ಹಿಂದೂ ವ್ರತಗಳಲ್ಲಿ ಹನುಮದ್ ವ್ರತವೂ ಒಂದು. ಮಾರ್ಗಶಿರ ಮಾಸದ ತ್ರಯೋದಶಿಯಂದು ಆಚರಿಸುತ್ತಾರೆ. ಈ ಹನುಮದ್ ವ್ರತವನ್ನು ಯಾವುದೇ ಜಾತಿ ಮತ ಭೇದವಿಲ್ಲದೆ ಆಚರಿಸಲಾಗುತ್ತದೆ. ಕಳೆದು 6-7 ವರ್ಷಗಳಿಂದ ಅಂಜನಾದ್ರಿ ಬೆಟ್ಟಕ್ಕೆ ಹನುಮದ್ ಮಾಲೆ ಹಾಕಿಕೊಂಡು ವ್ರತವನ್ನು ಆಚರಿಸುವ ಭಕ್ತರ ಸಂಖ್ಯೆ ಹೆಚ್ಚಾಗಿ ಇಂದು ಸುಮಾರು 5000 ಕ್ಕೂ ಹೆಚ್ಚು ಭಕ್ತರು ಹನುಮದ್ ಮಾಲೆ ಹಾಕಿ ವ್ರತವನ್ನು ಆಚರಿಸಿ ಮಾಲೆಯನ್ನು ಭಕ್ತಿ ಭಾವನಾತ್ಮಕ ಭಾವನೆಯಿಂದ ಕಳಚುವ ಸಂಪ್ರದಾಯ ಮುಂದುವರೆದುಬಂದಿದೆ.
ರಾಮನ ಭಕ್ತ ಹನುಮನ ನಾಡಿನಲ್ಲಿ ಭಕ್ತರ ಪೂಜಾ ಸಂಭ್ರಮ ಎದ್ದುಕಾಣುತ್ತಿದೆ. ಅಂಜನಾದ್ರಿ ಬೆಟ್ಟ ಇಂದು ಕೇಸರಿಮಯವಾಗಿದೆ. ಅಂಜನಾದ್ರಿ ಬೆಟ್ಟದಲ್ಲಿ ಕಳೆದ ವಾರದಿಂದಲೇ ವಿಶೇಷ ಪೂಜೆ, ರಾಮನಾಮ ಪಠಣ ನಡೆಯುತ್ತಿದೆ. ನೂರಾರು ಮಂದಿ ಕಳೆದ ಮೂರು ದಿನಗಳಿಂದ ಕೊಪ್ಪಳ ಗಂಗಾವತಿ ಮತ್ತು ಹೂಸಪೇಟೆ ಗಳಲ್ಲಿ ಬೀಡು ಬಿಟ್ಟು ಅಂಜನಾದ್ರಿ ಬೆಟ್ಟದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
ರಾಮಾಯಣದ ಮಹಾಕಾವ್ಯದಲ್ಲಿ ಬರುವಹಾಗೆ ಮತ್ತು ಉಲ್ಲೇಖವಿರುವಂತೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಆಂಜನೇಯನಿಗೆ ಗೌರವವಾಗಿ ಈ ಸುಂದರವಾದ ಹನುಮಾನ್ ದೇವಾಲಯವನ್ನು ಬೆಟ್ಟದ ಮೇಲೆ ನಿರ್ಮಿಸಲಾಗಿದೆ. ಕೊಪ್ಪಳವು ಕರ್ನಾಟಕದಲ್ಲಿರುವ ಒಂದು ಐತಿಹಾಸಿಕ ತಾಣವಾಗಿದೆ. ಕೊಪ್ಪಳವನ್ನು ಕೊಪ್ಪ ನಗರ ಎಂದು ಕರೆಯಲಾಗುತ್ತದೆ. ರಾಮಾಯಣದ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಪ್ರಕಾರ, ಅಂಜನಾದ್ರಿ ಬೆಟ್ಟವನ್ನು ಹನುಮಂತನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. ಕೊಪ್ಪಳವನ್ನು ಗಂಗರು, ಹೊಯ್ಸಳರು, ಚಾಲುಕ್ಯರು ಈ ನಗರವನ್ನು ಆಳಿದ್ದಾರೆ. ಅಂಜನಾದ್ರಿ ಬೆಟ್ಟದ ಮೇಲೆ ಇರುವ ಹನುಮಂತ ದೇವರ ಜನ್ಮ ಸ್ಥಳ ನೋಡಲು
570 ಮೆಟ್ಟಿಲುಗಳನ್ನು ಹತ್ತಬೇಕು ಅಂಜನಾದ್ರಿ ಬೆಟ್ಟದ ಮೇಲಿರುವ ಈ ಹನುಮಾನ್ ದೇವಸ್ಥಾನವನ್ನು ತಲುಪಲು ದೇವಸ್ಥಾನಕ್ಕೆ ಹೋಗುವಾಗ ಬೆಟ್ಟ ಹತ್ತುವಾಗ ಹಲವಾರು ಕೋತಿಗಳು ಎದುರಾಗುತ್ತವೆ.
ಅಂಜನಾದ್ರಿ ಪರ್ವತಕ್ಕೆ ರಾಮಾಯಣದಲ್ಲಿ ವಿಶೇಷ ಸ್ಥಾನವಿದೆ. ಶ್ರೀರಾಮನ ಭಕ್ತ ಎಂದು ಕರೆಸಿಕೊಂಡಿರುವ ಆಂಜನೇಯನನ್ನು ಮೊದಲ ಬಾರಿಗೆ ರಾಮ,ಲಕ್ಷ್ಮಣನರಿಗೆ ಭೇಟಿಯಾಗಿದ್ದು ಈ ಭಾಗದಲ್ಲಿಯೇ. ನಂತರದಲ್ಲಿ ರಾಮನ ಆಜ್ಞೆಯಂತೆ ಸೀತೆಯನ್ನು ಹುಡುಕುವ ಹೊಣೆಯನ್ನು ಆಂಜನೇಯ ವಹಿಸಿಕೊಂಡು ಅಂಜನಾದ್ರಿ ಬೆಟ್ಟದಲ್ಲಿ ಪೂರ್ವಕ್ಕೆ ಮುಖವಾಗಿ ಜ್ಞಾನಕ್ಕೆ ಕುಳಿತುಕೊಂಡಿದ್ದ ಎಂದು ರಾಮಾಯಣದಲ್ಲಿ ಕಾಣಬಹುದು. ಹಾಗಾಗಿ ಈ ಭಾಗಕ್ಕೆ ಮಹತ್ವ ಬಂದಿದೆ.
ರಾಮಾಯಣ ಕಾಲದಲ್ಲಿದಿಂದಲೂ ಪ್ರಸಿದ್ಧಿ ಪಡೆದುಕೊಂಡಿರುವ ಅಂಜನಾದ್ರಿ ಪರ್ವತವು ಹಲವಾರು ವಿಶೇಷತೆಯನ್ನು ಹೊಂದಿದೆ. ಬೆಟ್ಟದ ಸುತ್ತಲೂ ಆಯುರ್ವೇದದ ಗಿಡ ಮೂಲಿಕೆಗಳು ಸಿಗುತ್ತವೆ. ಗಿಡ ಮೂಲಿಕೆಗಳ ಎಲೆ ಹಾಗೂ ಹೂಗಳಿಂದ ಬರುವ ಘಮ ಯಾರನ್ನಾದರೂ ಚೈತನ್ಯಶೀಲರನ್ನಾಗಿಸುತ್ತವೆ. ಮುಖ್ಯ ರಸ್ತೆಯ ನೆಲ ಮಟ್ಟದಿಂದ ಸುಮಾರು 570 ಕ್ಕೂ ಅಧಿಕ ಮೆಟ್ಟಿಲುಗಳಿವೆ. ಇವುಗಳ ಮೂಲಕ ದೇವಸ್ಥಾನವನ್ನು ತಲುಪಿದ ಭಕ್ತರಿಗೆ ದಣಿವೇ ಆಗುವುದಿಲ್ಲ. ಅಲ್ಲದೆ ಈ ಬೆಟ್ಟದಿಂದ ಸೂರ್ಯೋದಯ ಹಾಗೂ ಸೂರ್ಯಾಸ್ಥವನ್ನು ನೋಡಬಹುದು.
ಅಂಜನಾದ್ರಿ ಪರ್ವತದ ಮೇಲಿನ ಆಂಜನೇಯ ದೇವಸ್ಥಾನವನ್ನು ತಲುಪಲು ಎರಡು ದಾರಿಗಳಿವೆ. ಒಂದು ಮುಖ್ಯ ರಸ್ತೆಯಿಂದ ಮೆಟ್ಟಿಲುಗಳ ಮೂಲಕ, ಇನ್ನೊಂದು ಜಂಗ್ಲಿ ಕ್ರಾಸ್ ಮೂಲಕ ಬೆಟ್ಟದ ಹಿಂಬದಿಯಿಂದ ದೇವಸ್ಥಾನ ತಲುಪಲು ದಾರಿ ಇದೆ. ಬೆಟ್ಟದ ಹಿಂಬದಿಯಿಂದ ಇರುವ ದಾರಿಯನ್ನೇ ಮೂಲ ದಾರಿ ಎಂದು ಕರೆಯಲಾಗುತ್ತದೆ. ರಾಮ, ಲಕ್ಷ್ಮಣರು ಆಂಜನೇಯನನ್ನು ಭೇಟಿಯಾಗಲು ಬಂದಾಗ ಈ ಮೂಲ ದಾರಿಯಲ್ಲೇ ಬಂದಿದ್ದರು ಎಂದು ಉಲ್ಲೇಖಗಳು ಇವೆ. ಹಾಗಾಗಿ ಆಂಜನೇಯ ದೇವರ ದರ್ಶನ ಪಡೆದುಕೊಳ್ಳಲು ಬರುವ ಭಕ್ತರು ಮೂಲ ದಾರಿಯ ಮೂಲಕ ಪರ್ವತವೇರಿ ಬರುತ್ತಾರೆ.
ಅಂಜನಾದ್ರಿ ಪರ್ವತವು ಧರ್ಮ ರಕ್ಷಣೆಗಾಗಿ ಉಗಮವಾಗಿರುವ ಪರ್ವತವಾಗಿದೆ. ರಾಮಾಯಣದಲ್ಲಿ ಬರುವ 5 ಪರ್ವತಗಳನ್ನು ನಾವು ಈ ಭಾಗದಲ್ಲಿಯೇ ಕಾಣಬಹುದು. ಮೊದಲನೆಯದಾಗಿ ನವಬೃಂದಾವನ ಗಡ್ಡೆಯ ಎಡ ಭಾಗದಲ್ಲಿ ಕಂಡು ಬರುವ ತಾರಾ ಪರ್ವತ, ಎರಡನೆಯದಾಗಿ ಹನುಮನಹಳ್ಳಿಯಲ್ಲಿರುವ ಋುಷಿಮುಖ ಪರ್ವತ, ಮೂರನೆಯದಾಗಿ ಪಂಪಾಸರೋವರದ ಬಳಿ ಬರುವ ವಾಲಿ ಪರ್ವತ, ನಾಲ್ಕನೆಯದಾಗಿ ಅಂಜನಾದ್ರಿ ಪರ್ವತ, ಐದನೆಯದಾಗಿ ಹಂಪಿಯಲ್ಲಿ ಕಂಡು ಬರುವ ಮಾತಂಗ ಪರ್ವತ. ಇವುಗಳು ರಾಮಾಯಣ ಕಾಲ ಪೂರ್ವದಿಂದಲೂ ಧರ್ಮ ರಕ್ಷಣೆಗಾಗಿ ಉಗಮವಾಗಿರುವ ಪರ್ವತಗಳು ಎಂದು ಹೇಳಲಾಗುತ್ತಿದೆ. ಆಂಜನೇಯ ತನ್ನ ಬಾಲ್ಯವನ್ನು ಈ ಪರ್ವತಗಳಲ್ಲಿಯೇ ಕಳೆದಿದ್ದಾನೆ ಎಂದು ಸಹ ಹೇಳಲಾಗಿದೆ.
ಧರ್ಮ ರಕ್ಷಣೆಯ ಪ್ರತೀಕವಾಗಿ ಉಗಮವಾಗಿರುವ ಅಂಜನಾದ್ರಿ ಪರ್ವತದಲ್ಲಿ ಕಳೆದ ಆರು ವರ್ಷಗಳಿಂದ ಸಂಸ್ಕೃತ ಪಾಠ ಶಾಲೆಯನ್ನು ಸ್ಥಾಪನೆ ಮಾಡಲಾಗಿದೆ.
ರಾಮಾಯಣ ಕಾಲದಿಂದಲೂ ಇತಿಹಾಸವನ್ನು ಹೊಂದಿರುವ ಅಂಜನಾದ್ರಿ ಪರ್ವತ ತುಂಬಾ ವಿಶೇಷತೆ ಹೊಂದಿದೆ. ಹನುಮ ಜನ್ಮ ಸ್ಥಳದಲ್ಲಿ ನಿರ್ಮಾಣವಾಗಿರುವ ದೇವಸ್ಥಾನಕ್ಕೆ ದೇಶ ಸೇರಿದಂತೆ ವಿದೇಶಗಳಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ. ಬೆಟ್ಟದ ಮೇಲೆ ಕುಳಿತು ಗಿಡ ಮೂಲಿಕೆಗಳ ಎಲೆ ಹಾಗೂ ಹೂಗಳಿಂದ ಬರುವ ಘಮ ಆಸ್ವಾದಿಸಿ ಉಲ್ಲಸಿತಗೊಳ್ಳುತ್ತಾರೆ. ಅಲ್ಲದೆ ಲೋಕಕಲ್ಯಾಣಕ್ಕಾಗಿ ದಿನದ 24 ಗಂಟೆ ರಾಮಾಯಣ ಪಠಣ ನಡೆಸಲಾಗುತ್ತಿದೆ.
ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಭದ್ರಿನಾಥನ ವಾಸುದೇವಾನಂದ ಸರಸ್ವತಿ ಸ್ವಾಮೀಜಿ, ದ್ವಾರಕನಾಥದ ಸಂಪೂರ್ಣಾನಂದ ಸರಸ್ವತಿ ಸ್ವಾಮೀಜಿ, ಶಿವಕಾಶಿಯ ಜೈನಂದ ಸರಸ್ವತಿ ಸ್ವಾಮೀಜಿ ಸೇರಿದಂತೆ ಪ್ರಧಾನ ಮಂತ್ರಿ ಮೋದಿಯವರ ತಮ್ಮನಾದ ಪಂಕಜ್ ಮೋದಿ, ಮೋದಿ ಪತ್ನಿ ಜಶೋದಾಬಿನ್, ಅಯೋಧ್ಯ ಶ್ರೀರಾಮಜನ್ಮ ಭೂಮಿ ನ್ಯಾಸ್‌ನ ಅಧ್ಯಕ್ಷ ನಿತ್ಯ ಗೋಪಾಲಜೀ, ಪ್ರಮುಖರಾದ ಅಶೋಕ ನಿಂಗಲ್, ಉಮಾಭಾರತಿ ಸೇರಿದಂತೆ ಪ್ರಮುಖ ಗಣ್ಯ ವ್ಯಕ್ತಿಗಳು ಭೇಟಿ ನೀಡಿದ್ದಾರೆ. ಕಾರಣ ಇವರುಗಳ ಬೇಟಿಯಿಂದ ಅಂಜನಾದ್ರಿ ಪರ್ವತ ಇಂದು ಪ್ರತಿ ದಿನ ತುಂಗಭದ್ರಾ ನದಿ ಹರಿಯುವಂತೆ ಜನ ಬಂದು ವಿಕ್ಷಣೆ ಮಾಡುತ್ತಿದ್ದಾರೆ.
ಸಮುದ್ರಮಟ್ಟದಿಂದ 600 ಮೀ ಎತ್ತರದಲ್ಲಿದೆ: ಸಮುದ್ರಮಟ್ಟದಿಂದ ಸುಮಾರು 600 ಮೀಟರ್ ಎತ್ತರದಲ್ಲಿರುವ ಈ ಬೆಟ್ಟವನ್ನು ಹತ್ತುತ್ತಿದ್ದಂತೆ ಇಲ್ಲಿನ ದೇವಸ್ಥಾನದ ಮಹಾದ್ವಾರವನ್ನು ನೋಡಬಹುದು. ಬೆಟ್ಟವನ್ನು ಹತ್ತಿದ ನಂತರ ನಮ್ಮ ಕಣ್ಣಿಗೆ ಕಾಣಿಸುವುದು ಆಂಜನೇಯ ಸ್ವಾಮಿಯ ವಿಗ್ರಹ.
ಅಂಜನಾದ್ರಿ ಬೆಟ್ಟವು ಹಂಪಿಯಿಂದ ಅಂದಾಜು 23ಕೀ ಮೀ ದೂರದಲ್ಲಿದೆ. ಅಂಜನಾದ್ರಿ ಬೆಟ್ಟದ ಮೇಲೆ ನಿಂತು ನೋಡಿದರೆ ಹಂಪಿಯಲ್ಲಿರುವ ದೇವಸ್ಥಾನಗಳೆಲ್ಲಾ ಕಾಣಿಸುತ್ತವೆ. ತುಂಗಭದ್ರಾ ನದಿಯನ್ನು ನಾವು ಕಾಣಬಹುದು. ಅಂಜನಾದ್ರಿಯ ಆಂಜನೇಯ ಗುಡಿಯು ಬಹಳ ಹಳೆಯ ಹಾಗೂ ಚಿಕ್ಕದಾದ ಕಲ್ಲಿನ ದೇವಸ್ಥಾನವಾಗಿದೆ. ಭಗವಾನ್ ಹನುಮಾನ್ ಮತ್ತು ಅವರ ತಾಯಿ ಅಂಜನಾದೇವಿ ಮಾತೆಯ ಈ ದೇವಾಲಯವು 60 ಅಡಿಗಳ ಪತನದ ಪಕ್ಕದಲ್ಲಿ ಒಂದು ತುದಿಯಲ್ಲಿ ನೆಲೆಸಿದೆ. ಈ ದೇವಾಲಯವನ್ನು ಇಲ್ಲಿ ವಾಸಿಸುವ ಕೆಲವು ಶಿಷ್ಯರು ನಿರ್ವಹಿಸುತ್ತಿದ್ದಾರೆ. ಈ ದೇವಾಲಯದಲ್ಲಿ ಬಂಡೆಯ ಕೆತ್ತಿದ ಹನುಮಾನ್ ವಿಗ್ರಹವಿದೆ.
ಕೋವಿಡ್ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟಕ್ಕೆ ಹನುಮಮಾಲೆ ವಿಸರ್ಜನೆಗೆ ಬಾರದಂತೆ ನಿಷೇಧ ಹೇರಿದ್ದರೂ ಹನುಮ ಮಾಲೆಧಾರಿಗಳು ನಾಡಿನ ವಿವಿಧ ಭಾಗದಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ ಅಂಜನಾದ್ರಿಯಲ್ಲಿ ಸ್ವಯಂ ಆಗಿ ಮಾಲೆ ವಿಸರ್ಜನೆ ಮಾಡಿ ಪೂಜೆ ಸಲ್ಲಿಸಿ ತೆರಳುತ್ತಿದ್ದಾರೆ.
14 ದಿನಗಳ ಹನುಮಮಾಲೆ ಧಾರಣೆ ನಂತರ ಹನುಮಭಕ್ತರು ಅಂಜನಾದ್ರಿಗೆ ಆಗಮಿಸಿ ಹನುಮಮಾಲೆ ವಿಸರ್ಜನೆ ಮಾಡುವುದು ವಾಡಿಕೆಯಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಈ ಭಾರಿ ಸ್ಥಳೀಯವಾಗಿ ಮಾಲೆ ವಿಸರ್ಜನೆಯ ಕಾರ್ಯ ಮಾಡಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿ ಅಂಜನಾದ್ರಿಯ ಪ್ರವೇಶಕ್ಕೆನಿಷೇಧ ಹೇರಿತ್ತು. ಆದರೂ ಮಾಹಿತಿ ಕೊರತೆಯಿಂದಾಗಿ ರಾಜ್ಯದ ಮೂಲೆಮೂಲೆಗಳಿಂದ ಭಕ್ತರು ಆಗಮಿಸಿದ್ದಾರೆ.
ಇಂದು ಇಲ್ಲಿಯ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ಮಂದಿರದ ಆಡಳಿ ಮಂಡಳಿ ಹನುಮದ್ ವೃತ ನಿಮಿತ್ತ ಅಂಜನಾದ್ರಿ ಶ್ರೀ ಆಂಜನೇಯ ಸ್ವಾಮಿ ದೇಗುಲಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. ಬೆಳಗ್ಗೆ ಅಭಿಷೇಕ ಪೂಜೆ ಧಾರ್ಮಿಕ ಕಾರ್ಯಕ್ರಮಗಳು ನಡೆಸಲಾಗಿದೆ. ದೇಗುಲದ ಒಳಗೆ ಸಾಮಾಜಿಕ ಅಂತರ ಕಾಪಾಡಲಾಗಿದೆ. ಸ್ಯಾನಿಟೈಜರ್ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗುತ್ತಿದೆ.
ಶ್ರೀ ಹನುಮಂತ ದೇವರು ಮತ್ತು ಪಂಪಾ ವಿರೂಪಾಕ್ಷ ದೇವರುಗಳ ಪ್ರೇರಣೆ ಆಶೀರ್ವಾದ ದೇಶದ ,ನಸಡಿನ ಜನರ ಮೇಲೆ ಬಂದು ಆದಷ್ಟು ಬೇಗ ಈ ಕೋರೂನಾ ನಿರ್ನಾಮವಾಗಿ ಎಂದಿನಂತೆ ಭಕ್ತರು ಅಂಜನಾದ್ರಿ ಬೆಟ್ಟ ಹತ್ತುವಂತೆ ಆಶೀರ್ವದಿಸಲಿ ಎನ್ನುವುದು ಎಲ್ಲರ ಆಸೆ.
ಮುರುಳಿಧರ್ ನಾಡಿಗೇರ್
ಹೊಸಪೇಟೆ
- ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
- ನಿಮ್ಮ ಮನದ ಭಾವನೆಗಳನ್ನು ಅರ್ಥಮಾಡಿಕೊಳ್ಳುವವರೇ ಇಲ್ಲದಾಗ …?
- ಎಳ್ಳು ಬೆಲ್ಲ ತಿಂದು ಅರೋಗ್ಯ ಹೆಚ್ಚಿಸಿಕೊಳ್ಳಿ
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
More Stories
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ