ಅವನ ಜೀವನದ ಏಕೈಕ ಗುರಿ ತಾತನಂತೆ ಸೈನಿಕನಾಗಿ ದೇಶಸೇವೆ ಮಾಡಬೇಕೆಂಬುದು. ಅದು ಅವನ ಒಂದು ದಿನದ ಕನಸಾಗಿರಲಿಲ್ಲ. ಬಾಲ್ಯದಿಂದಲೂ ತಾತನ ಬಾಯಿಯಿಂದ ಮೈನವಿರೇಳಿಸುವ ಯೋಧರ ಸಾಹಸಮಯ ವೀರಗಾಧೆಗಳನ್ನು ಕೇಳಿ ಮೈ ಮನಗಳಲ್ಲಿ ಕಿಚ್ಚು ಹಚ್ಚಿಕೊಂಡ ಅದಮ್ಯ ಬಯಕೆಯ ಕನಸಾಗಿತ್ತದು.
ಆದರೆ ಕ್ರೂರವಿಧಿ ಆತನ ಆಸೆಗಳಿಗೆ ತಣ್ಣೀರೆರೆಚುತ್ತಾ ಅಪಘಾತವೊಂದರಲ್ಲಿ ಅವನ ಕಾಲುಗಳನ್ನು ಬಲಿ ತೆಗೆದುಕೊಂಡು ಅಂಗವಿಕಲನಾದ ಅವನಿಗೆ ವೀರಯೋಧನಾಗುವ ಕನಸನ್ನು ಕನಸಾಗಿಯೇ ಉಳಿಯುವಂತೆ ಮಾಡಿತ್ತು.
ಆದರೆ ಅಂತಹ ವಿಷಮ ಪರಿಸ್ಥಿತಿಯಲ್ಲಿಯೂ ಎದೆಗುಂದದೆ ಸಕಾರಾತ್ಮಕ ಚಿಂತನೆಗಳನ್ನೇ ಮೈಗೂಡಿಸಿಕೊಂಡು ಬೆಳೆದಿದ್ದ ಅವನು ಶಾಲೆಯೊಂದನ್ನು ತೆರೆದು ”ಬೆಳೆಯುವ ಪೈರು ಮೊಳಕೆಯಲ್ಲಿಯೇ”ಎಂಬಂತೆ ಹಸಿಮಣ್ಣಿನ ಮುದ್ದೆಯಂತಹಾ ತನ್ನ ಶಾಲಾ ವಿದ್ಯಾರ್ಥಿಗಳ ಮನದಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತಿ ಅದನ್ನು ಹೆಮ್ಮರವಾಗಿಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡನು.ಇದನ್ನು ಓದಿ –ಹೀಗೊಂದು ಕಥೆ
ಅಚಲ ಆತ್ಮವಿಶ್ವಾಸದಿಂದ ಕೈಗೊಂಡ ಈ ಕಾರ್ಯದಲ್ಲಿ ಯಶಸ್ವಿಯಾಗಿ, ತನ್ನೊಬ್ಬನಿಗೆ ಬದಲಾಗಿ ಅನೇಕ ಗಡಿ ಕಾಯುವ ಯೋಧರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿ ತನ್ನ ಕನಸನ್ನು ಈ ರೀತಿಯಲ್ಲಿ ನನಸು ಮಾಡಿಕೊಂಡು ಸಾರ್ಥಕ ಜೀವನದ ಗುರಿಕಾರನೆನಿಸಿದ.

ಸುಜಾತ ಎಸ್ ಎನ್ ರೆಡ್ಡಿ
ಬೆಂಗಳೂರು


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು