December 26, 2024

Newsnap Kannada

The World at your finger tips!

s f

ರೋಗಿಗಳನ್ನು ಕುಟುಂಬ ಸದಸ್ಯರಂತೆ ಕಾಣಬೇಕು- ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

Spread the love
  • ಈ ಬಾರಿಯ ಬಜೆಟ್ ನಿಂದ ಆರೋಗ್ಯ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ

ವೈದ್ಯರು ಪ್ರತಿ ರೋಗಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕಂಡು ಸೇವೆ ನೀಡಿದರೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ ನಿರೀಕ್ಷಿತ ಸೇವೆ ನೀಡಲು ಸಾಧ್ಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲಿ 3 ಲಕ್ಷ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರಿ ಆರೋಗ್ಯ ಕೇಂದ್ರಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಸಾಮಾನ್ಯ ಜನರು ಹೇಳುತ್ತಾರೆ. ವೈದ್ಯರು ತಮ್ಮ ಕುಟುಂಬದ ಸದಸ್ಯರು ಬಂದಾಗ ಹೇಗೆ ಚಿಕಿತ್ಸೆ ನೀಡುತ್ತಾರೋ ಹಾಗೆಯೇ ಪ್ರತಿ ರೋಗಿಯ ಬಗ್ಗೆ ಕಾಳಜಿ ವಹಿಸಬೇಕು ಎಂದರು.

ಬಜೆಟ್ ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ – ಸಿಎಂ ಭರವಸೆ:

sf1

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಂಡಿಸಲಿರುವ ಬಜೆಟ್ ರಾಜ್ಯದಲ್ಲಿ ಉತ್ತಮ ಆರೋಗ್ಯ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಲಿದೆ. ಇದಕ್ಕೆ ವೈದ್ಯರ ಸಹಕಾರ ಅತಿ ಅಗತ್ಯ. ಶೇ.70 ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದ್ದು, 20-25% ರಷ್ಟು ಆರೋಗ್ಯ ಕೇಂದ್ರಗಳು ಹಳ್ಳಿಗಳಲ್ಲಿವೆ. ಆದ್ದರಿಂದ ವೈದ್ಯರು ಹಳ್ಳಿಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಗ್ರಾಮೀಣ ಪ್ರದೇಶಗಳ ಪ್ರಮುಖ ಆರೋಗ್ಯ ಸೇವಾ ಕೇಂದ್ರಗಳಾಗಿದ್ದು, ಮೇಲ್ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸರ್ಕಾರ ಈ ಬಾರಿ 2.3 ಲಕ್ಷ ಕೋಟಿ ರೂ. ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ನೀಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.137 ರಷ್ಟು ಹೆಚ್ಚಿದೆ ಎಂದರು.

ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಕಾಲೇಜು ಜೀವನದ ಬಳಿಕ ಹೊರಜಗತ್ತಿಗೆ ಕಾಲಿಡಬೇಕಾಗುತ್ತದೆ. ಆದರೆ ಕಾಲೇಜು ಮುಗಿದ ಕೂಡಲೇ ಕಲಿಕೆ ಮುಗಿಯುವುದಿಲ್ಲ. ಕಲಿಕೆ, ಅಧ್ಯಯನ, ಆವಿಷ್ಕಾರ ಜೀವನದುದ್ದಕ್ಕೂ ನಿರಂತರವಾಗಿರುತ್ತದೆ. ಕೋವಿಡ್ ಸಮಯದಲ್ಲಿ ಎಲ್ಲ ವೈದ್ಯರು, ವೈದ್ಯ ವಿದ್ಯಾರ್ಥಿಗಳು ಧೈರ್ಯ ತೋರಿ ಕಾರ್ಯನಿರ್ವಹಿಸಿದ್ದಾರೆ. ಇದಕ್ಕಾಗಿ ಅಭಿನಂದನೆಗಳು ಎಂದರು.

ಈಗ ನಾವು ಕೊರೊನಾದ ಕೊನೆಯ ಹಂತದಲ್ಲಿದ್ದೇವೆ. ಕೊರೊನಾ ಸೋಂಕು ಆರಂಭದ 10 ತಿಂಗಳ ಬಳಿಕ ಲಸಿಕೆ ದೊರೆತಿದ್ದು, ರಾಜ್ಯದಲ್ಲಿ ಸುಮಾರು 5 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!