ಎಲ್ಲಾ ಜಿಲ್ಲೆಗಳಲ್ಲೂ “ಪರ್ವ’ ನಾಟಕದ ಪ್ರದರ್ಶನಕ್ಕೆ 50ಲಕ್ಷ – ಸಚಿವ ಲಿಂಬಾವಳಿ

Team Newsnap
1 Min Read

ಕನ್ನಡದ ಖ್ಯಾತ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರ ” ಪರ್ವ ” ಕಾದಂಬರಿ ಆಧಾರಿತ ನಾಟಕವನ್ನು ಮೈಸೂರು ರಂಗಾಯಣ ವತಿಯಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರದರ್ಶಿಸಲು 50 ಲಕ್ಷ ರು ಅನುದಾನ ಮಂಜೂರು ಮಾಡಲಾಗುವುದು ಎಂದು ಅರಣ್ಯ,ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ .

ಭಾನುವಾರ ಮೈಸೂರಿನ ಸಾಹಿತಿ ಡಾ.ಎಸ್ ಎಲ್ ಭೈರಪ್ಪ ಅವರ ಮನೆಗೆ ಭೇಟಿ ನೀಡಿ ಅವರನ್ನು ಸನ್ಮಾನಿಸಿ, ಮಾತುಕತೆ ನಡೆಸಿದರು.

ಸುಮಾರು ಒಂದೂವರೆ ಗಂಟೆಗಳಷ್ಟು ಸುದೀರ್ಘವಾಗಿ ಕನ್ನಡದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಪ್ರಸಕ್ತ ಸಂಗತಿಗಳ ಬಗ್ಗೆ ಚರ್ಚೆ ನಡೆಸಿದ ಸಚಿವರು ಅನೇಕ ವಿಷಯಗಳ ಬಗ್ಗೆ ವಿಚಾರ ವಿನಿಮಯ ಮಾಡಿ ,ಅವರ ಮಾರ್ಗದರ್ಶನವನ್ನು ಪಡೆದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಡಾ.ಎಸ್. ಎಲ್. ಭೈರಪ್ಪ ಹುಟ್ಟೂರಾದ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಸಂತೆಶಿವರ ಗ್ರಾಮದ ಅಭಿವೃದ್ಧಿ ಮಾಡಲು ಹಾಗೂ ಅಲ್ಲಿ ಎಸ್ ಎಲ್ ಭೈರಪ್ಪ ಕಲೆ ಮತ್ತು ಸಾಂಸ್ಕೃತಿಕ ಕೇಂದ್ರ ವನ್ನು ನಿರ್ಮಾಣ ಮಾಡಲು ಐದು ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.

ಈ ಕೇಂದ್ರ ಯಾವ ರೀತಿ ನಿರ್ಮಾಣ ಮಾಡಬೇಕು, ಅದರಲ್ಲಿ ಏನೆಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು ಮತ್ತು ಯಾವ ಯಾವ ಬಗೆಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.

ಸದ್ಯದಲ್ಲಿಯೇ ಎಸ್.ಎಲ್.ಭೈರಪ್ಪ ಅವರನ್ನೇ ಆ ಸ್ಥಳಕ್ಕೆ ಕರೆದುಕೊಂಡು ಹೋಗಿ ಅವರ ಸಲಹೆ-ಸೂಚನೆಗಳ ಅನ್ವಯ ಅಂತಿಮ ವಿನ್ಯಾಸವನ್ನು
ರೂಪಿಸಲಾಗುತ್ತದೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

Share This Article
Leave a comment