🌷ತಿರುವು🌷
ರಚನಾ ಒಬ್ಬ ಅನಾಥ ಹುಡುಗಿ. ಹುಟ್ಟಿನಿಂದಲೇ ಅನಾಥಶ್ರಮದಲ್ಲಿ ಬೆಳೆದವಳು. ಜನಿಸಿದ ದಿನದಂದೇ ಯಾರೋ ನಿರ್ದಯಿ ತಂದು ಅನಾಥಾಶ್ರಮದ ಬಾಗಿಲಲ್ಲಿ ಮಲಗಿಸಿ ಹೋಗಿದ್ದರು. ಆದ್ದರಿಂದ ಅವಳ ಹೆತ್ತವರು ಯಾರೆಂಬುದು ಯಾರಿಗೂ ತಿಳಿದಿರಲಿಲ್ಲ. ರಚನಾ ಹುಟ್ಟು ಸೌಂದರ್ಯವತಿ. ಅವಳ ಸೌಂದರ್ಯ ಎಂಥವರನ್ನೂ ಆಕರ್ಷಿಸುವಂತಿತ್ತು. ಅಷ್ಟೇ ಗಾಂಭೀರ್ಯ ಒಳ್ಳೆಯ ಗುಣ ಮನೆ ಮಾಡಿತ್ತು.ಜೊತೆಗೆ ವಿದ್ಯಾವಂತೆ. ಅವಳ ಜಾಣತನವನ್ನು ನೋಡಿ ಆಶ್ರಮದವರು ಒಳ್ಳೆ ವಿದ್ಯೆ ಕೊಡಿಸಿ ಮನೆ ಮಗಳಂತೆ ಸಾಕಿದ್ದರು. ಇಂತ ಮಗಳಪ್ರೀತಿಯನ್ನು ಪಡೆಯಲು ನಿಜವಾಗಲೂ ಅವಳ ಪೋಷಕರು ಪುಣ್ಯ ಮಾಡಿರಲಿಲ್ಲ ಅನ್ನಿಸುತ್ತೆ. ಹೀಗೆ ರಚನಾ ಬೆಳೆದು ಹರಯಕ್ಕೆ ಕಾಲಿಟ್ಟಳು. ಹೀಗಿರುವಾಗ ಇದೇ ಅನಾಥಾಶ್ರಮದ ಪಕ್ಕ ಒಂದು ಪ್ರತಿಷ್ಠಿತ ಕಾಲೇಜು ಇತ್ತು. ಆ ಕಾಲೇಜಿಗೆ ಶ್ರೀಮಂತ ಮನೆತನದ ರಾಕೇಶ್ ಎಂಬ ಯುವಕ ಲೆಕ್ಟುರೆರ್ ಆಗಿ ಬಂದನು. ಅವನ ಕಣ್ಣಿಗೆ ಆಶ್ರಮದ ಮುಂದೆ ಒಮ್ಮೆ ರಚನಾ ಬಿದ್ದಳು. ಅವಳ ಸೌಂದರ್ಯಕ್ಕೆ ಮನಸೋತನು. ಅನಾಥ ಹುಡುಗಿಗೆ ಬಾಳು ಕೊಟ್ಟರೆ ನನ್ನ ಜನ್ಮ ಸಾರ್ಥಕ ಎಂದು ಮನದಲ್ಲಿ ನಿಶ್ಶಯಿಸಿದನು. ಅಂದೇ ನಿರ್ಧರಿಸಿಬಿಟ್ಟ ಮದುವೆ ಆದರೆ ಇವಳನ್ನೇ ಅಂತ.ಆದರೆ ಇದು ಅಷ್ಟು ಸುಲಭವಾಗಿರಲಿಲ್ಲ ಕಾರಣ ಅವನ ಅಂತಸ್ತೇಲ್ಲಿ ಇವಳದೆಲ್ಲಿ. ಅವನೋ ಆಗರ್ಭ ಶ್ರೀಮಂತ ಇವಳು ಅನಾಥೆ. ಕನಸಿನಲ್ಲೂ ಅವಳು ಮದುವೆಯ ಬಗ್ಗೆ .ನೆನೆಸಿಕೊಂಡಿರಲಿಲ್ಲ. ಕಾರಣ ಈ ಅನಾಥೆಯನ್ನು ಯಾರು ಕೈ ಹಿಡಿಯುತ್ತಾರೆ ಅಂತ.
ಹೀಗಿರುವಾಗ ಒಂದು ದಿನ ಅನಾಥಾಶ್ರಮದ ಗೇಟ್ ಮುಂದೆ ಒಂದು ಬೆಲೆ ಬಾಳುವ ಕಾರು ಬಂದು ನಿಂತಿತು.ಕಾರಿನಿಂದ ರಾಕೇಶ್ ಅವನ ತಂದೆ ತಾಯಿ ಇಳಿದರು. ಸೀದಾ ಒಳಗೆ ಬಂದರು.
ಅನಾಥಾಶ್ರಮದ ಮಾಲೀಕರಲ್ಲಿ ವಿಷಯ ಪ್ರಸ್ತಾಪಿಸಿದರು.ಆದರೆ ರಚನಾಗೆ ಅಳುಕು. ಅಂತ ಶ್ರೀಮಂತರ ಮನೆಯ ಸೊಸೆಯಾಗಲು ನಾನು ಅರ್ಹಳೆ ಎಂದು ಇತ್ತ ಮಾಲೀಕರಿಗೆ ಅವಳನ್ನು ಮದುವೆ ಮಾಡಲು ಒಂದು ರೀತಿಯ ಭಯ. ಹುಟ್ಟಿನಿಂದ ಮನೆ ಮಗಳಂತೆ ನೋಡಿಕೊಂಡಿರುವ ನಾವು ಈಗಿನ ಕಾಲದಲ್ಲಿ ಅಷ್ಟು ಸುಲಭವಾಗಿ ಶ್ರೀಮಂತ ಕುಟುಂಬದವರು ಇವಳನ್ನು ಒಪ್ಪಿದ್ದಾರೆಂದರೆ ಏನೋ ಬೇರೆ ಕಾರಣವಿರಬಹುದು. ಈಗಿನ ಕಾಲದಲ್ಲಿ ಯಾರನ್ನು ನಂಬುವ ಹಾಗಿಲ್ಲ. ಆಮೇಲೆ ಗಿಳಿಯಂತೆ ಸಾಕಿದ ರಚನಾಳನ್ನು ಕಟುಕನ ಕೈಗೆ ಕೊಟ್ಟ ಹಾಗೆ ಅಗುತ್ತೆ ಎಂದು ಒಳಗೊಳಗೇ ಅಳುಕು.ಆದರೆ, ರಾಕೇಶ್ ಹಿಡಿದ ಹಠ ಬಿಡಲಿಲ್ಲ. ಕೊನೆಗೆ ಒಪ್ಪಿಗೆ ಕೊಟ್ಟರು.
ಒಂದು ಶುಭ ಗಳಿಗೆಯಲ್ಲಿ ರಾಕೇಶ್ ಮನೆಯವರೇ ಎಲ್ಲ ಖರ್ಚು ವಹಿಸಿಕೊಂಡು ಅದ್ದೂರಿಯಾಗಿ ಮದುವೆ ಮಾಡಿಕೊಂಡರು. ಹೀಗೆ ರಚನಾ ಆಗರ್ಭ ಶ್ರೀಮಂತರ ಮನೆಯ ಒಬ್ಬಳೇ ಸೊಸೆಯಾಗಿ ಮನೆತುಂಬಿದಳು. ಆದರೂ ಅನಾಥಶ್ರಮದ ನಂಟು ಬಿಡಲಿಲ್ಲ. ಸಿರಿತನ ಅವಳ ನೆತ್ತಿಗೆ ಹತ್ತಲಿಲ್ಲ. ಆದಷ್ಟು ರಾಕೇಶ್ ಹಾಗೂ ರಚನಾ ಅನಾಥಾಶ್ರಮಕ್ಕೆ ನೆರವು ನೀಡುತ್ತಿದ್ದರು.
ರಚನಾ ಮನೆಗೆ ಹರಿಣಿ ಎನ್ನುವ ಒಬ್ಬ ಹೆಂಗಸು ಅಡುಗೆಯ ಕೆಲಸಕ್ಕೆ ಬರುತ್ತಿದ್ದಳು. ಅವಳನ್ನು ರಚನಾ ಎಂದು ಆಳಿನ ರೀತಿ ನಡೆಸಿಕೊಳ್ಳುತ್ತಿರಲಿಲ್ಲ. ಅಮ್ಮ ಎಂದೇ ಕರೆಯುತ್ತಿದ್ದಳು. ಹರಿಣಿಗೂ ಏನೋ ಅವಳು ಅಮ್ಮ ಅಂದಾಗ ಹಿಂದಿನ ನೆನಪು ಮರುಕಳಿಸುತ್ತಿತ್ತು. ನನ್ನ ಮಗು ನನ್ನೊಂದಿಗೆ ಇದ್ದಿದ್ದರೆ ಇಷ್ಟು ಹೊತ್ತಿಗೆ ರಚನಾಳಷ್ಟೇ ದೊಡ್ಡವಳಾಗಿರುತ್ತಿದ್ದಳು. ಪಾಪ ನಾನು ಮೈಮರೆತು ಮಾಡಿದ ತಪ್ಪಿಗೆ ಆ ಮಗು ಅನಾಥವಾಯಿತು ಎಂದು ಮನದಲ್ಲೇ ಕೊರಗುತ್ತಿದ್ದಳು.
ಹಾಗಾಗಿ ರಚನಾ ಅಮ್ಮ ಅಂತ ಕರೆವಾಗ ಏನೋ ಆನಂದ ಅನುಭವಿಸುತ್ತಿದ್ದಳು.
ಕಾಲ ಸರಿದಂತೆ ರಚನಾ ಗರ್ಭಿಣಿ ಆದಳು. ಅವಳಿಗೆ ಯಾವ ಕೊರಗು ಇರಲಿಲ್ಲ.ರಾಕೇಶ್ ಕುಟುಂಬದವರು ಅವಳಿಗೆ ಯಾವ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಅವಳ ಮನಸಲ್ಲಿ ಒಂದೇ ಕೊರಗು ಈ ಸಮಯದಲ್ಲಿ ಎಲ್ಲರ ಹಾಗೆ ನನಗೂ ತಾಯಿ ಇದ್ದಿದ್ದರೆ ಎಷ್ಟು ಸಂತಸ ಪಡುತ್ತಿದ್ದರೋ ಎಂತ ನತದೃಷ್ಟೆ ಎಂದು ಚಿಂತಿಸುತ್ತಿದ್ದಳು. ಇವಳ ಕೊರಗು ನೋಡಲಾಗದೆ ರಾಕೇಶ ಹರಿಣಿಯನ್ನು ಇನ್ನು ಮುಂದೆ ನೀವು ಮನೆಗೆ ಹೋಗುವುದು ಬೇಡ ರಚನಾಳ ಬಾನಂತನ ಆಗುವವರೆಗೂ ಇಲ್ಲೇ ಇರಿ ಎಂದು ಹೇಳಿದನು.
ರೋಗಿ ಬಯಸಿದ್ದು ಅದೇ ವೈದ್ಯ ಹೇಳಿದ್ದು ಅದೇ ಎನ್ನುವ ಹಾಗಾಯಿತು.ಇವಳು ತಾಯಿಯ ಚಿಂತೆಯಲ್ಲಿದ್ದರೆ ಅವಳು ಮಗಳ ಚಿಂತೆಯಲ್ಲಿ ಕೊರಗುತ್ತಿದ್ದಳು.ಇಬ್ಬರು ಒಂದೇ ದೋಣಿಯ ಪಯಣಿಗರು.ಇನ್ನೇನು ಹೆರಿಗೆ ದಿನ ಬಂದೇ ಬಿಟ್ಟಿತು. ರಚನಾ ಅಮ್ಮ ಅಮ್ಮ ಎಂದು ಅಳುವಾಗ ಹರಿಣಿಯ ಎದೆಯಲ್ಲಿ ಮಗಳೇ ಕರೆಯುತ್ತಿದ್ದಾಳೆ ಎಂದು ಏನೋ ಒಂದು ರೀತಿ ಆಗುತ್ತಿತ್ತು. ರಚನಾಗೆ ಮುದ್ದಾದ ಹೆಣ್ಣು ಮಗುವಿನ ಜನನ ಆಯಿತು. ರಾಕೇಶ್ ಕುಟುಂಬಕ್ಕಂತೂ ಸಂತಸ ಮುಗಿಲು ಮುಟ್ಟಿತ್ತು. ಮುದ್ದಿನ ಮೊಮ್ಮಗಳನ್ನು ಕಂಡು ರಾಕೇಶ್ ಹೆತ್ತವರ ಸಂಭ್ರಮ ಹೇಳತೀರದು.ಮನೆಗೆ ಮಹಾಲಕ್ಷ್ಮಿ ಬಂದಿದ್ದಾಳೆಂದೇ ಭಾವಿಸಿದರು.
ಒಂದು ದಿನ ರಚನಾ ಮಗುವಿನೊಂದಿಗೆ ಜೊತೆಗೆ ಹರಿಣಿಯನ್ನು ಕರೆದುಕೊಂಡು ಅನಾಥಾಶ್ರಮಕ್ಕೆ ಮಗುವನ್ನು ತೋರಿಸಲು ಹೊರಟಳು. ಆ ಅನಾಥಾಶ್ರಮದ ಮುಂದೆ ಕಾರ್ ನಿಲ್ಲಿಸಿದಾಗ ಹರಿಣಿ ಕೂತಲ್ಲೇ ಬೆವರತೊಡಗಿದಳು.ಕಾರಣ ಹಿಂದಿನ ಘಟನೆ ಮನಃ ಪಟಲದಲ್ಲಿ ಬಂದಿತು. ಅವಳ ಒದ್ದಾಟ ನೋಡಿ ರಚನಾ ಅಮ್ಮಏನಾಯಿತು ಅಂತ ಕೇಳಿದಳು. ಆಗ ಹರಿಣಿ ಹಿಂದಿನ ಘಟನೆ ಎಲ್ಲ ಹೇಳಿ ನನ್ನದಲ್ಲದ ತಪ್ಪಿಗೆ ಆ ಮಗುವನ್ನು ಅನಾಥ ಮಾಡಿಬಿಟ್ಟೆ ಎಂದು ಎಲ್ಲ ವಿಷಯ ಹೇಳಿದಳು. ಆದರೆ ಅವಳು ಹೆತ್ತ ಮಗು ಯಾರೆಂಬುದು ಗೊತ್ತಿರಲಿಲ್ಲ. ಸರಿ ಒಳಗೆ ಹೋಗಿ ಎಲ್ಲ ವಿಷಯಗಳನ್ನು ಹೇಳಿದಾಗ ಅನಾಥಾಶ್ರಮದ ಮಾಲಕಿ ನೋಡಮ್ಮ ನಾವು ಯಾವುದೇ ಪಾಲಕರಿಲ್ಲದ ಮಗು ಸಿಕ್ಕಿದಾಗ ಯಾವ ಸಂದರ್ಭದಲ್ಲಿ ಆದರೂ ಹೆತ್ತವರು ಪಶ್ಚಾತಾಪ ಪಟ್ಟು ಮರಳಿ ಬರಬಹುದು ಎಂಬ ಉದ್ದೇಶದಿಂದ ಆ ಮಗುವು ಸಿಕ್ಕಾಗ ಜೊತೆಯಲ್ಲಿದ್ದ ಬಟ್ಟೆಯನ್ನು ಹಾಗೆ ನೆನಪಿನಲ್ಲಿ ಇಟ್ಟು,ಆ ಮಗುವಿನ ಹೆಸರನ್ನು ಬರೆದು ಒಂದೊಂದು ಪೆಟ್ಟಿಗೆಯಲ್ಲಿ ಇಟ್ಟಿರುತ್ತೇವೆ ಎಂದು ಹೇಳಿದರು.ಆಗ ಹರಿಣಿ ತನ್ನ ಮಗಳು ಈಗ ಹೇಗಿದ್ದಳೋ ಎಂದು ನೋಡುವ ಉದ್ದೇಶದಿಂದ ಪೆಟ್ಟಿಗೆಗಳನ್ನು ಪರೀಕ್ಷಿಸಿದಾಗ ತಾನು ಸುತ್ತಿಟ್ಟಿದ್ದ ಬಟ್ಟೆಯನ್ನು ಅದರ ಮೇಲಿನ ಹೆಸರನ್ನು ನೋಡಿ ಅವಕ್ಕಾಗಿ ನಿಂತಲ್ಲೇ ಕುಸಿದಳು. ತನ್ನ ಕಣ್ಣನ್ನೇ ನಂಬದಾದಳು.ಅವಳ ಮಗು ಮತ್ಯಾರು ಅಲ್ಲ, ರಚನಾ ಇಬ್ಬರ ಕಂಬನಿ ಇಂದ ಆನಂದ ಬಾಷ್ಪದ ಕಣ್ಣೀರು.‘ಮದುವೆ ಬಂಧನವೋ , ಅನುಬಂಧವೋ …….’
ಒಂದು ಕಡೆ ಸಂತೋಷ, ಇನ್ನೊಂದು ಕಡೆ ತಳಮಳ. ಮನೆಯಲ್ಲಿ ಈ ವಿಷಯ ಹೇಗೆ ಹೇಳುವುದು ಎಂದು ಇಬ್ಬರಿಗೂ ಯೋಚನೆಗಿಟ್ಟುಕೊಂಡಿತು.ಒಂದು ಕಡೆ ತಾಯಿಯ ಪ್ರೀತಿ ಇನ್ನೊಂದು ಕಡೆ, ಮನಸಾರೆ ಪ್ರೀತಿಸುವ ರಾಕೇಶ ನ ಮುಖ ಕಣ್ಮುಂದೆ. ಯಾವುದನ್ನು ಅರಿಸಿಕೊಳ್ಳಬೇಕು ಎಂಬ ಗೊಂದಲ. ಏನಾದರೂ ಆಗಲಿ ಹೇಳಲೇಬೇಕು ಎಂಬ ದೃಢ ನಿಶ್ಚಯ ಮಾಡಿ ಮನೆಯಲ್ಲಿ ಈ ವಿಷಯ ಹೇಳಿಬಿಟ್ಟಳು. ಅದಕ್ಕೆ ಮನೆಯವರ ಪ್ರತಿಕ್ರಿಯೆ ಹೇಗಿರುತ್ತೆ ಎಂದುಕೊಂಡಿದ್ದವಳಿಗೆ ರಾಕೇಶ ನ ಮಾತು ಕೇಳಿ, ಮೂಕವಿಸ್ಮಿತಳಾದಳು.ರಾಕೇಶ ಹೇಳಿದ್ದಿಷ್ಟೇ, ಹರಿಣಿಯವರು ಇನ್ನು ಮುಂದೆ ಈ ಮನೆಯ ಆಳಲ್ಲ ಅವರೂ ಸಹ ಈ ಮನೆಯ ಸದಸ್ಯೆ ,ನನಗೂ ಇನ್ನು ಮುಂದೆ ಅತ್ತೆಯ ಉಪಚಾರ ಸಿಗಲಿದೆ ಎಂದಾಗ ಅವನ ಹೆತ್ತವರು ಸಹ ದನಿಗೂಡಿಸಿದರು. ಎಲ್ಲರ ಕಣ್ಣಲ್ಲೂ ಧನ್ಯತೆಯ ಭಾವ. ಅಗಲಿದ ತಾಯಿ ಮಗಳು ಒಂದಾದರು..ಇವರೆಲ್ಲರ ಸಂತೋಷ ಅರಿತಂತೆ ಮಗು ತೊಟ್ಟಿಲಿನಲ್ಲೇ ನಗು ಬೀರಿತು.
✍ವೀಣ ರಮೇಶ್
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ