ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ – ಭಾರತ ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷನ ವಜಾ

Team Newsnap
1 Min Read

ಕೋಲಾರದ ನರಸಾಪುರದ ಐಫೋನ್ ಫ್ಯಾಕ್ಟರಿಯಲ್ಲಿ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ವಿಸ್ಟ್ರಾನ್ ಕಂಪನಿಯ ಉಪಾಧ್ಯಕ್ಷ ಲೀ ವಿನ್ಸೆಂಟ್ ಅವರನ್ನು ಅಧಿಕಾರದಿಂದ ವಜಾ ಮಾಡಲಾಗಿದೆ.

ಉದ್ಯೋಗಿಗಳಿಗೆ ಸಂಬಳ ನೀಡುವುದರಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಕಂಪನಿ ಒಪ್ಪಿಕೊಂಡಿದೆ.

ಕಂಪನಿಯ ಉದ್ಯೋಗಿಗಳು ಸಂಬಳ ನೀಡದ್ದಕ್ಕೆ ಫ್ಯಾಕ್ಟರಿಯನ್ನು ಧ್ವಂಸಗೊಳಿಸಿದ್ದರು. ಇದರಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿತ್ತು. ನರಸಾಪುರದ ಘಟಕದಲ್ಲಿ ದುರದೃಷ್ಟಕರ ಘಟನೆ ನಡೆದ ಬಳಿಕ ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ವೇಳೆ ಕೆಲ ನೌಕರರಿಗೆ ಸಂಬಳ ನೀಡದಿರುವುದು ಕಂಡುಬಂದಿದೆ. ಈ ಕುರಿತು ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಅಲ್ಲದೆ ನಮ್ಮೆಲ್ಲ ಉದ್ಯೋಗಿಗಳ ಕ್ಷಮೆಯಾಚಿಸುತ್ತೇವೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನಮ್ಮಿಂದ ತಪ್ಪಾಗಿರುವುದನ್ನು ಅರಿತಿದ್ದೇವೆ. ಕಾರ್ಮಿಕ ಏಜೆನ್ಸಿಗಳು ಹಾಗೂ ಪಾವತಿಗಳನ್ನು ನಿರ್ವಹಿಸಲು ಕೆಲ ಪ್ರಕ್ರಿಯೆಗಳನ್ನು ಬಲಪಡಿಸಬೇಕಿದೆ ಹಾಗೂ ನವೀಕರಿಸಬೇಕಿದೆ. ಶಿಸ್ತು ಕ್ರಮ ಸೇರಿದಂತೆ ತಕ್ಷಣವೇ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ.

ಇದರ ಭಾಗವಾಗಿ ಕಂಪನಿಯ ಭಾರತದ ಉಪಾಧ್ಯಕ್ಷರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಇಂತಹ ಸಮಸ್ಯೆಗಳು ಮತ್ತೆ ಮರುಕಳಿಸದಂತೆ ಹೆಚ್ಚಿನ ಕ್ರಮ ಕೈಗೊಳ್ಳುತ್ತೇವೆ. ನಮ್ಮ ತಂಡಗಳನ್ನು ಬಲ ಪಡಿಸುತ್ತೇವೆ ಎಂದು ವಿಸ್ಟ್ರಾನ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಸ್ಟ್ರಾನ್ ಸ್ಮಾರ್ಟ್ ಡಿವೈಸಸ್‍ನ ಭಾರತದ ಎಂಡಿಯಾಗಿ ಸುಧಿತೋ ಗುಪ್ತಾ ಸದ್ಯಕ್ಕೆ ಮುಂದುವರಿಯಲಿದ್ದಾರೆ. ಎಲ್ಲ ಕಾರ್ಮಿಕರಿಗೆ ತಕ್ಷಣವೇ ಪರಿಹಾರ ನೀಡಿ, ಈ ಕುರಿತು ಖಚಿತಪಡಿಸುವುದು ಮೊದಲ ಆದ್ಯತೆಯಾಗಿದೆ. ಕಾರ್ಮಿಕರಿಗಾಗಿ ನೌಕರರ ನೆರವು ಕಾರ್ಯಕ್ರಮವನ್ನು ಸ್ಥಾಪಿಸಲಾಗುವುದು ಎಂದು ಸಂಸ್ಥೆ ಹೇಳಿದೆ.

ವಿಸ್ಟ್ರಾನ್ 2,850 ಕೋಟಿ ರೂ.ಗಳನ್ನು ಕೋಲಾರದ ಪ್ಲಾಂಟ್‍ನಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಅಲ್ಲದೆ ಇದರ ಒಟ್ಟು ಮೊತ್ತವನ್ನು 18,000 ಕೋಟಿ ರೂ.ಗೆ ಕ್ಕೆ ಹೆಚ್ಚಿಸಲು ಬದ್ಧವಾಗಿತ್ತು. ಇದು ಪ್ರಸ್ತುತ 10 ಸಾವಿರಕ್ಕೂ ಅಧಿಕ ಜನರನ್ನು ನೇಮಿಸಿಕೊಂಡಿದೆ. ಸ್ಮಾರ್ಟ್‍ಫೋನ್‍ನಿಂದ ಐಒಟಿ ವಸ್ತುಗಳವರೆಗೆ ಹಾಗೂ ಬಯೋಟೆಕ್ ಡಿವೈಸ್‍ಗಳನ್ನು ಉತ್ಪಾದಿಸುವುದಾಗಿ ಸಂಸ್ಥೆ ಹೂಡಿಕೆ ಮಾಡಿದೆ.

Share This Article
Leave a comment