ನನಗರಿವಿಲ್ಲದೇ ನನ್ನ ಹೃದಯ ಕದ್ದವನೇ ಇಲ್ಲಿ ಕೇಳು, ನನ್ನ ಮನದ ಭಾವನೆಗಳನರಿತು ನಿನ್ನೊಲವಿನ ಸುಮಶರವನು ಎಸೆದು ನನ್ನನ್ನು ನಿನ್ನ ಪ್ರೀತಿಯಲಿ ಶರಣಾಗತಗೊಳಿಸುವ ಕಲೆ ನಿನಗೆಂದೋ ಕರಗತವಾಗಿದೆ ಎಂದು ತಿಳಿದಿದೆ ನನಗೆ.
ನೂರು ಮಾತನಾಡಿದರು ಮೌನವಾಗಿರುವ ನನಗೆ, ಗಾಂಭೀರ್ಯದ ಮೌನವನು ಹೊದ್ದ ಅಚಲ ಪರ್ವತದಂತಿರುವ ನಿನ್ನೆದುರು, ವಾಸ್ತವವನ್ನೇ ಮರೆತು ಪಟ ಪಟನೇ ಮಾತನಾಡುವ ಮಾತಿನ ಮಲ್ಲಿಯನ್ನಾಗಿ ಮಾಡಿದ ಶ್ರೇಯ ನಿನ್ನೊಲವಿಗೆ ಸಲ್ಲುವುದು. ನಿನ್ನನುಪಸ್ಥಿತಿಯಲ್ಲಿ ಪ್ರತಿ ಘಳಿಗೆಯಲ್ಲೂ ನಿನ್ನೊಂದಿಗೆ ನಿನ್ನ ನೆನಪುಗಳೊಂದಿಗೆ ಜೀವಿಸುತ್ತಿರುವ ನಾನು, ನನ್ನ ನೆನಪೇ ಆಗುವುದಿಲ್ವಾ ನಿನಗೆ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುವಾಗ, ನಿನ್ನದೊಂದೇ ಉತ್ತರ ಕೇಳಿದ್ದನ್ನೇ ಎಷ್ಟು ಸಲ ಕೇಳುವೆ ಮಾರಾಯ್ತಿ, ಹೋಗು ಎಲ್ಲ ಗೊತ್ತಿದ್ದು ಈ ಪ್ರಶ್ನೇಗಳೇಕೆ ನನ್ನೊಡತಿ ಎಂದು ನಿರುತ್ತರನಾಗುವೆ.
ನನಗೂ ಎಲ್ಲವೂ ತಿಳಿದಿದೆ ಆದರೆ ನಿನ್ನ ಮಾತಲ್ಲಿ ನನ್ನ ಹೊಗಳಿ ಅಟ್ಟಕ್ಕೇರಿಸುವ ಪರಿಯ ಮತ್ತೇ ಮತ್ತೇ ಕೇಳಬೇಕೆನಿಸುವಾಗ, ತಪ್ಪು ನಿನ್ನ ಮಾತುಗಳದ್ದೇ ಅಲ್ಲವೇ, ಜಗವನ್ನೇ ಸಿಂಗರಿಸುವ , ಬೊಗಸೆಯಷ್ಟು ಪ್ರೀತಿ ಹಂಚಿಬಿಡುವ ಆ ನಿನ್ನ ಚೆಂದದ ಮಂದಹಾಸದಿಂದ ನಿನ್ನ ಕಂಗಳು ಕಂಗೊಳಿಸುವ ಪರಿಯ ಏನೆಂದು ಬಣ್ಣಿಸಲಿ ಎಂದಾಗಲೆಲ್ಲ, ಇಹವನ್ನೇ ಮರೆತ ನನ್ನ ಮನವಿದು ಹಕ್ಕಿಯಂತೆ ಹಾರಲು ಪ್ರಾರಂಭಿಸುತ್ತದೆ.
ಅದೇನೋ ಗೊತ್ತಿಲ್ಲ ಹತ್ತಿರವಿದ್ದು ಹೆಣಗಾಡುವ ಮನಸುಗಳ ಮಧ್ಯೆ, ದೂರವಿದ್ದರೂ ಸನಿಹದ ಸವಿಯ ಅನುಭವಿಸಿ ಸಂಭ್ರಮಿಸುವುದೇ ಚೆಂದ ಅನಿಸಿದೆ. ನಿನ್ನೆಲ್ಲ ಗುರುತುಗಳನ್ನು ಕಲೆಹಾಕಿ, ನೆನಪುಗಳ ಬುತ್ತಿಯ ಬಿಚ್ಚಿ ಏಕಾಂಗಿಯಾಗಿ ಸವಿಯುವುದೇ ಸಾಕೆನಿಸಿದೆ ಈ ಜೀವಕೆ.
ಕೈ ಹಿಡಿದು ಸುತ್ತಿ, ದುಬಾರಿ ಉಡುಗೊರೆ ನೀಡಿ, ದೂರವಾಣಿಯ ದೂರ ಸರಿಸದೇ ಕಿವಿಯಡೆಗೆ ಇಟ್ಟು ಬಿಡುವಿಲ್ಲದಂತೆ ಮಾತನಾಡುವ ಅತೀರೇಕ ಎನ್ನಿಸುವ ಯಾಂತ್ರಿಕ ಪ್ರೀತಿ ಇಲ್ಲಿಲ್ಲ. ಪ್ರೇಮದಾಧ್ಯಾತ್ಮದ ಸವಿಯ ಸವಿಯುವ ಸುಮಧುರ ಭಾವವಿದು.
ಬೆಚ್ಚನೆ ಮನೆ ಇರಲು, ವೆಚ್ಚಕೆ ಹೊನ್ನಿರಲು, ಇಚ್ಚೆಯನರಿವ ಸತಿಯಿರಲು, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ…….
ಅಬ್ಬಾ….ಅದೆಷ್ಟು ಬಾರಿ…ಅದೆಷ್ಟು ಬಾರಿ ಗೆಳೆಯ ನೀನು ಈ ವಚನವನ್ನು ನುಡಿದು ನೀ ಜೊತೆಗಿರಲು ಬಾಳೆಷ್ಟೊಂದು ಸುಂದರವಾಗಿದ್ದೀತು ಎಂದು ನಿರಾಶಾ ಭಾವದಿಂದ ನೀ ನುಡಿವಾಗ, ಎದೆಯಲ್ಲೇನೊ ಸಂಕಟ, ಮನದಲ್ಲಿ ಗಾಢವಾದ ಮೌನ ಆವರಿಸಿ ಇಬ್ಬರ ಮಾತುಗಳು ಮೌನದ ಮೊರೆ ಹೋಗುತ್ತವೆ…….ಸನ್ನೀವೇಶವ ತಿಳಿಯಾಗಿಸಲು ಮತ್ತದೇ ಸಾಂಧರ್ಭಿಕ ಮಾತುಗಳು, ಉಭಯಕುಶಲೋಪರಿಗಳು, ಮತ್ತದೇ ಮುಖದಲ್ಲಿ ಒತ್ತಾಯವಾಗಿ ಮೂಡುವ ಮಂದಹಾಸ. ಜೀವನದ ಜಂಜಡಗಳಿಂದ ದೂರವಾಗಿ ನಮ್ಮ ಒಲವನ್ನು ಪಡೆದೇ ತೀರಬೇಕು ಎನ್ನುವ ಸ್ವಾರ್ಥಭಾವ ಇಬ್ಬರಲ್ಲೂ ಮೂಡಲಿಲ್ಲ. ಸಂಧರ್ಭಕ್ಕೆ ತಕ್ಕಂತೆ ಬಂದದ್ದೆಲ್ಲವನ್ನು ಸಹಿಸಿಕೊಂಡು ಇದ್ದುದನ್ನು ಹಾಗೆಯೇ ಒಪ್ಪಿಕೊಂಡೆವು. ನಾ ಮೌನವಾದಾಗಲೆಲ್ಲ ನನ್ನ ಮುಖದಲ್ಲಿ ಮಂದಹಾಸ ಮೂಡಿಸಲು ನೀನು ಪಡುವ ಶ್ರಮವ ನೆನೆದು ಇಂದು ಹನಿಗಣ್ಣಾಗಿದ್ದೇನೆ. ಜೀವನದಲ್ಲಿ ಎಲ್ಲವೂ ಇದ್ದರೂ ನಮಗೆ ಬೇಕಿರುವ ಒಂದೇ ಒಂದು ವಸ್ತು ಸಿಗದಿದ್ದರೆ ಎಲ್ಲವೂ ಶೂನ್ಯ ಎನಿಸುವುದುಂಟು.
ಬದುಕಿನ ನೀರಸ ಘಳಿಗೆಗಳಿಗೆ ನಿನ್ನ ನೆನಪುಗಳೇ ಆಧಾರವಾಗಿವೆ ಅವುಗಳೇ ಮರಳಿ ನಾನು ಉತ್ಸಾಹದ ಚಿಲುಮೆಯಂತಾಗಲು ಸಹಕರಿಸುತ್ತವೆ. ನಿನ್ನ ಒಲವೆಂದೂ ವಾಸ್ತವವಾಗಲಾರದು, ಆದರೆ ಮಾಯಾವಿ ನೀನು ನನ್ನ ವಾಸ್ತವದಲ್ಲಿ ನೀನೇ ತುಂಬಿರುವೆ, ಇಂದಿಗೂ ಎಂದೆಂದಿಗೂ…………
ಹೆಚ್ಚೇನು ಹೇಳಲಾರೆ ಹುಡುಗ….ಈ ಒಲವಿಗೆ ವಾಸ್ತವದ ಯಾವ ಗಂಧ ಗಾಳಿಯೂ ಸೋಕದಿರಲಿ,ಈ ಪವಿತ್ರ ಬಂಧನದಲ್ಲಿ ಒಲವ ಓಂಕಾರದ ನಾದ ಸದಾ ಹೊಮ್ಮುತಿರಲಿ ನಿನ್ನೆದೆಯ ಗೂಡಲ್ಲಿ ಈ ಪುಟ್ಟ ಒಲವ ಕೋಗಿಲೆಯ ಸ್ವರ ಸದಾ ಗುನುಗುತಿರಲಿ.
ಇಂತಿ ನಿನ್ನೊಲವು
✍️ಪುಷ್ಪಾ.ರಾಠೋಡ್
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು