ಫ್ಲೆಕ್ಸ್‌ನಲ್ಲಿ ತಮ್ಮ ಭಾವಚಿತ್ರ ಹಾಕಲಿಲ್ಲ ಎಂದು ಬೇಸರಗೊಂಡ ಶಾಸಕ ಜಿ.ಟಿ.ದೇವೇಗೌಡ

Team Newsnap
1 Min Read

ಫ್ಲೆಕ್ಸ್ ನಲ್ಲಿ ಫೋಟೊ ಹಾಕಲಿಲ್ಲ ಎಂದು ಬೇಸರಗೊಂಡ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವರ ಕುಂದುಕೊರತೆ ಸಂವಾದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೇರದೆ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮೈಸೂರಿನಲ್ಲಿ ನಡೆಯಿತು.

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಗೊಳಪಡುವ ವಿಜಯನಗರ 4ನೇ ಹಂತದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಉಪಸ್ಥಿತಿ ಯಲ್ಲಿ ಮಂಗಳವಾರ ಕುಂದುಕೊರತೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ತಮ್ಮ ಫೋಟೊ ಹಾಕದಿದ್ದಕ್ಕೆ ಶಾಸಕ ಜಿ.ಟಿ.ದೇವೇಗೌಡ ಅಸಮಾಧಾನ ಹೊರಹಾಕಿದರು.

ನಾನು ಉಸ್ತುವಾರಿ ಸಚಿವರ ಬಳಿ ಕುಂದುಕೊರತೆ ಹೇಳಿಕೊಳ್ಳಲು ಬಂದಿದ್ದೇನೆ ಹೊರತು, ಕುಂದುಕೊರತೆ ಕೇಳಲು ಬಂದಿಲ್ಲ. ನಾನು ಯಾಕೆ ವೇದಿಕೆ ಮೇಲೆ ಬರಲಿ. ಹಿಂದೆ ಪ್ಲೆಕ್ಸ್ ನೋಡಿ, ನನ್ನ ಪೋಟೊನೇ ಇಲ್ಲ. ನಾನೇಕೆ ಮೇಲೆ ಬರಲಿ ಎಂದು ಶಾಸಕ ಜಿ.ಟಿ.ದೇವೇಗೌಡ ಕಿಡಿಕಾರಿದರು.

ಈ ವೇಳೆ ಸಚಿವ ಎಸ್.ಟಿ ಸೋಮಶೇಖರ್ ಮಧ್ಯಪ್ರವೇಶಿಸಿ, ಶಾಸಕ ಜಿ.ಟಿ ದೇವೇಗೌಡ ಅವರ ಮನೊವೊಲಿಸಿ ವೇದಿಕೆ ಮೇಲೆ ಕೂರಿಸಿದರು.

ಮುಡಾ ಅಧ್ಯಕ್ಷ ಎಚ್.ವಿ‌.ರಾಜೀವ್ ಮಾತನಾಡಿ, ಕಳೆದ ರಾತ್ರಿ ಫ್ಲೆಕ್ಸ್ ಅಳವಡಿಸುವ ವೇಳೆ ತಮ್ಮ ಭಾವಚಿತ್ರ ಕಣ್ತಪ್ಪಿನಿಂದ ಹಾಕಿಲ್ಲ. ಈ ಹಿನ್ನೆಲೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಬಹಿರಂಗವಾಗಿ ವೇದಿಕೆಯಲ್ಲಿ ಕ್ಷಮೆಯಾಚಿಸಿದರು.

Share This Article
Leave a comment