ಲಸಿಕೆ ವಿತರಣೆಗೆ ರಾಜ್ಯ ಸಿದ್ಧ: ಸಚಿವ ಡಾ.ಕೆ.ಸುಧಾಕರ್

Team Newsnap
2 Min Read
  • ತಾಲೀಮು ನಡೆಯುತ್ತಿರುವ ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಮಾದರಿ ಕೋವಿಡ್-19 ಲಸಿಕಾ ಕೇಂದ್ರಕ್ಕೆ ಸಚಿವರ ಭೇಟಿ
  • ಜನವರಿಯಲ್ಲೇ ಲಸಿಕೆ ಸಿಗುವ ನಿರೀಕ್ಷೆ

ಲಸಿಕೆ ಹಾಕುವ ಅಣಕು ಕಾರ್ಯದಿಂದ ಸಿಬ್ಬಂದಿಗೆ ತರಬೇತಿ ದೊರೆತಿದೆ. ಜನವರಿಯಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದೆ. ಲಸಿಕೆ ಸಿಕ್ಕ ಬಳಿಕ ವಿತರಿಸಲು ಈ ಅಣಕು ಕಾರ್ಯ ನೆರವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಯಲಹಂಕ ಸಾರ್ವಜನಿಕ ಆಸ್ಪತ್ರೆಯ ಮಾದರಿ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಲಸಿಕೆ ವಿತರಣೆಯ ಅಣಕು ಕಾರ್ಯವನ್ನು ಪರಿಶೀಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಐದು ಕಡೆ ಲಸಿಕೆ ನೀಡುವ ಅಣಕು ಪ್ರಯೋಗ ನಡೆಯುತ್ತಿದೆ. ಯಲಹಂಕ ಆಸ್ಪತ್ರೆಯಲ್ಲಿ 25 ಮಂದಿಗೆ (ಅಣಕು) ಲಸಿಕೆ ನೀಡಲಾಗುತ್ತಿದೆ. ಶಿಷ್ಟಾಚಾರದಂತೆ ಲಸಿಕೆ ಹಾಕುವ ಅಣಕು ಪ್ರಕ್ರಿಯೆ ನಡೆಯುತ್ತಿದೆ. ಲಸಿಕೆ ಬಂದ ಬಳಿಕ ಈ ಅಭ್ಯಾಸ ನೆರವಾಗಲಿದೆ. ಜನವರಿಯಲ್ಲೇ ಲಸಿಕೆ ದೊರೆಯುವ ನಿರೀಕ್ಷೆ ಇದೆ. ಕಳೆದ ಎರಡು ತಿಂಗಳಿಂದ ಸಭೆ ನಡೆಸಿ, ಆಸ್ಪತ್ರೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದರು.

ಕೊರೊನಾ ಲಸಿಕೆಯನ್ನು ಕೊರೊನಾ ಯೋಧರಿಗೆ ಮೊದಲ ಹಂತದಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಕೇಂದ್ರ ನೀಡಲಿದೆ. ಅದರಂತೆ, ಕ್ರಮ ವಹಿಸಲಾಗುವುದು. ಲಸಿಕೆ ವಿತರಣೆಗೆ ಬೇಕಾದ ಕೋಲ್ಡ್ ಸ್ಟೋರೇಜ್, ಸಾರಿಗೆ ವ್ಯವಸ್ಥೆ, ಸಿಬ್ಬಂದಿ ನೇಮಕ ಮೊದಲಾದ ಸಿದ್ಧತೆ ಪೂರ್ಣಗೊಂಡಿದೆ. ಬೇರೆ ಲಸಿಕೆಗಳನ್ನು ವಿತರಿಸಲು ಬೇಕಿರುವ ಮೂಲಸೌಕರ್ಯಗಳು ನಮ್ಮಲ್ಲಿವೆ. ಇದನ್ನು ಕೂಡ ಕೊರೊನಾ ಲಸಿಕೆ ಸಂಗ್ರಹ, ವಿತರಣೆಗೆ ಬಳಸಿಕೊಳ್ಳಲಾಗುವುದು ಎಂದರು.

10 ಮಂದಿಗೆ ರೂಪಾಂತರ ವೈರಸ್ :

ಯುನೈಟೆಡ್ ಕಿಂಗ್ ಡಮ್ ನಿಂದ ಬಂದವರಲ್ಲಿ 42 ರಲ್ಲಿ 32 ಮಂದಿಗೆ ಕೊರೊನಾ ಪಾಸಿಟಿವ್ ಆಗಿತ್ತು. 10 ಜನರಿಗೆ ರೂಪಾಂತರಗೊಂಡ ಕೊರೊನಾ ವೈರಾಣು ಇರುವುದು ದೃಢವಾಗಿದೆ. ಈ ಹತ್ತು ಮಂದಿಗೆ ತೀವ್ರವಾದ ಸಮಸ್ಯೆ ಇಲ್ಲ. ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಉತ್ತಮ ಚಿಕಿತ್ಸೆ ನೀಡುತ್ತಿದ್ದು, ಬೇಗನೆ ಗುಣಮುಖರಾಗುವ ವಿಶ್ವಾಸವಿದೆ. ಈಗ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. 12 ಲಕ್ಷಕ್ಕೂ ಅಧಿಕ ಜನರು ಗುಣಮುಖರಾಗಿದ್ದಾರೆ. ಇದೇ ರೀತಿ ಇದ್ದರೆ, ಕೊರೊನಾದಿಂದ ಆಪತ್ತು ಎದುರಿಸುವ ದಿನ ದೂರವಾಗಿದೆ ಎನ್ನಬಹುದು ಎಂದರು.

Share This Article
Leave a comment