November 22, 2024

Newsnap Kannada

The World at your finger tips!

deepa1

ಸಚಿವ ಸಂಪುಟದಲ್ಲಿ ಮಹತ್ವ ಪಡೆದುಕೊಳ್ಳುತ್ತಿರುವ ಖಾತೆಗಳು

Spread the love

ಸಮಾಜದ ನಡೆ ದುರಂತದ ಕಡೆ…….

ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು ಎಂಬುದಲ್ಲ, ಬದಲಾಗಿ ಸಚಿವ ಸಂಪುಟದ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆ……..

ಮುಖ್ಯಮಂತ್ರಿಯಾದವರು ತಮ್ಮ ಆಡಳಿತದ ಬಹುತೇಕ ಸಮಯವನ್ನು ಇದರ ಬಗ್ಗೆ ಯೋಚಿಸುವುದರಲ್ಲಿ ಮತ್ತು ಶಾಸಕರನ್ನು ಸಮಾಧಾನ ಮಾಡಿ ಹಿಡಿದಿಟ್ಟುಕೊಳ್ಳುವಲ್ಲಿಯೇ ಕಳೆದು ಬಿಡುತ್ತಾರೆ. ಜನರ ಬಗ್ಗೆ ಚಿಂತಿಸಲು ಅವರ ಬಳಿ ತುಂಬಾ ಕಡಿಮೆ ಸಮಯವಿರುತ್ತದೆ.

ನಿಮಗೆ ತಿಳಿದಿರಬಹುದು,
ಸರ್ಕಾರದ ಬಳಿ 34 ಮಂತ್ರಿಗಳ ಸ್ಥಾನ ಮತ್ತು ಮುಖ್ಯವಾಗಿ ಸುಮಾರು ‌75 ಇಲಾಖೆಗಳನ್ನು ಆಡಳಿತದ ಅನುಕೂಲಕ್ಕಾಗಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಪಕ್ಷದ ಶಾಸಕರು ಅವರ ದೃಷ್ಟಿಯಲ್ಲಿ ಅತಿ ಮಹತ್ವದ ಇಲಾಖೆ ಎಂದು ಪರಿಗಣಿಸುವುದು ಯಾವುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು.

ಗೃಹ ಖಾತೆ…..

ಪೋಲಿಸರು – ಕಳ್ಳರು – ವಂಚಕರು – ದಗಾಕೋರರು – ಕೊಲೆಗಡುಕರಿಗೆ ಸಂಬಂಧಿಸಿದ ಮತ್ತು ಜನರಿಗೆ ಮುಖ್ಯವಾಗಿ ಶ್ರೀಮಂತರು – ರಾಜಕಾರಣಿಗಳು – ವಿಐಪಿಗಳಿಗೆ ರಕ್ಷಣೆ ಕೊಡುವುದಕ್ಕೆ ಸಂಬಂಧಪಟ್ಟ ಈ ಇಲಾಖೆ ಅತ್ಯಂತ ಬೇಡಿಕೆಯ ಇಲಾಖೆ. ಅನಧಿಕೃತವಾಗಿ ಬಹುತೇಕ ಸಂಪುಟದ ಎರಡನೇ ಸ್ಥಾನ ಇದಕ್ಕಿದೆ. ಸಾಮಾನ್ಯ ಜನರಿಗೆ ಇದರಿಂದ ಅಂತಹ ನೇರ ಉಪಯೋಗವಿಲ್ಲ. ಆದರೆ ಭ್ರಷ್ಟ ಹಣ ಇಲ್ಲಿ ತಾನೇ ತಾನಾಗಿ ಹರಿದು ಬರುತ್ತದೆ. ಕೇವಲ ವರ್ಗಾವಣೆಯೇ ನೂರಾರು ಕೋಟಿಗಳ ವ್ಯವಹಾರ.

ಹಣಕಾಸು ಖಾತೆ….

ಮೇಲ್ನೋಟಕ್ಕೆ ಅತ್ಯಂತ ಮಹತ್ವದ ಖಾತೆ ಎನಿಸಿದರೂ ಇಂದಿನ ಸಂದರ್ಭಗಳಲ್ಲಿ ಎಲ್ಲಾ ಸೂಕ್ಷ್ಮತೆಯನ್ನು ಕಳೆದುಕೊಂಡು ಸಾಮಾನ್ಯ ಜನರಿಗೆ ಕೇವಲ ಇದೊಂದು ಅಂಕಿಅಂಶಗಳ ಆಟ ಮಾತ್ರ. ಆದರೆ ರಾಜಕಾರಣಿಗಳಿಗೆ ಹಣದ ಹಂಚಿಕೆಯ ಮೇಲೆ ನಿಯಂತ್ರಣ ಇರುವುದರಿಂದ ಕುಳಿತಲ್ಲೇ ಸಾವಿರಾರು ಕೋಟಿಗಳನ್ನು ನುಂಗಬಹುದು ಎಂಬ ಕಾರಣಕ್ಕಾಗಿ ಇದು ಬಹು ಮಹತ್ವ ಹೊಂದಿದೆ.

ಕಂದಾಯ, ಲೋಕೋಪಯೋಗಿ ಮತ್ತು ಇಂಧನ ಖಾತೆಗಳು…….

ಇಡೀ ರಾಜ್ಯದ ಪ್ರಾಕೃತಿಕ ಸಂಪನ್ಮೂಲಗಳ ಮೇಲೆ ನೇರ ಹಿಡಿತ ಸಾಧಿಸುವ ಮತ್ತು ಅಪಾರ ಹಣದ ಹರಿವನ್ನು ಹೊಂದಿರುವ ಖಾತೆಗಳಿವು. ರಸ್ತೆಗಳ ನಿರ್ಮಾಣ, ತೆರಿಗೆ, ವಿದ್ಯುತ್, ಬೃಹತ್ ಕಟ್ಟಡಗಳ ನಿರ್ವಹಣೆ, ಬರ ಪರಿಹಾರ ಎಲ್ಲವೂ ಇದಕ್ಕೆ ಒಳಪಡುತ್ತದೆ. ಹಣ ನೀರಿನಂತೆ ಹರಿದು ಬರುವ ಕಾರಣ ಇದಕ್ಕಾಗಿ ಬಹಳ ಪೈಪೋಟಿ ನಡೆಸುತ್ತದೆ.

ಜಲ ಸಂಪನ್ಮೂಲ ಖಾತೆ….‌

ವಾಸ್ತವವಾಗಿ ಅತ್ಯಂತ ಸೂಕ್ಷ್ಮ ಮತ್ತು ಅತಿ ಬುದ್ದಿವಂತಿಕೆ, ಚಾಕಚಕ್ಯತೆ, ದೂರದೃಷ್ಟಿ ಬಯಸುವ ಇಲಾಖೆಯಿದು. ಆದರೆ ಬಹುದೊಡ್ಡ ಹಣಕಾಸಿನ ಮೂಲ ಇಲ್ಲಿರುವುದರಿಂದ, ಕಂಟ್ರಾಕ್ಟರುಗಳ ಪಾಲಿನ ಸ್ವರ್ಗ ಇದಾಗಿರುವುದರಿಂದ ಇದಕ್ಕೂ ಶಾಸಕರಲ್ಲಿ ಹೆಚ್ಚಿನ ಮಹತ್ವ ಪಡೆದಿದೆ.

ಬೃಹತ್ ಕೈಗಾರಿಕಾ ಖಾತೆ…..
ಇತ್ತೀಚಿನ ದಿನಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿರುವುದರಿಂದ, ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ, ಅಲ್ಲದೆ ಕೆಲವೇ ಶ್ರೀಮಂತ ಉದ್ಯಮಿಗಳು ಇಲ್ಲಿನ ಅತಿಯಾದ ಮಾರುಕಟ್ಟೆ ಮೋಹಿ ಜನಸಂಖ್ಯೆಯನ್ನು ಸುಲಭವಾಗಿ ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಕೇವಲ ಕೈಗಾರಿಕೆಗಳಿಗೆ ಅನುಮತಿ ನೀಡುವುದರಲ್ಲಿಯೇ ಅಪಾರ ಪ್ರಮಾಣದ ಹಣ ಸಂಪಾದನೆ ಮಾಡಬಹುದು.

ಅಬಕಾರಿ……

ಕುಳಿತಲ್ಲೇ ಕಾರ್ಯನಿರ್ವಹಿಸಿ ಅಪಾರ ಹಣ ತನ್ನಿಂದ ತಾನೇ ಹರಿದು ಬರುವಂತೆ ಮಾಡುವ ಬಹುತೇಕ ಕುಡುಕರಿಗೆ ಮಾತ್ರ ಸಂಬಂಧಿಸಿದ ಈ ಇಲಾಖೆ ಕೂಡ ನಮ್ಮ ಶಾಸಕರುಗಳಿಗೆ ಮಹತ್ವ ಎಂಬುದು ನಮ್ಮ ಸಮಾಜದ ದುರಂತ…..

ಗಣಿ ಖಾತೆ…..

ಭೂಮಿ ಬಗೆದು ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನೇ ಬಗೆಯುವ ಅದರ ಮೂಲಕ ಹಣದ ಹೊಳೆಯನ್ನೇ ಹರಿಸುವ ಗಣಿ ಖಾತೆಯೂ ಮಹತ್ವ ಪಡೆದಿರುವುದು ಶಾಸಕರ ದುರಾಸೆಯ ಪರಮಾವಧಿ.

ಸಹಕಾರ, ಸಾರಿಗೆ, ವೈದ್ಯಕೀಯ, ಸಮಾಜ ಕಲ್ಯಾಣ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಪ್ರವಾಸೋದ್ಯಮ ಖಾತೆಗಳು………

ಇವು ಜನರಿಗೆ ನೇರವಾಗಿ ಸಂಬಂಧ ಪಟ್ಟ ಖಾತೆಗಳು.
ಆದರೆ ಇವುಗಳು ಶಾಸಕರ ದೃಷ್ಟಿಯಲ್ಲಿ ಮಧ್ಯಮ ಗಾತ್ರದ ಸಮಾಧಾನಕರ ಖಾತೆಗಳು. ಏಕೆಂದರೆ ಇಲ್ಲಿ ಕೆಲಸ ಹೆಚ್ಚು. ಜನರ ನಿರೀಕ್ಷೆಗಳು ಆಕಾಂಕ್ಷೆಗಳು ತುಂಬಾ ಇರುತ್ತವೆ‌. ಮೇಲಿನ ಇಲಾಖೆಗಳಂತೆ ಕುಳಿತಲ್ಲೇ ಹಣ ಹರಿದು ಬರುವುದು ಸ್ವಲ್ಪ ಕಡಿಮೆ. ತಂತ್ರ ಕುತಂತ್ರ, ಟೆಂಡರು, ವಿವಿಧ ಅನವಶ್ಯಕ ಯೋಜನೆಗಳನ್ನು ರೂಪಿಸಿ ಹಣ ಮಾಡಿಕೊಳ್ಳಬೇಕು. ಇಲ್ಲಿ ದಂಧೆಗಳನ್ನು ನಿರ್ವಹಿಸುವ ಏಜೆಂಟರು ಸಹ ಬಹಳಷ್ಟು ಸಕ್ರಿಯವಾಗಿರುತ್ತಾರೆ. ಪಕ್ಷಗಳ ಸ್ಥಳೀಯ ಹಿಂಬಾಲಕರು ಆ ಕೆಲಸವನ್ನು ನಿರ್ವಹಿಸುತ್ತಾರೆ.

ಇದನ್ನು ಹೊರತುಪಡಿಸಿ ಇನ್ನೂ ಕೆಲವು ಇಲಾಖೆಗಳು ಶಾಸಕರ ದೃಷ್ಟಿಯಲ್ಲಿ ನಿಷ್ಪ್ರಯೋಜಕ ಎಂದು ಪರಿಗಣಿಸಲ್ಪಟ್ಟಿದೆ. ವಿಚಿತ್ರ ನೋಡಿ…..

ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು, ಸಕ್ಕರೆ, ಕಾರ್ಮಿಕ ಇಲಾಖೆ, ದೇವಸ್ಥಾನಗಳ ನಿರ್ವಹಣೆಯ ಮುಜರಾಯಿ ಇಲಾಖೆ, ಮಾನವ ಕೌಶಲ ಅಭಿವೃದ್ಧಿ ಖಾತೆ, ಅರಣ್ಯ ಖಾತೆ…….

ಇವುಗಳನ್ನು ನಿರ್ವಹಿಸಲು ಅತ್ಯಂತ ಜಾಣ್ಮೆ, ಕ್ರಿಯಾಶೀಲತೆ ಮತ್ತು ಸೇವಾ ಮನೋಭಾವದ ಅವಶ್ಯಕತೆ ಇದೆ. ಹಣಕಾಸಿನ ಹಂಚಿಕೆಯೂ ಇದರಲ್ಲಿ ಕಡಿಮೆ ಇದೆ. ಅದಕ್ಕಾಗಿ ಈ ಖಾತೆಗಳಿಗೆ ಅಂತಹ ಬೇಡಿಕೆ ಇಲ್ಲ. ಮಂತ್ರಿಯಾದರೆ ಸಾಕು ಎನ್ನುವವರಿಗೆ ಅಥವಾ ಸ್ವಲ್ಪ ಸಾಧು ಸ್ವಭಾವದವರಿಗೆ ಇವುಗಳನ್ನು ಕೊಡಲಾಗುತ್ತದೆ.

ಸಂಸದೀಯ ಕಾನೂನು ಮುಂತಾದ ಕೆಲವು ಇಲಾಖೆಗಳು ರಾಜಕೀಯ ಮಹತ್ವ ಪಡೆದಿದೆ. ಅಲ್ಲಿ ಹಣಕ್ಕಿಂತ ರಾಜಕೀಯ ನಿರ್ವಹಣೆ ಮುಖ್ಯವಾಗುತ್ತದೆ.

ಹೀಗೆ ಶಾಸಕರ ದೃಷ್ಟಿಯಲ್ಲಿ ಯಾವ ಯಾವ ಖಾತೆಗಳು ಹೆಚ್ಚು ಹೆಚ್ಚು ಮಹತ್ವ ಪಡೆದಿವೆ ಎಂಬುದನ್ನು ಗಮನಿಸಿದಾಗ ನಮ್ಮ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಗಮನಿಸಬಹುದು.
ಬದಲಾವಣೆ ಎಲ್ಲಿಂದ ಪ್ರಾರಂಭಿಸಬೇಕು.

ಜನರಿಂದಲೋ, ಜನರ ಪ್ರತಿನಿಧಿಗಳಿಂದಲೋ,
ಕಾನೂನುಗಳಿಂದಲೋ, ದೇವರಿಂದಲೋ,ಭೂತದಿಂದಲೋ ಕೊನೆಗೆ ಪ್ರಕೃತಿಯೇ ಪಾಠ ಕಲಿಸಬೇಕೋ….

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!