Categories: Main News

ತಾಯ್ತನಕೆಂಥ ಚೌಕಟ್ಟು

-ಡಾ.ಶುಭಶ್ರೀಪ್ರಸಾದ್. ಮಂಡ್ಯ

ಅಂದು ಬ್ಯಾಂಕಿನಲ್ಲಿ ಹೆಚ್ಚೇನೂ ರಷ್ ಇರಲಿಲ್ಲ. ಸಾಮಾನ್ಯವಾಗಿ ಬಹುತೇಕ ಬ್ಯಾಂಕುಗಳಲ್ಲಿ ಜನ ತುಂಬಿ ತುಳುಕುತ್ತಿರುತ್ತಾರೆ. ಹಣ ಕಟ್ಟಲು ತೆಗೆದುಕೊಳ್ಳಲು ಮಾತ್ರವಲ್ಲದೆ ಮೊಬೈಲ್‍ಗೆ ಮೆಸೇಜ್ ಬರುತ್ತಿಲ್ಲ ಎಂದೋ, ಅಕ್ಕಿ ದುಡ್ಡು ಬಂದಿದೆಯಾ ಎಂದು ಕೇಳಲೋ, ಆಧಾರ್ ಅಪ್ಡೇಟ್ ಆಗಿದೆಯಾ ಎಂದು ಪರೀಕ್ಷಿಸಲು, ಪಿಂಚಣಿ ಹಣ ಬಂದಿದೆಯೇ ಎಂದು ಕೇಳಲು, ಪಾಸ್ ಪುಸ್ತಕ ಮುದ್ರಿಸಿಕೊಳ್ಳಲು…. ಏನೇನೋ ಕಾರಣಗಳಿಗಾಗಿ ಬ್ಯಾಂಕಿಗೆ ಜನ ಎಡತಾಕುತ್ತಲೇ ಇರುತ್ತಾರೆ. ವಯಸ್ಸಾದ ಜೀವಗಳಿಗಂತೂ ಪಾಸ್ ಪುಸ್ತಕದಲ್ಲಿ ದುಡ್ಡು ನೋಡಿದರೇನೇ ಸಮಾಧಾನ. ಪಾಸ್ ಪುಸ್ತಕದಲ್ಲಿ ಮುದ್ರಿತವಾಗದಿದ್ದರೆ ಹಣವೇ ಕಾಣೆಯಾಗಿಬಿಡುತ್ತದೆ ಎಂದು ಭಾವಿಸುವ ಮುಗ್ಧರೂ ಇದ್ದಾರೆ.

ಅಂಥ ಒಂದು ಒತ್ತಡವಿಲ್ಲದ ದಿನದಲ್ಲಿ ಆಕೆ ನಮ್ಮ ಬ್ಯಾಂಕಿಗೆ ಬಂದರು. ನೋಡಲು ಎತ್ತರವೇನಲ್ಲದ ಕಪ್ಪಗಿನ ವ್ಯಕ್ತಿ. ಓದು ಬರಹ ಬರುತ್ತದೋ ಇಲ್ಲವೋ ಎಂದು ಅನುಮಾನ ಬರುವಂತಹ ಆಸಾಮಿ. ನನ್ನ ಮುಂದೆ ಬಂದು ಕುಳಿತರು. ‘ಎಫ್.ಡಿ ಮಾಡಬೇಕಿತು’್ತ ಎಂದರು. ಬರೀಲಿಕ್ಕೆ ಬರುತ್ತೋ ಇಲ್ಲವೋ ಎಂಬ ಅನುಮಾನದಲ್ಲೇ ಅರ್ಜಿಯನ್ನು ಕೊಟ್ಟೆ. ಅನಕ್ಷರಸ್ಥರಾದರೆ ಅಥವ ಕೇವಲ ಅಕ್ಷರಸ್ಥರಾದರೆ ನೀವೇ ಬರೆದುಬಿಡಿ ಎನ್ನುತ್ತಾರೆ. ಇವರು ಏನೂ ಹೇಳದೆ ಅರ್ಜಿಯನ್ನು ತುಂಬಹತ್ತಿದರು. ಆಕೆ ಎಷ್ಟು ಚಕಚಕ ಬರೆಯುತ್ತಿದ್ದರೆಂದರೆ ಹೆಚ್ಚಿನ ಓದೇ ಓದಿರಬೇಕು ಎನಿಸಿತು. ಅರ್ಜಿ ತುಂಬಿ ಕೊಟ್ಟಾದ ಮೇಲೆ ಕಂಪ್ಯೂಟರಿನಲ್ಲಿ ಅದನ್ನು ತುಂಬುವಾಗ ನಾಮಿನಿಯ ಹೆಸರಿತ್ತು, ನಾಮಿನಿಯ ಸಂಬಂಧದಲ್ಲಿ ‘ರಿಲೇಟಿವ್’ ಎಂದು ಬರೆದಿದ್ದರು. (ಹೆಸರನ್ನು ಬಹಿರಂಗಪಡಿಸುತ್ತಿಲ್ಲ) ಆದರೆ ನಾನು ಹಾಗೆ ತುಂಬಲಾಗುವುದಿಲ್ಲವಲ್ಲಾ ಅದಕ್ಕೆ ‘ನಾಮಿನಿ ನಿಮಗೆ ಏನು ಸಂಬಂಧ?’ ಎಂದು ಕೇಳಿದೆ. ಹಿಂದಿನ ಕುರ್ಚಿಯಲ್ಲಿ ಕುಳಿತ ಚಂದದ ಹುಡುಗಿಯನ್ನು ತೋರಿಸಿ ‘ಅವಳೇ ನಾಮಿನಿ. ನಾ ಪ್ರೀತಿಸುವ ಜೀವದ ಮಗಳು. ಅಂದರೆ ನನ್ನ ಮಗಳ ಲೆಕ್ಕವೇ ಬಿಡಿ’ ಎಂದು ಹೇಳಿದರು. ನನಗೆ ತಲೆ ಬುಡ ಅರ್ಥವಾಗಲಿಲ್ಲ. ಒಂದು ಬಗೆಯ ಗೊಂದಲದಿಂದ ಅವರ ಮುಖವನ್ನು ನೋಡಿದೆ. ‘ನೀವು ನನ್ನ ಗೆಳತಿ ಶಕ್ಕು ಶಿಷ್ಯೆ ಅಲ್ವಾ? ನೀವು ವಾರ್ತೆ ಓದುವಾಗ ಅವಳು ನಿಮ್ಮನ್ನು ನನ್ನ ಶಿಷ್ಯೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದಳು. ’ ಎಂದು ಕೇಳಿದರು. ‘ಯಾವ ಶಕ್ಕು?’ ಎಂದು ಕೇಳಿದೆ. ‘ನೀವು ನರ್ಸರಿ ಓದಿದ ಶಾಲೆಯ ಶಕುಂತಲಾ ಮೇಡಂ’ ಎಂದರು. ನನಗೆ ತುಂಬ ಸಂತೋಷವಾಯಿತು. ನನ್ನ ನೆಚ್ಚಿನ ಗುರುಗಳ ಗೆಳತಿಯೆಂದ ಮೇಲೆ ಇವರೂ ನನಗೆ ಹತ್ತಿರದವರೇ ಎಂದು ಭಾಸವಾಯಿತು. ಆಕೆ ‘ನಿಮಗೆ ಹೇಳಿದ್ರೆ ನಗ್ತೀರೇನೋ. ಆದ್ರೂ ನಿಮಗೆ ನಾಮಿನಿಯ ವಿಚಾರ ಹೇಳಬೇಕು ಅನಿಸುತ್ತಿದೆ. ನನ್ನ ಗೆಳತಿಯ ನೆಚ್ಚಿನ ಶಿಷ್ಯೆ ಅಂದ ಮೇಲೆ ನನಗೂ ನೀವು ಹತ್ತಿರದವರೇ’ ಎಂದರು. ನನ್ನ ಮುಖದ ಅಚ್ಚರಿ ಹಾಗು ಗೊಂದಲ ಇನ್ನೂ ಗೂಡುಕಟ್ಟಿದ್ದರೂ ಅದು ತುಸು ಸಡಿಲವಾಗಿತ್ತು. ಎಫ್.ಡಿ ಸರ್ಟಿಫಿಕೇಟನ್ನು ಸಹಿ ಮಾಡಲು ಮ್ಯಾನೇಜರ್ ಹತ್ತಿರ ಕಳುಹಿಸಿದ ಮೇಲೆ ‘ಹೇಳಿ ಪ್ಲೀಸ್’ ಎಂದೆ. ಆ ಹುಡುಗಿಯನ್ನು ತೋರಿಸಿ ‘ಇವಳ ಅಪ್ಪನೂ, ಇವಳ ಅಮ್ಮನೂ ನಾನೂ ಕ್ಲಾಸ್‍ಮೇಟ್ಸ್. ಇವಳ ಅಪ್ಪ ಮತ್ತು ನಾನು ಇಬ್ಬರೂ ತುಂಬ ಪ್ರೀತಿಸುತ್ತಿದ್ದೆವು. ಆದರೆ ಅದು ಇವಳ ಅಮ್ಮನಿಗೆ ಗೊತ್ತಿರಲಿಲ್ಲ. ನಾವಿಬ್ಬರೂ ತುಂಬಾ ಹಚ್ಚಿಕೊಂಡಿದ್ದೆವು. ಒಂದೇ ಧರ್ಮದವರು, ಒಂದೇ ಪಂಗಡದವರು ಹಾಗಾಗಿ ಮನೆಯವರ ವಿರೋಧವೇನೂ ಇರಲ್ಲ ಮದುವೆ ಮಾಡಿಕೊಳ್ಳೋಣ ಅಂತ ನಿರ್ಧರಿಸಿದ್ದೆವು. ಅವಳೂ ಇವಳ ಅಪ್ಪನನ್ನು ಪ್ರೀತಿಸುತ್ತಿದ್ದಳಂತ ನಮ್ಮಿಬ್ಬರಿಗೆ ತುಂಬಾ ತಡವಾಗಿ ಗೊತ್ತಾಯ್ತು. ನಮ್ಮ ಪ್ರೀತಿಯನ್ನು ಎಲ್ಲರ ಮುಂದೆ ಹೇಳಿಕೊಳ್ಳುವ ಮೊದಲೇ ಇವಳ ಅಜ್ಜ ಅಜ್ಜಿ ಇವಳ ಅಪ್ಪನ ಮನೆಗೆ ಬಂದು ಹೆಣ್ಣು ಕೇಳಿದ್ದರು. ಇವಳಪ್ಪ ಸಿಗದೇ ಇದ್ದರೆ ನಾನು ಬದುಕುವುದಿಲ್ಲ ಖಂಡಿತಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಇವಳಜ್ಜಿಯ ಹತ್ತಿರ ಹೇಳಿದ್ದಳಂತೆ. ಹಠವಾದಿಯಾದ ಆಕೆ ಹಾಗೆ ಮಾಡುವವಳೇ. ಇದು ಗೊತ್ತಾಗಿ ಇವಳಪ್ಪನೂ ನಾನೂ ಹೌಹಾರಿದೆವು. ಮೂವರೂ ಆತ್ಮೀಯ ಸ್ನೇಹಿತರೇ. ಯಾರಿಗೆ ನೋವಾದರೂ ಎಲ್ಲರಿಗೂ ನೋವೇ. ನಾನು ಏನೂ ಗೊತ್ತಿಲ್ಲದವಳಂತೆ ಇವಳಮ್ಮನ ಬಳಿ ಮಾತನಾಡಿದೆ. ಇವಳಪ್ಪ ಸಿಗದೇ ಹೋದರೆ ಅವಳು ಬದುಕುವುದಿಲ್ಲ ಎಂದು ಖಚಿತವಾದ ಮೇಲೆ ಇವಳಪ್ಪನ್ನ ನಾನೇ ಆಣೆ ಪ್ರಮಾಣ ಮಾಡಿ ಒಪ್ಪಿಸಿದೆ. ಇವಳು ಹುಟ್ಟುವ ವೇಳೆಗೆ ಇವಳ ಅಜ್ಜಿ ತೀರಿಕೊಂಡಿದ್ದರು. ಬಾಣಂತಿತನ ಮಾಡುವವರು ಯಾರೂ ಇರಲಿಲ್ಲ. ನಾನೇ ಬಾಣಂತನ ಮಾಡಿದೆ. ನನ್ನ ಅಪ್ಪ ಅಮ್ಮನೂ ತೀರಿಕೊಂಡರು. ಇವಳ ಅಪ್ಪ ಅಮ್ಮ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರಿಂದ ಅವರ ಸಹಾಯಕ್ಕೆಂದು ನಾನೂ ಅವರ ಮನೆಯಲ್ಲೇ ಉಳಿಯಬೇಕಾಯಿತು. ನಾನೂ ಟೀಚರ್, ಅವರೂ ಶಿಕ್ಷಕರೇ. ಎಲ್ಲರೂ ಒಟ್ಟಿಗೇ ಬೆಳಿಗ್ಗೆ ಹೊರಡುತ್ತಿದ್ದೆವು, ಸಂಜೆ ಬರುತ್ತಿದ್ದೆವು. ಮಕ್ಕಳು ನನ್ನನ್ನು ತುಂಬ ಹಚ್ಚಿಕೊಂಡವು. ಮಮ್ಮಿ ಮಮ್ಮಿ ಅನ್ನುತ್ತಿದ್ದವು. ಅದು ಹೇಗೋ ಇವಳಮ್ಮನಿಗೆ ನನ್ನ ತ್ಯಾಗ ಗೊತ್ತಾಗಿ ಹೋಯಿತು. ತಿಂಗಳುಗಟ್ಟಲೇ ಕಣ್ಣೀರು ಹಾಕಿದಳು. ಅತ್ತೂ ಕರೆದೂ ನೀನು ಇವರನ್ನು ಮದುವೆಯಾಗು. ನಾವಿಬ್ಬರೂ ಒಟ್ಟಿಗೇ ಚೆನ್ನಾಗಿ ನೋಡಿಕೊಳ್ಳೋಣ ಎಂದಳು. ನಾನು ಬಿಲ್ ಕುಲ್ ಒಪ್ಪಲಿಲ್ಲ. ಅದಕ್ಕೆ ಇವಳಪ್ಪನೂ ಒಪ್ಪಲಿಲ್ಲ. ಅವರ ಮನೆ ಸೇರಿದ ಮೇಲೆ ನಾನೂ ಇವಳಪ್ಪನೂ ಎಂದೂ ಒಂಟಿಯಾಗಿ ಮಾತನಾಡಿದ್ದೂ ಇಲ್ಲ. ನಾನು ಪ್ರೀತಿಸುವ ಜೀವ ಚಂದ ಬದುಕಿದರೆ ಸಾಕೆಂದು ನಾ ಬಯಸಿದೆ. ಅವನಿಂದಾಗಿ ನಾ ಒಂಟಿಯಾಗಿ ಬದುಕನ್ನು ಸಾಗಿಸಬೇಕಾಯಿತಲ್ಲ ಎಂದು ಇವಳಪ್ಪ ಕೊರಗಿದ್ದು ಕಂಡೆ. ನನ್ನ ಹಠದಿಂದಾಗಿ ಇವರಿಬ್ಬರ ಪ್ರೀತಿ ಸೊರಗಿತಲ್ಲ ಎಂದು ಇವಳಮ್ಮ ಬಳಲಿದ್ದನ್ನೂ ಕಂಡೆ. ಆದರೆ ಅವರಿಬ್ಬರ ಮಧ್ಯೆ ಹೋಗಲು ನಾನೆಂದೂ ಇಚ್ಛೆ ಪಡಲಿಲ್ಲ. ಅವರ ಮಕ್ಕಳನ್ನು ನನ್ನ ಮಕ್ಕಳೆನ್ನುವಷ್ಟು ಪ್ರೀತಿಯಿಂದ ಬೆಳೆಸಿದೆ. ಮಕ್ಕಳು ದೊಡ್ಡವರಾಗಿ ಬೆಳೆದವು. ಅದು ಹೇಗೋ ಮಕ್ಕಳಿಗೂ ನಮ್ಮ ಪ್ರೀತಿಯ ವಿಷಯ ತಿಳಿದುಹೋಯಿತು. ಅದಾಗಿ ಮಕ್ಕಳು ನನ್ನನ್ನು ಅಮ್ಮ ಎಂದೇ ಕರೆಯಲು ಆರಂಭಿಸಿದವು. ಆ ಎರಡು ಮಕ್ಕಳಿಗೆ ನಾನೆಂದರೆ ಎಷ್ಟು ಗೌರವ ಎಂದರೆ ಈಗ ಮೊದಲನೆಯವನು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾನೂ ರಿಟೈರ್ ಆಗಿದ್ದೇನೆ. ಹಾಗಾಗಿ ಅಲ್ಲಿಗೇ ಬಂದುಬಿಡಿ ಎನ್ನುತ್ತಾನೆ. ನನ್ನ ಎಲ್ಲ ಬೇಕು ಬೇಡಗಳನ್ನು ಮಕ್ಕಳಿಬ್ಬರೂ ನೋಡಿಕೊಳ್ಳುತ್ತಾರೆ. ಆದರೆ ಇನ್ನೂ ಮದುವೆಯಾಗದ ಈ ಮಗು ನನ್ನನ್ನು ಅಣ್ಣನ ಮನೆಗೆ ಹೋಗಲು ಬಿಡುತ್ತಿಲ್ಲ. ಇವಳಪ್ಪ ಅಮ್ಮನಿಗೂ ನನ್ನನ್ನು ಎಲ್ಲಿಗೂ ಕಳಿಸಲು ಮನಸ್ಸಿಲ್ಲ. ನಾವು ಮೂವರೂ ಒಳ್ಳೆಯ ಸ್ನೇಹಿತರಾಗಿಯೇ ಇದ್ದೇವೆ. ಎಂದೂ ನಮ್ಮಲ್ಲಿ ವೈಮನಸ್ಸು ಬಂದಿಲ್ಲ. ನನ್ನನ್ನು ಇವಳಮ್ಮ ಎಂದೂ ಸಂಶಯದ ದೃಷ್ಟಿಯಿಂದ ನೋಡಿಲ್ಲ. ಹಾಗೆ ನೋಡಿದ್ದರೆ ನಾನು ಎಂದೋ ಜೀವ ತೆಗೆದುಕೊಂಡುಬಿಡುತ್ತಿದ್ದೆ. ನನಗೆ ಈ ಮಕ್ಕಳೇ ಜೀವ. ನನಗೆ ತಾಯ್ತನ ಕೊಟ್ಟವು ಇವುಗಳೇ. ಅವಕ್ಕೂನೂ ನಾನೆಂದರೆ ಪ್ರಾಣ. ಹೇಳಿ ಇನ್ಯಾರಿಗೆ ನಾಮಿನಿ ಮಾಡಲಿ’ ಎಂದು ಹೇಳಿ ನಿಟ್ಟುಸಿರು ಬಿಟ್ಟರು. ಅದೇಕೋ ನನ್ನ ಕಣ್ಣು ತೇವವಾಗಿತ್ತು. ಹೀಗೂ ಉಂಟೇ ಎನಿಸಿತು.


‘ನಿಮ್ಮ ಐಡೆಂಟಿಟಿ ರಿವೀಲ್ ಮಾಡದೆ ನನ್ನ ಬ್ಯಾಂಕರ್ಸ್ ಡೈರಿಯಲ್ಲಿ ಇದನ್ನು ಬರೆಯಲೇ?’ ಎಂದು ಕೇಳಿದೆ. ಆಕೆ ‘ಬರೆಯಿರಿ ಅಡ್ಡಿಯಿಲ್ಲ. ಆದರೆ ಇದನ್ನು ಕಟ್ಟುಕಥೆಯೆಂದೋ, ಸಿನಿಮಾ ಕಥೆಯೆಂದೋ ಜನ ಅಂದುಕೊಳ್ಳುತ್ತಾರೆ. ನಂಬುವುದಿಲ್ಲ’ ಎಂದು ನಕ್ಕರು. ಅಷ್ಟರಲ್ಲಿ ಎಫ್.ಡಿ ಸರ್ಟಿಫಿಕೇಟ್ ಬಂದಾಗಿತ್ತು. ಕೊಟ್ಟು ಕಳುಹಿಸಿದೆ.
ಬದುಕೆಂದರೆ ಸ್ವಾರ್ಥದ ಬುತ್ತಿ ಮಾತ್ರವಲ್ಲ. ಸೇವೆಯ ಜೊತೆಗೆ ಅನೇಕ ವೇಳೆ ತ್ಯಾಗದ ಸವಿಯಿಂದಲೂ ಸಾರ್ಥಕ್ಯ ಪಡೆದುಕೊಳ್ಳುತ್ತದೆ.

Team Newsnap
Leave a Comment
Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024