January 4, 2025

Newsnap Kannada

The World at your finger tips!

thriveni

ಕಾದಂಬರಿಗಾರ್ತಿ ತ್ರಿವೇಣಿ ಮನ ಮಂಥನ

Spread the love

ಮಂಡ್ಯದ ಪ್ರಸಿದ್ಧ ವಕೀಲ ಬಿ.ಎಂ.ಕೃಷ್ಣಸ್ವಾಮಿ-ತಂಗಮ್ಮ ದಂಪತಿಗೆ 1928ರ ಸೆಪ್ಟೆಂಬರ್ ಒಂದರಂದು ಜನಿಸಿದವರು ಭಾಗೀರಥಿ.

ಮನೆಯಲ್ಲಿ ಕರೆಯುತ್ತಿದ್ದ ಪ್ರೀತಿಯ ಹೆಸರು ಅಂಚು'; ಶಾಲೆಗೆ ಸೇರಿಸುವಾಗ ಅನಸೂಯ’ ಎಂದಾಯಿತು.
ಮಂಡ್ಯದಲ್ಲಿ ಹೈಸ್ಕೂಲುವರೆಗೆ ಓದಿದ ಅನಸೂಯ ಮೈಸೂರಿನಲ್ಲಿದ್ದ ಅಜ್ಜನ ಮನೆಯಲ್ಲಿ ಹೆಚ್ಚಿನ ಶಿಕ್ಷಣಕ್ಕೆ ಬಂದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಗಳಿಸಿದರು. ಬಿಎ ಪದವಿಯಲ್ಲಿ ಅವರ ಐಚ್ಛಿಕ ವಿಷಯ ಮನಶ್ಶಾಸ್ತ್ರ.
ಪದವಿ ಮುಗಿಸಿ ಮಂಡ್ಯಕ್ಕೆ ಬಂದ ಅನಸೂಯ ಅಲ್ಲಿ ಒಂದು ವರ್ಷ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದರು. ಆರೋಗ್ಯ ಸಮಸ್ಯೆಯಿಂದಾಗಿ ಕೆಲಸ ಬಿಟ್ಟರು. ತಾಯಿಯ ಕಡೆಯ ಸಂಬಂಧಿ ಎನ್.ಎಸ್.ಶಂಕರ್ ಅವರ ಮಹಾರಾಜ ಕಾಲೇಜಿನಲ್ಲಿ ಸಹಪಾಠಿ. ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. ಶಿಕ್ಷಕ ವೃತ್ತಿ ತ್ಯಜಿಸಿದ ಅನಸೂಯ 1951ರಲ್ಲಿ ಶಂಕರ್ ಅವರನ್ನು ಮದುವೆಯಾಗಿ ಮೈಸೂರಿಗೆ ಬಂದು ನೆಲೆಸಿದರು.


ಬಿಎಂಶ್ರೀ ಅನಸೂಯ ಅವರ ದೊಡ್ಡಪ್ಪ. ಕಾದಂಬರಿಕಾರರಾಗಿದ್ದ ವಾಣಿ ಅವರ ಚಿಕ್ಕಮ್ಮ. ಬಿ.ಸಿ. ರಾಮಚಂದ್ರ ಶರ್ಮ, ರಾಜಲಕ್ಷ್ಮಿ ಎಸ್.ರಾವ್, ಕಥೆಗಾರ ಅಶ್ವತ್ಥ ಇವರೆಲ್ಲ ಹತ್ತಿರದ ಸಂಬಂಧಿಗಳು. ಇಂಥ ಕೌಟುಂಬಿಕ ಪರಿಸರದಲ್ಲಿ ಇದ್ದ ಅನಸೂಯ ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ, ಅಭಿರುಚಿ ಹೊಂದಿದ್ದರು.

ಸಣ್ಣಕತೆಗಳನ್ನು ಬರೆಯುವ ಮೂಲಕ ಬರವಣಿಗೆ ಕ್ಷೇತ್ರಕ್ಕೆ ಕಾಲಿರಿಸಿದರು.
ಕಳೆದ ಶತಮಾನದ ಐವತ್ತು ಅರವತ್ತರ ದಶಕಗಳ ಜನಪ್ರಿಯ ಲೇಖಕಿ ತ್ರಿವೇಣಿ ಅವರ ಹಿನ್ನೆಲೆ ಇದು.

1951ರಿಂದ 1963ರವರೆಗೆ 12 ವರ್ಷಗಳ ಅವಧಿಯಲ್ಲಿ 21 ಕಾದಂಬರಿಗಳು ಮತ್ತು 41 ಸಣ್ಣ ಕಥೆಗಳನ್ನು ರಚಿಸಿದ ತ್ರಿವೇಣಿ ಕಳೆದ ಶತಮಾನದ ಆ ಕಾಲದ ಜನಪ್ರಿಯ ಲೇಖಕಿ. ನಗರವಾಸಿ ಮಧ್ಯಮವರ್ಗದ ಸುಶಿಕ್ಷಿತ ಕುಟುಂಬಗಳಲ್ಲಿ ಮಹಿಳೆಯರ ಸ್ಥಿತಿ-ಗತಿಯನ್ನು ಅರ್ಥಪೂರ್ಣವಾಗಿ ಚಿತ್ರಿಸಿದ್ದ ಕಾರಣಕ್ಕೆ ಓದುಗರ ವಿಶೇಷ ಮನ್ನಣೆಯನ್ನು ಗಳಿಸಿದ್ದ ತ್ರಿವೇಣಿ ಈಗಲೂ ಪ್ರಸ್ತುತರಾಗಿದ್ದಾರೆ ಎಂಬುದಕ್ಕೆ ಡಾ.ಆರ್.ಅರ್ಚನಾ ಅವರು ಹೊರತಂದಿರುವ `ತ್ರಿವೇಣಿ: ಮನ ಮಂಥನ’ ಕೃತಿ ನಿದರ್ಶನ.

ತ್ರಿವೇಣಿ ಅವರ ಕಾದಂಬರಿಗಳ ಅಧ್ಯಯನದ ಸಂಪ್ರಬಂಧ ಇದು. ಅರ್ಚನಾ ಅವರಿಗೆ ಪಿಎಚ್ ಡಿ ಪದವಿ ತಂದುಕೊಟ್ಟಿದೆ.

ತ್ರಿವೇಣಿ: ಮನ ಮಂಥನ' ಬೆಂಗಳೂರು ಮೆಡಿಕಲ್ ಕಾಲೇಜಿನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ವೈದ್ಯ ಸಾಹಿತಿ ರಾಶಿ ಅವರ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಗಳ ಪ್ರಶಸ್ತಿ ಪುರಸ್ಕೃತ ಕೃತಿಮನ ಮಂಥನ’ ಶೀರ್ಷಿಕೆಯನ್ನು ನೆನಪಿಸುತ್ತದೆ. (ರಾಶಿ ಅವರ ಕೃತಿ ಕಥಾ ದೃಷ್ಟಾಂತಗಳ ಮೂಲಕ ವಿವಿಧ ಬಗೆಯ ಮಾನಸಿಕ ರೋಗಗಳಾದ ಪ್ಯಾರಾನಾಯ್ಡ್ ಅವಸ್ಥೆ, ಹಿಸ್ಟೀರಿಯಾ, ಒಬ್ಸೆಷನಲ್ ಬೇನೆ, ಸ್ಕೀಜೋಫ್ರೇನಿಯಾ ಮೊದಲಾದವುಗಳನ್ನು ಸ್ವಾರಸ್ಯಕರವಾಗಿ ವಿಶ್ಲೇಷಿಸುತ್ತದೆ).

ತ್ರಿವೇಣಿ ಅವರ ಕೃತಿಗಳನ್ನು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ವಿಶ್ಲೇಷಣೆ ನಡೆಸುವ ಮೂಲಕ ಅರ್ಚನಾ ಅವರು ಅರವತ್ತು ವರ್ಷಗಳ ಹಿಂದೆ ಜನಮನ್ನಣೆಯನ್ನು ಗಳಿಸಿದ್ದ ತ್ರಿವೇಣಿ ಅವರ ಕೃತಿಗಳ ಮರು ಓದಿಗೆ ಒತ್ತಾಸೆಯಾಗುವಂತೆ ತಮ್ಮ ಸಂಪ್ರಬಂಧವನ್ನು ಪ್ರಕಟಿಸಿದ್ದಾರೆ.

ಖ್ಯಾತ ವಿಮರ್ಶಕರಾದ ಸಿ.ಎನ್.ರಾಮಚಂದ್ರನ್ ಮತ್ತು ಬರಗೂರು ರಾಮಚಂದ್ರಪ್ಪ ಅವರು ಈ ಕೃತಿಗೆ ಸೂಕ್ತ ಪ್ರವೇಶಿಕೆಯನ್ನು ಒದಗಿಸಿದ್ದಾರೆ. ಐಸಿರಿ ಪ್ರಕಾಶನದ ಮಂಜುನಾಥ ಪಾಳ್ಯ ಈ ಕೃತಿಯನ್ನು ಆಕರ್ಷಕವಾಗಿ ಪ್ರಕಟಿಸಿದ್ದಾರೆ. ಬೆಳ್ಳಿಮೋಡ, ಶರಪಂಜರ ಮೊದಲಾದ ಎಪ್ಪತ್ತರ ದಶಕದ ಜನಪ್ರಿಯ ಚಲನಚಿತ್ರಗಳಿಗೆ ಮೂಲ ಕಥೆಯನ್ನು ಒದಗಿಸಿದ ಅಂದಿನ ಪ್ರಮುಖ ಸ್ತ್ರೀವಾದಿ ಲೇಖಕಿಯ ಸಾಹಿತ್ಯದ ಬಗ್ಗೆ ಇಂದಿನ ಪೀಳಿಗೆ ಗಮನ ಹರಿಸುವುದಕ್ಕೆ ಡಾ.ಅರ್ಚನಾ ಅವರ ಕೃತಿ ಒತ್ತಾಸೆಯಾಗಿದೆ.

Copyright © All rights reserved Newsnap | Newsever by AF themes.
error: Content is protected !!