November 15, 2024

Newsnap Kannada

The World at your finger tips!

deepa1

ಕೊರೊನಾ ಮತ್ತೊಂದು ಅಲೆ: ಸಹಜತೆ ಮತ್ತು ಕೃತಕ ಭಯ

Spread the love

ಸಾವಿನ ಭಯದ ಅನಾಥ ಪ್ರಜ್ಞೆಯಲ್ಲಿ ಮನೆಯೊಳಗೆ ಬಂಧಿಯಾಗಬೇಕಾದ ಸಂದರ್ಭದಲ್ಲಿ ತುಂಬಾ ಗಾಬರಿಯಾಗುವ ಅವಶ್ಯಕತೆ ಇಲ್ಲ. ಎಲ್ಲಾ ಶತಮಾನ ಗಳಲ್ಲೂ ಈ ರೀತಿಯ ಆತಂಕಗಳು ಜನರನ್ನು ಕಾಡಿವೆ.
ಅದಕ್ಕಾಗಿಯೇ ಹೇಳುವುದು,
ಬದುಕೊಂದು ಯುದ್ದ ಭೂಮಿ……………
ಗೆಲ್ಲಬಹುದು – ಸೋಲಬಹುದು –
ಅನಿರೀಕ್ಷಿತವಾಗಿ ಸಾಯಬಹುದು………..

ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ………‌

ಯುದ್ದದಲ್ಲಿ ಬಾಂಬು, ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು.

ಯುದ್ದದಂತೆ ಬದುಕಿನಲ್ಲೂ ಈ ಸಾಧ್ಯತೆ ಇರುತ್ತದೆ. ಏನು ಬೇಕಾದರೂ ಆಗಬಹುದು. ನಮ್ಮೊಂದಿಗೆ ಹಲವಾರು ಜನರಿರುತ್ತಾರೆ, ಸಂಬಂಧಗಳು ಇರುತ್ತವೆ. ಕೆಲವೊಮ್ಮೆ ಮುಂದೆ ಮತ್ತೆ ಕೆಲವರು ಜೊತೆಯೂ ಆಗಬಹುದು ಅಥವಾ ಸಂದರ್ಭದ ಒತ್ತಡದಿಂದ ಎಲ್ಲರೂ ಬೇರೆಯಾಗಿ ನಾವು ಒಂಟಿಯೂ ಆಗಬಹುದು.

ಯುದ್ದದಲ್ಲಿರುವ ಯಶಸ್ಸುಗಳು, ಸಂಭ್ರಮಗಳು, ತ್ಯಾಗಗಳು, ತೃಪ್ತಿಗಳು ಬದುಕಿನಲ್ಲೂ ಸಂಭವಿಸುತ್ತದೆ. ಹಾಗೆಯೇ ಸೋಲು, ಹತಾಶೆ, ಒಂಟಿತನ, ಅನಿರೀಕ್ಷಿತ, ಕುತಂತ್ರಗಳೂ ಸಹ ಯುದ್ಧ ಮತ್ತು ಬದುಕಿನ ಭಾಗಗಳೇ ಆಗಿದೆ…….

ಯುದ್ಧದ ಗೆಲುವು ನಮ್ಮನ್ನು ವಿಜೃಂಬಿಸಿದರೆ ಸೋಲು ನರಕಯಾತನೆಯೂ ಆಗಿ ಬದುಕು ಅಲ್ಲಿಗೆ ಮುಕ್ತಾಯವೂ ಆಗಬಹುದು. ಹಾಗೆ ಜೀವನದ ಯಶಸ್ಸು ನಮ್ಮನ್ನು ಅತ್ಯುತ್ತಮ ಸ್ಥಾನಕ್ಕೆ ಕೊಂಡೊಯ್ದುರೆ ಸೋಲು ಸಾವಾಗಿಯೂ ಪರಿವರ್ತನೆಯಾಗಬಹುದು……………

ಯುದ್ಧದ ತೀವ್ರ ಭಾವನೆಗಳು ಆತಂಕಗಳು ಆಯಾಯ ಸಂದರ್ಭದ ನಮ್ಮ ನಿರ್ಧಾರಗಳು ನಮ್ಮ ಮುಂದಿನ ಗತಿಯನ್ನು ನಿರ್ಧರಿಸುವಂತೆ ಜೀವನದಲ್ಲಿಯೂ ಕಠಿಣ ಸಂದರ್ಭದಲ್ಲಿ ನಾವು ತೆಗೆದುಕೊಳ್ಳುವ ತೀರ್ಮಾನಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ………..

ರಣಭೂಮಿಯ ಪ್ರತಿ ಹೆಜ್ಜೆಯನ್ನು ಅತ್ಯಂತ ಜಾಗರೂಕತೆಯಿಂದ, ವಿವೇಚನೆಯಿಂದ, ಸೂಕ್ಷ್ಮ ಮುಂದಾಲೋಚನೆಯಿಂದ, ನಿರೀಕ್ಷಿತ ಪರಿಣಾಮ ಊಹಿಸಿಯೇ ಇಡಬೇಕು, ಕೆಲವರ ಮಾರ್ಗದರ್ಶನ ಪಡೆಯಬೇಕು. ಮತ್ತು ಅದರ ಫಲಿತಾಂಶವನ್ನು ಎದುರಿಸಬೇಕು. ಹಾಗೆಯೇ ಬದುಕಿನಲ್ಲಿಯೂ ಬಾಲ್ಯದಿಂದ ಮುಪ್ಪಿನವರಗೆ ಆಯಾ ಕಾಲಘಟ್ಟದಲ್ಲಿ ನಾವು ಯೋಚಿಸಿ ನಿರ್ಧರಿಸಬೇಕು ಮತ್ತು ಫಲಿತಾಂಶಗಳನ್ನು ನಮ್ಮೆಲ್ಲ ಶ್ರಮದ ನಂತರವೂ ಬಂದಂತೆ ಸ್ವೀಕರಿಸಬೇಕು. ಕೊರಗುತ್ತಾ ಕುಳಿತರೆ ಸಾವು ಖಚಿತ………..

ಯುದ್ದದಲ್ಲಿ ಕೆಲವೊಮ್ಮೆ ಸೋಲಿನ ಅಂಚಿಗೆ ಬರಬಹುದು. ನಮ್ಮ ಯೋಜನೆಗಳು ತಲೆಕೆಳಗಾಗಬಹುದು, ನಮ್ಮವರಿಂದ ನಿರೀಕ್ಷಿತ ಬೆಂಬಲ ಸಿಗದಿರಬಹುದು. ಆಗಲೂ ನಿರಾಶರಾಗದೆ ಕೊನೆಯವರೆಗೂ ಹೋರಾಡಬೇಕು. ಬದುಕಿನಲ್ಲೂ ಕೂಡ ಇದು ಅಷ್ಟೇ ಸಹಜ……..

ನಮ್ಮ ಕಣ್ಣ ಮುಂದೆಯೇ ಅನೇಕ ಸಾವುನೋವುಗಳು ಸಂಭವಿಸಿದರೂ ನಾವು ಆ ಕ್ಷಣದ ನಮ್ಮ ಕರ್ತವ್ಯ ಮುಗಿಸಿ ಮುನ್ನಡೆಯವುದು ಯುದ್ಧದ ಅನಿವಾರ್ಯತೆ. ಹಾಗೆಯೇ ಬದುಕಿನಲ್ಲಿಯೂ ಸಹ. ಇದರಲ್ಲಿ ಅಂತಹ ವ್ಯತ್ಯಾಸವಿಲ್ಲ…………….

ಅದೃಷ್ಟ ಮತ್ತು ದುರಾದೃಷ್ಟವೆಂಬ ಖಚಿತವಲ್ಲದ, ವಿವರಿಸಲಾಗದ, ಪರಿಣಾಮದವರೆಗೂ ತಿಳಿಯದ ಒಂದು ಆಟ ಮಾತ್ರ ಯುದ್ಧ ಮತ್ತು ಬದುಕಿನಲ್ಲಿ ಇದ್ದೇ ಇರುತ್ತದೆ……..

ನಿಮ್ಮೆಲ್ಲಾ ಶ್ರಮ, ಒಳ್ಳೆಯತನ, ಚಾಕಚಕ್ಯತೆ ಎಲ್ಲವೂ ಇದ್ದು ವಿವರಿಸಲಾಗದ ಕಾರಣಕ್ಕೆ ನಿಮಗೆ ಯುದ್ದದಲ್ಲಿ ಸೋಲಾಗಬಹುದು. ಹಾಗೆಯೇ ಜೀವನದಲ್ಲಿಯೂ ಅನಿರೀಕ್ಷಿತವಾಗಿ ಯಶಸ್ಸು ಸಿಗಬಹುದು ಅಥವಾ ಸೋಲೂ ಆಗಬಹುದು……………

ದುಷ್ಟರು ಜನಪ್ರಿಯರಾಗಬಹುದು, ಉಡಾಫೆಯವರು ಅಧಿಕಾರಕ್ಕೇರಬಹುದು ಮತ್ತು ಪ್ರಾಮಾಣಿಕರು ದಕ್ಷರು ಹೇಳ ಹೆಸರಿಲ್ಲದಂತಾಗಬಹುದು………….

ಈ ಎಲ್ಲಾ ಸಾಧ್ಯತೆಗಳ ವಿಸ್ಮಯ ಪ್ರಪಂಚ ಯುದ್ಧ ಮತ್ತು ಬದುಕು………

ಹಾಗಾದರೆ ಇದರ ಪಾಠವೇನು ?

ಏನೂ ಇಲ್ಲ…..
ಸೃಷ್ಟಿಯ ಸಹಜತೆಯನ್ನು ಒಪ್ಪಿಕೊಂಡು ನಮ್ಮ ಮೆದುಳಿನ ಗ್ರಹಿಕೆಯ ಪ್ರತಿಕ್ರಿಯೆಗಳನ್ನು ಅನುಸರಿಸುತ್ತಾ ಜೀವವಿರುವವರೆಗೂ ನಮ್ಮ ನಿಯಂತ್ರಣವಿಲ್ಲದ ವಿಷಯಗಳಲ್ಲಿ ಅದನ್ನು ಬಂದಂತೆ ಸ್ವೀಕರಿಸಿ, ನಿಯಂತ್ರಣ ಇರುವ ಕಡೆ ಮತ್ತದೇ ಮೆದುಳ ಅರಿವಿನಿಂದ ಅದನ್ನು ನಮಗೆ ಸಾಧ್ಯವಿರುವಂತೆ ಅನುಕೂಲಕರವಾಗಿ ಪರಿವರ್ತಿಸಿ ಬದುಕುವುದು.

ಮಾಡುವುದನ್ನು ಯೋಚಿಸಿ ಮಾಡಿ.
ಪರಿಣಾಮ ಸ್ವೀಕರಿಸಿ.
ಪಶ್ಚಾತ್ತಾಪಕ್ಕೆ ಹೆಚ್ಚಿನ ಅವಕಾಶ ಕೊಡಬೇಡಿ…….

  • ವಿವೇಕಾನಂದ. ಹೆಚ್.ಕೆ.

Copyright © All rights reserved Newsnap | Newsever by AF themes.
error: Content is protected !!