ಬಂಡವಾಳಶಾಹಿ ತಮ್ಮ ಸ್ನೇಹಿತರಿಗೆ ಎಪಿಎಂಸಿಯನ್ನೇ ಅಡವಿಡಲು ರಾಜ್ಯ ಸರ್ಕಾರ ಹೊರಟಿದೆ. ರಾಜ್ಯ ಸರ್ಕಾರವು ಭೂ ಸುಧಾರಣೆಯ ತಿದ್ದುಪಡಿ ಕಾಯ್ದೆಯ ಮೂಲಕ ಬಡ ರೈತರ ಜಮೀನನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೀಡುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಶನಿವಾರ ಹೇಳಿದರು.
ಮಂಡ್ಯದ ಅಂಬೇಡ್ಕರ್ ಭವನದಲ್ಲಿ ನಡೆದ ಬೃಹತ್ ರೈತ ಧ್ವನಿ ಸಮಾವೇಶದಲ್ಲಿ ಮಾತನಾಡಿದ ರಣದೀಪ್ ‘ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ರೈತರ ವಿರುದ್ಧ ಕತ್ತಿ ಮಸೆಯುತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರ ಜಾರಿಗೆ ತರಲಿರುವ ಕೃಷಿ ಮಸೂದೆಗಳು ರೈತರಿಗೆ ಮರಣಶಾಸನವಾಗಿವೆ. ಕೃಷಿ ಮಸೂದೆಗಳಿಂದ ರೈತರಿಗೆ ಕನಿಷ್ಠ ಬೆಂಬಲ ಬೆಲೆಯೂ ಸಿಗುವದಿಲ್ಲ. ರೈತರಿಗೆ ಬೆಂಬಲ ಬೆಲೆಯನ್ನು ನೀಡುವವರಾರು? ಈ ಸರ್ಕಾರವು ರೈತರ ಜೀವನವನ್ನು ಹಾಳು ಮಾಡುತ್ತಿದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಕಬ್ಬು ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸಿದ್ದರು. ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಗಳು ರೈತರ ಮೇಲೆ, ದಿನನಿತ್ಯದ ಆಹಾರದ ಮೇಲೆ ಆಕ್ರಮಣ ಮಾಡುತ್ತಿವೆ’ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ಮಸೂದೆಗಳು ಜನ ವಿರೋಧಿಯಾಗಿವೆ. ಯಾವುದೇ ಕಾರಣಕ್ಕೂ ನಾವು ಜಾರಿಯಾಗಲು ಬಿಡುವದಿಲ್ಲ. ಹಾಗಾಗಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸಬೇಕಿದೆ. ಇಂದಿನ ಸಮಾವೇಶ ನಿಮ್ಮ ಧ್ವನಿಯಾಗಿ ಸರ್ಕಾರಗಳಿಗೆ ಸ್ಪಷ್ಟ ಸಂದೇಶ ರವಾನಿಸಬೇಕು’ ಎಂದರು.
ಸಮಾವೇಶದಲ್ಲಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ. ಎನ್ ಚಲುವರಾಯಸ್ವಾಮಿ, ನರೇಂದ್ರ ಸ್ವಾಮಿ, ಮತ್ತಿತರು ಉಪಸ್ಥಿತರಿದ್ದರು.
More Stories
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು