November 24, 2024

Newsnap Kannada

The World at your finger tips!

varadi

ಆರೋಗ್ಯ ಕರ್ನಾಟಕ ನಿರ್ಮಾಣ 6 ತಿಂಗಳಲ್ಲಿ ವರದಿ : ಸಚಿವ ಸುಧಾಕರ್

Spread the love

ಆರೋಗ್ಯ ಕ್ಷೇತ್ರದಲ್ಲಿ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ವರದಿ ರೂಪಿಸಲು ವಿಷನ್ ಗ್ರೂಪ್ ಗೆ ಸೂಚನೆ ನೀಡಲಾಗಿದೆ. ಈ ಕುರಿತಂತೆ ಆರು ತಿಂಗಳಲ್ಲಿ ವರದಿ ಸಿದ್ಧವಾಗಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ವಿಷನ್ ಗ್ರೂಪ್ ನ ಮೊದಲ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಡಾ.ಗುರುರಾಜ್ ಅಧ್ಯಕ್ಷತೆಯಲ್ಲಿ ಗ್ರೂಪ್ ರಚನೆಯಾಗಿದೆ. ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಬಗ್ಗೆ ಚರ್ಚೆಯಾಗಿದೆ. 2017 ರ ಆರೋಗ್ಯ ನೀತಿ ನಮ್ಮಲ್ಲಿದೆ. ಇದರ ಜೊತೆಗೆ ರಾಜ್ಯದ ಜನರಿಗೆ ಸುಲಭವಾಗಿ ಪರಿಣಾಮಕಾರಿಯಾದ ಆರೋಗ್ಯ ಸೇವೆಗಳನ್ನು ಒದಗಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಾಥಮಿಕ, ಸಮುದಾಯ ಹಾಗೂ ಜಿಲ್ಲಾ ಮಟ್ಟದ್ದು ಎಂಬ ಮೂರು ಹಂತಗಳ ಆರೋಗ್ಯ ಸೇವೆ ಲಭ್ಯವಿದೆ. ಜೊತೆಗೆ ವೈದ್ಯಕೀಯ ಕಾಲೇಜುಗಳಿವೆ. ಇವುಗಳನ್ನು ಒಂದಕ್ಕೊಂದು ಸಂಪರ್ಕ ಕಲ್ಪಿಸಿ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಿದೆ. ರೋಗ ಬಾರದಂತೆ ತಡೆಯುವ ಪ್ರಿವೆನ್ಶನ್ ಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕಿದೆ. ವ್ಯಕ್ತಿಗೆ ಯಾವ ರೋಗ ಬರಬಹುದು ಎಂದು ಪತ್ತೆ ಮಾಡಿ ಔಷಧಿ ನೀಡುವುದು, 35 ವರ್ಷ ಮೇಲ್ಪಟ್ಟವರಿಗೆ ರಕ್ತ ಪರೀಕ್ಷೆ ಮಾಡಿಸುವುದು, ಅಸಾಂಕ್ರಮಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ. ಇವೆಲ್ಲವೂ ಸೇರಿದಂತೆ ಆರೋಗ್ಯ ಕರ್ನಾಟಕ ನಿರ್ಮಿಸಲು ವರದಿ ರೂಪಿಸಲು ಆರು ತಿಂಗಳ ಸಮಯ ನೀಡಲಾಗಿದೆ ಎಂದರು.

ಈ ಗ್ರೂಪ್ ನಲ್ಲಿ ಉಪ ಸಮಿತಿಗಳನ್ನು ಮಾಡಿಕೊಂಡು ತಜ್ಞರ ಸಲಹೆ ಪಡೆದು ವರದಿ ರೂಪಿಸಲಾಗುತ್ತದೆ. ಈ ಗ್ರೂಪ್ ನಲ್ಲಿ ಅಲೋಪತಿ ಹಾಗೂ ಆಯುಷ್ ತಜ್ಞರನ್ನು ಕೂಡ ಸೇರಿಸಲಾಗಿದೆ. ಅಂತಿಮ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲಿಸಲಾಗುವುದು ಎಂದರು.

ಸಚಿವರು ಹೇಳಿದ ಇತರೆ ಅಂಶಗಳು:

  • ಹೊಸ ಆಸ್ಪತ್ರೆ, ವೈದ್ಯಕೀಯ ಕಾಲೇಜು ನಿರ್ಮಿಸುವಾಗ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಮಾನವ ಸಂಪನ್ಮೂಲ ಲಭ್ಯ ಮಾಡಲು ಕೂಡ ಅನುದಾನ ನೀಡುವಂತೆ ಕೋರಲು ಚರ್ಚೆಯಾಗಿದೆ.
  • ಪ್ರತಿ 50 ಕಿ.ಮೀ. ಒಂದರಂತೆ ಅಥವಾ ಜಿಲ್ಲಾ ಮಟ್ಟದಲ್ಲಿ ಒಂದು ಟ್ರಾಮಾ ಕೇರ್ ಕೇಂದ್ರ ನಿರ್ಮಿಸಬೇಕು ಎಂಬ ಅಭಿಪ್ರಾಯ ಬಂದಿದೆ. ಇದರಿಂದಾಗಿ ಅಪಘಾತಕ್ಕೊಳಗಾದವರ ಜೀವ ರಕ್ಷಣೆ ಮಾಡಬಹುದು.
  • ಮಕ್ಕಳ ಆರೋಗ್ಯ ಕಾಪಾಡಲು ಟೆಲಿ ಮೆಡಿಸಿನ್, ಪ್ರತಿಯೊಬ್ಬರ ಆರೋಗ್ಯದ ಹಿನ್ನೆಲೆಯ ಡಿಜಿಟಲ್ ದಾಖಲಾತಿ, ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ಲಭ್ಯತೆ ಮೊದಲಾದವುಗಳ ಬಗ್ಗೆ ಚರ್ಚೆಯಾಗಿದೆ.
  • ಹೊಣೆಗಾರಿಕೆ ನಿಗದಿಪಡಿಸಿದರೆ ಗುಣಮಟ್ಟ ಸುಧಾರಣೆ ಸಾಧ್ಯ. ಶುಚಿತ್ವ, ಕೈಗೆಟುಕುವ ದರದಲ್ಲಿ ಚಿಕಿತ್ಸೆ ಮೊದಲಾದವುಗಳಿಗೆ ಹೊಣೆಗಾರಿಕೆ ವಹಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು.
Copyright © All rights reserved Newsnap | Newsever by AF themes.
error: Content is protected !!