ಬೆಂಗಳೂರು
ರಾಮನಗರ ಜಿಲ್ಲೆಯ ಮಾಗಡಿ ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ತಾಲೂ ಕುಗಳ 83 ಕೆರೆಗಳಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರನ್ನು ಹರಿಸುವ 450 ಕೋಟಿ ರೂ. ವೆಚ್ಚದ ಪರಿಷ್ಕೃತ ಶ್ರೀರಂಗ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟವು ಒಪ್ಪಿಗೆ ನೀಡಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ, ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ
ಈಗಾಗಲೇ ಯೋಜನೆಗೆ 277 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಯೋಜನೆಗೆ ಮತ್ತಷ್ಟು ಸಂಪನ್ಮೂಲದ ಅಗತ್ಯವಿತ್ತು. ಹೀಗಾಗಿ ಅಗತ್ಯವಿದ್ದ 173 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು ಎಂದರು.
ಮೊದಲೇ ಆರಂಭವಾಗಿದ್ದ ಯೋಜನೆಯ ಕಾಮಗಾರಿಯನ್ನು ಅತ್ಯಂತ ವೇಗಗತಿಯಲ್ಲಿ ನಡೆಸಲಾಗುತ್ತಿದೆ. ಅಗತ್ಯವಿದ್ದ ಮತ್ತಷ್ಟು ನಿರ್ವಹಣಾ ವ್ಯವಸ್ಥೆ ಹಾಗೂ ಮತ್ತಿತರೆ ಪೂರಕ ವ್ಯವಸ್ಥೆಗಳನ್ನು ಮಾಡುವ ಉದ್ದೇಶದಿಂದ ಪರಿಷ್ಕೃತ ಯೋಜನೆಗೆ ಒಪ್ಪಿಗೆ ಪಡೆಯಲಾಗಿದೆ ಎಂದು ಡಿಸಿಎಂ ಮಾಹಿತಿ ನೀಡಿದರು.
ಪಂಪ್ ಹೌಸ್ ಮತ್ತು ವಿದ್ಯುತ್ ಸಬ್‌ಸ್ಟೇಷನ್
195 ಕಿ.ಮೀ ದೂರದಿಂದ ನೀರು ಪೂರೈಕೆಯಾಗಬೇಕಿದೆ. ಅದಕ್ಕಾಗಿ ಪ್ರತ್ಯೇಕ ಪಂಪ್ ಹೌಸ್ ಮತ್ತು ವಿದ್ಯುತ್ ಸಬ್‌ಸ್ಟೇಷನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಜತೆಗೆ, ನೀರನ್ನು ಸರಬರಾಜು ಮಾಡುವ ಪಿಎಸ್ಸಿ ಪೈಪುಗಳು ವಿರಳವಾಗಿದೆ. ಅವುಗಳನ್ನು ಕಾಲಮಿತಿಯೊಳಗೆ ಖರೀದಿಸಿ ಯೋಜನೆಯನ್ನು ಕಾರ್ಯಗತ ಮಾಡಬೇಕಾಗಿದೆ. ವಿವಿಧೆಡೆ ಭೂಸ್ವಾಧೀನ ಕಷ್ಟವಾಗಿರುವ ಕಾರಣ ಯೋಜನೆಯ ವೆಚ್ಚ ಹೆಚ್ಚಳವಾಗಿದೆ. ಒಟ್ಟಾರೆಯಾಗಿ ಕಾವೇರಿ ನೀರಾವರಿ ನಿಗಮ ಸಲ್ಲಿಸಿರುವ ಪರಿಷ್ಕೃತ ಪ್ರಸ್ತಾವನೆಗೆ ಸಂಪುಟ ಅನುಮೋದನೆ ನೀಡಿದೆ ಎಂದರು.
ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯಿಂದ ಎರಡು ತಾಲೂಕು ಕೆರೆಗಳಿಗೆ ನೀರು ಹರಿಯಲಿದೆ. ಈ ಯೋಜನೆಯಿಂದ ಎರಡೂ ತಾಲ್ಲೂಕುಗಳ ಜಲಕ್ಷಾಮ ಶಾಶ್ವತವಾಗಿ ನಿವಾರಣೆಯಾಗಲಿದೆ. ಇದರಿಂದ ಆ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಹಾಗೂ ಕೃಷಿ ಚಟುವಟಿಕೆ ಉತ್ತಮವಾಗಿ ಗರಿಗೆದರಲಿದೆ ಎಂದು ಹೇಳಿದರು.
172.19 ಕ್ಯೂಸೆಕ್ ನೀರು
ಒಟ್ಟು ಉದ್ದೇಶಿತ ಪ್ರದೇಶಗಳಿಗೆ ಒಟ್ಟು 172.19 ಕ್ಯೂಸೆಕ್ ನೀರನ್ನು ಹರಿಸಲಾಗುವುದು. ಮಾಗಡಿ ತಾಲ್ಲೂಕಿನ 68 ಕೆರೆಗಳು ಹಾಗೂ ಕುಣಿಗಲ್ ತಾಲ್ಲೂಕಿನ ಹುತ್ತರಿದುರ್ಗ ಹೋಬಳಿಯ 15 ಕೆರೆಗಳಿಗೆ ನೀರು ಹರಿಯಲಿದೆ. ಇದರಿಂದ ಸುಮಾರು 289 ಗ್ರಾಮಗಳಲ್ಲಿ ಶಾಶ್ವತವಾಗಿ ಕುಡಿಯುವ ನೀರಿನ ಅಭಾವ ನೀಗಲಿದೆ ಎಂದರು.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
ದರ್ಶನ್ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಲು ತೀರ್ಮಾನ