January 11, 2025

Newsnap Kannada

The World at your finger tips!

sd

ರಾಜ್ಯದ 263 ಕಡೆ ಲಸಿಕೆ ತಾಲೀಮು: ಸಚಿವ ಡಾ.ಕೆ.ಸುಧಾಕರ್

Spread the love
  • ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನವಾಗಬೇಕು
  • ಹಕ್ಕಿಜ್ವರದ ಬಗ್ಗೆ ಭಯ ಬೇಡ, ಎಚ್ಚರವಿರಲಿ

ರಾಜ್ಯದ 263 ಕಡೆಗಳಲ್ಲಿ ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ನಡೆಯಲಿದೆ. ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನದಂತೆ ನಡೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವಧನ್ ಅವರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ಕೊರೊನಾ ಲಸಿಕೆಯ ವಿತರಣೆಗೆ ಸಿದ್ಧತೆ, ಕೇಂದ್ರ ಸರ್ಕಾರದಿಂದ ಬೇಕಿರುವ ಸಹಾಯದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಜನವರಿ 8 ರಂದು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಮೂರು ಕಡೆ ಲಸಿಕೆ ವಿತರಣೆಯ ತಾಲೀಮು ನಡೆಯ ಬೇಕಿತ್ತು. ಆದರೆ ನಮ್ಮ ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಏಳು ವ್ಯವಸ್ಥೆಯಲ್ಲಿ ತಯಾರಿ ಮಾಡಿಕೊಂಡು 263 ಪ್ರದೇಶಗಳಲ್ಲಿ ಲಸಿಕೆಯ ವಿತರಣೆ ನಡೆಯಲಿದೆ. 24 ಜಿಲ್ಲಾಸ್ಪತ್ರೆ, 20 ಮೆಡಿಕಲ್ ಕಾಲೇಜು, 43 ತಾಲೂಕು ಆಸ್ಪತ್ರೆ, 31 ಸಮುದಾಯ ಆರೋಗ್ಯ ಕೇಂದ್ರ, 87 ಪ್ರಾಥಮಿಕ ಆರೋಗ್ಯ ಕೇಂದ್ರ, 30 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, 28 ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ತಾಲೀಮು ನಡೆಯಲಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ 24 ಲಕ್ಷ ಸಿರಿಂಜುಗಳನ್ನು ಕಳುಹಿಸಿಕೊಟ್ಟಿದೆ. ಇವುಗಳನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ರಾಜ್ಯದಲ್ಲಿ 10 ವಾಕ್ – ಇನ್ ಕೂಲರ್, 4 ವಾಕ್ -ಇನ್ ಫ್ರೀಜರ್, 3,201 ಐಎಲ್ ಆರ್, 3039 ಡೀಪ್ ಫ್ರೀಜರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಲಭ್ಯವಿದೆ. ಕೇಂದ್ರ ಸರ್ಕಾರವು 225 ಲೀಟರ್ ಸಾಮರ್ಥ್ಯ ದ 64 ಐಎಲ್ ಆರ್ ಗಳನ್ನು ಕಳುಹಿಸಿಕೊಟ್ಟಿದೆ. ಇನ್ನೂ 2 ವಾಕ್ – ಇನ್ ಕೂಲರ್, 1 ವಾಕ್ – ಇನ್ ಫ್ರೀಜರ್ ಕಳುಹಿಸಿಕೊಡುವುದಾಗಿ ಕೇಂದ್ರ ತಿಳಿಸಿದೆ ಎಂದು ಮಾಹಿತಿ ನೀಡಿದರು.

ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6.30 ಲಕ್ಷ ಸಿಬ್ಬಂದಿ ಲಸಿಕೆ ವಿತರಣೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಕೂಡ ನೋಂದಣಿ ಮಾಡಿಸುವುದಾದರೆ ಬರಬಹುದು. 1 ಕೋಟಿ ಲಸಿಕೆಗಳನ್ನು ಕೇಂದ್ರ ಸರ್ಕಾರ ನಾನಾ ರಾಜ್ಯಗಳಿಗೆ ನೀಡಲಿದೆ. ಪೊಲೀಸರು, ಆರೋಗ್ಯ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಕೊರೊನಾ ನಿಯಂತ್ರಣದಲ್ಲಿ ಕಾರ್ಯಪ್ರವೃತ್ತರಾಗಿರುವವರಿಗೆ ಲಸಿಕೆ ಮೊದಲಿಗೆ ದೊರೆಯಲಿದೆ ಎಂದು ತಿಳಿಸಿದರು.

*ಸಚಿವರು ಹೇಳಿದ ಇತರೆ ಅಂಶಗಳು

  • ಲಸಿಕೆಯಿಂದ ಯಾವುದೇ ಅಪಾಯವಿಲ್ಲ. ಇದರಿಂದಾಗಿ ಜನರಿಗೆ ಅನುಕೂಲವಾಗುತ್ತದೆ. ಎಲ್ಲರೂ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  • ಜನವರಿ 17 ರಂದು ಪೊಲಿಯೋ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ. ಒಟ್ಟು 65 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಉದ್ದೇಶವಿದೆ.
  • ದಕ್ಷಿಣ ಕನ್ನಡದಲ್ಲಿ 6 ಕಾಗೆಗಳು ಸಾವನ್ನಪ್ಪಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ. ಹಕ್ಕಿಜ್ವರ ಬಾರದಂತೆ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
  • ಲಕ್ಷಾಂತರ ಮಕ್ಕಳು ಶಾಲೆಗೆ ಹೋಗುತ್ತಿರುವ ಸಮಯದಲ್ಲಿ ಕೊರೊನಾ ಬಗ್ಗೆ ವಿನಾಕಾರಣ ಭೀತಿ ಮೂಡಿಸಬಾರದು. ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದೆ.
Copyright © All rights reserved Newsnap | Newsever by AF themes.
error: Content is protected !!