ಪಿಎಚ್ ಸಿಗಳ ಉನ್ನತೀಕರಣಕ್ಕೆ ಯೋಜನೆ: ಆರೋಗ್ಯ ಸಚಿವರು ಡಾ. ಸುಧಾಕರ್

Team Newsnap
2 Min Read
sudhakar picture

ಪ್ರತಿ ಕನ್ನಡಿಗನಿಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಗುರಿಯೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್
ರಾಜ್ಯದಲ್ಲಿ 2,380 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 30 ಸಾವಿರ ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದೆ. ಇದರಲ್ಲಿ ಅಸಮತೋಲನವಿದ್ದರೆ ಹೊಸ ಕೇಂದ್ರ ನಿರ್ಮಾಣ ಹಾಗೂ ಅಸ್ವಿತ್ವದಲ್ಲಿರುವ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು ಹೊಸ ಯೋಜನೆಯ ಉದ್ದೇಶ. ಪಿಎಚ್ ಸಿಯಲ್ಲಿ 6 ಹಾಸಿಗೆ ಇದ್ದು, ಅದನ್ನು 12 ರಿಂದ 20 ಹಾಸಿಗೆಗೆ ಹೆಚ್ಚಿಸಲಾಗುವುದು. ಪಿಎಚ್ ಸಿಯಲ್ಲಿ ಒಬ್ಬ ವೈದ್ಯ ಇದ್ದು, ಈ ಸಂಖ್ಯೆಯನ್ನು ಕನಿಷ್ಠ 3-4 ಕ್ಕೆ ಹೆಚ್ಚಿಸಲಾಗುವುದು. ಈ ಪೈಕಿ ಒಬ್ಬ ಮಹಿಳಾ ವೈದ್ಯೆ ಹಾಗೂ ಮತ್ತೊಬ್ಬರು ಆಯುಷ್ ವೈದ್ಯರಿರುತ್ತಾರೆ ಎಂದು ವಿವರಿಸಿದರು.

ಉತ್ತಮ ವಸತಿ ಕಲ್ಪಿಸದ ಕಾರಣಕ್ಕೆ ಅನೇಕ ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದರು. ಒಂದೇ ಸಮುಚ್ಛಯದಲ್ಲಿ ನರ್ಸ್, ವೈದ್ಯರಿಗೆ ವಸತಿ, ಇತರೆ ಆರೋಗ್ಯ ಸಿಬ್ಬಂದಿಗೆ ವಸತಿ ಕಲ್ಪಿಸಲಾಗುತ್ತದೆ. 2 ಎಕರೆ ಪ್ರದೇಶದಲ್ಲಿ 6-8 ಕೋಟಿ ರೂ. ಖರ್ಚು ಮಾಡಿ ಹೊಸ ಪಿಎಚ್ ಸಿ ನಿರ್ಮಿಸಲಾಗುತ್ತದೆ. 20 ಸಾವಿರ ಚದರ ಮೀಟರ್ ಆಡಳಿತ ಕಟ್ಟಡ, 12 ಹಾಸಿಗೆಯ ವಿಭಾಗ, ತಾಯಿ ಮತ್ತು ಶಿಶು ಕಾಳಜಿ ಕೇಂದ್ರ, ಪ್ರಯೋಗಾಲಯ ಇರಲಿದೆ. ಮಧುಮೇಹ ಪರೀಕ್ಷೆ, ರಕ್ತ ಪರೀಕ್ಷೆ ಸೇರಿದಂತೆ ನಾನಾ ಪರೀಕ್ಷೆಗಳನ್ನು ಉಚಿತವಾಗಿ ಮಾಡುವ ವ್ಯವಸ್ಥೆ ಇರಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನ ಬಳಸಿ ಉಚಿತ ಸೇವೆ ನೀಡಲಾಗುವುದು ಎಂದು ವಿವರಿಸಿದರು.

ಇ-ಆಸ್ಪತ್ರೆ

ಸಣ್ಣ ಆಸ್ಪತ್ರೆಗಳಿಂದ ಆರಂಭವಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆವರೆಗೂ ಅಂತರ್ಜಾಲ ಬಳಸಿ ಸಂಪರ್ಕ ಕಲ್ಪಿಸುವ ಇ-ಆಸ್ಪತ್ರೆ ಸೌಲಭ್ಯವಿರಲಿದೆ. ಪಿಎಚ್ ಸಿಯಲ್ಲಿ ಎಕ್ಸ್ ರೇ ತೆಗೆದರೂ ಅದಕ್ಕೆ ಬೇಕಾದ ಸಲಹೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತಜ್ಞರು ನೀಡುವಂತಹ ವ್ಯವಸ್ಥೆ ಇರಲಿದೆ ಎಂದು ಸಚಿವರು ತಿಳಿಸಿದರು.

80 ಸಾವಿರ ಜನಸಂಖ್ಯೆಗೆ ಒಂದರಂತೆ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಕೂಡ ಮೇಲ್ದರ್ಜೆಗೇರಿಸಲಾಗುವುದು. ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲಾಗುವುದು. 200 ಹಾಸಿಗೆಗಳ ಜಿಲ್ಲಾಸ್ಪತ್ರೆಗಳು ಮುಂದಿನ ದಿನಗಳಲ್ಲಿ 500-700 ಹಾಸಿಗೆಯ ಆಸ್ಪತ್ರೆಯಾಗಿ ಅಭಿವೃದ್ಧಿಯಾಗಲಿವೆ. ಬೆಂಗಳೂರು, ಹುಬ್ಬಳ್ಳಿಗೆ ಆರೋಗ್ಯ ಕೇಂದ್ರಗಳು ಕೇಂದ್ರೀಕೃತವಾಗದೆ ಎಲ್ಲ ಕಡೆಗೂ ವಿಸ್ತರಿಸಲಾಗುವುದು. ಆಯಾ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಸಿಗುವಂತೆ ಮಾಡಲಾಗುವುದು ಎಂದರು.

ಆಂಬ್ಯುಲೆನ್ಸ್ ಸೇವೆ

ಈ ಹಿಂದೆ 1 ಲಕ್ಷ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ನೀಡಲಾಗುತ್ತಿತ್ತು. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ನೀಡಲಾಗುವುದು. ಅಂದರೆ, 30 ಸಾವಿರ ಜನಸಂಖ್ಯೆಗೆ ಒಂದು ಆಂಬ್ಯುಲೆನ್ಸ್ ಸೇವೆ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

Share This Article
Leave a comment