ಪರಿಚಯದ ಚಲನಚಿತ್ರ ಯುವ ನಿರ್ದೇಶಕರೊಬ್ಬರು ಕರೆ ಮಾಡಿ ಅವರ ಮುಂದಿನ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಕೇಳಿದರು……
ಕುತೂಹಲಕ್ಕಾಗಿ ನಾನು ಯಾವ ಪಾತ್ರ ಎಂದು ಕೇಳಿದೆ.
” ಪೋಲಿಸ್ ಅಧಿಕಾರಿ ” ಎಂದರು.
ನಾನು ” ಓ ಒಬ್ಬ ನಿಷ್ಠಾವಂತ ಪ್ರಾಮಾಣಿಕ ದಕ್ಷ ಅಧಿಕಾರಿ. ಯಾವ ಮುಲಾಜಿಗೂ ಒಳಗಾಗದೆ ತನ್ನ ಕರ್ತವ್ಯ ನಿಭಾಯಿಸುವ ಪಾತ್ರವೇ ? ” ಎಂದು ಕೇಳಿದೆ.
” ಇಲ್ಲ ಈ ಚಿತ್ರದಲ್ಲಿ ಆತ ವಿಲನ್ ರಾಜಕಾರಣಿಯ ಗುಲಾಮನಂತೆ ಕೆಲಸ ಮಾಡುವ ಕಡು ಭ್ರಷ್ಠ ” ಪಾತ್ರ ಎಂದರು. ಆಗ ನಾನು ” ಕ್ಷಮಿಸಿ ಒಬ್ಬ ಪೋಲಿಸ್ ಕಲ್ಪನೆಯಲ್ಲಿಯೂ ವಿಲನ್ ಆಗುವುದನ್ನು ಸಹಿಸುವುದು ನನಗೆ ಕಷ್ಟ. ” ಎಂದು ನಯವಾಗಿ ತಿರಸ್ಕರಿಸಿದೆ.
ಆತ ಮತ್ತೆ ” ಇನ್ನೊಂದು ಧರ್ಮಾಧಿಕಾರಿಯ ಪಾತ್ರ ಇದೆ. ಅದನ್ನಾದರೂ ಮಾಡಿ ” ಎಂದ.
“ಹೌದೇ ಸರ್ವಸಂಗ ಪರಿತ್ಯಾಗಿಯಾಗಿ ಭಿಕ್ಷೆ ಬೇಡಿ ಅನ್ನದಾಸೋಹ ಅಕ್ಷರ ದಾಸೋಹ ಮಾಡುವ ನಿಷ್ಕಲ್ಮಶ ಹೃದಯದ ಆಧ್ಯಾತ್ಮಿಕ ಚಿಂತನೆಯ ಯಾವುದೇ ಧರ್ಮದ ಧರ್ಮಾಧಿಕಾರಿಯ ಪಾತ್ರವಾದರೂ ಸರಿ” ಎಂದೆ.
ಆತ ” ಛೆ, ಛೆ ನನ್ನ ಕಥೆಯಲ್ಲಿ ಬರುವ ಧರ್ಮಾಧಿಕಾರಿ ಮೇಲ್ನೋಟಕ್ಕೆ ಸಭ್ಯವಾಗಿ ಕಂಡರೂ ಆತ ಒಬ್ಬ ಗೋಮುಖ ವ್ಯಾಘ್ರ. ಎಲ್ಲಾ ದುಶ್ಚಟಗಳ ದಾಸ ” ಎಂದ.
ಅದನ್ನೂ ನಿರಾಕರಿಸಿದೆ.
ಕೊನೆಗೆ ಆತ ” ಹೋಗಲಿ ಒಬ್ಬ ಪತ್ರಕರ್ತನ ಪಾತ್ರವಿದೆ ಮಾಡಿ ” ಎಂದ.
ನಾನು ” ಸಮಾಜದ ಸರ್ಕಾರದ ಓರೆ ಕೋರೆಗಳನ್ನು ತಿದ್ದುವ ವ್ಯವಸ್ಥೆಯ ಹುಳುಕುಗಳನ್ನು ತೋರಿಸುವ ಧೈರ್ಯ ಸಾಹಸದ ವಿವೇಚನಾಯುಕ್ತ ಪಾತ್ರವೇ ” ಕೇಳಿದೆ.
ಆತ ” ಇಲ್ಲ, ಒಬ್ಬ ಸಾಧಾರಣ ವ್ಯಕ್ತಿ ಟಿವಿ ಮಾಧ್ಯಮದ ರಿಪೋರ್ಟರ್ ಆಗಿ ಕೆಲಸ ಆರಂಭಿಸಿ ತನ್ನ ಚಾಣಾಕ್ಷ ನಡೆಯಿಂದ ತಾನೇ ಸುದ್ದಿಗಳನ್ನು ಸೃಷ್ಟಿಸುತ್ತಾ ಜನರ ಭಾವನೆಗಳನ್ನು ಕೆರಳಿಸಿ TRP ಯಲ್ಲಿ ತನ್ನ ಚಾನಲ್ ನಂಬರ್ 1 ಆಗುವಂತೆ ಮಾಡಿ ಅಪಾರ ಹಣಗಳಿಸಿ ಕೊನೆಗೆ ಅದೇ ಹಣ ಜನಪ್ರಿಯತೆಯಿಂದ ಚುನಾವಣೆಗೆ ಸ್ಪರ್ಧಿಸಿ ಭ್ರಷ್ಠ MLA ಆಗುವ ಪಾತ್ರ ” ಎಂದ.
” ಅಯ್ಯೋ ಮಾರಾಯ ನಿನ್ನ ಚಿತ್ರದಲ್ಲಿ ಯಾವುದಾದರೂ ಒಳ್ಳೆಯ ಗುಣದ ಪಾತ್ರವಿದ್ದರೆ ಹೇಳು ” ಎಂದೆ.
ಆತ ” ಇಂದಿನ ಚಲನಚಿತ್ರ ಅಥವಾ ಧಾರಾವಾಹಿ ಎಂದರೆ ಅದು ಮನರಂಜನೆಯ ನೆಪದಲ್ಲಿ ಹಣಗಳಿಸುವ ಉದ್ಯಮ. ನಿಮ್ಮ ತಗಡು ಆದರ್ಶಗಳನ್ನು ಪ್ರಚಾರ ಮಾಡುವ ಮಾಧ್ಯಮವಲ್ಲ. ಒಳ್ಳೆಯದನ್ನೇ ತೋರಿಸಿದರೆ ಜನ ನೋಡುವುದೇ ಇಲ್ಲ. ಸಮಾಜದ ವಿಕೃತಗಳನ್ನು ಮಸಾಲೆ ಬೆರೆಸಿ ಕುತೂಹಲ ಮೂಡಿಸಿ ಅಫೀಮಿನಂತೆ ಅವರ ಮನಸ್ಸುಗಳ ಒಳ ಪ್ರವೇಶಿಸಿ ಅವರನ್ನು ಭಾವನಾ ಲೋಕದಲ್ಲಿ ತೇಲಿಸಿ ಅವರಿಗರಿವಿಲ್ಲದಂತೆ ಅದರಲ್ಲಿ ಮುಳುಗಿಸಿದರೆ ಆ ರೀತಿಯ ಧಾರಾವಾಹಿ ಮತ್ತು ಚಲನಚಿತ್ರಗಳು ಯಶಸ್ವಿಯಾಗುತ್ತವೆ.
ಅದಕ್ಕೆ ನೆಪವಾಗಿ ಕೇವಲ ನಾಯಕ ಮತ್ತು ನಾಯಕಿಯನ್ನು ಮಾತ್ರ ಎಲ್ಲಾ ಒಳ್ಳೆಯ ಗುಣಗಳ ಆದರ್ಶದಂತೆ ಚಿತ್ರಿಸಿ ಇಡೀ ಕಥೆಯ ನಿರೂಪಣೆಯಲ್ಲಿ ಕೆಟ್ಟದ್ದನ್ನೇ ವಿಜೃಂಭಿಸಲು ಪ್ರಯತ್ನಿಸುತ್ತೇವೆ.
ನಮ್ಮ ಜನ ಇರುವುದೇ ಹೀಗೆ. ಮುಖವಾಡಗಳ ಆತ್ಮವಂಚನೆಯ ಸಮಾಜ ಇದು. ಅದಕ್ಕಾಗಿಯೇ ಇಂದಿನ ಧಾರಾವಾಹಿಗಳು ಮಹಿಳೆಯರ ಅಚ್ಚುಮೆಚ್ಚಿನ ಮನರಂಜನೆಯ ಮೂಲವಾಗಿ ಲೇಡಿ ವಿಲನ್ ಗಳು ಮಿಂಚಿ ಹೆಣ್ಣೆಂದರೆ ಮಾತೃ ಹೃದಯಿ ಎಂಬ ಮನೋಭಾವ ಬದಲಾಗಿ ಅವರನ್ನು ನೋಡಿದರೆ ಭಯ ಮೂಡುತ್ತದೆ ” ಎಂದ.
ನೋಡಿ,….
ಹೇಗೆ ನಮ್ಮ ಮನಸ್ಥಿತಿಗಳು ಬದಲಾಗುತ್ತಾ ನಮಗರಿವಿಲ್ಲದೆ ವಿಕೃತಿಯತ್ತ ಸಾಗುತ್ತಿದೆ. ಎಲ್ಲಾ ರಂಗಗಳನ್ನು ವ್ಯಾಪಿಸುತ್ತಿದೆ.
ಇನ್ನಾದರೂ ಅಲ್ಲಿಯೇ ಕಳೆದು ಹೋಗದೆ ಅದರಿಂದ ಹೊರಬರುವ ಮಾರ್ಗಗಳನ್ನು ಹುಡುಕಿ ನಿಜವಾದ ಕ್ರಿಯಾತ್ಮತ ಚಟುವಟಿಕೆಯತ್ತ ನಮ್ಮ ಬದುಕಿನ ಪಯಣ ಸಾಗಲಿ ಎಂದು ಆಶಿಸುತ್ತಾ……
ಪ್ರವೇಶಿಸಲು ಬಿಡಿ ಎಲ್ಲಾ ವಿಷಯಗಳು ನಿಮ್ಮ ಮನಸ್ಸಿನಾಳಕ್ಕೆ,
ಒಳ್ಳೆಯದೋ, ಕೆಟ್ಟದ್ದೋ, ಇಷ್ಟದ್ದೋ, ಕಷ್ಟದ್ದೋ ಎಲ್ಲವೂ,
ಒಡಲಾಳದಲ್ಲಿ ನಡೆಯಲಿ ಚಿಂತನ ಮಂಥನ,
ಹೇಗಿದ್ದರೂ ನಮ್ಮ ಮೇಲೆ ನಮಗೆ ನಿಯಂತ್ರಣ ಇದ್ದೇ ಇದೆ,
ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವೂ ಇದೆ,
ಪರಿಸ್ಥಿತಿಯ ಆಳ ಅಗಲಗಳನ್ನು ಅವಲೋಕಿಸಿ,
ಮನದಾಳದ ಭಾವಕ್ಕೆ ಮಾತುಗಳ ಅಕ್ಷರಗಳ ರೂಪ ನೀಡಿ,
ಕಲ್ಪನೆ, ಆದರ್ಶ, ವಾಸ್ತವಗಳ ಸಮ್ಮಿಲನಗೊಳಿಸಿ,
ಆಗ ನಮ್ಮ ಅರಿವಿನ ಮಿತಿಯಲ್ಲಿಯೇ ಮೂಡುತ್ತದೆ ಸಮಷ್ಟಿ ಪ್ರಜ್ಞೆ,
ಅದೇ ಬಹುಶಃ ಪ್ರಬುದ್ಧತೆಯೆಡಗಿನ ಪಯಣ,
ಎಚ್ಚರಿಕೆ,
ಎಲ್ಲಿಯೂ ಸಭ್ಯತೆಯ ಗೆರೆಯನ್ನು ದಾಟದಿರಿ,
ಕ್ರಿಯೆ ಪ್ರಕ್ರಿಯೆಗಳು ಅದರೊಳಗೆ ಇರಲಿ,
ಆತ್ಮ ವಂಚನೆ, ಆತ್ಮಸಾಕ್ಷಿ, ಆತ್ಮಾವಲೋಕನದ ಅರಿವು ಸದಾ ಇರಲಿ,
ಆಗ,
ಮೂಡುವ ಭಾವವೇ ಶಾಂತಿ, ನೆಮ್ಮದಿ, ಆತ್ಮವಿಶ್ವಾಸ,
ಅದೇ ಬಹುತೇಕರ ಆಶಯದ ಪ್ರಬುದ್ಧ ಮನಸ್ಸು,
ಆ ಮನಸ್ಸುಗಳೇ ಪ್ರಬುದ್ಧ ಸಮಾಜದ ಆಸ್ತಿಗಳು,
ಆ ಆಸ್ತಿಗಳೇ ಭವ್ಯ ಭಾರತದ ಪ್ರಗತಿಯ ಮೆಟ್ಟಿಲುಗಳು,
ಆ ಮೆಟ್ಡಿಲುಗಳೇ ವಿಶ್ವ ಮಾನವ ಪ್ರಜ್ಞೆಯ ಗೋಪುರಗಳು,
ಆ ನಿಟ್ಟಿನಲ್ಲಿ ನಾವೆಲ್ಲಾ ಪ್ರಯತ್ನಿಸೋಣ,
ಖಂಡಿತ
ವಾಗಿಯೂ ಇಂದಲ್ಲಾ ನಾಳೆ ಸಮಾನ ಮನಸ್ಸುಗಳು,
ಒಟ್ಟಿಗೆ ಸೇರೋಣ,
ಪ್ರದರ್ಶನ, ಚಳವಳಿ, ಘೋಷಣೆಗಳಿಲ್ಲದೆ,
ನಿಸ್ವಾರ್ಥವಾಗಿ, ಆತ್ಮಸಾಕ್ಷಿ ಅನುಗುಣವಾಗಿ ಬದಲಾಣೆಗೆ ಅಳಿಲು ಸೇವೆ ಸಲ್ಲಿಸೋಣ,
ಆ ಕನಸು ನನಸಾಗುವ ದಿನಗಳಿಗೆ ಕಾಯುತ್ತಾ ನಿಮ್ಮೊಂದಿಗೆ .
- ವಿವೇಕಾನಂದ. ಹೆಚ್.ಕೆ.
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ