ಲವ್‌ಜಿಹಾದ್ ಆತಂಕದ ವಿಷಯ: ಕಟೀಲ್

Team Newsnap
1 Min Read

ರಾಜ್ಯದಲ್ಲಿ ಲವ್‌ಜಿಹಾದ್ ಎಂಬುದು ಆತಂಕದ ವಿಷಯ. ಹಾಗಾಗಿ ಬಿಜೆಪಿ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದರು.


ಬೆಳಗಾವಿಯಲ್ಲಿ ಶನಿವಾರ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರೀತಿ, ಪ್ರೇಮದ ಹೆಸರಿನಲ್ಲಿ ಮತಾಂತರಗೊಂಡ ಹಲವು ಪ್ರಕರಣಗಳು ವರದಿಯಾಗಿರುವುದರಿಂದ ಲವ್ ಜಿಹಾದ್‌ಗೆ ಕಡಿವಾಣ ಮತ್ತು ಗೋ ಹತ್ಯೆ ನಿಷೇಧಕ್ಕೆ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ. ಈ ಕುರಿತು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.


ರಾಜ್ಯ ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿವೇಚನೆಗೆ ಸೇರಿದ್ದು, ಕೇಂದ್ರದ ವರಿಷ್ಠರ ಜತೆ ಚರ್ಚಿಸಿ ಸೂಕ್ತಸಮಯದಲ್ಲಿ ತೀರ್ಮಾನ ತೆಗೆದುಕೊಳ್ಳುವರು ಎಂದಷ್ಟೆ ರಾಜ್ಯಾಧ್ಯಕ್ಷರು ಪ್ರತಿಕ್ರಿಯಿಸಿದರು.

ಮುಂಬರುವ ಗ್ರಾಮಪಂಚಾಯಿತಿ ಚುನಾವಣೆ ಪಕ್ಷದ ಚಹ್ನೆ ಆಧಾರದಲ್ಲಿ ನಡೆಯದಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರ್ಯಕರ್ತರನ್ನು ಗೆಲ್ಲಿಸಬೇಕಾಗಿದೆಯಲ್ಲದೆ ಈ ಮೂಲಕ ಗ್ರಾಮ ಸ್ವರಾಜ್ಯ ಕಲ್ಪನೆಯಲ್ಲಿ ಗ್ರಾಮಗಳು ಅಭಿವೃದ್ಧಿಯಾಗುವತ್ತ ಮುಂದಾಗಬೇಕೆಂಬ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಪ್ರಭಾರಿಗಳನ್ನು ನೇಮಿಸಲಾಗಿದೆ. ಚುನಾವಣಾ ನಿರ್ವಹಣಾ ಸಮಿತಿ ಮತ್ತು ಶಿಸ್ತು ಸಮಿತಿ ರಚಿಸಲು ನಿರ್ಧರಿಲಾಗಿದೆ ಎಂದು ಕಟೀಲ್ ನುಡಿದರು.


ಪಕ್ಷದ ಆಂತರಿಕ ವಿಷಯಗಳನ್ನು ಬಹಿರಂಗವಾಗಿ ಮಾತನಾಡದಂತೆ ಸೂಚನೆ ನೀಡಲಾಗಿದೆ. ಸಮಸ್ಯೆ ಆಲಿಸುವುದಕ್ಕೆ ಪಕ್ಷದ ವೇದಿಕೆ ಇದ್ದು ಅಲ್ಲಿ ಚರ್ಚಿಸಬೇಕು. ಇದನ್ನು ಮೀರಿದರೆ ಪಕ್ಷವು ಶಿಸ್ತುಕ್ರಮಕೈಗೊಳ್ಳುವುದು ಎಂದು ಎಚ್ಚರಿಸಿದರು.


ಬೆಳಗಾವಿಯ ಗಾಂಧಿಭವನದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು. ಸಂಘಟನೆ ಬಲಪಡಿಸುವ ಕುರಿತು ಪಕ್ಷದ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಮಾಹಿತಿ ನೀಡಿದರು.

Share This Article
Leave a comment