ತನ್ನ ಮದುವೆಯಾದ ಸಂದರ್ಭದಲ್ಲಿ ಮಾರ್ಕ ತನ್ನ ಸ್ನೇಹಿತನೊಬ್ಬನಿಗೆ ಮದುವೆಯಲ್ಲಿ ಇಷ್ಟೊಂದು ಸಂತಸ ಅಡಗಿರುತ್ತದೆ ಎಂದು ಗೊತ್ತಿದ್ದರೆ ನಾನು ಹಲ್ಲನ್ನು ಬೆಳೆಸುವ ಬದಲು ಮದುವೆಯನ್ನೇ ಮಾಡಿಕೊಂಡು ಬಿಡುತ್ತಿದ್ದೆ ಎಂದು ಹೇಳಿದ್ದನಂತೆ… ಹಾಗೆ ಹೇಳಿದಾಗ ಆತನಿಗೆ ಕೇವಲ 32 ವರ್ಷ ವಯಸ್ಸಾಗಿತ್ತು.
ಸಾಧಾರಣ ಕುಟುಂಬವೊಂದರಲ್ಲಿ ಜನಿಸಿದ ಮಾರ್ಕ್ ಟ್ವೆನ್ ನು ಸಾಮುಯಲ್ ಕ್ಲಮೆನ್ಸ್ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತಿದ್ದ. ಕುಟುಂಬದ ನಿರ್ವಹಣೆಗಾಗಿ ಚಿಕ್ಕ ವಯಸ್ಸಿನಿಂದಲೇ ಕೆಲಸ ಮಾಡಲು ಆರಂಭಿಸಿದ. ಮೊದಲು ಮುದ್ರಕರೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಆತ ನಂತರ ನದಿಯಲ್ಲಿ ನಾವನ್ನು ಚಲಾಯಿಸುವ ನಾವಿಕನಾಗಿ ಕಾರ್ಯನಿರ್ವಹಿಸಿದ. ಬೆಳ್ಳಿಯ ಅದಿರನ್ನು ತೆಗೆಯುವ ಕೆಲಸದಲ್ಲಿಯೂ ಕೂಡ ಆತ ಸ್ವಲ್ಪ ಕಾಲ ಇದ್ದು ಅಂತಿಮವಾಗಿ ಬರೆಯುವ ವೃತ್ತಿಯನ್ನು ಆಯ್ದುಕೊಂಡ. ಆತನ ಬುದ್ಧಿಮತ್ತೆ ಮತ್ತು ಬರೆಯುವ ಕಲೆ ಆತನನ್ನು ಅಮೆರಿಕಾದ ಪ್ರಖ್ಯಾತ ಲೇಖಕರಲ್ಲಿ ಒಬ್ಬನನ್ನಾಗಿಸಿತು.
ಇದೇ ಸಮಯದಲ್ಲಿ ಒಂದು ಬಾರಿ ಒಲಿವಿಯಾಳ ಚಿತ್ರವೊಂದನ್ನು ನೋಡಿ ಆಕೆಯನ್ನು ಮೊದಲ ನೋಟದಲ್ಲಿಯೇ ಇಷ್ಟ ಪಟ್ಟ ಮಾರ್ಕ್. ಆಕೆಯ ಭಾವಚಿತ್ರವನ್ನು ಹೊಂದಿದ ಒಂದು ಲಾಕೆಟ್ ಅನ್ನು ತೋರಿಸಿದ ಆತನ ಸ್ನೇಹಿತ ನಂತರ ಆಕೆಯನ್ನು ಭೇಟಿಯಾಗಲು ಆಹ್ವಾನಿಸಿದ. ಮುಂದಿನ ಎರಡು ವಾರಗಳಲ್ಲಿಯೇ ಮಾರ್ಕ್ ಆಕೆಯ ಮುಂದೆ ವಿವಾಹದ ಪ್ರಸ್ತಾಪವನ್ನು ಮಾಡಿದ.
ಒಲಿವಿಯ ಆತನನ್ನು ಇಷ್ಟಪಡುತ್ತಿದ್ದರೂ ತುಸು ಹಿಂಜರಿದದ್ದು ಆತ ತನಗಿಂತ 10 ವರ್ಷ ದೊಡ್ಡವನೆಂಬ ಕಾರಣಕ್ಕೆ. ಆಕೆಯ ಸೋ ಕಾಲ್ಡ್ ಶ್ರೀಮಂತ, ಸುಸಂಸ್ಕೃತ ಬಳಗಕ್ಕೆ ಆತನ ಒರಟು ವ್ಯಕ್ತಿತ್ವ ಒಗ್ಗುವುದಿಲ್ಲ ಎಂಬುದು ಮತ್ತೊಂದು ಕಾರಣವಾಗಿತ್ತು.
ಕೇವಲ ಆತನ ಬರವಣಿಗೆಯ ಕೌಶಲ ಮತ್ತು ಅಪರಿಮಿತ ಜಾಣ್ಮೆಯನ್ನು ಮೆಚ್ಚಿದ್ದ ಆಕೆಗೆ
ಆತನ ಹೆಸರಿನಲ್ಲಿ ಬಿಡಿ ಕಾಸು ಇರದೇ ಇರುವುದು ಕೂಡ ಆತನನ್ನು ಒಪ್ಪದೇ ಇರಲು ಕಾರಣವಾಗಿತ್ತು.
ಛಲ ಬಿಡದೆ ಮಾರ್ಕ್ ಮತ್ತೊಮ್ಮೆ ಆಕೆಯನ್ನು ಒಪ್ಪಿಸಲು ಪ್ರಯತ್ನಿಸಿದ, ಆದರೆ ಆತನಲ್ಲಿ ಧಾರ್ಮಿಕ ಶ್ರದ್ದೆ ಇಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಆಕೆ ನಿರಾಕರಿಸಿದಳು. ಆಗ ಮಾರ್ಕ್ ನನ್ನ ಎಂದಿನ ಸಿಗ್ನೇಚರ್ ನಗುವನ್ನು ಮುಖದಲ್ಲಿ ತುಂಬಿಕೊಂಡು ತಾನು ಉತ್ತಮ ಧಾರ್ಮಿಕ ಶ್ರದ್ಧೆಯನ್ನು ಹೊಂದಿದ ಕ್ರಿಶ್ಚಿಯನ್ ವ್ಯಕ್ತಿಯಾಗಿ ಪರಿವರ್ತಿತನಾಗುವೆ ಎಂದು ಆಕೆಗೆ ಮಾತುಕೊಟ್ಟ. ಆತನನ್ನು ಈಗಾಗಲೇ ಪ್ರೀತಿಸುತ್ತಿದ್ದ, ಆದರೆ ಹೇಳಲು ಹಿಂಜರಿಯುತ್ತಿದ್ದ ಒಲಿವಿಯಳಿಗೆ ಇದೀಗ ನಿರಾಕರಿಸಲು ಯಾವುದೇ ಅವಕಾಶಗಳು ಉಳಿಯಲಿಲ್ಲ.
ಮರಳಿ ರೈಲು ನಿಲ್ದಾಣಕ್ಕೆ ಹೋಗುವಾಗ ಮಾರ್ಕ್ ನ ಗಾಡಿ ಪಲ್ಟಿ ಹೊಡೆದು ಆತ ತುಸು ಗಾಯಗೊಂಡ. ಹೀಗೆ ಗಾಯಗೊಂಡ ಮಾರ್ಕ್ ನನ್ನು ತನ್ನ ಮನೆಗೆ ಕರೆತಂದು ಆರೈಕೆ ಮಾಡಿದ ಒಲಿವಿಯಳಿಗೆ ಕೊನೆಯ ಬಾರಿ ಮತ್ತೊಮ್ಮೆ ಮದುವೆಯ ಪ್ರಸ್ತಾಪವನ್ನು ಸಲ್ಲಿಸಿದ ಮಾರ್ಕ್…. ಈ ಬಾರಿ ಆಕೆ ತನ್ನ ಒಪ್ಪಿಗೆಯನ್ನು
ಸೂಚಿಸಿದಳು.
ಧರ್ಮಭೀರುವಾಗಿದ್ದ ತನ್ನ ಪತ್ನಿಯ ಮೇಲೆ ಪ್ರಭಾವ ಬೀರಲು ಮಾರ್ಕ್ ಪ್ರತಿದಿನ ಬೈಬಲ್ ಪಠಣವನ್ನು ಆರಂಭಿಸಿದ. ಪ್ರತಿ ಸಂಜೆ ಊಟಕ್ಕೆ ಮುನ್ನ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದ. ತನ್ನ ಪತ್ನಿ ಒಪ್ಪದ ತನ್ನ ಕಥೆಗಳನ್ನು ಮುದ್ರಣಕ್ಕೂ ಆತ ಕಳುಹಿಸುತ್ತಿರಲಿಲ್ಲ. ಸುಮಾರು 15 ಸಾವಿರ ಪುಟಗಳಷ್ಟು ಮುದ್ರಣ ಗೊಳ್ಳದ ಲೇಖನಗಳು ಆತನ ಬಳಿಯಿತ್ತು.
ಆತನ ಎಲ್ಲ ಲೇಖನಗಳನ್ನು ಮೊದಲು ಓದುತ್ತಿದ್ದ ಒಲಿವಿಯ ಆತನ ಅತಿ ದೊಡ್ಡ ವಿಮರ್ಶಕಳು ಕೂಡ ಆಗಿದ್ದಳು. ಆತನ ಅತಿ ಪ್ರಸಿದ್ಧವಾದ ಹಕ್ಕಲ್ ಬರೀ ಫಿನ್ ನಲ್ಲಿ ಆತ ಬಳಸಿದರೆ ‘ಡ್ಯಾಮ್ ಇಟ್’ ಎಂಬ ಪದವನ್ನು ಆಕೆ ತೆಗೆಸಿ ಹಾಕಿದಳು.
ಆಗೆಲ್ಲ ಮುದ್ರಿತವಾಗದ ಕಾಗದಗಳನ್ನು ಒಂದೆಡೆ ಸೇರಿಸಿದ ಅವರ ಮಗಳು ಸೂಸಿ ಅಮ್ಮ ಮೌಲ್ಯಗಳನ್ನು, ನೈತಿಕತೆಯನ್ನು ಪ್ರೀತಿಸಿದರೆ ಅಪ್ಪ ಬೆಕ್ಕುಗಳನ್ನು ಪ್ರೀತಿಸುತ್ತಾರೆ ಎಂದು ಹೇಳಿದಳು.
ತನ್ನ ಪತ್ನಿಯನ್ನು ಅತೀವ ಪ್ರೀತಿಸುತ್ತಿದ್ದ ಮಾರ್ಕ್ ಹಾಗೇನಾದರು ಸಾಕ್ಸ್ ಧರಿಸಿರುವುದು ಧರ್ಮಕ್ಕೆ ವಿರುದ್ಧವಾದದ್ದು ಎಂದು ನನ್ನ ಪತ್ನಿ ಏನಾದರೂ ಹೇಳಿದರೆ ನಾನು ಖಂಡಿತವಾಗಿಯೂ ಸಾಕ್ಸ್ ಧರಿಸುತ್ತಿರಲಿಲ್ಲ ಎಂದು ಹೇಳಿದ್ದ ಎಂದರೆ ಆತನ ಪ್ರೀತಿಯ ಆಳವನ್ನು ಅರಿಯಬಹುದು.
ತನ್ನ ಬೂದುಗೂದಲ ಹುಡುಗ ಎಂದೇ ಆತನನ್ನು ಸಂಭೋದಿಸುತ್ತಿದ್ದ ಆಕೆ ಮಗುವಿನಂತೆ ಆತನನ್ನು ಆರೈಕೆ ಮಾಡುತ್ತಿದ್ದಳು. ತನ್ನಲ್ಲಿ ಚೈತನ್ಯ ಶಕ್ತಿಯನ್ನು ತುಂಬುವ, ಆಶಾಭಾವವನ್ನು ಉದ್ದೀಪಿಸುವ ಮತ್ತು ಚಿರ ಯವ್ವನದ ಸ್ಫೂರ್ತಿಯನ್ನು ತುಂಬುವ ದೇವತೆ ಆಕೆ ಎಂದು ಮಾರ್ಕ್ ಆಕೆಯನ್ನು ಹೊಗಳುತ್ತಿದ್ದ.
ಒಲಿವಿಯ ಆತನ ಹಾಸ್ಯ ಪ್ರವೃತ್ತಿಯನ್ನು ಮೆಚ್ಚುತ್ತಿದ್ದಳು. ಒಂದು ಬಾರಿ ಆತ ಅತ್ಯಂತ ಜೋರಾಗಿ ನಗುತ್ತಿದ್ದಾಗ ಕಾರಣವೇನೆಂದು ಕೇಳಿದ ಆಕೆಯ ಕೈಯಲ್ಲಿ ಪುಸ್ತಕವೊಂದನ್ನು ನೀಡಿದ. ಕುತೂಹಲದಿಂದ ಆ ಪುಸ್ತಕದ ಪುಟ ತಿರುವಿದ ಆಕೆಗೆ ಕಂಡದ್ದು ಅದು ಆತನದ್ದೇ ಪ್ರಕಟಿತ ಕೃತಿಯಾಗಿತ್ತು.
ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಪರಸ್ಪರ ಆಸರೆಯಾಗಿ ಬದುಕಿದರು. ಅವರು ಮಕ್ಕಳನ್ನು ಕಳೆದುಕೊಂಡರು. ಮಾರ್ಕ್ ಹಣವಿಲ್ಲದೆ ದಿವಾಳಿಯಾಗಿದ್ದಾಗಲೂ, ಅಸಹಾಯಕತೆಯಲ್ಲಿ ತೇಲುತ್ತಿದ್ದಾಗಲೂ ಕೂಡ ಒಲಿವಿಯಾಗೆ ಆತನ ಮೇಲಿದ್ದ ಅಚಲ ವಿಶ್ವಾಸ ಆತನನ್ನು ಕೈಹಿಡಿದು ನಡೆಸಿತು. ಅವರೆಂದೂ ಪರಸ್ಪರರ ಮೇಲೆ ದೋಷ ಹೊರಿಸಲಿಲ್ಲ.
ಮಾರ್ಕ್ ಎಂದೂ ತನ್ನ ಪತ್ನಿಯನ್ನು ಜೋರಾಗಿ ದಬಾಯಿಸಲಿಲ್ಲ ಮತ್ತು ಒಲಿವಿಯ ತನ್ನ ಪತಿಯನ್ನು ಎಂದೂ ದೂಷಿಸಲಿಲ್ಲ. ಒಲಿವಿಯಾಳ ಅತ್ಯಂತ ಪ್ರೀತಿ ಪಾತ್ರ ಆಪ್ತರಕ್ಷಕನಾಗಿದ್ದ ಮಾರ್ಕ್. ಒಲಿವಿಯಾಳ ಅತಿಯಾದ ದುಂದುವೆಚ್ಚವನ್ನು ಸ್ನೇಹಿತನೊಬ್ಬ ತಮಾಷೆ ಮಾಡಿದಾಗ ಆತನ ಸ್ನೇಹವನ್ನೇ ತೊರೆದಾತ ಮಾರ್ಕ್. ತನ್ನ 60ನೇ ವಯಸ್ಸಿನಲ್ಲಿ ವಿಶ್ವ ಪರ್ಯಟನೆ ಮಾಡಲು ಮಾರ್ಕ್ ಬಯಸಿದಾಗ ಆತನಿಗೆ ತನ್ನ ಕಾಳಜಿಯ ಅವಶ್ಯಕತೆ ಇದೆ ಎಂಬುದನ್ನು ಅರಿತಿದ್ದ ಒಲಿವಿಯ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದಳು.
ಆಕೆಯ ಹುಟ್ಟು ಹಬ್ಬದಂದು ಒಮ್ಮೆ ಮಾರ್ಕ್ ಹೀಗೆ ಬರೆದಿದ್ದ… ನಾವು ಪರಸ್ಪರ ಪ್ರೀತಿಸಿ ಮದುವೆಯಾಗಿ ಜೀವನವನ್ನು ಕಳೆಯುತ್ತಿದ್ದು, ಪ್ರತಿ ದಿನವೂ ನಮ್ಮನ್ನು ನಮ್ಮಲ್ಲಿ ಹೊಸ ಚೈತನ್ಯವನ್ನು ಮೂಡಿಸುತ್ತದೆ. ನಾವಿಬ್ಬರೂ ಜೊತೆಯಾಗಿ ಬದುಕುವ ಯಾವೊಂದು ದಿನವೂ ಪಶ್ಚಾತಾಪ ಪಡುವಂತಹ ದಿನವಾಗಿಲ್ಲ… ದಿನದಿಂದ ದಿನಕ್ಕೆ ನಮ್ಮಿಬ್ಬರಲ್ಲಿ ಪ್ರೀತಿ, ಆತ್ಮೀಯತೆ ಹೆಚ್ಚಾಗುತ್ತಿದೆ. ಮನಸ್ಸು ಇನ್ನಷ್ಟು ವಿವಾಹ ವಾರ್ಷಿಕೋತ್ಸವಗಳನ್ನು ಎದುರು ನೋಡುತ್ತದೆ… ನಾವಿಬ್ಬರೂ ಇನ್ನಷ್ಟು ವರ್ಷಗಳನ್ನು ಯಾವುದೇ ಭಯ ಮತ್ತು ದುಃಖಗಳಿಲ್ಲದೆ ಜೊತೆಯಾಗಿ ಬದುಕನ್ನು ಕಳೆಯೋಣ ಎಂದು ಬರೆದಿದ್ದ ಮಾರ್ಕ ಅಕ್ಷರಶಃ ಬರೆದಂತೆಯೇ ಬದುಕಿದ್ದ.
ಅವರಿಬ್ಬರ ಪ್ರೀತಿ ನಗು ಪರಸ್ಪರ ನಿಷ್ಠೆ ಮತ್ತು ಆಳವಾದ ಅರಿತುಕೊಳ್ಳುವಿಕೆಯ ಬಂಧವಾಗಿದ್ದು
ಜೀವನದ ಕೊನೆಯವರೆಗೂ ಹಾಗೆಯೇ ಬದುಕಿದ ಅವರ ಪ್ರೀತಿ ಅದ್ವಿತೀಯವಾದದ್ದು ಮತ್ತು ಅಮರವಾದದ್ದು
ನಮ್ಮ ಹಿರಿಯರು ಕೂಡ ಹೀಗೆಯೇ ಬದುಕನ್ನು ಸಾಗಿಸಿದರೆಲ್ಲವೇ? ಪರಸ್ಪರ ಜೊತೆಗಿದ್ದು ಜೀವನದ ಎಲ್ಲಾ ಕಷ್ಟ ಸುಖಗಳಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ಬದುಕಿನ ಎಲ್ಲಾ ಜಂಜಡಗಳಲ್ಲಿ ಪರಸ್ಪರ ಕೈ ಹಿಡಿದು ನಡೆಯುತ್ತಾ ಹೇಳದೆಯೂ ಅರಿಯುವಂತಹ ಪ್ರೀತಿಯನ್ನು ಕಾಳಜಿಯನ್ನು ವ್ಯಕ್ತಪಡಿಸುತ್ತಾ ಬದುಕನ್ನು ಸಾರ್ಥಕವಾಗಿ ಸಾಗಿಸುತ್ತಿದ್ದರು.ಇದನ್ನು ಓದಿ –SSLC ಪಾಸಾದವರಿಗೆ ಸಿಹಿ ಸುದ್ದಿ: ಇಂಡಿಯಾ ಪೋಸ್ಟ್‌ನಲ್ಲಿ 21,413 ಹುದ್ದೆಗಳ ಭರ್ತಿ!
ವರ್ಷಕ್ಕೊಮ್ಮೆ ವೆಲೆಂಟೈನ್ಸ್ ಡೇ ಹೆಸರಿನಲ್ಲಿ ತಾವು ಇಷ್ಟಪಡುವ ವ್ಯಕ್ತಿಯನ್ನು ಗುಲಾಬಿ ಹೂ ಕೊಟ್ಟು ಅವರ ಮೇಲಿನ ತಮ್ಮ ಪ್ರೀತಿಯನ್ನು ಅರುಹುವ, ಫೋನ್ ಮಾಡಿದಾಗ ಎತ್ತಲಿಲ್ಲ ಎಂದೋ, ತನ್ನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಲಿಲ್ಲ ಎಂದು ಬ್ರೇಕಪ್ ಮಾಡಿಕೊಳ್ಳುವ ಇಂದಿನ ಯುವ ಜನಾಂಗಕ್ಕೆ ಮಾರ್ಕ್ ಮತ್ತು ಒಲಿವಿಯರ ಪ್ರೇಮ ಮಾದರಿಯಾಗಲಿ ಎಂದು ಆಶಿಸುವ.
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು