ಬದುಕಿನ ಬವಣೆ….ಬೆಳಕೆಲ್ಲಿ! ಸುತ್ತಲೂ ಕತ್ತಲು. ಕೋಣೆಯಲ್ಲಿ ನಾನೊಬ್ಬಳೆ. ಬಾಗಿಲ ಸಂದಿಯಲ್ಲಿ ಊಟ ತಳ್ಳತಾ ಇದಾರೆ. ಯಾಕೆ ನಾ ಏನು ತಪ್ಪು ಮಾಡಿದೆ…ನಾ ಇರೋದೆನು ಜೈಲಾ…ಅಪ್ಪಾ ನೀ ನಮ್ಮನ್ನು ಬಿಟ್ಟು ಹೋಗಿಬಿಟ್ಟಿ. ಮೂರು ಮಕ್ಕಳನ್ನು ಹಿಡಕೊಂಡು ಅಮ್ಮ ಕಷ್ಟ ಪಡತಿದಾಳೆ. ನನ್ನ ಈ ನರಕದಲ್ಲಿ ತಳ್ಳಿ ಹೋಗಿಬಿಟ್ಟಿದಾಳೆ.
ಕತ್ತಲೆಯೇ ನನ್ನ ಜೀವನ ಆಗಿಬಿಟ್ಟತಾ. ಬೆಳಕು ಮೂಡೋದು ಯಾವಾಗ ನನ್ನ ಜೀವನದಲ್ಲಿ. ನಾ ಚಂದ ಇರೋದ ತಪ್ಪಾತ. ನಾಳೆ ನನ್ನ ಮಾಮಾನ ಮಗಳ ನೋಡಲಿಕ್ಕೆ ವರ, ವರನ ಕಡೆಯವರು ಬರತಾರಂತ, ನಾ ಅವರಮುಂದ ಕಾಣಬಾರದಂತ ನನ್ನ ಕತ್ತಲಿ ಕೋಣೆಯೊಳಗ ತಳ್ಯಾರ. ನಾ ಚಂದ ಇರೋದ ತಪ್ಪಾತ. ಅಪ್ಪ ನೀ ಯಾಕ ನಮ್ಮನ್ನ ಬಿಟ್ಟು ಹೋದಿ.
ಈ ಜಗತ್ತು ಹಿಂಗ್ಯಾಕದ. ತನ್ನೊಳಗ ತಾ ಕುದಿತದ. ಅಕ್ಕಗ ಚಲೋ ಆದರ ನಾ ಖುಷಿನ ಪಡತಿನಲ್ಲ. ನಾ ಯಾಕ ಅಕಿ ಮದುವಿಗೆ ಅಡ್ಡ ಆಗಲಿ. ಕತ್ತಲಿ ಅಂದ್ರ ಹೆದರಾಕಿ ನಾನು. ಅಪ್ಪ ಬೆಳಕಾಗಿ ನನ್ನ ಸುತ್ತ ಇರತಿದ್ದ. ಈಗ ಕತ್ತಲಿಗೂ ಶೆಡ್ ಹೊಡದ ಕೂತಿನಿ. ಯಾವಾಗ ಇವರ ಶಾಸ್ತ್ರ ಎಲ್ಲಾ ಮುಗಿತದೇನೋ…ನಾ ಈ ಕತ್ತಲಿಯಿಂದ ಹೊರಗ ಬರಬೇಕು. ಸ್ವಚ್ಛಂದವಾಗಿ ಓಡಾಡಬೇಕು…ನಾನು ಹುಚ್ಚಕೋಡಿ ನೋಡು ಈ ಕತ್ತಲಿ ಕೋಣೆಯೊಳಗ ಕೂತು ಏನೇನೋ ಮಾತಾಡಲಿಕತ್ತೀನಿ. ನನ್ನ ಮಾತಿಗೆ ನಾನ ಸಾಕ್ಷಿ.
ನನ್ನ ಜೀವದಾಗ ಜೀವಾ ಇಟ್ಟಕೊಂಡು ಸಾಕೋ ರಾಜಕುಮಾರ ಬಂದಬರತಾನ. ಬಂದ ಬರತಾನ…ಮನೆ ತುಂಬಾ ಕಲರವ…ಬಂಧುಗಳ ಸಂಭ್ರಮ. ಅದರಾಗ ನಮ್ಮಮ್ಮ ಇಲ್ಲ. ಅಕಿ ಇಬ್ಬರು ಮಕ್ಕಳನ್ನ ಕರಕೊಂಡು ಬ್ಯಾರೇ ಊರನ್ಯಾಗ ಹೊಟ್ಟೆ ಹೊರಿಲಿಕತ್ತಾಳ. ರೊಕ್ಕ ಇಲ್ಲದ ನಮಗ ಬೆಲೆ ಎಲ್ಲಿ….ಮನಸ್ಸು ನಾಗಾಲೋಟದಲ್ಲಿ ಓಡತಾನೆ ಇತ್ತು…ರಾತ್ರಿ ಹತ್ತರ ಸಮಯ ಟರ್ರ್ ಅಂತ ಬಾಗಿಲು ತೆಗೆದ ಸದ್ದು. ಏ ಪ್ರೀತಿ ಬಾ ಹೊರಗ ಎಲ್ಲಾರೂ ಹೋಗ್ಯಾರ…ಸ್ವಚ್ಛ ಮಾಡಿ, ಏನರ ತಿಂದ ಬೀಳ ಹೋಗು ಅಂತ ಕಿವಿಗೆ ಅಪ್ಪಳಿಸೋ ಹಂಗ ಹೇಳಿದ್ಲು ಮಾಮಿ. ಅಪ್ಪ ತೊಡೆ ಮೇಲೆ ಕೂಡಿಸಿಕೊಂಡು ತುಪ್ಪಾ, ಮೆಂತೆಹಿಟ್ಟು, ರುಚಿಗೆ ತಕ್ಕಂಗ ಉಪ್ಪು ಹಾಕಿ ಮುದ್ದು ಮಾಡಿ ತಿನ್ನಸ್ತಿದ್ದ. ನೀ ಹೋದ ಮೇಲೆ ಈ ಕಟುಕರ ಕೈಯಾಗ ಸಿಕ್ಕಿನಿ ನೋಡು ಅಪ್ಪಾ ಅಂತ ಕಣ್ಣೀರು ಕಪಾಳದ ಮೇಲೆ ಬೀಳಸಗೊಂತ ಕೆಲಸ ಮಾಡಿ, ಉಳಿದ ಊಟಾ ಮಾಡಿ ಮತ್ತೆ ಕತ್ತಲಕೋಣೆಗೆ ಓಡಿ ಹೋದ್ಲು ಪ್ರೀತಿ….ಈಕೆಯ ಬದುಕು ತಪ್ಪದ ಬವಣೆ….ಬರತಾನ ರಾಜಕುಮಾರ….
ಗಾಯಿತ್ರಿ ಆರ್. ಅಪರಂಜಿ.
ಹುಬ್ಬಳ್ಳಿ
More Stories
ಮುರುಡೇಶ್ವರ ಬೀಚ್ ದುರಂತ: ನಾಲ್ವರು ಬಾಲಕಿಯರು ನೀರುಪಾಲು, ಪ್ರಾಂಶುಪಾಲು ಅಮಾನತು, 6 ಮಂದಿ ವಜಾ
ಎಸ್.ಎಂ.ಕೃಷ್ಣ ಅಂತ್ಯಕ್ರಿಯೆ: ಹುಟ್ಟೂರ ಸೋಮನಹಳ್ಳಿಯಲ್ಲಿ ಗಣ್ಯರಿಂದ ಅಂತಿಮ ನಮನ
ಪದವೀಧರರಿಗೆ ಸುವರ್ಣಾವಕಾಶ: ಸುಪ್ರೀಂಕೋರ್ಟ್ನಲ್ಲಿ 107 ಹುದ್ದೆಗಳ ನೇಮಕಾತಿ