ಆದರೆ ಇಂದಿಗೂ ಸಮಾಜದಲ್ಲಿ ಮಹಿಳೆಯರ ಆರ್ಥಿಕ, ಸಾಮಾಜಿಕ, ದೈಹಿಕ ಅಸಮಾನತೆಯನ್ನು ಮುಂದಿರಿಸಿಕೊಂಡು ಶೋಷಣೆ ನಡೆಯುತ್ತಲೇ ಬಂದಿದೆ. ಅದರಲ್ಲೂ ಶೋಷಣೆ ಮಾಡುವವರು ಮನೆಯವರು, ಪರಿಚಿತರು, ನೆರೆಹೊರೆಯವರು, ಸ್ನೇಹಿತರು ಯಾರೋ ಆಗಿರಬಹುದು ಶೋಷಣೆಗೆ ಒಳಗಾಗುತ್ತಿರುವ ಹೆಣ್ಣು 6-7 ವರ್ಷದ ಮಗುವಿನಿಂದ ಹಿಡಿದು 80-85 ವಯಸ್ಸಿನ ಹಿರಿಯ ಮಹಿಳೆಯೂ ಆಗಿರಬಹುದು. ಸಮಾಜದ ಕಟ್ಟುಪಾಡುಗಳು ಸಂಪ್ರದಾಯಗಳು ಈ ರೀತಿಯ ಶೋಷಣೆ ಕಾರಣ ಎಂದು ಆಧುನಿಕ ಜನರ ಅಭಿಪ್ರಾಯವಾಗಿದೆ. ಆದರೆ ನಮ್ಮ ಪುರಾತನ ಸಂಸ್ಕೃತಿಯಲ್ಲಿ ಮಹಿಳೆಗೆ ಬಹಳ ದೊಡ್ಡ ಗೌರವದ ಸ್ಥಾನ ಕೊಟ್ಟಿದ್ದರು. ವಿದೇಶಿ ದಾಳಿಗಳಿಂದ ಅನೇಕ ಅನವಶ್ಯಕ ಸಂಪ್ರದಾಯಗಳನ್ನು ಬೆಳೆಸಿಕೊಂಡಿದ್ದು ನಾವು ನೋಡಬಹುದಾಗಿದೆ.
ಇಂದಿನ ಕಾಲದ ಶೋಷಣೆ ಆರ್ಥಿಕವಾಗಿ ಅಸಹಾಯಕವಾಗಿರುವ ಮಹಿಳೆಯನ್ನು ಕತ್ತೆಯಂತೆ ದುಡಿಸಿಕೊಳ್ಳುವುದು ಅದಕ್ಕೆ ತಕ್ಕ ಸಂಬಳ ಕೊಡದೇ ಇರುವುದು ಅಥವಾ ಗುಲಾಮರಂತೆ ನಡೆಸಿಕೊಳ್ಳುವುದು. ಸಾಮಾಜಿಕವಾಗಿ ತಂದೆ ಅಥವಾ ಪತಿಯು ಜೊತೆಗೆ ಇಲ್ಲ ಅಥವಾ ಮೃತ್ಯುವಾಗಿದೆ ಎಂದರೆ ಅವರ ಬಗ್ಗೆ ಕೇವಲವಾಗಿ ಮಾತನಾಡುವುದು ಹಾಗೂ ಅವರನ್ನು ಲೈಂಗಿಕವಾಗಿ ಕೆಟ್ಟ ದೃಷ್ಟಿಯಿಂದ ನೋಡುವುದು, ನಡೆಸಿಕೊಳ್ಳುವುದು. ಇಂದಿನ ನೈತಿಕ ಮಟ್ಟ ಎಷ್ಟು ಕೆಳಗಿದೆ ಎಂದರೆ ವಿದೇಶಿ ಸಂಸ್ಕೃತಿಯಂತೆ ಹೆಣ್ಣನ್ನು ಭೋಗವ ವಸ್ತುವೆಂದು ನೋಡಲು ಆರಂಭಿಸಿದ್ದಾರೆ ಆಧುನಿಕತೆಯ ಸ್ವಚ್ಛಂದತೆಯ ಮರೆಯಲ್ಲಿ ನೈತಿಕತೆ ಪಾಠವನ್ನು ಮರೆತು ಹಸುಗೂಸಿನಿಂದ ಹಿಡಿದು ಹೆಣ್ಣು ಮುದುಕಿ ಆದರೂ ಅವಳನ್ನು ಬಲಾತ್ಕಾರ ಮಾಡುತ್ತಿರುವುದನ್ನು ನೋಡಬಹುದಾಗಿದೆ.
ಹಿಂದೆ ನಮ್ಮ ಶಿಕ್ಷಣ ಗುರುಕುಲದಲ್ಲಿ ನಡೆಯುತ್ತಿದ್ದ ಕಾರಣ ಮನಸ್ಸಿನ ನಿಯಂತ್ರಣದಲ್ಲಿರಲು ಅನೇಕ ರೀತಿಯ ಉಪಾಯಗಳನ್ನು ಸಾತ್ವಿಕ ಆಹಾರವನ್ನು ನೀಡಿ ಸಂಯಮ ಮತ್ತು ಶಿಸ್ತುಬದ್ದು ಜೀವನ ನಡೆಸುವಂತೆ ಬೆಳೆಸುತ್ತಿದ್ದರು. ಇಂದು ಶಿಕ್ಷಣ ಹಾಗೂ ಜೀವನ ಪದ್ಧತಿ ಪಾಶ್ಚಾತ್ಯರ ಆಧುನಿಕ ಜೀವನದ ಪ್ರಭಾವದಿಂದ ಶಿಸ್ತಿನ ಬದಲು ಸ್ವಚ್ಛಂದತೆ ಮನೆ ಮಾಡಿದೆ. ಹೀಗಾಗಿ ಜೀವನದಲ್ಲಿ ಅವರ ವಿಚಾರಗಳು ಪ್ರಭಾವ ಬೀರುತ್ತವೆ.
ಇನ್ನು ವಯಸ್ಸಾದ ಮಹಿಳೆಯರಿಗೆ ಲೈಂಗಿಕ ಕಿರುಕಳಗಳು ನಡೆದರೂ ಕಡಿಮೆ ಪ್ರಮಾಣ ಆದರೆ ಅವರ ಮಾನಸಿಕವಾಗಿ ಹಿಂಸೆ ಮಾಡುವುದು ಅವರನ್ನು ನಿರ್ಲಕ್ಷಿಸುವುದು ಸರ್ವೇ ಸಾಮಾನ್ಯವಾಗಿದೆ. ಮುಪ್ಪಿನ ಕಾಲದಲ್ಲಿ ಇವರು ಕೆಲಸಕ್ಕೆ ಹೋಗಿ ತಾಯಿಯನ್ನು ಮನೆಯ ಕೇರ್ ಟೇಕರ್ ಅಥವಾ ಸಂಬಳವಿಲ್ಲದ ಆಳಿನಂತೆ ನೋಡುವುದು ಇಂದಿನ ಸಮಾಜದಲ್ಲಿ ಕಾಣಬಹುದಾದ ಸಾಮಾನ್ಯ ದೃಶ್ಯ. ಇಂತಹ ಅನೇಕ ಸಮಸ್ಯೆಗಳು ಸಣ್ಣ ಹೆಣ್ಣುಮಕ್ಕಳಿಂದ ಹಿಡಿದು ಮುದುಕರವರೆಗೂ ಪ್ರತಿ ಹೆಜ್ಜೆಯಲ್ಲಿ ಕಾಣಬಹುದಾಗಿದೆ.
ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಸಾಮಾಜಿಕ ಜಾಲತಾಣಗಳು ಹಾಗೂ ನೈತಿಕತೆ ಇಲ್ಲದೇ ಬೆಳೆಯುತ್ತಿರುವ ಯುವ ಸಮಾಜ. ಮನಸ್ಸಿಗೆ ಬಂದಂತೆ ಬದುಕುವ ಯುವ ಜನರಿಗೆ ಯಾರ ಜೊತೆಗೆ ಹೇಗೆ ಬದುಕ ಬೇಕು ಎಂಬುದನ್ನು ಮರೆತು ನಡೆಯುತ್ತಿದೆ. ಹೆಣ್ಣು ಮಕ್ಕಳ ನಡವಳಿಕೆ ಹೇಗೆ ಇರಬೇಕು ಎಂಬುದನ್ನು ಹೆಣ್ಣುಮಕ್ಕಳು ಮರೆತರೆ ಅವರ ಜೊತೆಗೆ ಅನಾಹುತಗಳು ಆಗುತ್ತವೆ. ಅದೇ ರೀತಿ ಫ್ಯಾಶನ್ ಹೆಸರಿನಲ್ಲಿ ವಸ್ತ್ರ ಧಾರಣೆ ಮಾರ್ಯದೇ ಮೀರಿ ತುಂಡು ಉಡುಗೆ, ಪುರುಷರಿಗೆ ಉದ್ರೇಕಗೊಳಿಸುವಂತೆ ಧರಿಸುವ ಬಟ್ಟೆಗಳು ಸಮಾಜದ ಸ್ವಾಸ್ಥ್ಯ ಕೆಸಡಿಸುತ್ತಿದೆ. ಹಾಗೇನಾದರೂ ಸಭ್ಯರಾಗಿ ಇರಿ ಎಂದಾಗ ಅಂತಹವರನ್ನು ಹಳೆಯ ಕಾಲದವರು ಎಂದು ಮೂಲೆಗುಂಪಾಗಿಸುತ್ತಾರೆ.
ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಮುಂದುವರೆದಿದ್ದಾರೆ. ಆದರೆ ಅಷ್ಟು ಸಾಧನೆ ಮಾಡಲು ಅನೇಕ ರೀತಿಯ ಹೋರಾಟವನ್ನು ಮಾಡಿ ಮಹಿಳೆ ನೂರೆಂಟು ಸಮಸ್ಯೆಗಳನ್ನು ಎದುರಿಸಿ ಹೋಳರಾಟದ ಜೀವನ ನಡೆಸಿಯೇ ಬಂದಿರುತ್ತಾಳೆ. ಸಮಾಜ ಹೇಳಿದ ಹಾಗೆ ಪುರುಷರು ಮತ್ತು ಮಹಿಳೆಯರು ಸಮಾನರು ಅವರಿಗೆ ಸಮಾನ ಅವಕಾಶ ದೊರೆಯುತ್ತಿದೆ ಎಂಬುದು ಸರಿಯಾದ ವಾದವಲ್ಲ. ಆದರೆ ಯಾರೆಲ್ಲ ತಮ್ಮ ಮಹತ್ವಾಕಾಂಕ್ಷೆಯ ಬೆನ್ನು ಹತ್ತಿ ಪ್ರಯತ್ನ ಪಟ್ಟು ಸಾಧನೆ ಮಾಡಿದ್ದಾರೋ ಅವರೆಲ್ಲ ಮುಂದೆ ಬಂದು ಸಾಧಿಸಿ ಅನೇಕರಿಗೆ ಪ್ರೇರಣೆ ನೀಡುತ್ತಲಿದ್ದಾರೆ.
ಹೆಣ್ಣುಮಕ್ಕಳು ಬೇರೆಯವರ ಸಹಾಯ ಅಥವಾ ಬೆಂಬಲಕ್ಕೆಂದು ಕಾಯದೇ ಸ್ವತಃ ಧೈರ್ಯದಿಂದ ಬರುವ ಸಂದರ್ಭ ಎದುರಿಸಿ ಮೇಲೇಳುವ ಕಲೆಯನ್ನು ಮೈಗೂಡಿಸಿ ಕೊಂಡು ಮುನ್ನಡೆಯ ಬೇಕು. ಶೋಷಣೆ ಆರ್ಥಿಕವಾಗಿ ಆಗಲೀ ಸಾಮಾಜಿಕವಾಗಿ ಆಗಲಿ ಸಕ್ಷಮವಾಗಿ ಎದುರಿಸಿ ಮುನ್ನಡೆಯಬೇಕು. ಯಾರಿಗೂ ಕೂಡ ಸುಖದ ಸುಪ್ಪತ್ತಿಗೆ ಅಥವಾ ಸುಗ್ರಾಸ ಭೋಜನ ಶ್ರಮ ಪಡದೇ ದೊರೆಯುವುದಿಲ್ಲ. ಮಹಿಳೆ ತನ್ನನ್ನು ತಾನು ಸಮರ್ಥಳು ಮತ್ತು ಬೆಳೆದು ನಿಲ್ಲುತ್ತೇನೆ ಏಂಬ ವಿಶ್ವಾಸದಿಂದ ಬದುಕಿದರೆ ಸಮಾಜ ಯಾವುದೇ ಇರಲಿ ಪರಿಸ್ಥಿತಿ ಹೇಗೆ ಇರಲಿ ಅವಳು ಸಾಧನೆಯ ಹಾದಿಯಲ್ಲಿ ಮೈಲಿಗಲ್ಲುಗಳನ್ನು ಬರೆದು ಬೆಳೇದು ನಿಲ್ಲುತ್ತಾಳೆ.
ಮಾಧುರಿ ದೇಶಪಾಂಡೆ, ಬೆಂಗಳೂರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು