November 22, 2024

Newsnap Kannada

The World at your finger tips!

deepa1

ಪ್ರೀತಿ, ಬದುಕಿಗೆ ಅಮೃತದಷ್ಟೇ ಮಹತ್ವ

Spread the love

ಪ್ರೀತಿ ಎಂಬ ಪ್ರೇಮವ ಕುರಿತು….ಪ್ರೀತಿ ಬಗ್ಗೆ ಎಷ್ಟು ಹೇಳೋದು…
ಪ್ರೀತಿಯ ಆಳದ ಹುಡುಕಾಟ………

ಪ್ರೀತಿಯ ಸೆಳೆತದ ಕೆಲವು ಉದಾಹರಣೆಗಳನ್ನು ನೋಡಿ…….

ತಾಯಿಯ ಕರುಳ ಬಳ್ಳಿಯ ಸಂಬಂಧ, ತಂದೆ ತಾಯಿ ಅಣ್ಣ ತಂಗಿ ಅಕ್ಕ ತಮ್ಮ ಅಜ್ಜ ಅಜ್ಜಿ ಮುಂತಾದ ದೀರ್ಘಕಾಲದ ರಕ್ತ ಸಂಬಂದಗಳನ್ನು ಮೀರಿ ಕೇವಲ ಒಂದೋ ಎರಡೋ ವರ್ಷದ ಪ್ರೀತಿಗಾಗಿ,
ರೈಲಿಗೆ ತಲೆ ಕೊಡಲು, ಕುತ್ತಿಗೆಗೆ ನೇಣು ಬಿಗಿದುಕೊಳ್ಳಲು, ವಿಷ ಕುಡಿಯಲು, ಬೆಂಕಿ ಹಚ್ಚಿಕೊಳ್ಳಲು, ಎತ್ತರದಿಂದ ಜಿಗಿಯಲು, ನೀರಿಗೆ ಹಾರಲು ಮನಸ್ಸನ್ನು ಪ್ರೀತಿ ಪ್ರೇರೇಪಿಸುತ್ತದೆ ಎಂದರೆ ಅದರ ತೀವ್ರತೆ ಎಷ್ಟಿರಬಹುದು.

ಈ ಪ್ರೀತಿ ಕಾಲದ ಪರಿವೆಯೇ ಇಲ್ಲದೆ ಅನಾದಿ ಕಾಲದಿಂದ ಈ ಕ್ಷಣದವರೆಗೂ ಅದೇ ಉತ್ಕಟತೆಯನ್ನು ಉಳಿಸಿಕೊಂಡಿದೆ.

ಪ್ರೀತಿಗಾಗಿ ಎಷ್ಟೋ ರಾಜ್ಯಗಳೂ ಉರುಳಿವೆ, ಹಾಗೆ ಪ್ರೀತಿಗಾಗಿ ಎಷ್ಟೋ ಅಧಿಕಾರ ತ್ಯಾಗಗಳೂ ಆಗಿವೆ.

ಒಮ್ಮೆ ಪ್ರೇಮಿಗಳಲ್ಲಿ ಪ್ರೀತಿಯ ಭಾವ ಮೊಳಕೆ ಒಡೆದು ಹೆಮ್ಮರವಾದರೆ ಮುಗಿಯುತು. ಯಾವ ಅಡ್ಡಿ ಆತಂಕಗಳೂ ಅವರನ್ನು ಬೇರ್ಪಡಿಸುವುದು ಸಾಧ್ಯವಿಲ್ಲ. ಅದಕ್ಕೆ ಅಡ್ಡಿಯಾದವರನ್ನು ಕೊಲ್ಲುತ್ತಾರೆ ಅಥವಾ ಸ್ವತಃ ತಾವೇ ಸಾವಿಗೆ ಶರಣಾಗುತ್ತಾರೆ.

ಪ್ರೀತಿಗೆ ಜಾತಿ ವಯಸ್ಸು ಲಿಂಗ ಭಾಷೆ ಪ್ರದೇಶಗಳ ಹಂಗು ಇರುವುದಿಲ್ಲ. ಅಷ್ಟೇ ಏಕೆ ನೈತಿಕತೆಯ ಮೂಗುದಾರವೂ ಇರುವುದಿಲ್ಲ.
( ಕಾಮ ಪ್ರೀತಿಯ ಒಂದು ಭಾಗವೇ ಹೊರತು ಕಾಮವೇ ಪ್ರಧಾನವಾದಾಗ ಅದನ್ನು ಪ್ರೀತಿ ಎಂದು ಪರಿಗಣಿಸಲು ಸಾಧ್ಯವಿಲ್ಲ. ) ನಾನು ಹೇಳುತ್ತಿರುವುದು ನಿಜ ಪ್ರೀತಿಯ ಬಗ್ಗೆ ಮಾತ್ರ. ಪ್ರೀತಿಯ ಇನ್ನೊಂದು ಅತಿರೇಕವೆಂದರೆ, ಪ್ರೀತಿಗೆ ಯಾವುದೇ ಕಾರಣದಿಂದ ಧಕ್ಕೆಯಾದರೆ ಅದರ ರೂಪ ವೈರಾಗ್ಯ ಅಥವಾ ದ್ವೇಷದ ರೂಪ ತಾಳುತ್ತದೆ. ಅದರಲ್ಲೂ ಹದಿಹರೆಯದಲ್ಲಿ ಅದು ತೀವ್ರ ದ್ವೇಷಕ್ಕೆ ತಿರುಗುತ್ತದೆ. ನನಗೆ ಸಿಕ್ಕದ ಆ ಪ್ರೇಮಿ ಯಾರಿಗೂ ಸಿಗಬಾರದು ಎಂಬ ಭಾವನೆ ಬಲವಾಗಿ ಅದು ಬರ್ಬರ ಕೊಲೆ ಮಾಡಿಸುತ್ತದೆ. ಹೆಣ್ಣು ಗಂಡು ಇಬ್ಬರಲ್ಲೂ ಈ ದ್ವೇಷ ಸಮ ಪ್ರಮಾಣದಲ್ಲಿ ಇದ್ದರೂ ನಮ್ಮ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ಯುವಕರೇ ಅತಿಹೆಚ್ಚು ನೇರ ಕೊಲೆಯಂತ ಕ್ರಮಕ್ಕೆ ಮುಂದಾಗುತ್ತಾರೆ.

ಪ್ರೀತಿ ಬದುಕಿಗೆ ಅಮೃತದಷ್ಟೇ ಮಹತ್ವ ಹೊಂದಿದೆ. ಹಾಗೆಯೇ ಅದು ಬಹಳಷ್ಟು ಸಲ ಅಫೀಮಿನ ಅಮಲಿನಂತೆ ನಮ್ಮಿಂದ ತಪ್ಪು ಮಾಡಿಸುತ್ತದೆ.

ಪ್ರೀತಿಯ ಮಡಿಲಿನಲ್ಲಿ ಭೂಮಿಯೇ ಸ್ವರ್ಗ, ವಿರಹದ ತಾಪದಲ್ಲಿ ಈ ನಿಂತ ನೆಲವೇ ನರಕ.

ಯಾವ ತತ್ವಜ್ಞಾನವೂ, ಯಾವ ವೇದಾಂತವೂ, ಯಾವ ಹಿತನುಡಿಗಳೂ ಪ್ರೀತಿಗೆ ಸರಿಸಾಟಿಯಲ್ಲ.

ನಮ್ಮ ದೇಹಕ್ಕಿಂತ ಪ್ರೀತಿಸಿದವರ ದೇಹ ಮನಸ್ಸುಗಳು ಮೇಲೆಯೇ ಹೆಚ್ಚಿನ ಅಭಿಮಾನ, ಮೋಹ, ನನ್ನದೆಂಬ ಸ್ವಾರ್ಥ ಮತ್ತು ನಿಯಂತ್ರಣ ಹೊಂದಲು ಪ್ರೀತಿ ತಹತಹಿಸುತ್ತದೆ. ಅದರ ಪರಿಣಾಮವೇ ಹಿಂಸೆ.

ಪ್ರೀತಿಯ ಆಳಕ್ಕೆ ಇಳಿದವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಪ್ರೀತಿಯ ದಾರಿಯಲ್ಲಿ ಸ್ವಲ್ಪ ದೂರ ಸಾಗಿ ಅದರಿಂದ ವಿಮುಖರಾದವರಿಗೆ ಇದು ಅಷ್ಟಾಗಿ ಅರ್ಥವಾಗುವುದಿಲ್ಲ.
ತಾಯಿ – ಮಗುವಿನ, ಅಣ್ಣ – ತಂಗಿಯ, ಅಕ್ಕ – ತಮ್ಮನ, ಗಂಡ – ಹೆಂಡತಿಯ ಪ್ರೀತಿಯನ್ನು ಇದಕ್ಕೆ ಹೋಲಿಸಲಾಗುವುದಿಲ್ಲ. ಏಕೆಂದರೆ ಇಲ್ಲಿ ಸ್ವಾರ್ಥ, ಅವಲಂಬನೆ, ಅವಕಾಶ, ಜವಾಬ್ದಾರಿ, ಸಾಮಾಜಿಕ ಕಟ್ಟಳೆ ಇರುತ್ತದೆ.

ಆದರೆ,
ಪ್ರೇಮದ ಪ್ರೀತಿಯ ಉತ್ಕಟತೆ……

ಪ್ರೀತಿ ನಿರಂತರತೆಯನ್ನು ಬೇಡುತ್ತದೆ.
ಪ್ರೀತಿ ಏರಿಕೆಯ ರೂಪದ ಸ್ಪಂದನೆ ಯನ್ನು ಬಯಸುತ್ತದೆ.ಪ್ರೀತಿ ಮುಖವಾಡವನ್ನು ಬಯಲು ಮಾಡಿ ಸಹಜತೆಯನ್ನು ತೋರಿಸುತ್ತದೆ.

ಸಿಕ್ಕರೆ ಅಮೃತ,ಸಿಗದಿದ್ದರೆ ವಿಷ,
ಯಶಸ್ವಿಯಾದರೆ ಸ್ವರ್ಗ,ವಿಫಲವಾದರೆ ನರಕ….

ಹೇಳಿದಷ್ಟೂ ಇನ್ನೂ ಉದ್ದವಾಗುವ ಮುಗಿಯದ ಅಕ್ಷಯ ಪಾತ್ರೆ ಈ ಪ್ರೀತಿ‌.

  • ವಿವೇಕಾನಂದ. ಹೆಚ್.ಕೆ.
Copyright © All rights reserved Newsnap | Newsever by AF themes.
error: Content is protected !!