ಹಿರಿಯ ನಟ ಎಚ್.ಜಿ ಸೋಮಶೇಖರ್ ರಾವ್ ನಿಧನ

Team Newsnap
1 Min Read

ಹಿರಿಯ ರಂಗಭೂಮಿ ಕಲಾವಿದ ಮತ್ತು ನಟ ಎಚ್.ಜಿ ಸೋಮಶೇಖರ್ ರಾವ್ ಮಂಗಳವಾರ ನಿಧನರಾದರು.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 86 ವರ್ಷದ ಸೋಮಶೇಖರ್ ರಾವ್ ಇಂದು 12.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ.

ab193496 5dba 4cf1 9289 862711f6f503

ಸೋಮಶೇಖರ್ ರಾವ್ ಹಿರಿಯ ನಟ ದತ್ತಣ್ಣ ಸಹೋದರ. ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ ಸೋಮಶೇಖರ್ ರಾವ್ ಸಾಹಿತ್ಯ, ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದ್ದರು. ಅನೇಕ ಪಾಶ್ಚಿಮಾತ್ಯ ಮತ್ತು ಭಾರತೀಯ ನಾಟಕ ಕರ್ತೃಗಳ ಕೃತಿಗಳನ್ನು ರಂಗಭೂಮಿಯ ಮೇಲೆ ಜೀವಂತಗೊಳಿಸಿದವರು.

1981ರಲ್ಲಿ ಟಿ.ಎಸ್ ರಂಗ ನಿರ್ದೇಶನದ ‘ಸಾವಿತ್ರಿ’ ಸಿನಿಮಾ ಮೂಲಕ ಸೋಮಶೇಖರ್ ರಾವ್ ಚಿತ್ರರಂಗವನ್ನು ಪ್ರವೇಶಿಸಿದ್ದಾರೆ. ನಂತರ ರಾಯರು ಅನೇಕ ಚಿತ್ರಗಳಲ್ಲಿ ಭಾವ ಪ್ರಧಾನ ಮತ್ತು ಹಾಸ್ಯ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿ ನಿರ್ದೇಶನದ ‘ಮಿಥಿಲೆಯ ಸೀತೆಯರು’ ಇವರ ಅಭಿನಯ ಸಾಮರ್ಥ್ಯವನ್ನು ಸರಿಯಾಗಿ ಗುರುತಿಸುವಂತೆ ಮಾಡಿತು.

ರವಿ ಅವರೇ ನಿರ್ದೇಶಿಸಿದ ಇನ್ನೊಂದು ಚಿತ್ರ ‘ಹರಕೆಯ ಕುರಿ’ಯಲ್ಲಿ ಸೋಮಶೇಖರ್ ರಾವ್ ನೀಡಿದ ಸೊಗಸಾದ ಅಭಿನಯಕ್ಕಾಗಿ 1992 -93ನೇ ಸಾಲಿನ ರಾಜ್ಯ ಸರ್ಕಾರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿತ್ತು. ಕನ್ನಡ ರಂಗಭೂಮಿಗೆ ತಮ್ಮ ಸೇವೆಯನ್ನು ಸಲ್ಲಿಸುವುದೇ ಸೋಮಶೇಖರ್ ರಾವ್ ಅವರ ನಿಜವಾದ ಕಾಯಕ.

ಕಿರುತೆರೆ, ಚಲನಚಿತ್ರಗಳಿಗಿಂತ ಮಿಗಿಲಾಗಿ ರಂಗ ಕೈಂಕರ್ಯವನ್ನು ಪ್ರೀತಿಸಿದ ಸೋಮಶೇಖರ್ ರಾವ್ ಇನ್ನು ನೆನಪು ಮಾತ್ರ.

Share This Article
Leave a comment