86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ದೊಡ್ಡರಂಗೇಗೌಡರ ಆಯ್ಕೆ

Team Newsnap
1 Min Read

ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ.

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ಶುಕ್ರವಾರ ನಡೆದ ಕಾರ್ಯಕಾರಿ ಸಮಿತಿಯು ಸರ್ವಾನುಮತದಿಂದ ಆಯ್ಕೆಮಾಡಿದೆ.‌

ಸಾಹಿತಿ ದೊಡ್ಡರಂಗೇಗೌಡ ಅವರ ಪರಿಚಯ

ತುಮಕೂರು ಜಿಲ್ಲೆ ಕುರುಬರಹಳ್ಳಿ 1946 ಫೆಬ್ರುವರಿ 7ರಂದು ಜನಿಸಿದ ದೊಡ್ಡರಂಗೇಗೌಡರು ಕವಿ, ಸಾಹಿತಿ ಮನುಜ ಕಾವ್ಯನಾಮದ ಮೂಲಕ ಸಾಹಿತ್ಯಪ್ರಿಯರಿಗೆ ಚಿರಪರಿಚಿತರು. ತಂದೆ ರಂಗೇಗೌಡ, ತಾಯಿ ಅಕ್ಕಮ್ಮ ಪುತ್ರನಾಗಿ ಜನಿಸಿದ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಕನ್ನಡ ನವೋದಯ ಕಾವ್ಯ- ಒಂದು ಪುನರ್‌ಮೌಲ್ಯಮಾಪನ ಎಂಬ ಪ್ರಬಂಧದ ಮೂಲಕ ಪಿಎಚ್‌ಡಿ ಪಡೆದರು. ಬೆಂಗಳೂರಿನ ಕೆ.ಆರ್.ಮಾರುಕಟ್ಟೆ ಬಳಿ ಇರುವ ಎಸ್‌.ಎಲ್‌.ಎನ್‌ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅನನ್ಯನಾಡು, ಪಿರಮಿಡ್ಡುಗಳ ಪರಿಸರದಲ್ಲಿ (ಪ್ರವಾಸ ಕಥನ), ಸಿದ್ಧೇಶ್ವರ ಸ್ತುತಿ, ಭಕ್ತಿ ಕುಸುಮಾಂಜಲಿ (ಭಕ್ತಿಗೀತೆಯ ಕೃತಿ), ಪ್ರೀತಿ ಪ್ರಗಾಥ, ಹಳ್ಳಿ ಹುಡುಗಿ ಹಾಡು-ಪಾಡು ವರ್ತಮಾನದ ವ್ಯಂಗ್ಯದಲ್ಲಿ, ವಿಚಾರವಾಹಿನಿ, ವಿಶ್ವಮುಖಿ (ಗದ್ಯ ಕೃತಿ) ಜಗಲಿ ಹತ್ತಿ ಇಳಿದು, ಕಣ್ಣು ನಾಲಗೆ ಕಡಲು, ನಾಡಾಡಿ, ಮೌನಸ್ಪಂದನ (ಕಾವ್ಯ),ಹಿಮಶ್ವೇತಾ, ಮಯೂರ ದರ್ಶನ, ಚಂದ್ರಗಿರಿ ದರ್ಶನ, ಸಾಧನ ಸಿರಿ (ರೂಪಕ) ಮುಂತಾದ ನಾನಾ ರಂಗದಲ್ಲಿಯೂ ಬರೆವಣಿಗೆ ರೂಪಿಸಿದ್ದಾರೆ.

1982 ರಲ್ಲಿ ಗೌಡರು ಆಲೆಮನೆ ಚಿತ್ರಕ್ಕಾಗಿ ಬರೆದ ಭಾವೈಕ್ಯ ಗೀತೆಗೆ ಸರ್ಕಾದಿಂದ ವಿಶೇಷ ಗೀತೆ ಪ್ರಶಸ್ತಿ ಹಾಗೂ ಬೆಳ್ಳಿ ಪದಕದೊಂದಿಗೆ ಸನ್ಮಾನ ದೊರೆಯಿತು. ವಿಶೇಷ ಗೀತೆ ಪ್ರಶಸ್ತಿ ಪಡೆದ ಮೊದಲ ಸಾಹಿತಿಯಾಗಿದ್ದು, ಇವರು ‘ಮನುಜ’ ಎಂಬ ಕಾವ್ಯ ನಾಮದಿಂದ ಬರೆಯುತ್ತಿದ್ದಾರೆ.

ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಇವರು, ರಂಗನಾಯಕಿ, ಪರಸಂಗದ ಗೆಂಡೆತಿಮ್ಮ, ಜನುಮದ ಜೋಡಿ, ಅಶ್ವಮೇಧ, ಬಂಗಾರದ ಜಿಂಕೆಯಂತಹ ಸಿನಿಮಾಗಳಿಗೆ ಗೀತೆ ರಚಿಸಿದ್ದಾರೆ.

ಇವರೆಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರತ್ನಾಕರವರ್ಣಿ-ಮುದ್ದಣ ಕಾವ್ಯ ಪ್ರಶಸ್ತಿ, ವಿಶೇಷ ಗೀತೆ ಪ್ರಶಸ್ತಿ, ವರ್ಷದ ಶ್ರೇಷ್ಠ ಗೀತೆ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿಸಿದೆ.

Share This Article
Leave a comment