ಬಿ. ಎನ್ . ಚಂದ್ರಶೇಖರ್
ಯೋಧರ ನಾಡು ಎಂದೇ ಖ್ಯಾತಿ ಪಡೆದ ಮಡಿಕೇರಿಯಲ್ಲಿ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಸೇನಾ ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುವ ಭವ್ಯ ಸೇನಾ ಸಂಗ್ರಹಾಲಯವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.
ಈ ಭವ್ಯ ಸೇನಾ ಸಂಗ್ರಹಾಲಯವು ನೋಡುಗರ ಮೈನವಿರೇಳಿಸುವುದಲ್ಲದೆ, ಸಹಸ್ರಾರು ಪ್ರವಾಸಿಗರಿಗೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸಿದ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸೇನಾಬದುಕಿನ ರೋಚಕತೆಯನ್ನು ತೆರೆದಿಡುತ್ತದೆ.
ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಹಿನ್ನೆಲೆ
ಮಂಜು ಮುಸುಕಿನ ನಾಡು ಮಡಿಕೇರಿಯಲ್ಲಿ ಅಪ್ರತಿಮ ಸೇನಾನಿ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯನವರು 1906ರ ಮಾರ್ಚ್ 30ರಂದು ಜನಿಸಿದರು. ಅವರ ತಂದೆ ಸುಬ್ಬಯ್ಯ, ತಾಯಿ ಸೀತಮ್ಮ. ಅವರ ಮೂಲ ಹೆಸರು ತಿಮ್ಮಯ್ಯ. ಆದರೆ ಶಾಲೆಯಲ್ಲಿ ಅವರ ಪೂರ್ಣ ಹೆಸರು ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಎಂದಾದ್ದರಿಂದ ಕೆ.ಎಸ್.ತಿಮ್ಮಯ್ಯ ಎಂದೇ ಪ್ರಸಿದ್ಧರಾದರು.
ಭಾರತೀಯ ಸೇನೆಯಲ್ಲಿ ಶಿಸ್ತು ಮತ್ತು ಕರ್ತವ್ಯಕ್ಕೆ ಹೆಸರುವಾಸಿಯಾಗಿದ್ದ ತಿಮ್ಮಯ್ಯ ಅವರು, 1926ರಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯಲ್ಲಿ ಹಲವು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಭಾರತದ ವಿಭಜನೆಯ ಸಂದರ್ಭ ಪಾಕಿಸ್ಥಾನದೊಂದಿಗೆ ಸೈನ್ಯದ ಮತ್ತು ಆಯುಧಗಳ ವಿಲೇವಾರಿಯನ್ನು ಕುರಿತು ರಚಿಸಿದ ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಯಿತು. ಬಳಿಕ 1947ರಲ್ಲಿ ಅವರಿಗೆ ಮೇಜರ್-ಜನರಲ್ ಆಗಿ ಮುಂಭಡ್ತಿ ನೀಡಲಾಯಿತು.
1957ರ ಮೇ 7ರಂದು ತಿಮ್ಮಯ್ಯ ಅವರು ಭಾರತೀಯ ಭೂಸೈನ್ಯದ 6ನೇ ಮುಖ್ಯಸ್ಥರಾಗಿ ಅಧಿಕಾರವನ್ನು ವಹಿಸಿಕೊಂಡರು. 1961ರ ಮೇ 7ರಂದು ತಿಮ್ಮಯ್ಯನವರು ನಿವೃತ್ತರಾದರು. 1965ರ ಡಿ.17ರಂದು ನಿಧನ ಹೊಂದಿದರು.
ಮನಸೆಳೆಯುವ ಸನ್ನಿಸೈಡ್
ಭಾರತೀಯ ಕೆಚ್ಚೆದೆಯ ಸೇನೆಯ ಶಕ್ತಿ, ಶೌರ್ಯ, ತ್ಯಾಗ ಎಲ್ಲವನ್ನೂ ಸಾರುವ ದಿವಂಗತ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ಮನೆಯು ‘ಸನ್ನಿಸೈಡ್’ ಆಗಿ ಅಭಿವೃದ್ಧಿಗೊಂಡು ಮಡಿಕೇರಿ- ಮೈಸೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದೆ.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಫೋರಂ ಸದಸ್ಯರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗಿನ ಜನಪ್ರತಿನಿಧಿಗಳ ಸತತ ಪ್ರಯತ್ನ ದಿಂದ ತಿಮ್ಮಯ್ಯ ಅವರು ಜನ್ಮ ಪಡೆದು, ಆಟವಾಡಿದ ‘ಸನ್ನಿಸೈಡ್’ ನಿವಾಸವನ್ನೇ ಸ್ಮಾರಕವಾಗಿ ಮಾರ್ಪಾಡು ಮಾಡಲಾಗಿದೆ.
ಜನರಲ್ ಕೆ.ಎಸ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಸನ್ನಿಸೈಡ್ ಅವರ ಸೈನಿಕ ಜೀವನದ ರೋಚಕ ಭಾಗವಾದ ಸನ್ನಿಸೈಡ್ ಒಳ ಪ್ರವೇಶಿಸುತ್ತಿದ್ದಂತೆ ಪ್ರತಿಮೆಯೊಂದಕ್ಕೆ ತೊಡಿಸಿರುವ ಜ. ತಿಮ್ಮಯ್ಯ ಅವರು ಧರಿಸುತ್ತಿದ್ದ ಸೇನಾ ಸಮವಸ್ತ್ರ ಭಾರತೀಯ ಸೇನಾಧಿಕಾರಿಯಾಗಿ ನಡೆದು ಬಂದ ದಾರಿಯ ಇತಿಹಾಸ ಸಾರುವುದರ ಜೊತೆಗೆ ಭಾರತೀಯ ಸೇನಾ ಪರಂಪರೆಯ ಮಾಹಿತಿ ನೀಡುವ ಮಹತ್ವದ ಸಂದೇಶ ವಸ್ತು ಸಂಗ್ರಹಾಲಯದಲ್ಲಿದೆ.
ಪ್ರವಾಸಿಗರನ್ನು ಕೈಬೀಸಿ ಕರೆಯುವ ಮ್ಯೂಸಿಯಂ
ಕೊಡಗಿನ ಐತಿಹಾಸಿಕ ಹಿನ್ನೆಲೆಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಮ್ಯೂಸಿಯಂನ ದ್ವಾರವನ್ನು ಪ್ರವೇಶಿಸುತ್ತಿದ್ದಂತೆ ಬಲ ಬದಿಗೆ ಕಾಣುವ ಯೋಧರ ಸ್ಮಾರಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.
ಸನ್ನಿಸೈಡ್ ಮನೆಯ ಮುಂದೆ ಮ್ಯೂಸಿಯಂ ಲಾಂಛನವಿದೆ. ಸೇನಾ ಸಮವಸ್ತ್ರಧಾರಿ ತಿಮ್ಮಯ್ಯ ಅವರು ವಿರೋಚಿತ ಗೆಲವು ಸಾಧಿಸಿದ್ದ ಜೋಜಿಲಾ ಪಾಸ್‌ನ ಹಿಮಚ್ಛಾದಿತ ಪರ್ವತ ಶ್ರೇಣಿ ಇರುವ ಲಾಂಛನ ಇದಾಗಿದೆ.
ದೇಶದಲ್ಲಿ ಮಾತ್ರವಲ್ಲದೆ ವಿವಿಧ ದೇಶಗಳ ವಿರುದ್ಧ ನಡೆಸಿದ ಯುದ್ಧಗಳಲ್ಲಿ ಬಳಕೆಯಾದ ವಿವಿಧ ಗನ್‌ಗಳು, ಯುದ್ಧ ಡೈರಿಗಳು ನಿರ್ಮಾಣಗೊಂಡಿರುವ ಈ ಮ್ಯೂಸಿಯಂನ ಪ್ರಮುಖ ಆಕರ್ಷಣೆಯಾಗಿವೆ.
ಗಮನ ಸೆಳೆಯುವ ಯುದ್ಧ ಸ್ಮಾರಕ
ಹುತಾತ್ಮ ಯೋಧರನ್ನು ಗೌರವಿಸಿ, ಸ್ಮರಿಸುವ ಸಲುವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. ಯುದ್ಧ ಟ್ಯಾಂಕರ್, ಸುಖೋಯ್ ಯುದ್ಧ ವಿಮಾನಗಳು, ದೇಶದ ಸೇನಾ ಸಂಪತ್ತನ್ನು ವಿವರವಾಗಿ ತೆರೆದಿಡುತ್ತವೆ.
ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ಟಿ.50 ಯುದ್ಧ ಟ್ಯಾಂಕರ್, ಯುದ್ಧ ವಿಮಾನ ಹಾಗೂ ಸ್ಮಾರಕ ಗಮನ ಸೆಳೆಯುತ್ತದೆ. ಮಹಾರಾಷ್ಟ್ರದ ಪುಣೆಯ ಖಡ್ಕಿಯಲ್ಲಿರುವ ಕೀರ್ಕಿ ಸೇನಾ ಕೇಂದ್ರದಿಂದ ‘ಸನ್ನಿಸೈಡ್’ಗೆ ಎರಡು ವರ್ಷಗಳ ಹಿಂದೆಯೇ ರಸ್ತೆಯ ಮೂಲಕ ಈ ಟ್ಯಾಂಕರ್ ಅನ್ನು ತರಲಾಗಿದೆ.
1971ರಲ್ಲಿ ಭಾರತ -ಪಾಕಿಸ್ಥಾನ ನಡುವಣ ಯುದ್ಧದ ಸಂದರ್ಭ ‘ಹಿಮ್ಮತ್’ ಹೆಸರಿನಲ್ಲಿ ನಡೆಸಲಾದ ಕಾರ್ಯಾಚರಣೆಯಲ್ಲಿ ಈ ಟ್ಯಾಂಕರ್ ಅನ್ನು ಬಳಸಲಾಗಿತ್ತು ಎಂಬ ಮಾಹಿತಿ ಇದೆ.
ಜತೆಗೆ ‘ಮಿಗ್ 21’ ಯುದ್ಧ ವಿಮಾನ ಇಲ್ಲಿನ ಮತ್ತೂಂದು ಆಕರ್ಷಣೆ. ಇದು 1971ರ ಭಾರತ- ಪಾಕಿಸ್ಥಾನದ ಯುದ್ಧ ದಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದು ಸೂಪರ್‌ಸಾನಿಕ್ ಜೆಟ್ ಫೈಟರ್ ಮತ್ತು ಇಂಟರ್‌ಸೆಪ್ಟರ್ ವಿಮಾನವಾಗಿದೆ.15 ವರ್ಷಗಳಿಂದ ಈ ವಿಮಾನವನ್ನು ಬಳಸಲಾಗುತ್ತಿಲ್ಲ. ಇದೀಗ ವಿಮಾನವನ್ನು ಪ್ರದರ್ಶನಕ್ಕಿಡಲಾಗಿದೆ.
ಚಿತ್ತಾಕರ್ಷಿಸುವ ಸೈನ್ಯದಲ್ಲಿ ಬಳಸುವ ವಸ್ತುಗಳು
ಭಾರತೀಯ ಸೈನಿಕರ ಶೌರ್ಯವನ್ನು ಒಳಗೊಂಡ ಕಲಾಕೃತಿಗಳು ಮ್ಯೂಸಿಯಂನ ಸಂಗ್ರಹದಲ್ಲಿ ಸೇರಿವೆ. ತಿಮ್ಮಯ್ಯ ಅವರ ಬಾಲ್ಯದ ಚಿತ್ರಗಳು, ಕಲಾಕೃತಿ, ತಿಮ್ಮಯ್ಯ ಅವರು ಬಳಸಿದ ಲೇಖನಿಗಳು, ಮಿಲಿಟರಿ ಸಮವಸ್ತ್ರಗಳು, ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.
ಸೈನಿಕರು ಬಳಸುವ 24ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳು, ಲೈಟ್ ಮೆಷಿನ್ ಗನ್, ಮಧ್ಯಮ ಮೆಷಿನ್ ಗನ್ ಮತ್ತು ಸೆಲ್ಫ್ ಲೋಡಿಂಗ್ ರೈಫಲ್ಸ್ ಸೇರಿದಂತೆ ಹತ್ತು ಹಲವು ವಸ್ತುಗಳು ಸಂಗ್ರಹಾಲಯದಲ್ಲಿವೆ. ಅಲ್ಲದೆ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಕುರಿತು ವಿವರವಾದ ಮಾಹಿತಿಯನ್ನು ಒಳಗೊಂಡಿದೆ.
ಒಟ್ಟಾರೆ ಭಾರತೀಯ ಸೈನ್ಯದಲ್ಲಿ ಸೇವೆಗೈಯಲಿಚ್ಚಿಸುವ ನವತರುಣರಿಗೆ ಉತ್ತಮ ಸೈನಿಕನಾಗಿರಬೇಕಾದರೆ ಎಂತಿರಬೇಕೆಂದು ಜೀವಂತ ನಿದರ್ಶನರಾಗಿದ್ದು ಬೋಧಿಸಿದ ತಿಮ್ಮಯ್ಯ ಅವರ ಜೀವನ ಚರಿತ್ರೆಯನ್ನು ಮ್ಯೂಸಿಯಂ ಮೂಲಕ ತಿಳಿಯಬಹುದಾಗಿದೆ.
- ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
- ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
- ವಾರಕ್ಕೆ 70 ಗಂಟೆ ಕೆಲಸದ ಮೇಲೆ ಉದ್ಯಮಿ ನಮಿತಾ ಥಾಪರ್ ಪ್ರತಿಕ್ರಿಯೆ
- ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
More Stories
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ