January 10, 2025

Newsnap Kannada

The World at your finger tips!

sudakar1

ಕೋವಿಡ್ ಲಸಿಕೆ ವಿತರಣೆಗೆ ರಾಜ್ಯದಲ್ಲಿ ಸಿದ್ಧತೆ ಪೂರ್ಣ: ಸಚಿವ ಡಾ ಸುಧಾಕರ್

Spread the love
  • ಕೋವಿಡ್ ರೋಗಿಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ, ಪರೀಕ್ಷೆ
  • ಕೊವ್ಯಾಕ್ಸಿನ್ ಲಸಿಕೆ ಪ್ರಯೋಗಕ್ಕೆ ಚಾಲನೆ

ರಾಜ್ಯದಲ್ಲಿ ಕೊವ್ಯಾಕ್ಸಿನ್ ಲಸಿಕೆ ಯಶಸ್ವಿಯಾಗಲಿದೆ . ಲಸಿಕೆ ವಿತರಣೆಗೆ ಎಲ್ಲಾ ಬಗೆಯ ಸಿದ್ಧತೆ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಭಾರತ್ ಬಯೋಟೆಕ್ ಸಹಯೋಗದಲ್ಲಿ ಕೊವ್ಯಾಕ್ಸಿನ್ ಕೋವಿಡ್ ಲಸಿಕೆಯ 3 ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ರಾಜ್ಯಕ್ಕೆ ಇದು ಹೆಮ್ಮೆಯ ವಿಷಯವಾಗಿದೆ. ದೇಶದ 12 ರಾಜ್ಯಗಳ 25 ಭಾಗಗಳಲ್ಲಿ ಪ್ರಯೋಗ ನಡೆಯುತ್ತಿದ್ದು, ಸುಮಾರು 26 ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತಿದೆ. ರಾಜ್ಯದಲ್ಲಿ 1,600-1,800 ಜನರಿಗೆ ಲಸಿಕೆಯನ್ನು ಪ್ರಾಯೋಗಿಕವಾಗಿ ನೀಡಲು ನಿರ್ಧರಿಸಲಾಗಿದೆ ಎಂದರು.

ಭಾರತೀಯ ಕಂಪನಿಗಳಿಂದಲೇ ಲಸಿಕೆ:

ಪ್ರಪಂಚದಲ್ಲಿ ಶೇ.15 ರಿಂದ ಶೇ.20 ರಷ್ಟು ಭಾರತೀಯ ಕಂಪನಿಗಳೇ ಲಸಿಕೆ ನೀಡುವ ಮಟ್ಟಿಗೆ ಬೆಳೆದಿದೆ. ಲಸಿಕೆಯಿಂದ ಕೆಲ ಅಡ್ಡ ಪರಿಣಾಮಗಳು ಬರಬಹುದು. ಆದರೆ ಇದನ್ನು ನಮ್ಮ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ಆದ್ದರಿಂದ ಯಾವುದೇ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಸಂಶೋಧನೆಗೆ 900 ಕೋಟಿ ರೂ. ಮೀಸಲಿಟ್ಟಿದ್ದಾರೆ. ನಮ್ಮ ಸರ್ಕಾರ ಕೋವಿಡ್ ಚಿಕಿತ್ಸೆಗಾಗಿ 300 ಕೋಟಿ ರೂ. ಗೂ ಹೆಚ್ಚು ಹಣ ಬಿಡುಗಡೆ ಮಾಡಿ ಉಚಿತ ಚಿಕಿತ್ಸೆ ನೀಡಿದೆ. ದಿನಕ್ಕೆ 1.25 ಲಕ್ಷ ಪರೀಕ್ಷೆ ಮಾಡುತ್ತಿದೆ. ಈವರೆಗೆ 1.20 ಕೋಟಿ ಉಚಿತ ಪರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು.

ಲಸಿಕೆ ವಿತರಣೆ ಪೂರ್ಣ:

ರಾಜ್ಯದಲ್ಲಿ ಲಸಿಕೆ ವಿತರಣೆಗೆ ಸಿದ್ಧತೆ ಪೂರ್ಣಗೊಂಡಿದೆ. 29,451 ಲಸಿಕೆ ವಿತರಣೆ ಕೇಂದ್ರ ಹಾಗೂ 10,008 ಸಿಬ್ಬಂದಿಯನ್ನು ಗುರುತಿಸಲಾಗಿದೆ. ಲಸಿಕೆ ಸಂಗ್ರಹ ಹಾಗೂ ವಿತರಣೆಗೆ 2,855 ಕೋಲ್ಡ್ ಚೇನ್ ಕೇಂದ್ರಗಳು ಲಭ್ಯವಿದೆ. ಹೊಸದಾಗಿ ಬೆಂಗಳೂರು, ಶಿವಮೊಗ್ಗ, ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾದೇಶಿಕ ಲಸಿಕೆ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಲಸಿಕೆ ದೊರೆತ ಬಳಿಕ ಹೆಚ್ಚು ಜನರಿಗೆ ನೀಡಲಾಗುವುದು. ಕೊರೊನಾ ನಿಯಂತ್ರಣಕ್ಕಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಮೊದಲಿಗೆ ಲಸಿಕೆ ನೀಡಲಾಗುವುದು. ನಂತರ 50 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.

Copyright © All rights reserved Newsnap | Newsever by AF themes.
error: Content is protected !!