January 15, 2025

Newsnap Kannada

The World at your finger tips!

deepa1

ಒಂದು ಕಾಲ್ಪನಿಕ ಆತ್ಮಾವಲೋಕನ

Spread the love

ಮಾತುಗಳು – ಭಾಷಣಗಳು – ಪ್ರವಚನಗಳು – ಉಪನ್ಯಾಸಗಳು – ಭೋದನೆಗಳು – ಬರಹಗಳು – ಅಂಕಣಗಳಿಗಿಂತ ಬದುಕು ಮುಖ್ಯ……………..

ಒಂದು ಕಾಲ್ಪನಿಕ ಆತ್ಮಾವಲೋಕನ…….

ಶಾಲೆಯಲ್ಲಿದ್ದಾಗ ಅಮ್ಮನ ಪ್ರೀತಿಯ ಬಗ್ಗೆ ಬರೆದೆ,
ಅಲ್ಲಿ ನನಗೆ ಮೊದಲ ಬಹುಮಾನ ಕೊಡಲಾಯಿತು.

ಕಾಲೇಜಿನಲ್ಲಿ ಯುವಶಕ್ತಿಯ ಬಗ್ಗೆ ಹೇಳಿದೆ,
ಆಗ ನನ್ನನ್ನು ಗೌರವಿಸಲಾಯಿತು.

ಮುಂದೆ ಪ್ರೀತಿ – ಪ್ರೇಮ ಕುರಿತು ಪತ್ರಿಕೆಗಳಲ್ಲಿ ವರ್ಣಿಸಿದೆ,
ನನ್ನನ್ನು ಕವಿ ಎಂದು ಗುರುತಿಸಲಾಯಿತು.

ಬಡತನ, ದಾರಿದ್ರ್ಯವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದೆ,
ನಮ್ಮ ಜಿಲ್ಲಾ ಸಾಹಿತ್ಯ ಪ್ರಶಸ್ತಿ ನೀಡಲಾಯಿತು.

ವ್ಯವಸ್ಥೆಯ ವಿರುದ್ಧ ಆಕ್ರೋಶದಿಂದ ಮಾತನಾಡಿದೆ,
ಸಮಾಜ ನನ್ನನ್ನು ದೊಡ್ಡ ಲೇಖಕನೆಂದು ಗುರುತಿಸಿತು.

ದೇಶಭಕ್ತಿಯ ಬಗ್ಗೆ ಹೆಚ್ಚೆಚ್ಚು ಮಾತನಾಡತೊಡಗಿದೆ,
ಸಾಹಿತಿ ಎಂದು ಭಾವಿಸಿ ಸರ್ಕಾರದಿಂದ ಪ್ರಶಸ್ತಿ ಘೋಷಿಸಲಾಯಿತು.

ಮಾನವೀಯತೆಯ ಬಗ್ಗೆ ಇನ್ನಷ್ಟು ಮತ್ತಷ್ಟು ಚರ್ಚಿಸತೊಡಗಿದೆ,
ಸರ್ಕಾರ ಒಂದು ಅಕಾಡೆಮಿಗೆ ಅಧ್ಯಕ್ಷನನ್ನಾಗಿ ಮಾಡಿತು.

ಭಾಷೆಯ ಬಗ್ಗೆ ಅಭಿಮಾನ ತೋರಿ ಹಾಡುಗಳನ್ನು ರಚಿಸಿದೆ,
ಅನೇಕ ಸಂಘ ಸಂಸ್ಥೆಗಳಿಂದ ಹಣ, ಬಿರುದು ನೀಡಿ ಸನ್ಮಾನಿಸಲಾಯಿತು.

ಆಕರ್ಷಕ ಕಥೆಗಳನ್ನು ಕಲ್ಪಿಸಿಕೊಂಡು ಸೃಷ್ಟಿಸತೊಡಗಿದೆ,
ರಾಷ್ಟ್ರೀಯ ಮಟ್ಟದ ಬರಹಗಾರನೆಂದು ಬಿಂಬಿಸಲಾಯಿತು.

ಬೃಹತ್ ಕಾದಂಬರಿಗಳನ್ನು ರಚಿಸತೊಡಗಿದೆ,
ವಿಶ್ವವಿದ್ಯಾಲಯವೊಂದರಿಂದ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಬದುಕಿನ ನಶ್ವರತೆ ಬಗ್ಗೆ ಪುಂಖಾನುಪುಂಖವಾಗಿ ಪ್ರವಚನ ನೀಡಿದೆ,
ನನ್ನನ್ನು MLC/MP ಆಗಿ ಆಯ್ಕೆ ಮಾಡಲಾಯಿತು.

ವಾವ್, ಎಂತಹ ಅದೃಷ್ಟವಂತ ಎಂದು ಭಾವಿಸಿದರೇ,…

ಆದರೆ ಈಗ ನಿಜ ಹೇಳಲೆ…..

ಇದಕ್ಕಾಗಿ ನಾನು ಎಲ್ಲಾ ರೀತಿಯ ಲಾಬಿಗಳನ್ನೂ ಮಾಡಿದೆ,
ನಾನು ಬರೆದ ಯಾವ ಸಮಸ್ಯೆಗಳಿಗೂ ಪರಿಹಾರವೇನು ಸಿಗಲಿಲ್ಲ, ವಾಸ್ತವವಾಗಿ ಮತ್ತಷ್ಟು ಹೆಚ್ಚಾಯಿತು.
ಆದರೆ ನನ್ನ ಬದುಕು ಸಮೃದ್ಧವಾಯಿತು. ನನ್ನ ಬದುಕು ಸಮಸ್ಯೆಗಳಿಂದ ಮುಕ್ತವಾಯಿತು.

ನಗರದಲ್ಲಿ ಒಂದು ಬೃಹತ್ ಬಂಗಲೆ ಕಟ್ಟಿಸಿದೆ.
ಇಬ್ಬರು ಮಕ್ಕಳಿಗೆ ವಿದೇಶಗಳಲ್ಲಿ ನೆಲೆ ಕಲ್ಪಿಸಿದೆ.
ವಿದೇಶಿ ಕಾರು, ಸರ್ಕಾರದ ಉಚಿತ ಸೇವೆಗಳು ದೊರೆತವು.
ಕೇವಲ ನನ್ನ ಪೆನ್ನು, ಪೇಪರ್, ಬುದ್ಧಿ, ಚಾಕಚಕ್ಯತೆ ಇದನ್ನು ನೀಡಿತು.

ಆದರೆ,
ಇದಕ್ಕಾಗಿ ಆತ್ಮಸಾಕ್ಷಿಯನ್ನು ಸಾವಿರಾರು ಬಾರಿ ಇರಿದಿದ್ದೇನೆ,
ಮತ್ತು ಪ್ರತಿ ಬರಹದಲ್ಲೂ ಕೊಲ್ಲುತ್ತಿದ್ದೇನೆ……….

ನಾನೊಂದು ಜೀವಂತ ಶವ ಎಂದು ನನ್ನ ನೆರಳು ಸದಾ ನನ್ನನ್ನು ಕಾಡುತ್ತಿದೆ.
ಹೊರಬರಲಾರದೆ ಪರಿತಪಿಸುತ್ತಿದ್ದೇನೆ.

ಕೊನೆಯ ಅನುಭವದ ನನ್ನ ಸಲಹೆ ಎಂದರೆ, ಆತ್ಮಸಾಕ್ಷಿಗೆ ಮೋಸ ಮಾಡದಿರಿ. ಅದು ನಿಮ್ಮ ಮನದ ಕನ್ನಡಿ,ಉಳಿದದ್ದೆಲ್ಲಾ ಒಂದು ಭ್ರಮೆ.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!