January 16, 2025

Newsnap Kannada

The World at your finger tips!

deepa1

ಅಯೋಗ್ಯತೆಯ ಪ್ರಮಾಣ: ಮಾನದಂಡ ರೂಪಗಳು ಈಗ ಬದಲಾಗಿವೆ

Spread the love

ಲಾಕ್ ಡೌನ್ ಎಂಬ ಅರೆ ಬೆಂದ ತೀರ್ಮಾನ……

ಬೇಜವಾಬ್ದಾರಿ ವರ್ತನೆಯ ಮಾಧ್ಯಮಗಳು…..

ಸೂಕ್ಷ್ಮತೆ ಕಳೆದುಕೊಂಡ ವೈದ್ಯಕೀಯ ಲೋಕ……

ಜನಸಾಮಾನ್ಯರ ಮುಗಿಲು ಮುಟ್ಟಿದ ಆತಂಕಗಳು…….

ಗೊಂದಲದ ಗೂಡಾದ ಒಟ್ಟು ವ್ಯವಸ್ಥೆ……..

ಸಂಸತ್ತು ಮತ್ತು ವಿಧಾನ ಮಂಡಲ………

ವಿಧಾನಸಭೆ – ವಿಧಾನ ಪರಿಷತ್ ರಾಜ್ಯಗಳಲ್ಲಿ…

ಲೋಕಸಭೆ – ರಾಜ್ಯಸಭೆ ಕೇಂದ್ರದಲ್ಲಿ……..

ನನಗೆ ತಿಳಿದಂತೆ ಈ ದೇಶದ ಬಹಳಷ್ಟು ಮಹಿಳೆಯರು ಕಾರ್ಮಿಕರು ರೈತರು ಸಾಮಾನ್ಯರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲ ಅಥವಾ ಸ್ವಲ್ಪ ಮಟ್ಟಿಗೆ ತಿಳಿದಿದ್ದರು ಹೆಚ್ಚಿನ ಆಸಕ್ತಿ ಇರುವುದಿಲ್ಲ.

ಪ್ರಜಾಪ್ರಭುತ್ವದ ದೇಗುಲ ಎಂದು ಇದನ್ನು ಕರೆಯುತ್ತಾರೆ. ನಮ್ಮ ಎಂಎಲ್ಎ, ಎಂಎಲ್ಸಿ, ಎಂಪಿಗಳು ಇದರ ಪೂಜಾರಿಗಳು, ಪ್ರಜೆಗಳು ಅದರ ಮಾಲೀಕರಾದರೂ ಅಪರಿಮಿತ ಅಧಿಕಾರ ಇರುವುದು ಈ ಜನ ಪ್ರತಿನಿಧಿಗಳ ಬಳಿ.

ವರ್ಷದಲ್ಲಿ ಸುಮಾರು ೫೦/೧೦೦ ದಿನಗಳು ಇಲ್ಲಿ ಸಭೆ ಸೇರಿ ಚರ್ಚಿಸುತ್ತಾರೆ. ಇದಕ್ಕಾಗಿ ಅಪಾರ ಹಣ ಸಹ ಖರ್ಚಾಗುತ್ತದೆ. ನಮ್ಮನ್ನು ನಿಯಂತ್ರಿಸುವ ಮತ್ತು ನಮಗೆ ಅನುಕೂಲಕರ ನೀತಿ ನಿಯಮಗಳು ಕಾನೂನು ರೂಪ ಪಡೆಯುವುದು ಇಲ್ಲಿಯೇ. ಹಣದ ಎಲ್ಲಾ ಆದಾಯ ವೆಚ್ಚಗಳು ಇಲ್ಲಿಯೇ ನಿರ್ಧರಿಸಲ್ಪಡುತ್ತದೆ.

ಮೊದಲಿಗೆ ಇಲ್ಲಿನ ಸದಸ್ಯರು ನಮ್ಮಿಂದ ಆಯ್ಕೆಯಾದವರಾದ್ದರಿಂದ ಅವರ ಯೋಗ್ಯತೆ ನಮ್ಮೆಲ್ಲರಿಗೂ ತಿಳಿದಿದೆ.

ಸ್ವಾತಂತ್ರ್ಯ ಬಂದ ಒಂದಷ್ಟು ವರ್ಷ ನೆಹರು ಇಂದಿರಾ ಅಲೆಯ ಕಾಂಗ್ರೆಸ್, ಕೆಲವು ಕಡೆ ಮಾತ್ರ ಕಮ್ಯುನಿಸ್ಟ್, ನಂತರ ಕೆಲವು ವರ್ಷ ಅದರಿಂದ ಸಿಡಿದ ಪಕ್ಷಗಳ ಜನತಾ ಒಕ್ಕೂಟ, ಮತ್ತೆ ಸ್ವಲ್ಪ ವರ್ಷ ಕಾಂಗ್ರೆಸ್, ನಂತರ ರಾಮ ಜನ್ಮ ಭೂಮಿ ಅಲೆಯ ಬಿಜೆಪಿ, ನಂತರ ಪ್ರಾದೇಶಿಕ ಪಕ್ಷಗಳ ಒಕ್ಕೂಟ, ಮತ್ತೆ ಕಾಂಗ್ರೆಸ್ ಇದೀಗ ಮೋದಿ ಮತ್ತು ಹಿಂದುತ್ವದ ಅಲೆ ಹೀಗೆ ಒಂದಲ್ಲಾ ಒಂದು ಭಾವನಾತ್ಮಕ ಅಂಶಗಳೇ ಮುಖ್ಯವಾಗಿ ಅದರ ಅಲೆಯಲ್ಲಿ ಅಯೋಗ್ಯರೇ ಹೆಚ್ಚಾಗಿ ಆಯ್ಕೆಯಾದರು.

ಇದರ ಜೊತೆ ಹಣ ಹೆಂಡ ತೋಳ್ಭಲ ಜಾತಿ ಧರ್ಮ ಸಹ ಸೇರಿಕೊಂಡಿದ್ದವು.

ಎಲ್ಲರೂ ಅಯೋಗ್ಯರು ಎಂದು ಹೇಳುತ್ತಿಲ್ಲ. ಬೆರಳೆಣಿಕೆಯಷ್ಟು ಜನ ಯೋಗ್ಯರು ಆಗಲೂ ಈಗಲೂ ಇದ್ದಾರೆ. ಆದರೆ ಅನರ್ಹರೇ ಅತಿಹೆಚ್ಚು ಮತ್ತು ಅಯೋಗ್ಯತೆಯ ಪ್ರಮಾಣ ಮಾನದಂಡ ರೂಪಗಳು ಬದಲಾಗಿದೆ.

ಪ್ರಾರಂಭದ ದಿನಗಳಲ್ಲಿ ಭೂ ಮಾಲೀಕರು, ಗಾಂಧಿ ಟೋಪಿಯವರು ಪಕ್ಷದ ಚಿನ್ಹೆಯ ಮೇಲೆ ಗೆದ್ದು ಬರುತ್ತಿದ್ದರು. ನಂತರ ದುಡ್ಡು ಜಾತಿ ತೋಳ್ಬಲದಿಂದ ಗೆಲ್ಲುತ್ತಿದ್ದರು. ತದನಂತರ ಹೆಂಡ ಶಿಕ್ಷಣ ಸಕ್ಕರೆ ಲಾಭಿಗಳವರು, ಚಳವಳಿ ಸಂಘಟನೆ ಹೋರಾಟ ಮಾಡುವವರು, ಆಮೇಲೆ ದೊಡ್ಡ ರೌಡಿ ಗೂಂಡಾಗಳು, ಚಿನ್ನ ಗಣಿ ರಿಯಲ್ ಎಸ್ಟೇಟ್ ನವರು, ಮಾತಿನ ಮಲ್ಲರು, ಭಾಷಣಕಾರರು,ಇದೀಗ ಕೆಸರಿ ರುಮಾಲು ಸುತ್ತಿರುವವರು ಹೀಗೆ ಹೊಸ ಹೊಸ ಅವತಾರಗಳೊಂದಿಗೆ ಅನರ್ಹರು ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಿ ದ್ದಾರೆ.

ಆ ಕಾರಣದಿಂದಾಗಿಯೇ ಸಂಸತ್ತು ವಿಧಾನಮಂಡಲಗಳು ಅಯೋಗ್ಯರ, ಆತ್ಮವಂಚಕರ, ವಚನ ಭ್ರಷ್ಟರ, ಮುಖವಾಡದವರ, ಸೋಮಾರಿಗಳ, ದೇಶದ ಬಗ್ಗೆ ಯಾವುದೇ ಮಾಹಿತಿ ಇಲ್ಲದ, ಕಾಳಜಿ ಇಲ್ಲದ ಕೇವಲ ಪ್ರಹಸನ ಕೇಂದ್ರಗಳಂತಾಗಿವೆ.

ಪರ ವಿರೋಧದ ವಾಗ್ಭಾಣಗಳು, ಕುಚೇಷ್ಟೆಗಳು, ಅಸೂಯೆ, ಒಣ ವೇದಾಂತ, ಹಾಸ್ಯ, ವ್ಯಂಗ್ಯ, ಜನಪರವೆಂಬ ತೋರಿಕೆ, ಅಂಕಿಅಂಶಗಳ ಸರ್ಕಸ್ ಬಿಟ್ಟರೆ ನಿಜಕ್ಕೂ ಜನರನ್ನು ಕಾಡುವ ಸಮಸ್ಯೆಗಳ ವಾಸ್ತವ ನಿವಾರಣೆಗೆ ಇವರು ಪ್ರಯತ್ನ ಪಡುವುದಿಲ್ಲ. ಅದಕ್ಕೆ ಬೇಕಾದ ತಿಳಿವಳಿಕೆ ಪ್ರಾಮಾಣಿಕತೆ ಪ್ರೀತಿ ಮತ್ತು ಯೋಗ್ಯತೆ ಇವರುಗಳಿಗೆ ಇಲ್ಲ.

ಪ್ರಜಾಪ್ರಭುತ್ವದ ವ್ಯವಸ್ಥೆ ನಿಧಾನವಾಗಿ ಕುಸಿಯುತ್ತಾ ಜನರ ಆಕ್ರೋಶ ಹೆಚ್ಚಾಗಲು ಇದು ಬಹುಮುಖ್ಯ ಕಾರಣ.

ಮನಗಳಲ್ಲಿ,ಮನೆಗಳಲ್ಲಿ,
ಮತಗಳಲ್ಲಿ…ಬದಲಾವಣೆಯ ಗಾಳಿ ಬೀಸಿದಾಗ ಮಾತ್ರ ಸುಧಾರಣೆ ಸಾಧ್ಯ………….

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!