ್ಲೆಯಲ್ಲಿ ಸಮ್ಮೇಳನ ನಡೆಸುವುದಕ್ಕೆ ನಿಗದಿಯಾಗಿರುತ್ತದೆಯೋ ಆ ಜಿಲ್ಲಾಡಳಿತದ ಸಂಪೂರ್ಣ ನೆರವಿನೊಂದಿಗೆ ಸಮ್ಮೇಳನ ನಡೆಸುವ ಏಕಮಾತ್ರ ಕೆಲಸವನ್ನು ಪರಿಷತ್ತು ಈಚಿನ ದಶಕಗಳಲ್ಲಿ ಕೈಗೊಳ್ಳುತ್ತಿದೆ. ವರ್ಷಕ್ಕೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತಿರುವ ಕಾರಣ ಪರಿಷತ್ತಿನ ಅಧ್ಯಕ್ಷರಾಗುವುದಕ್ಕೆ ತೀವ್ರ ಪೈಪೋಟಿ ಇರುತ್ತದೆ. ನಾಡು ನುಡಿಯ ಏಳಿಗೆಗೆ ಸಂಬಂಧಿಸಿ ಹಿಂದಿನವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಲೇ ಸ್ವಂತ ಹಿತವನ್ನು ಸಾಧಿಸಿಕೊಳ್ಳುವ ಸಮಯಸಾಧಕ ಸಾಂಸ್ಕೃತಿಕ ಜೀವಿಗಳಿಗೆ ಹುಲುಸಾದ ಹುಲ್ಲುಗಾವಲಿನಂತೆ ಕನ್ನಡ ಸಾಹಿತ್ಯ ಪರಿಷತ್ತು ಪರಿವರ್ತನೆಯಾಗಿದೆ. ಪರಿಷತ್ತಿನ ಅಧ್ಯಕ್ಷರು ಸರ್ಕಾರದ ಆಡಳಿತ ಯಂತ್ರವನ್ನು ಬಳಸಿಕೊಂಡು ಸಮ್ಮೇಳನಗಳನ್ನು ನಡೆಸುವ ಈವೆಂಟ್ ಮೇನೇಜರ್ ಗಳಂತೆ ಕಾರ್ಯನಿರ್ವಹಿಸುವ ಹೊಣೆಗಾರಿಕೆಗೆ ತಮ್ಮನ್ನು ಒಡ್ಡಿಕೊಂಡಿದ್ದಾರೆ.
ಏಕೆಂದರೆ, ಪರಿಷತ್ತು ಯಾವುದೇ ಬೌದ್ಧಿಕ ಚಟುವಟಿಕೆಗಳಿಗೆ ಆಸರೆಯಾಗುವ ಸ್ಥಿತಿಯಲ್ಲಿಲ್ಲ. ಅಲ್ಲಿನ ಸರಸ್ವತಿ ಭಂಡಾರವೆಂಬ ಗ್ರಂಥಾಲಯ ಜಿಜ್ಞಾಸುಗಳ ಅಗತ್ಯವನ್ನು ಪೂರೈಸದ ಕಾರಣ ದೂಳು ತಿನ್ನುತ್ತಿದೆ. ಪ್ರಾಚೀನ ಸಾಹಿತ್ಯ ಅಧ್ಯಯನಕ್ಕೆ ಆಕರ ಗ್ರಂಥಗಳಿಲ್ಲ. ಮುದ್ರಣಾಲಯಕ್ಕೆ ಆಚಾರ್ಯ ಬಿ.ಎಂ.ಶ್ರೀಕಂಠಯ್ಯ ಅವರು ತಮ್ಮ ನಿವೃತ್ತಿಯ ಗಳಿಕೆಯನ್ನೇ ಕೊಡುಗೆಯಾಗಿ ನೀಡಿದ್ದರು. ಅದು ಈಗ ಪರಿಷತ್ತಿನ ನಿರ್ವಹಣೆಯಲ್ಲಿ ನಿಷ್ಕ್ರಿಯವಾಗಿದೆ. ಅಧ್ಯಕ್ಷರ ಮರ್ಜಿಯಂತೆ ನೇಮಕಗೊಂಡ ಗ್ರಂಥ ಪ್ರಕಟಣ ಸಮಿತಿ ಆಯ್ಕೆ ಮಾಡಿದ ಕೃತಿಗಳ ಪ್ರಕಟಣೆ, ಹಿಂದಿನ ಸಾಹಿತ್ಯ ಕೃತಿಗಳು ಮತ್ತು ನಿಘಂಟುಗಳ ಮರುಮುದ್ರಣ, ಕೆಲವು ದತ್ತಿ ಉಪನ್ಯಾಸಗಳನ್ನು (ಅವುಗಳಿಗೆ ನಿಗದಿಯಾದ ಗೌರವ ಧನದ ಹಂಚಿಕೆಗೆ ಅನ್ವಯಿಸಿ) ನಡೆಸುವ ಕೆಲಸವನ್ನು ಕೈಗೊಳ್ಳುತ್ತಿದೆ. ಪರಿಷತ್ತಿನ ಮುಖ್ಯವಾದ ಕೆಲಸ ಸಮ್ಮೇಳನ ನಡೆಸುವುದಕ್ಕೆ ಮತ್ತು ಪ್ರಶಸ್ತಿಗಳನ್ನು ನೀಡುವುದಕ್ಕೆ ಸೀಮಿತಗೊಂಡಿದೆ. ಸಾಹಿತ್ಯಿಕವಾಗಿ ಎಂದೋ ಹಾದಿ ತಪ್ಪಿರುವ ಪರಿಷತ್ತು ಸಾಂಸ್ಕೃತಿಕವಾಗಿಯೂ ಅಪ್ರಸ್ತುತವಾಗುವ ಹಾದಿಯಲ್ಲಿ ಮುನ್ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!